ವ್ಯಾಯಾಮಕ್ಕೂ ಇದೆ ನಿಯಮ!

7

ವ್ಯಾಯಾಮಕ್ಕೂ ಇದೆ ನಿಯಮ!

Published:
Updated:
ವ್ಯಾಯಾಮಕ್ಕೂ ಇದೆ ನಿಯಮ!

ನಾನೊಮ್ಮೆ ನನ್ನ ಸ್ನೇಹಿತರ ಮನೆಗೆ ಹೋದಾಗ ಮಧ್ಯಾಹ್ನ 11 ಗಂಟೆಯಾಗಿತ್ತು. ಆಗ ಅವರ ಮಗ ಗಿರೀಶ ಹೊರಗೆ ಹೊರಟ. ಯಾವ ಕಡೆಗೆ ಎಂದು ಕೇಳಿದ್ದಕ್ಕೆ, ‘ಜಿಮ್‌ಗೆ ಹೋಗುತ್ತಿದ್ದೇನೆ, 11.30ರ ಬ್ಯಾಚಿಗೆ ಸೇರಿಕೊಂಡಿದ್ದೇನೆ ಅಂಕಲ್’ ಎಂದು ಹೊರಟ. ನನ್ನ ಸ್ನೇಹಿತನ ಜೊತೆ ಉಭಯ ಕುಶಲೋಪರಿಯ ನಂತರ ಮಗನ ವ್ಯಾಯಾಮದ ಬಗ್ಗೆ ವಿಚಾರಿಸಿದೆ. ಅಷ್ಟರಲ್ಲಿ ಬಂದ ಸ್ನೇಹಿತನ ಹೆಂಡತಿ ‘ಏನು ಜಿಮ್ಮೋ ಏನೋ, ಹೊತ್ತಿಗೆ ಸರಿಯಾಗಿ ತಿನ್ನೋಲ್ಲ, ಹೊತ್ತಿಗೆ ಸರಿಯಾಗಿ ಏಳೋಲ್ಲ, ಏನು ಜಿಮ್ ಮಾಡ್ತಾರೋ ಏನೋ’ ಎಂದು ಗೊಣಗಿದಳು.

ಅಷ್ಟರಲ್ಲಿ ನನ್ನ ಸ್ನೇಹಿತ, ‘ಇವ್ರಿಗೆಲ್ಲಾ ದುಡ್ಡಿನ ಬೆಲೆಯೇ ಗೊತ್ತಿಲ್ಲ ಕಣೋ, ಮನೆಯಲ್ಲೇ ಯೋಗ, ಪ್ರಾಣಾಯಾಮ ಮಾಡು ಅಂದ್ರೆ ಕೇಳುವುದಿಲ್ಲ, ಒಂದಕ್ಕೆರಡು ದುಡ್ಡು ಕೊಟ್ಟು ಅಲ್ಲಿ ಹೋಗಿ ಮಾಡಿದ್ರೇ ಅಷ್ಟೇ ವ್ಯಾಯಾಮ ಇವ್ರಿಗೆಲ್ಲಾ. ಪಿಜ್ಜಾ, ಚಾಟ್ಸು, ಚೌಚೌ ತಿನ್ನೋದಕ್ಕೇನೂ ಕಡಿಮೆ ಇಲ್ಲಾ. ಗಂಟೆ ಒಂಬತ್ತು ಆದ್ರೂ ಏಳೋಲ್ಲ, ವಾರಕ್ಕೈದು ದಿನ ವ್ಯಾಯಮ ಮಾಡಿ, ಎರಡು ದಿನ ನಿದ್ದೆ ಮಾಡ್ತಾನೆ, ಇನ್ನು ಮೈ ಕರಗಬೇಕು ಅಂದ್ರೆ ಹೇಗೇ ಕರಗುತ್ತೆ? ನನ್ನ ಜೇಬು ಕರಗುತ್ತೆ ಅಷ್ಟೆ’ ಎಂದ.

ಅದಕ್ಕೆ ಅಲ್ಲಿದ್ದ ಪುಟಾಣಿ ಸುಷ್ಮಾ, ‘ಯೋಗ, ಪ್ರಾಣಾಯಾಮ ಮಾಡಿದ್ರೆ ಕೊಬ್ಬು ಕರಗುತ್ತಾ ಅಪ್ಪ?‘ ಎಂದು ಕೇಳಿದಳು. ಇದನ್ನೆಲ್ಲಾ ಕೇಳಿದ ನನಗೆ ನಗೂ ಬಂತು. ‘ನನ್ನ ಅಜ್ಜ ಪೈಲ್ವಾನರಾಗಿದ್ರು ಅಂತ ನನ್ನ ಅಪ್ಪ ಹೇಳ್ತಾ ಇದ್ರು, ಆದ್ರೆ ಅವರು ವ್ಯಾಯಾಮಕ್ಕೆ ಕೆಲವು ನಿಯಮಗಳನ್ನು ಹೇಳಿ ಉಳಿದವರಿಗೂ ವ್ಯಾಯಾಮ, ಕುಸ್ತಿ, ಹೇಳಿಕೊಡುತ್ತಾ ಇದ್ದರು ಅಂತನೂ ಹೇಳ್ತಾ ಇದ್ರೂ’ ಅಂದೆ. ಅದಕ್ಕೆ ಮೂರೂ ಜನರೂ ಒಟ್ಟಿಗೆ ‘ಹೌದಾ!!’ ಅಂತ ಆಶ್ಚರ್ಯಚಕಿತರಾಗಿ ಹೇಳಿದ್ರು. ಮತ್ತೆ ಇದಕ್ಕಿರುವ ನಿಯಮಗಳೇನು ಎಂದು ಗೊತ್ತಿದ್ದರೆ ನಮಗೂ ತಿಳಿಸಿ ಎಂದು ನನ್ನ ಸ್ನೇಹಿತ ಕೇಳಿದ.

ಆಗ ನನಗೆ ಕೆಲವು ವಿಷಯಗಳು ನೆನಪಾಯ್ತು. ವ್ಯಾಯಾಮಕ್ಕೂ ಎಷ್ಟೊಂದು ನಿಯಮಗಳಿವೆಯಕಿಕವೆ ಎಂದೆನಿಸಿತು. ‘ಅವ್ರು ಹೇಳೋವ್ರು ‘ಎಣ್ಣೆ ಹಚ್ಚಿದ ನಂತರ, ಸ್ನಾನ ಮಾಡುವ ಮೊದಲು ವ್ಯಾಯಾಮ ಮಾಡುವುದು ಒಳ್ಳೆಯದು. ಇಲ್ಲ ವ್ಯಾಯಾಮ ಮಾಡಿದ ನಂತರವಾದರೂ ಮೈಗೆ ಎಣ್ಣೆ ಹಚ್ಚಿ, ಮೈಯನ್ನು ಮುಲ್ತಾನಿಮಿಟ್ಟಿ, ತ್ರಿಫಲಾ ಚೂರ್ಣ ಅಥವಾ ಹುರುಳಿಕಾಳಿನ ಚೂರ್ಣ – ಇವುಗಳಿಂದ ಮೈಸ್ನಾನ ಮಾಡುವುದು ಒಳಿತು.

ಇದರಿಂದ ವ್ಯಾಯಾಮದಿಂದ ಬಳಲಿದ ಮಾಂಸಖಂಡಗಳಿಗೆ ಶಕ್ತಿ ತುಂಬಿಂದಂತಾಗುತ್ತದೆ, ಅಲ್ಲದೆ ಮೇದಸ್ಸು ಕೂಡ ಕಡಿಮೆಯಾಗುತ್ತದೆ, ಜೊತೆಗೆ ಚರ್ಮದ ಕಾಂತಿಯೂ ಹೆಚ್ಚುತ್ತದೆ. ಯೋಗ, ಜಿಮ್, ಏರೋಬಿಕ್ಸ್ – ಹೀಗೆ ಅನೇಕ ರೀತಿಯ ವ್ಯಾಯಾಮಗಳಿದ್ರೂ ಯಾವುದೇ ವ್ಯಾಯಾಮ ಮಾಡುವಾಗಲೂ ಹೊಟ್ಟೆಯಲ್ಲಿ ಆಹಾರವಿರಬಾರದು. ಮೈ ಬೆವರುವವರೆಗೂ ಅಥವಾ ಮೇಲುಸಿರು ಬರುವವರೆಗೂ ವ್ಯಾಯಾಮ ಮಾಡಬೇಕು. ವ್ಯಾಯಾಮ ಎಂದರೆ ದೇಹವನ್ನು ವಿವಿಧ ರೀತಿಯಲ್ಲಿ ಬಗ್ಗಿಸಿ ದಂಡಿಸುವುದು ಎಂದರ್ಥ.

ವ್ಯಾಯಾಮ ಮಾಡುವಾಗ ಫ್ಯಾನಿನ ಉಪಯೋಗ ಅಥವಾ ಎ.ಸಿ. ಉಪಯೋಗ ನಿಷಿದ್ಧ. ಇದರಿಂದ ಮಾಂಸಖಂಡಗಳು ಒಣಗಿದಂತಾಗಿ ಜಿಡ್ಡಿನ ಅಂಶವನ್ನು ಕಳೆದುಕೊಳ್ಳುತ್ತವೆ, ಮೈಕೈ ನೋವೂ ಬರುತ್ತದೆ. ಅಲ್ಲದೆ ನಿತ್ಯವೂ ಸರ್ವಾಂಗ ವ್ಯಾಯಾಮ ಅಂದರೆ ಎಲ್ಲಾ ಮಾಂಸಖಂಡಗಳಿಗೂ ಹೊಂದಾಣಿಕೆ ಆಗುವಂತೆ ವ್ಯಾಯಾಮವನ್ನು ವಾರದ ಏಳೂ ದಿನವೂ ಮಾಡಬೇಕು. ವಾರಕ್ಕೊಮ್ಮೆ, 2 ದಿನ, 5 ದಿನ  – ಹೀಗೆ ಮಾಡಬೇಕು, ಜೊತೆಗೆ ಮಧ್ಯೆ ಮಧ್ಯೆ ವಿರಾಮ ತೆಗೆದುಕೊಳ್ಳುವುದರಿಂದ ಮಾಂಸ ಮತ್ತು ಮೇದಸ್ಸುಗಳಲ್ಲಿ ವಿಕೃತಿ ಉಂಟಾಗಿ ಮೇದಸ್ಸಿನ ಗಂಟುಗಳಾಗುತ್ತವೆ.’

ಇಷ್ಟೇ ಅಲ್ಲ ನನ್ನ ಸ್ನೇಹಿತ, ವ್ಯಾಯಾಮ ಶಿಕ್ಷಕರಾದ ಮೂರ್ತಿಯವರು ಹೇಳ್ತಿದ್ರು  ‘ಈಗಿನ ಕಾಲದಲ್ಲಿ ಅನಿಯಮಿತವಾಗಿ ವ್ಯಾಯಾಮ ಮಾಡ್ತಾರೆ. ಕೆಲವು ತಿಂಗಳು ವ್ಯಾಯಾಮ ಮಾಡುವುದು, ಕೆಲವು ತಿಂಗಳು ನಿಲ್ಲಿಸಿ ಮತ್ತೆ ಪ್ರಾರಂಭಿಸುವುದು. ಹೀಗೆ ಪದೇ ಪದೇ ಮಾಡುತ್ತಿದ್ದರೂ ಹೀಗೆ ಮೇಲೆ ಹೇಳಿದ ವಿಕೃತಿಯು ಉತ್ಪತ್ತಿಯಾಗಬಹುದು. ಅನಿಯಮಿತವಾಗಿ ವ್ಯಾಯಮ ಮಾಡೋದ್ರಿಂದ ಈಗ ಒಂದು ಹೊಸ ರೀತಿಯ ಮಧುಮೇಹರೋಗ ಬರುತ್ತಿದೆಯಂತೆ. ಅದರಲ್ಲಿ ಖಾಲಿ ಹೊಟ್ಟೆಯಲ್ಲಿ ಶುಗರ್ ಜಾಸ್ತಿ ಇರುತ್ತಂತೆ, ಊಟ ಆದ ಮೇಲೆ ಕಡಿಮೆ ಇರುತ್ತಂತೆ.

ಇದಕ್ಕೆ ಕಾರಣ, ಒಬ್ಬ ಮನುಷ್ಯ ದಿನನಿತ್ಯ ಇಷ್ಟು ವ್ಯಾಯಾಮ ಮಾಡುತ್ತಾನೆ ಎಂದು ದೇಹ ವ್ಯಾಯಾಮಕ್ಕಾಗಿ ಶಕ್ತಿಯನ್ನು ಕ್ರೋಡೀಕರಣ ಮಾಡಿ ಇಟ್ಟುಕೊಳ್ಳುತ್ತದೆಯಂತೆ. ವ್ಯಾಯಾಮ ಮಾಡದಿದ್ದ ದಿನದ ಶಕ್ತಿ ಹಾಗೇ, ಉಳಿದು ನಿಧಾನವಾಗಿ ವ್ಯಯ ಆಗದಿರುವ ಶಕ್ತಿ ಸಕ್ಕರೆಯಾಗಿ ಪರಿವರ್ತನೆ ಆಗುತ್ತಿದೆಯಂತೆ.  ಆದರೆ, ಪ್ರಾರಂಭದ ದಿನಗಳಲ್ಲಿ ಇ‌‌ದರಲ್ಲಿ ಸಕ್ಕರೆ ಕಾಯಿಲೆಯ ಯಾವುದೇ ಲಕ್ಷಣಗಳು ಇರುವುದಿಲ್ಲವಂತೆ. ಮುಂದೆ ಇದೇ ಸಕ್ಕರೆ ಕಾಯಿಲೆಯಾಗಿ ಪರಿವರ್ತನೆ ಆಗುತ್ತಂತೆ, ಆದರೆ ಮಧುಮೇಹದ ಔಷಧಗಳೂ ಸಹ ಸರಿಯಾಗಿ ಕೆಲಸಾನೇ ಮಾಡೋಲ್ವಂತೆ’ ಎಂದು.

ಅದಲ್ಲದೆ ಅವ್ರು ಹೇಳ್ತಿದ್ರು ‘ನಿಯಮಿತವಾಗಿ ಅತಿ ಹೆಚ್ಚೂ ಅಲ್ಲದೆ, ಅತಿ ಕಡಿಮೆಯೂ ಅಲ್ಲದೆ, ವ್ಯಾಯಾಮ ಮಾಡುವುದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವ್ಯಾಯಾಮ ಮಾಡಿದ ನಂತರ ಮೈಯನ್ನು ತಿಕ್ಕಿಕೊಂಡು ಅಥವಾ ಒತ್ತಿಸಿಕೊಂಡು ಹದವಾದ ಬಿಸಿನೀರು ಅಥವಾ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಮಾಂಸಖಂಡಗಳು ಬಲಗೊಳ್ಳುತ್ತವೆ. ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

ಇದನ್ನು ಬಿಟ್ಟು ಬೇಕಾದಾಗ ದೇಹಕ್ಕೆ ಅಗತ್ಯವಿರುವ ಮೇದಸ್ಸು ಕರಗುವಂತೆ ವ್ಯಾಯಾಮ ಮಾಡುವುದರಿಂದ, ಆಹಾರವನ್ನು ತ್ಯಜಿಸಿ (DIET) ವ್ಯಾಯಾಮ ಮಾಡುವುದರಿಂದ, ವ್ಯಾಯಾಮ ಮಾಡುವಾಗ ಅತಿಯಾಗಿ ಹಸಿವೆ ಆಗುವುದಾಗಲೀ, ಬಾಯಾರಿಕೆ ಆಗುವುದಾಗಲೀ ಒಳ್ಳೆಯದಲ್ಲ. ಹೀಗೆ ಹಸಿವಾಗುತ್ತಿರುವಾಗ ಹಸಿವನ್ನು ತಡೆದು ವ್ಯಾಯಾಮ ಮಾಡುವುದಾಗಲೀ, ಹೊಟ್ಟೆ ತುಂಬಿರುವಾಗ ಅಂದರೆ ಆಹಾರಸೇವನೆ ಮಾಡಿ ತಕ್ಷಣವೇ ವ್ಯಾಯಾಮ ಮಾಡುವುದಾಗಲೀ ಒಳ್ಳೆಯದ್ದಲ್ಲ.

ಇದು ರೋಗಕಾರಕವೇ ಹೊರತು ಆರೋಗ್ಯವನ್ನು ವೃದ್ಧಿಸುವಂತಹದ್ದಲ್ಲ. ಅಲ್ಲದೆ ಕೆಮ್ಮು ದಮ್ಮು, ಶ್ವಾಸರೋಗಿಗಳು ಶಕ್ತಿ ಮೀರಿ ವ್ಯಾಯಾಮ ಮಾಡುವುದರಿಂದ ರಕ್ತದೊತ್ತಡ ಹೆಚ್ಚಾಗುವುದು, ಹೃದಯಕ್ಕೆ ತೊಂದರೆಯಾಗಿ, ಹೃದಯದ ಮಾಂಸಖಂಡಗಳು ಬಲಹೀನವಾಗುವುದು, ಮೆದುಳಿಗೆ ರಕ್ತಪರಿಚಲನೆ ವ್ಯತ್ಯಾಸವಾಗಿ ಕೆಲವು ರೀತಿಯ ನರ ಸಂಬಂಧಿ ರೋಗಗಳಿಗೂ ಕಾರಣವಾಗುತ್ತದೆ.

ಮತ್ತೊಂದು ಮುಖ್ಯವಾದ ವಿಷಯ ಜ್ವರ ಇರುವಾಗ, ಅಜೀರ್ಣ ಇರುವಾಗ, ಅಮ್ಲಪಿತ್ತ ರೋಗಿಗಳು, ತಲೆಸುತ್ತು (vertigo) ಇರುವವರು, ಕ್ಷಯ ಅಥವಾ ಟಿ.ಬಿ.ಯಿಂದ ಬಳಲುತ್ತಿರುವ ರೋಗಿಗಳು, ಗರ್ಭಿಣಿಯರು, ಬಾಣಂತಿಯರು, 65 ವರ್ಷ ಮೇಲ್ಪಟ್ಟವರು, ನರಸಂಬಂಧಿ ರೋಗಗಳಿಂದ ನರಳುತ್ತಿರುವವರು, ಮೂಗಿನಲ್ಲಿ ರಕ್ತ ಬರುವ (epistaxis), ಮಲದೊಡನೆ ರಕ್ತಪ್ರವೃತ್ತಿ ಇರುವವವರು (colitis, piles) ತಮಗೆ ಬಲ ಇದೆ ಎಂದು ಎಲ್ಲಾ ರೀತಿಯ ವ್ಯಾಯಾಮಗಳನ್ನು, ವಿವೇಚನೆ ಇಲ್ಲದೆ ಮಾಡುವುದರಿಂದ ವ್ಯಾಧಿವೃದ್ಧಿಗೆ ತುತ್ತಾಗುತ್ತಾರೆಯೇ ಹೊರತು, ಅಂಥವರು ವ್ಯಾಯಾಮದಿಂದ ಅನುಕೂಲವನ್ನು ಪಡೆಯುವುದಿಲ್ಲ.

ಅಂತಹವರು ತಜ್ಞ ವ್ಯಾಯಾಮ ಅಥವಾ ಯೋಗ ಚಿಕಿತ್ಸಕರಿಂದ ಸಲಹೆ ಪಡೆದು ಅವರಿಗೆ ಯಾವ ವ್ಯಾಯಾಮ ವಿಹಿತವೋ ಅದನ್ನು ಮಾತ್ರ ಮಾಡಬೇಕು. ಅಷ್ಟೇ ಅಲ್ಲ, ಚಳಿಗಾಲದಲ್ಲಿ ಸ್ವಲ್ಪ ಹೆಚ್ಚುಹೊತ್ತು ವ್ಯಾಯಮ ಮಾಡಿದರೂ ತೊಂದರೆ ಆಗುವುದಿಲ್ಲ. ಆದರೆ ಬೇಸಿಗೆಯಲ್ಲಿ, ಬಿಸಿಲಿನಲ್ಲಿ ಕೆಲಸಮಾಡಿ, ತಿರುಗಾಡಿ ಬಂದು, ವ್ಯಾಯಾಮವನ್ನು ಮಾಡಲೇಬಾರದು.

ದುಡ್ಡು ಕೊಟ್ಟಿದ್ದೇವೆ ಎಂದು ಸರಿಯಾದ ಕ್ರಮವಿಲ್ಲದೆ ವ್ಯಾಯಾಮ ಮಾಡುವುದರಿಂದಲೂ ಅತಿಯಾದ ಬಾಯಾರಿಕೆ, ಧಾತುಕ್ಷಯ, ಮೇಲುಸಿರು ಬರುವುದು, ಮೂಗಿನಲ್ಲಿ, ಮೂತ್ರದಲ್ಲಿ, ಮಲದಲ್ಲಿ ರಕ್ತಪ್ರವೃತ್ತಿ, ಒಣಕೆಮ್ಮು, ಪದೇ ಪದೇ ಜ್ವರ ಬರುವುದು – ಇನ್ನೂ ಅನೇಕ ತೊಂದರೆಗಳು ಉತ್ಪತ್ತಿಯಾಗುತ್ತವೆ.’

ಇದನ್ನು ಕೇಳಿದ ನನ್ನ ಸ್ನೇಹಿತ ಮತ್ತು ಅವನ ಹೆಂಡತಿ ‘ವ್ಯಾಯಾಮ ಮಾಡುವುದಕ್ಕೂ ರೀತಿ–ನೀತಿ, ನಿಯಮಗಳಿರುತ್ತದೆ ಎಂದು ನಮಗೆ ಈವತ್ತೇ ತಿಳಿದಿದ್ದು; ಇಷ್ಟು ಮಾತಾಡಿ ಸುಸ್ತಾಗಿದ್ದಕ್ಕೆ ಕಾಫಿ ಕುಡಿದುಕೊಂಡು ಹೋಗು’ ಎಂದು ಹೆಂಡತಿಗೆ ಕಾಫಿ ಮಾಡುವುದಕ್ಕೆ ಹೇಳಿದ.

*

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry