ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂಖ್ಯೆ ಹೆಚ್ಚಳ: ಸಮಸ್ಯೆಯೂ ದ್ವಿಗುಣ

Last Updated 19 ಜನವರಿ 2018, 19:30 IST
ಅಕ್ಷರ ಗಾತ್ರ

‘ಇನ್ನು ಏಳೇ ವರ್ಷಗಳಲ್ಲಿ, ಭಾರತದ ಜನಸಂಖ್ಯೆ 144 ಕೋಟಿಯನ್ನು ದಾಟುತ್ತದೆ ಮತ್ತು ಚೀನಾವನ್ನು ಮೀರಿಸಿ ಅತಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದುತ್ತದೆ’– ಈ ಅಂಶ ಪ್ರಕಟವಾಗಿರುವುದು ‘ದಿ ವರ್ಲ್ಡ್‌ ಪಾಪುಲೇಷನ್ ಪ್ರಾಸ್ಪೆಕ್ಟ್: 2017’ ವರದಿಯಲ್ಲಿ. ಈ ವರದಿ ಇನ್ನೂ ಒಂದು ಅಂಶವನ್ನು ದಾಖಲಿಸಿದೆ. ಜನಸಂಖ್ಯೆಯೊಂದಿಗೆ ಭಾರತೀಯರ ಜೀವಿತಾವಧಿಗೆ ಕಳೆದ 25 ವರ್ಷಗಳಿಂದ ಹತ್ತು ವರ್ಷಗಳು ಸೇರ್ಪಡೆಯಾಗಿವೆ; ಅಂದರೆ 69 ವರ್ಷಕ್ಕೆ ಬಂದು ಮುಟ್ಟಿದೆ ಎಂಬುದು.

ಸ್ಥೂಲವಾಗಿ ಹೇಳುವುದಾದರೆ, 2024ರ ಹೊತ್ತಿಗೆ ಚೀನಾಗಿಂತ ಭಾರತ ಜನಸಂಖ್ಯೆಯಲ್ಲಿ ಮುಂದಿರುತ್ತದೆ. 2050ರ ಹೊತ್ತಿಗೆ ಅದು 166 ಕೋಟಿಯನ್ನೂ ಮುಟ್ಟಬಹುದು ಎಂಬ ಅಂದಾಜು ಈ ವರದಿಯಲ್ಲಿ ವ್ಯಕ್ತವಾಗಿದೆ.

ಆದರೆ ಭಾರತದಲ್ಲಿ ಸಂತಾನಶಕ್ತಿ ಪ್ರಮಾಣವು 1975–80ರ ನಡುವೆ 4.97 ಇದ್ದದ್ದು 2015–20ಕ್ಕೆ 2.3ಕ್ಕೆ ಇಳಿಯಲಿದೆ. 2025–30ಕ್ಕೆ ಇದರ ಪ್ರಮಾಣವು 2.1ಕ್ಕೆ ಇಳಿಯುವ ನಿರೀಕ್ಷೆಯಿದೆ. 2045–50ಕ್ಕೆ 1.86 ಹಾಗೂ 2095–2100ಕ್ಕೆ 1.78ಕ್ಕೆ ಕುಸಿಯುವುದಾಗಿಯೂ ವರದಿ ತಿಳಿಸಿದೆ. ಈ ಪ್ರಮಾಣವು 2.2 ಇದ್ದರೆ, ಅದನ್ನು ಸಾಮಾನ್ಯವಾಗಿ ಬದಲಿಸಿಕೊಳ್ಳಬಹುದಾದ ಮಟ್ಟ ಎಂದು ಪರಿಗಣಿಸಲಾಗುತ್ತದೆ. ಆದರೆ ಇದಕ್ಕೂ ಕಡಿಮೆಯಾದರೆ ಜನಸಂಖ್ಯೆಯ ಪ್ರಮಾಣವು ಕುಗ್ಗುತ್ತದೆ.

ಜನಸಂಖ್ಯಾ ಸ್ಫೋಟದ ವಿಷಯ ಒಂದೆಡೆಯಾದರೆ, ಇದಕ್ಕೆ ತದ್ವಿರುದ್ಧ ಎಂಬಂತೆ ಸಂತಾನಹೀನತೆ ಸಮಸ್ಯೆ ಹೆಚ್ಚುತ್ತಿರುವ ಮತ್ತೊಂದು ಆತಂಕವೂ ಇಲ್ಲಿ ವ್ಯಕ್ತವಾಗಿದೆ.

ಸಂತಾನಶಕ್ತಿಯ ಗಡಿಯಾರ: ಮುಂಬೈ ನಿವಾಸಿಯೊಬ್ಬರು ಮದುವೆ ನಂತರ ಮೂರು ವರ್ಷಗಳಿಂದ ಹಲವು ಕಾರ್ಪೊರೇಟ್‌ ಕಂಪನಿಗಳಲ್ಲಿ ಕೆಲಸ ಮಾಡಿದವರು. ಭವಿಷ್ಯದ ದೃಷ್ಟಿಯಿಂದ ಮಗು ಪಡೆಯುವ ಅವಧಿಯನ್ನೂ ಮುಂದೂಡಿದರು. ತಿಂಗಳುಗಳು ಉರುಳಿ ವರ್ಷಗಳಾದವು. ಈಗ ಆಕೆಗೆ 36 ವರ್ಷ. ಮಗುವನ್ನು ಪಡೆಯಲು ಬಯಸಿ, ಹಲವು ಕ್ಲಿನಿಕ್‌ಗಳಿಗೆ ಲಕ್ಷಾಂತರ ಹಣ ವ್ಯಯಿಸಿದ್ದಾರೆ. ಎಷ್ಟೋ ಪರೀಕ್ಷೆಗಳನ್ನೂ ಮಾಡಿಸಿದ್ದಾರೆ, ವಂಶವಾಹಿ ಅಸಹಜತೆ, ಅಂಡಾಶಯ ಸಂಬಂಧಿ ಸಮಸ್ಯೆಗಳ ಸಾಧ್ಯತೆಯಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಚಿಕಿತ್ಸೆಗಳನ್ನೂ ಪಡೆದಿದ್ದಾರೆ. ಆದರೆ ಅದಾವುದೂ ಫಲ ನೀಡಲಿಲ್ಲ.

ಇದು ಇವರೊಬ್ಬರ ಕಥೆಯಲ್ಲ. ಇವರಂತಹ ಸಾವಿರಾರು ಮಹಿಳೆಯರು ಇದ್ದಾರೆ. ಭಾರತದಲ್ಲಿ ವೃತ್ತಿನಿರತ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದ್ದಂತೆ, ಮೂವತ್ತು ನಲವತ್ತನೇ ವಯಸ್ಸಿನಲ್ಲಿ ಮಗುವನ್ನು ಬಯಸಿ ಬರುವ ಮಹಿಳೆಯರೂ ಹೆಚ್ಚುತ್ತಿದ್ದಾರೆ ಎನ್ನುತ್ತಾರೆ ತಜ್ಞರು.

‘ಮಹಿಳೆಯರು ಈಗ ತಡವಾಗಿ ಮದುವೆ ಆಗುತ್ತಾರೆ. ವಿದ್ಯಾವಂತರಾಗಿ, ತಮ್ಮ ಭವಿಷ್ಯದ ಕನಸುಗಳೊಂದಿಗೆ ಆರ್ಥಿಕವಾಗಿಯೂ ಸದೃಢರಾಗಲು ಬಯಸುವ ಅವರು, ಮಕ್ಕಳನ್ನೂ ತಡವಾಗಿ ಪಡೆಯಲು ನಿರ್ಧರಿಸುತ್ತಾರೆ. ಈಗ 35 ವರ್ಷಕ್ಕೆ ಮೊದಲ ಮಗು ಹುಟ್ಟುವುದೂ ಅಸಹಜವೇನಲ್ಲ. ಆದರೆ ಅವರಲ್ಲೂ ಗರ್ಭಧರಿಸುವಲ್ಲಿ ಸಾಕಷ್ಟು ಸಮಸ್ಯೆಗಳು ಕಂಡಿರುತ್ತವೆ.

ವಯಸ್ಸು ಹೆಚ್ಚುತ್ತಿದ್ದಂತೆ ಅಂಡಾಣುವಿನ ಗುಣಮಟ್ಟವೂ ಕುಸಿಯುತ್ತಾ ಹೋಗುತ್ತದೆ. ಆದ್ದರಿಂದಲೇ ಗರ್ಭಧಾರಣೆಯ ಸಾಧ್ಯತೆಯೂ ಕುಗ್ಗುತ್ತಾ ಹೋಗುತ್ತದೆ. ಇದಕ್ಕೆ ಮುಖ್ಯ ಕಾರಣಗಳಲ್ಲಿ ಕಾರ್ಪೊರೇಟ್ ಜೀವನಶೈಲಿಯೂ ಒಂದು. ಅಂದರೆ ದಂಪತಿಗಳಿಬ್ಬರೂ ವೃತ್ತಿಸಂಬಂಧವಾದ ತಿರುಗಾಟಗಳಲ್ಲೇ ಕಳೆದು ಹೋಗುವ ಕಾರಣ, ಜೊತೆಯಾಗಿರುವ ಅಮೂಲ್ಯ ಕ್ಷಣವೂ ದೊರೆಯದಂತಾಗಿದೆ.

ತಿಂಗಳಲ್ಲಿ ದೇಹ ಫಲವಂತಿಕೆಯಿರುವ ಒಂದಷ್ಟು ದಿನಗಳಲ್ಲಿ ಲೈಂಗಿಕಕ್ರಿಯೆಯಲ್ಲಿ ತೊಡಗಿಕೊಳ್ಳಲು ಅವಕಾಶ ಸಿಗದೇ ಇರುವುದು ಬಹು ಮುಖ್ಯ ಕಾರಣ’ ಎನ್ನುತ್ತಾರೆ ವೈದ್ಯರು.

ಸಂತಾನಹೀನತೆಯ ಸಮಸ್ಯೆಯು ಭಾರತವನ್ನು ಕಾಡುತ್ತಿದೆ. ಇದರ ಪ್ರಭಾವ ಶೇ. 10–14ರಷ್ಟು ಎಂದು ಅಂದಾಜಿಸಲಾಗಿದೆ. ಈ ಗುಂಪಿನ ಒಂದು ದೊಡ್ಡ ಭಾಗವಾಗಿ ವೃತ್ತಿನಿರತ ಮಹಿಳೆಯರು ಈಗ ಸೇರ್ಪಡೆಯಾಗಿದ್ದಾರೆ. ಈ ಸಂಖ್ಯೆ ಭಾರತೀಯ ನಗರ ಪ್ರದೇಶಗಳಲ್ಲಿ ಇನ್ನಷ್ಟು ಹೆಚ್ಚಾಗುವ ಆತಂಕವೂ ಉಂಟಾಗಿದೆ. ಐದರಿಂದ ಆರರಲ್ಲಿ ಒಬ್ಬ ದಂಪತಿ ಸಂತಾನಶಕ್ತಿ ಸಂಬಂಧಿ ಸಮಸ್ಯೆಗೆ ಒಳಗಾಗಿರುವುದು ಕಂಡುಬಂದಿದೆ.

ಈಗ ವೈದ್ಯಕೀಯ ವಿಜ್ಞಾನವು ಸಾಕಷ್ಟು ಮುಂದುವರೆದಿದೆ. ವೀರ್ಯದ ಪ್ರಮಾಣ ಕಡಿಮೆ ಇರುವ ಪುರುಷನೂ ಈಗ ತಂದೆಯಾಗಬಲ್ಲನು. ವಯಸ್ಸು ಎನ್ನುವುದು ಒಂದು ಪ್ರಧಾನ ಕಾರಣ. ಆದರೆ ಅನಾರೋಗ್ಯಕರ ಜೀವನಶೈಲಿಯ ಆಯ್ಕೆ–ಧೂಮಪಾನ, ಮದ್ಯಪಾನ, ಕೆಲವು  ಔಷಧಗಳು ಜನರನ್ನು ಫರ್ಟಿಲಿಟಿ ಕ್ಲಿನಿಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುವಂತೆ ಮಾಡಿವೆ. ಧೂಮಪಾನ ಮಾಡುವ ಮಹಿಳೆಯರ ಸಂಖ್ಯೆಯೂ ಇತ್ತೀಚೆಗೆ ಹೆಚ್ಚಾಗಿರುವುದಾಗಿ ಕೆಲವು ಸಮೀಕ್ಷೆಗಳು ತಿಳಿಸಿದ್ದು, ಇದು ಅಂಡಾಣುವಿನ ಗುಣಮಟ್ಟವನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಆದರೆ ಫಲವಂತಿಕೆ ಸಮಸ್ಯೆಯ ಮೂಲ ಬೇರನ್ನು ಕಂಡುಕೊಳ್ಳುವುದು ಅತಿ ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಅದಕ್ಕೆ ಸಾಕಷ್ಟು ಸಂಶೋಧನೆಗಳ ಅವಶ್ಯಕತೆಯಿದೆ. ಹಾರ್ಮೋನು ಅಸಮತೋಲನದಂಥ ಸಣ್ಣ ಸಮಸ್ಯೆಯಿಂದ ಹಿಡಿದು ವಂಶವಾಹಿ ಸಮಸ್ಯೆಯಂಥ ಸಂಕೀರ್ಣ ಸಮಸ್ಯೆಯವರೆಗೂ ಪ್ರತಿ ಅಂಶವನ್ನೂ ತಿಳಿದುಕೊಳ್ಳಬೇಕಾದ ಅವಶ್ಯಕತೆಯಿದೆ. ಇದರೊಂದಿಗೆ ಆಧುನಿಕ, ವೃತ್ತಿಸಂಬಂಧಿತ ಜೀವನಶೈಲಿಯ ಅರಿವಿನ ಅಗತ್ಯವನ್ನೂ ತಳ್ಳಿಹಾಕುವಂತಿಲ್ಲ. ಇದು ಹುಲ್ಲುಗಾವಲಿನಲ್ಲಿ ಸೂಜಿಯನ್ನು ಹುಡುಕಿದಂತೆ. ಆದರೂ ನಿರ್ಲಕ್ಷ್ಯ ಸಲ್ಲದು.

ಸಂಶೋಧನೆಯೊಂದರ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಈ ಸಮಸ್ಯೆಯು ಶೇ. 20–30ರಷ್ಟು ಹೆಚ್ಚಾಗಿದೆ. ಇದು ನಗರಕ್ಕಷ್ಟೆ ಸೀಮಿತವಾದ ಅಥವಾ ಮಹಿಳೆಗೆ ಮಾತ್ರ ಸೀಮಿತವಾದ ವಿಚಾರವಾಗಿಯೂ ಉಳಿದಿಲ್ಲ. ಈ ಆಧುನಿಕ ಸಮಾಜದಲ್ಲಿ, ಫಲವಂತಿಕೆಯ ಸಮಸ್ಯೆ, ತನ್ನ ಎಲ್ಲೆಯನ್ನು ವಿಸ್ತರಿಸುತ್ತಿದ್ದು, ಪುರುಷರೂ ಇದಕ್ಕೆ ಹೊರತಲ್ಲ. ನಗರಗಳಿಗೆ ಮಾತ್ರವಲ್ಲ, ಇದು ಪಟ್ಟಣಗಳಿಗೂ, ಸಣ್ಣ ಸಣ್ಣ ಊರುಗಳಿಗೂ ಇದು ಸಹಜವೆನಿಸುತ್ತಿದೆ.

ಮೊದಲೇ ಹೇಳಿದಂತೆ, ಹೆಚ್ಚುತ್ತಿರುವ ಫಲವಂತಿಕೆ ಸಮಸ್ಯೆಯ ಹಿಂದೆ ಜೀವನಶೈಲಿಯ ಪ್ರಭಾವವೂ ಇದೆ. ಒತ್ತಡ, ಸ್ಥೂಲಕಾಯಗಳು ಅದರ ಕೊಡುಗೆಯೇ! ದೈಹಿಕ ವ್ಯಾಯಾಮದ ಕೊರತೆ, ಆಹಾರ ಸೇವನೆಯ ಅಭ್ಯಾಸದಲ್ಲಿನ ಬದಲಾವಣೆ, ಮಾಲಿನ್ಯ, ಮಧುಮೇಹ, ಈ ಸಮಸ್ಯೆಗೆ ಸೇರ್ಪಡೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT