‘ಅತಿಯಾದ ಶಬ್ದವೇ ನನಗೆ ಅಲರ್ಜಿ!’

7

‘ಅತಿಯಾದ ಶಬ್ದವೇ ನನಗೆ ಅಲರ್ಜಿ!’

Published:
Updated:
‘ಅತಿಯಾದ ಶಬ್ದವೇ ನನಗೆ ಅಲರ್ಜಿ!’

1. ನನಗೆ ಮೊದಲಿನಿಂದಲೂ ಜನರ ಜೊತೆ ಹೆಚ್ಚು ಬೆರೆಯಲು ಸಾಧ್ಯವಾಗುತ್ತಿರಲಿಲ್ಲ. ಅತಿಯಾದ ಶಬ್ದ ಕೇಳಿದರೆ ತಲೆನೋವು ಬರುತ್ತಿತ್ತು, ಹಾಗಾಗಿ ಯಾವುದೇ ಸಮಾರಂಭಗಳಿಗೂ ಹೋಗುತ್ತಿರಲಿಲ್ಲ. ಈಗ ಅದೇ ಅಭ್ಯಾಸ ಆಗಿದೆ. ಐದು ನಿಮಿಷ ಅತಿಯಾದ ಶಬ್ದ ಕೇಳಿಸಿದರೆ ತಲೆ ಸಿಡಿಯುತ್ತದೆ. ಇದರಿಂದ ಮಾನಸಿಕವಾಗಿ ನನ್ನೊಳಗೆ ನೋವು ಅನುಭವಿಸುತ್ತಿದ್ದೇನೆ. ಪರಿಹಾರ ಏನು?

-ವರ್ಷಿಣಿ, ಶಿವಮೊಗ್ಗ

ಉತ್ತರ: ಕೆಲವು ಜನರು ತುಂಬ ಅಂತರ್ಮುಖಿಗಳಾಗಿರುತ್ತಾರೆ. ಅವರಿಗೆ ಸ್ವಲ್ಪವೂ ಹೊರಗಡೆಯ ಪ್ರಪಂಚದಲ್ಲಿ ಇರಲು ಸಾಧ್ಯವಾಗುವುದಿಲ್ಲ; ಸಾಮಾಜಿಕವಾಗಿ ಎಲ್ಲಿಯೂ ಬೆರೆಯಲು ಆಗುವುದಿಲ್ಲ. ಸಭೆ–ಸಮಾರಂಭಗಳಲ್ಲಿ ಉಂಟಾಗುವ ಶಬ್ದ ನಿಮ್ಮಲ್ಲಿ ಕಿರಿಕಿರಿಯನ್ನು ಮೂಡಿಸುತ್ತದೆ; ನಿಮಗೆ ತೊಂದರೆಯನ್ನು ಕೊಡುತ್ತಿದೆ. ಹಲವು ಸಂದರ್ಭಗಳಲ್ಲಿ ನೀವು ಯಾವ ರೀತಿಯ ವ್ಯಕ್ತಿತ್ವದಲ್ಲಿ ಜನಿಸಿದ್ದೀರಿ ಅಥವಾ ನೀವು ಬೆಳೆಯುವಾಗ ಮನೆಯ ಪರಿಸ್ಥಿತಿ ಹೇಗಿತ್ತು ಎನ್ನುವುದು ಮುಖ್ಯವಾಗುತ್ತದೆ. ಆದರೂ, ಅದೆಲ್ಲಾ ಹೇಗೆ ಇರಲಿ, ನೀವು ಅಂತರ್ಮುಖಿಯಾಗಿದ್ದರೂ ತೊಂದರೆ ಇಲ್ಲ. ಇದು ನಿಮ್ಮ ವ್ಯಕ್ತಿತ್ವ ಮತ್ತು ನೀವು ನಿಮ್ಮದೇ ದಾರಿಯಲ್ಲಿ ವಿಚಾರಗಳನ್ನು ನಿರ್ವಹಣೆ ಮಾಡಬಹುದು.

ಕೆಲವು ವೇಳೆ ನಿಮಗೆ ಬದಲಾವಣೆಯ ಅವಶ್ಯಕತೆ ಇರುವುದಿಲ್ಲ. ಹಲವು ಸಂದರ್ಭಗಳಲ್ಲಿ ಅದು ನಮ್ಮ ಮೂಲಗುಣವೇ ಆಗಿರುತ್ತದೆ. ಆದರೆ, ಕೆಲವೊಮ್ಮೆ ನಮ್ಮ ಈಗಿನ ಗುಣವನ್ನು ನಮ್ಮ ಒಳಿತಿಗಾಗಿ ಬದಲಾಯಿಸಿಕೊಳ್ಳಲೂ ಬೇಕಾಗುತ್ತದೆ. ಮೊದಲಿಗೆ ಒಂದೊಂದೇ ಹೆಜ್ಜೆಯನ್ನು ಇರಿಸಿ. ಆಮೇಲೆ, ನೀವಿರುವ ಕಂಪರ್ಟ್ ಝೋನ್‌ನಿಂದ ಸ್ವಲ್ಪ ಆಚೆ ಬರಲು ಪ್ರಯತ್ನಿಸಿ. ಇದರಿಂದ ನಿಮಗೆ ಹೊಸ ವಿಷಯಗಳನ್ನು ಕಲಿಯಲು ಸಹಾಯವಾಗುತ್ತದೆ. ನಿಮ್ಮಿಂದ ಸಾಧಿಸಲು ಸಾಧ್ಯವಾಗದ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ.

ಪ್ರತಿ ವಾರಕ್ಕೊಮ್ಮೆ ಒಂದು ಹೊಸ ವಿಷಯವನ್ನು ಕಲಿಯುತ್ತೇನೆ ಎಂದು ಚಾಲೆಂಜ್ ಮಾಡಿ. ಆಗ ಪ್ರತಿದಿನ ನಿಮ್ಮನ್ನು ಹೊಸತನಕ್ಕೆ ತೆರೆದುಕೊಳ್ಳಬಹುದು.

ನಿಮ್ಮ ಮನೆಯಲ್ಲಿ ಕೆಲವು ಸ್ನೇಹಿತರನ್ನು ಆಹ್ವಾನಿಸಿ ಔತಣಕೂಟವನ್ನು ಏರ್ಪಡಿಸಿ. ಪ್ರತಿ ಸ್ನೇಹಿತರಿಗೂ ನೀವು ಈವರೆಗೂ ಭೇಟಿ ಮಾಡಿರದ ಅವರ ಸ್ನೇಹಿತರನ್ನು ಕರೆತರಲು ಹೇಳಿ. ಹೀಗೆ ಮಾಡುವುದರಿಂದ ಈಗಾಗಲೇ ನಿಮಗೆ ತಿಳಿದಿರುವ ವ್ಯಕ್ತಿಗಳ ಜೊತೆಗೆ, ನಿಮಗೆ ತಿಳಿಯದ ವ್ಯಕ್ತಿಗಳ ಜೊತೆಗೂ ಮುಕ್ತವಾಗಿ ಬೆರೆಯಲು ಸಾಧ್ಯವಾಗುತ್ತದೆ.

ಹೀಗೆ, ನಿಧಾನವಾಗಿ ನಿಮ್ಮನ್ನು ನೀವು ಸಾಮಾಜಿಕ ಸಭೆಗಳಲ್ಲಿ ತೆರೆದುಕೊಳ್ಳಬಹುದು. ಮೊದಮೊದಲು ಕಡಿಮೆ ಸಮಯವನ್ನು ಮೀಸಲಿಡಿ. ಆಮೇಲೆ ನಿಧಾನಕ್ಕೆ ಶಬ್ದ ಹಾಗೂ ಜನಜಂಗುಳಿಯಲ್ಲಿ ಬೆರೆಯಬಹುದು. ಹವ್ಯಾಸಕ್ಕೆ ಸಂಬಂಧಿಸಿದ ತರಗತಿಗಳು ಹಾಗೂ ಯೋಗದಂಥ ಕೋರ್ಸ್‌ಗಳಿಗೆ ಸೇರಿ. ಅಲ್ಲಿ ನೀವು ಸಮಾನಮನಸ್ಕರನ್ನು ನೋಡಬಹುದು. ಯಾವುದೇ ಪರಿಸ್ಥಿತಿಯಲ್ಲು ನಿಮ್ಮನ್ನು ನೀವು ಸಹಜವಾಗಿರುವಂತೆ  ಆಗಿರುವಂತೆ ನೋಡಿಕೊಳ್ಳಿ. ನಿಮ್ಮ ವ್ಯಕ್ತಿತ್ವ ಹೇಗೆ ಇರಲಿ – ನೋವು ಅಥವಾ ಹತಾಶೆಗೆ ನಿಮ್ಮ ಮನಸ್ಸು ಕುಗ್ಗದಂತೆ ನೋಡಿಕೊಳ್ಳಿ. ಯಾವುದೇ ಪರಿಸ್ಥಿತಿಯನ್ನೂ ಶಾಂತವಾಗಿ ಸ್ವೀಕರಿಸಿ.

2. ನಾನು ತಾಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ.  ‘ಪ್ರತಿದಿನ ಇಂಥ ಕೆಲಸ, ಇಷ್ಟು ಕಡತಗಳನ್ನು ಅಟೆಂಡ್ ಮಾಡ್ಬೇಕು’ ಎಂದುಕೊಂಡು ಕಚೇರಿಗೆ ಹೋಗಿರುತ್ತೇನೆ. ಆದರೆ ಯಾವುದೋ ಬೇರೆ ತುರ್ತು ಕೆಲಸ ಬಂದು ಅಂದುಕೊಂಡ ಹಾಗೆ ಕೆಲಸ ಆಗದೇ, ತುಂಬಾ ಬೇಜಾರಾಗುತ್ತದೆ. ಇದರಿಂದ ಮಾನಸಿಕವಾಗಿ ತುಂಬಾ ವ್ಯಥೆಯುಂಟಾಗಿ ಕಚೇರಿಯಲ್ಲಿ, ಮನೆಯಲ್ಲಿ ಎಲ್ಲರೊಡನೆ ರೇಗಾಡುತ್ತೇನೆ. ಮಾತ್ರವಲ್ಲ, ಒಂದು ರೀತಿ ಕೆಲಸ ಮಾಡಿಯೂ ಕೆಟ್ಟವನಾಗ್ತಿದ್ದೀನಿ. ಏನು ಮಾಡಲಿ?

-ಮಹಾಂತೇಶ, ಬಳ್ಳಾರಿ

ಉತ್ತರ: ಹತಾಶೆ ಹಾಗೂ ಸಿಟ್ಟು ನಿಮ್ಮ ಅನೇಕ ಕೆಲಸಗಳಿಗೆ ತೊಂದರೆ ಮಾಡುತ್ತದೆ ಮತ್ತು ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕಚೇರಿಗೆ ತೆರಳುವ ಮೊದಲೇ, ‘ಈ ದಿನದ ಇಷ್ಟು ಕೆಲಸವನ್ನು ಮುಗಿಸಬೇಕು’ ಎಂದುಕೊಳ್ಳುವುದು ಒಳ್ಳೆಯ ಅಭ್ಯಾಸ. ಆದರೆ ಅನೇಕ ಸಲ ನಾವು ಯೋಜಿಸಿಕೊಂಡ ಕೆಲಸಗಳು ಅಂದುಕೊಂಡಂತೆ ಆಗುವುದಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಆ ಕ್ಷಣ ನಡೆದು ಹೋಗಿರುತ್ತದೆ. ಅದನ್ನು ಬಿಟ್ಟುಬಿಡಿ. ಮುಖ್ಯವಾಗಿ ಮಾಡಲೇ ಬೇಕಾದ ಕೆಲಸಗಳ ನಡುವೆ ಬೇರೆ ಕೆಲಸ ಬಂದರೆ ಪ್ರಾಮುಖ್ಯವನ್ನು ಗಮನಿಸಿ. ಪ್ರಾಶಸ್ತ್ಯ ಹಾಗೂ ‘ಡೆಡ್‌ಲೈನ್‌’ಗೆ ತಕ್ಕಂತೆ ಕೆಲಸ ಮಾಡಿ. ಆಗ ನೀವು ಅನಾವಶ್ಯಕ ಹಾಗೂ ಅಷ್ಟೇನೂ ಮುಖ್ಯವಲ್ಲದ ಕೆಲಸಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗುವುದಿಲ್ಲ. ಇದರಿಂದ ನೀವು ನಿಮಗಿರುವ ಮುಖ್ಯ ಕೆಲಸಗಳ ಮೇಲೆ ಗಮನ ಹರಿಸಬಹುದು ಮತ್ತು ಅವನ್ನು ಸರಿಯಾದ ಸಮಯಕ್ಕೆ ಮುಗಿಸಬಹುದು. ಕಚೇರಿಗಳಲ್ಲಿ ಅನೇಕರು ಮಾಡುವ ಸಾಮಾನ್ಯ ಅಭ್ಯಾಸವಿದು. ಆದರೆ ಹತಾಶೆ ಹಾಗೂ ಸಿಟ್ಟು ಇದಕ್ಕೆ ಪರಿಹಾರವಲ್ಲ. ನೀವು ಹೇಗೆ ಆಯೋಜಿಸುತ್ತಿರ ಹಾಗೂ ಕಾರ್ಯರೂಪಕ್ಕೆ ತರುತ್ತೀರಾ ಎಂಬುದೇ ಇಲ್ಲಿ ಮುಖ್ಯವಾಗುತ್ತದೆ.

3. ನನಗೆ ತುಂಬಾ ಮೊದಲಿನಿಂದಲೂ ತುಂಬಾ ಕೋಪ, ಹಟ. ಎಲ್ಲರ ಜೊತೆ ಜಗಳ ಮಾಡುತ್ತಾನೆ. ಅದರಲ್ಲೂ ಗಂಡನ ಜೊತೆ ಪ್ರತಿದಿನ ಜಗಳ ಮಾಡುತ್ತೇನೆ. ಇದರಿಂದ ಮಾಸಿಕ ನೆಮ್ಮದಿ ಇಲ್ಲದಂತಾಗಿದೆ. ದಯವಿಟ್ಟು ಪರಿಹಾರ ತಿಳಿಸಿ.

–ಹೆಸರು, ಊರು ಬೇಡ

ಉತ್ತರ: ನಿಮಗೆ ನಿಮ್ಮ ಪರಿಸ್ಥಿತಿಯ ಬಗ್ಗೆ ಚೆನ್ನಾಗಿ ತಿಳಿದಿದೆ. ಈಗ ನೀವು ನಿಮ್ಮಲ್ಲಿರುವ ಕೆಟ್ಟ ಗುಣವನ್ನು ಒತ್ತಾಯಪೂರ್ವಕವಾಗಿ ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಇದು ನಿಮ್ಮ ಕುಟುಂಬದ ಸ್ವಾಸ್ಥ್ಯ ಹಾಗೂ ನಿಮ್ಮ ದೀರ್ಘಕಾಲದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ನಿಮ್ಮನ್ನು ನೀವು ಎಚ್ಚರಿಕೆಯಿಂದ ನೋಡಿಕೊಳ್ಳಿ. ನಿಮ್ಮಲ್ಲಿನ ಯಾವ ಅಂಶ ಸಿಟ್ಟಿಗೇಳುವಂತೆ ಮಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳಿ.  ಕಾರಣವೇನು ಎಂಬುದು ತಿಳಿದರೆ, ಆಗ ನೀವು ಪರಿಸ್ಥಿತಿಯನ್ನು ತುಂಬಾ ಸುಲಭವಾಗಿ ನಿಭಾಯಿಸಬಹುದು.

ನಿಮ್ಮ ಇಚ್ಛೆ ಹಾಗೂ ನೀವು ನಿರೀಕ್ಷಿಸಿದಂತೆ ಪರಿಸ್ಥಿತಿ ಇಲ್ಲದಿದ್ದರೆ ಆಗ ಸಿಟ್ಟು ಹಾಗೂ ಹತಾಶೆ ಕಾಡುತ್ತದೆ. ಅವು ನಿಮ್ಮಲ್ಲಿ ಈ ರೀತಿ ವರ್ತಿಸುವಂತೆ ಮಾಡುತ್ತವೆ. ಎಲ್ಲ ಮಾಡಿದ ಮೇಲೆ ಅಪರಾಧಪ್ರಜ್ಞೆ ಕಾಡುವ ಬದಲು, ಆ ಪರಿಸ್ಥಿತಿಗೆ ಪ್ರತಿಕ್ರಿಯೆ ನೀಡದಿರಲು ಪ್ರಯತ್ನಿಸಿ. ಎಲ್ಲ ಸಮಯದಲ್ಲೂ ಎಲ್ಲ ವಿಷಯಗಳೂ ನಾವು ಅಂದುಕೊಂಡ ಹಾಗೆ ಅಥವಾ ನಮ್ಮ ನಿರೀಕ್ಷೆಗಳಂತೆ ಸಾಗುವುದಿಲ್ಲ. ಎದುರಿಗಿನ ವ್ಯಕ್ತಿಯ ಪ್ರತ್ಯೇಕತೆಗೂ ಗೌರವ ನೀಡಿ. ಇದರಿಂದ ನೀವು ಕ್ಷೋಭೆಗೆ ಒಳಗಾಗುವುದನ್ನು ತಪ್ಪಿಸಬಹುದು. ಪ್ರತಿನಿತ್ಯ ಶಾಂತರಾಗಿರಲು ಅಭ್ಯಾಸ ಮಾಡಿ. ಇದರಿಂದ ನೀವು ಆದಷ್ಟು ಪಾಪಪ್ರಜ್ಞೆಯಿಂದ ಹೊರಬರಬಹುದು.

4. ನನಗೆ ಇಪ್ಪತ್ತೈದು ವರ್ಷ. ಅಂಗೈ ಹಾಗೂ ಅಂಗಾಲು ಅತಿಯಾಗಿ ಬೆವರುತ್ತದೆ. ಸರಿಯಾಗಿ ಯಾರ ಹತ್ತಿರವೂ ಮಾತನಾಡಲು ಮತ್ತು ಏನೂ ಕೆಲಸ ಮಾಡಲು ಆಗುತ್ತಿಲ್ಲ. ಇದರಿಂದ ಜೀವನದಲ್ಲಿ ಮನಃಶಾಂತಿ ಹಾಗೂ ನೆಮ್ಮದಿ ಇಲ್ಲ. ಇದಕ್ಕೇನಾದರೂ ಪರಿಹಾರ ಇದ್ದರೆ ತಿಳಿಸಿ.

–ರವಿ, ಊರು ಬೇಡ

ಉತ್ತರ: ಯಾವ ವಿಷಯ ನಿಮಗೆ ತೊಂದರೆ ಮಾಡಿದಾಗ ಅಥವಾ ಯಾವ ಕಾರಣಕ್ಕೆ ನೀವು ಆತಂಕಗೊಂಡಾಗ ನೀವು ಬೆವರುತ್ತೀರಾ  ಎಂಬುದನ್ನು ನೋಡಿ ತಿಳಿದುಕೊಳ್ಳಿ. ಒಂದು ವೇಳೆ ಹಾಗೆ ಯಾವುದು ನಿಮ್ಮ ಗಮನಕ್ಕೆ ಬರದೇ ಇದ್ದರೆ, ಹಲವು ಸಂದರ್ಭದಲ್ಲಿ ಇದು ಮಾನಸಿಕ ಸಮಸ್ಯೆಯಾಗಿರುತ್ತದೆ. ನಿಮ್ಮ ಬೆವರಿನ ಕೈಯಿಂದ ನಿತ್ಯಜೀವನ ಹಾಗೂ ಸಾಮಾಜಿಕ ಜೀವನದಲ್ಲಿ ತೊಂದರೆಯಾಗುತ್ತಿಲ್ಲ ಎಂದರೆ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಇದು ಅನೇಕರು ಎದುರಿಸುತ್ತಿರುವ ಸಮಸ್ಯೆ. ಮುಜುಗರಕ್ಕೆ ಒಳಗಾಗುವುದು ಬೇಕಿಲ್ಲ.

* ಆಗಾಗ್ಗೆ ಬರೀ ನೀರಿನಿಂದ ಕೈ ತೊಳೆದುಕೊಳ್ಳಿ ಮತ್ತು ಸಂಪೂರ್ಣವಾಗಿ ಒಣಗಿಸಿ.

* ಆ್ಯಂಟಿ ಮಾಯಿಶ್ಚರೈಸಿಂಗ್ ಕ್ರೀಮ್ ಪ್ರಯ್ನತಿಸಿ ಮತ್ತು ಸ್ವಚ್ಛವಾಗಿ ಒಣಗಿದ ಟವಲ್‌ನಿಂದ ಒರೆಸಿ.

* ಶಾಂತವಾಗಿರುವುದು ತುಂಬಾ ಮುಖ್ಯ. ಆತಂಕಕ್ಕೆ ಒಳಗಾದಾಗಲೂ ಶಾಂತರಾಗಿರಿ, ನಿಮ್ಮ ಯೋಚನೆಗೆ ಅಡ್ಡಿಪಡಿಸುವ ವಿಷಯಗಳು ಎದುರಾದಾಗಲು ಶಾಂತರೀತಿಯಿಂದ ಇರಿ.

* ಟಾಲ್ಕಂ ಪೌಡರ್ ಬಳಸುವುದು ಸುಲಭದ ದಾರಿ.

* ಹತ್ತಿಯ ಉಂಡೆಯನ್ನು ನಿಮ್ಮ ಬಳಿ ಇರಿಸಿಕೊಳ್ಳಿ. ಇದರಿಂದ ನಿಮಗೆ ಕೈ ಬೆವರಿದ ಅನುಭವಾದಾಗೆಲ್ಲಾ ಒರೆಸಿಕೊಳ್ಳಬಹುದು. ಇಷ್ಟೆಲ್ಲಾ ಆದ ಮೇಲೂ ನಿಮಗೆ ‘ಕಂಫರ್ಟ್’ ಎನ್ನಿಸದಿದ್ದರೆ ಆಗ ವೈದ್ಯರಲ್ಲಿಗೆ ಹೋಗಿ

ಏನಾದ್ರೂ ಕೇಳ್ಬೋದು

ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಆಪ್ತ ಸಮಾಲೋಚಕಿ ಸುನೀತಾ ರಾವ್ ಉತ್ತರಿಸಲಿದ್ದಾರೆ.

ಇಮೇಲ್ ವಿಳಾಸ; bhoomika@prajavani.co.in ವಾಟ್ಸ್ಯಾಪ್: 9482006746

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry