ದೀಪವಿರದ ಮನೆಗಳು, ಉರಿಯುವ ಒಲೆಗಳು…

7
ಭೂಮಿಕಾ ಲಲಿತಪ್ರಬಂಧ 2018

ದೀಪವಿರದ ಮನೆಗಳು, ಉರಿಯುವ ಒಲೆಗಳು…

Published:
Updated:
ದೀಪವಿರದ ಮನೆಗಳು, ಉರಿಯುವ ಒಲೆಗಳು…

ದೀಪವಿರದ ದಿನಗಳು ಮತ್ತು ನಮ್ಮ ಸರಸೋತಜ್ಜಿ ಒಲೆಗಳು ಬಹುವಾಗಿ ಕಾಡುತ್ತಿರುತ್ತವೆ ನನಗೆ (ಕರೆಂಟ್ ಹೋದಾಗಿನ ಇರುಳು ನೆನಪಿಸಿಕೊಳ್ಳಿ). ನನ್ನಂತೆ ನಿಮಗೂ ಹೀಗಾಗುತ್ತಿರಬಹುದು. ಯಾಕೆಂದರೆ ನಾವೆಲ್ಲ ಒಂದು ದೊಡ್ದ ಬೆಳಕಿನ ಗೋಳದಲ್ಲಿ ಕುಳಿತುಬಿಟ್ಟಿದ್ದೇವೆ. ಎಲ್ಲೂ ಹಿಡಿ ಕತ್ತಲೆಯೆಂಬುದೇ ಇಲ್ಲ ನೋಡಿ. ಬೆಳಗಾಗೆದ್ದರೆ ಕಣ್ಣಿಗೆ ಮೊಬೈಲನ್ನು ಒತ್ತಿಕೊಂಡೇ ಬೆಳಗಾಗುತ್ತದೆ.

ರಾತ್ರಿ ಮಗ್ಗಲು ಹೊರಳಿದರೆ ಮೊಬೈಲ್ ಇರಬೇಕು! ಪಕ್ಕದಲ್ಲಿ ಕೈದೀಪವಿದ್ದಂತೆ. ಟೈಮ್ ನೋಡಬಹುದು, ಯಾರೋ ನಮಗಾಗಿಯೇ ಕಾದು ಕುಳಿತಿದ್ದಾರೆನ್ನುವಂತೆ ನಾವು ಬೇಕು-ಬೇಡಾದ ಸಂದೇಶಗಳನ್ನೆಲ್ಲ ನೋಡತೊಡಗುತ್ತೇವೆ. ಅರೆನಿದ್ದೆಯಲ್ಲೂ ಕಣ್ಣು ಮನಸ್ಸೆಲ್ಲ ಆ ಬೆಳಕಿನ ಅಕ್ಷರಗಳನ್ನು ಓದಿಕೊಳ್ಳುತ್ತಿರುತ್ತದೆ. ಕರೆಂಟ್ ಹೋದರೆ ಮನೆ ಮನೆಗಳಲ್ಲಿ ಇನ್ವಟರ್‌ಗಳಿವೆ ಈಗ. ಮನೆ ತುಂಬ ಬೆಳಕು; ಕತ್ತಲೆ ಎಲ್ಲಿದೆ ಹೇಳಿ!

ಬೆಳಗಿನ ಮಾತು ಹೇಳುತ್ತಿದ್ದೆನಲ್ಲಾ… ನೋಡಿ ಟೇಬಲ್ ಮೇಲೆ ಬಿದ್ದ ಪತ್ರಿಕೆಯ ಅಕ್ಷರಗಳು ಕಾಣಿಸಲಾರದ್ದಕ್ಕೆ ಚಸ್ಮಾ ತೆಗೆಯಬೇಕು. ಅದರ ಬದಲಿಗೆ ಪಾಯಿಖಾನೆಯಲ್ಲಿ ಕೂತು (ಬಸ್ಸು, ಮೆಟ್ರೋ ಹಿಡಿಯುವುದಕ್ಕಿಂತ ಮೊದಲು) ಮೊಬೈಲ್‌ ಅಲ್ಲೇ ದಿನಪತ್ರಿಕೆಯನ್ನು ಓದುವುದು ಹೆಚ್ಚು ಅನುಕೂಲವೆನಿಸುತ್ತದೆ, ಅಲ್ಲವಾ? ಅದಕ್ಕೇ ನನಗೆ ಈ ‘ಝಗ್ಗ್’ ಎಂದು ಕಣ್ಣುಕುಕ್ಕುವ ಬೆಳಕಿನಿಂದ ಎಲ್ಲಾದ್ರೂ ದೂರ ಹೋಗಬೇಕೆನಿಸ್ತಿದೆ. ಯಾಕೋ ಜಗಮಗ ಕಣ್ಣು ಕೋರೈಸುವ ಬೆಳಕಿನ ಬದುಕು ಸಾಕಾಗಿದೆ.

ಎಲ್ಲವೂ ಸೋಗಿನ ಬದುಕು ಅನಿಸತೊಡಗಿದೆ. ಎಲ್ಲ ಬಣ್ಣದ ಮಾತುಗಳು, ಎಲ್ಲಿ ನೋಡಿದರೂ ಕೋರೈಸುವ ಬೆಳಕು. ಮಾಲುಗಳಲ್ಲಿ, ರಸ್ತೆಗಳಲ್ಲಿ ಝಗಮಗ, ಝಗಮಗ ಬೆಳಕು ನನ್ನನು ಅಸ್ವಸ್ಥಳನ್ನಾಗಿಸಿಬಿಡುತ್ತದೆ. ಯಾಕಂತ ಗೊತ್ತಿಲ್ಲ! ದೆಹಲಿಯಲ್ಲಿ ಮಾಗಿ ಶುರುವಾಗುತ್ತಲೂ ಹಗಲುಗಳು ಕುಗ್ಗಿ, ಇರುಳು ದೀರ್ಘವಾಗತೊಡಗಿದಾಗ ಸಂಜೆ ಆರಕ್ಕೆ ಗಾಢ ಕತ್ತಲಾವರಿಸಿಬಿಡುತ್ತದೆ.

ಮತ್ತು ಬಸ್ಸು ಹತ್ತುವಾಗ ಇಳಿವಾಗ, ರಸ್ತೆ ದಾಟುವಾಗ ರಸ್ತೆಯಲ್ಲಿನ ಎಲ್ಲ ವಾಹನಗಳ ಹೆಡ್‌ಲೈಟುಗಳು ಕಣ್ಣಿಗೆ ರಪರಪ ಹೊಡೆಯತೊಡಗಿ ಎಲ್ಲಿ ಈ ಕೋರೈಸುವ ಬೆಳಕು ಸಾಯಿಸಿಬಿಡುತ್ತದೋ ಅಂತ ಹೆದರಿಕೆಯಾಗುತ್ತದೆ. (‘ಬೆಳಕಿನ ಮಾಲಿನ್ಯ’ವೆಂಬ ಸಂಗತಿ ಈಗಷ್ಟೇ ತಿಳಿಯಿತು.) ಖಂಡಾಂತರ ಯಾನಿಸುವ ಪಕ್ಷಿಗಳಂತೂ ಬೆಳಗಾಗಿದೆ ಎಂಬ ಭ್ರಮೆಯಿಂದ ಸಾವಿರಾರು ಸಂಖ್ಯೆಯಲ್ಲಿ ಕೆಳಗೆ ಬಿದ್ದು ಸಾಯುತ್ತವಂತೆ!

ಈಗ ನೆನಪುಗಳೂ ತಡವರಿಸತೊಡಗಿವೆ. ದೀಪವಿರದ ಕೋಣೆಯಲ್ಲೂ ಕಣ್ಣಿಗೊಂದು ಬೆಳಕು ಕಾಣಿಸುತ್ತಿತ್ತು. ದೀಪವಿರದ ಮನೆಯಲ್ಲೂ ನೆಮ್ಮದಿಯ ಬೆಳಕು ಹರಡಿರುತ್ತಿತ್ತು. ಗುಡಿಸಲೂ ಹಣತೆಯಂತೆ ಚೆಂದವೆನಿಸುತ್ತಿತ್ತು. ಮಾಗಿಯ ಚುಮುಚುಮು ಚಳಿಯಲ್ಲಿ ಬೆಳ್ಳಿಚುಕ್ಕಿ ಫಳಫಳಿಸುವ ಹೊತ್ತಿನಲ್ಲಿ ಎದ್ದು, ಇನ್ನೂ ಯಾರೂ ಎದ್ದಿರದ ನಸುಕಿನಲ್ಲಿ ಹಂಡೆಯೊಳಗಿನ ಉಗುರು ಬೆಚ್ಚನೆಯ ನೀರಲ್ಲಿ ಮುಖ ಗಲಬರಿಸಿಕೊಂಡು, ಇದ್ದಿಲು ಒಲೆಯನ್ನು ಹೊತ್ತಿಸಿಕೊಂಡು ಕುಸುರೆಳ್ಳು ಹಚ್ಚಲು ಕೂರುತ್ತಿದ್ದೆವು, ನಾನು ಬಾಲ್ಯದ ಗೆಳತಿ ಭಾರತಿ. ಎಷ್ಟು ಹಟ ಮಾಡಿದೆ ಮನೆಯಲ್ಲಿ ಕುಸುರೆಳ್ಳು ಹಚ್ಚಬೇಕಂತ. ಅದೇ ಮೊದಲು ಮತ್ತದೇ ಕೊನೆಯದೂ ಆಗಿ ಹೋಯ್ತು (ಗಾಬರಿಯಾಗಬೇಡಿ). ಮತ್ತೆಂದೂ ಕೂತು ಕುಸುರೆಳ್ಳು ಹಚ್ಚುವ ಅವಕಾಶ ಸಿಗಲಿಲ್ಲವಷ್ಟೇ!

ಯಾಕೆ ಅದು ತಲೆಗೆ ಹೊಕ್ಕಿತೋ ಏನೋ ನೆನಪಿಲ್ಲ. ಅಂತೂ ಸಕ್ಕರೆಪಾಕದ ವಿಧಾನ ಅವರಿವರಿಂದ ತಿಳಿದುಕೊಂಡು ಅವ್ವನ ಜೀವ ಹಿಂಡಿದೆ. ಪಾಕಕ್ಕೆ ಚಮಚ ಮೊಸರು ಹಾಕಿ, ಪಾಕದೊಳಗಿನ ಕೊಳೆಯನ್ನೆಲ್ಲ ತೆಗೆದು ಬಿಳಿ ಪಂಜೆಯಲ್ಲಿ ಎರಡು ಮೂರು ಬಾರಿ ಸೋಸಿ, ಹದವಾದ ಬೆಳ್ಳಗಿನ ಪಾಕವನ್ನು ತಯಾರಿಸಿಕೊಟ್ಟಿದ್ದಳು. ಕುಸುರೆಳ್ಳಿಗೆಂದೆ ಲಕಲಕ ಹೊಳೆಯುವಂತೆ ಹಿತ್ತಾಳೆ ಬುಟ್ಟಿಯನ್ನೂ ಬೆಳಗಿಕೊಟ್ಟಿದ್ದಳು, ಮಂದವಾದ ನಿಗಿ ನಿಗಿ ಕೆಂಡದೊಲೆ ಬೇಕೆಂದು ಕಬ್ಬಿಣದ ಇದ್ದಿಲು ಒಲೆಯನ್ನು ನಮ್ಮ ಕೋಣೆಯಲ್ಲೆ ಇಟ್ಟುಕೊಂಡಿದ್ದೆ.

ಗೆಳತಿ ನಸುಕಿನಲ್ಲೇ ಹಲ್ಲುಜ್ಜಿಕೊಂಡು ಓಡಿಬರುವ ಹೊತ್ತಿಗೆ ನಾನು ಒಲೆ ಹೊತ್ತಿಸಿರುತ್ತಿದ್ದೆ. ಎಳ್ಳುಕಾಳಿಗೆ ತೊಟ್ಟು ತೊಟ್ಟು ಪಾಕ ಬಿಟ್ಟು ಕೈಯಿಂದ ಕೈಯಾಡಿಸುತ್ತ ಸ್ವಲ್ಪ ಶೆಗಡಿ ಒಲೆ ಮೇಲಿಡುವುದು, ಇಳಿಸಿಕೊಂಡು ಮತ್ತೆ ತುದಿ ಬೆರಳ ಮುಗುಳಿಂದ ಕೈಯಾಡಿಸುವುದು, ನಮ್ಮ ಪ್ರಯೋಗಶಾಲೆಯಲ್ಲಿ ಪಾಕ ಮೆತ್ತಿಸಿಕೊಳ್ಳುತ್ತಿದ್ದ ಈ ಎಳ್ಳುಕಾಳುಗಳು ತುಸು ತುಸುವೇ ದೊಡ್ದ ಬಡೇಸೋಪಿನ ಗಾತ್ರಕ್ಕೆ ಬೆಳೆಯುತ್ತಿದ್ದವು. ಇನ್ನು ಅವುಗಳ ಮೈಗೆ ಮುಳ್ಳುಮುಳ್ಳುಗಳೆದ್ದು ಹೇಗೆ ಕುಸುರೊಡೆಯುತ್ತವೆಯೆನ್ನುವುದೇ ಒಂದು ಸೋಜಿಗ. ಮತ್ತು ಆ ಸೋಜಿಗದ ಬೆಳಗು ಇನ್ನೂ ಸುಂದರ. ಈಗ ಅಂಥ ಕುಸುರೆಳ್ಳು ಹಚ್ಚುವ ತಾಳ್ಮೆ, ಸಮಯ – ಎರಡೂ ಇಲ್ಲವೆನ್ನಿ!

ಕಿಟಕಿಯಿಂದ ಹೊರಗೆ ಕಣ್ಣಾಡಿಸಿದರೆ ಇನ್ನೂ ನಸುಕು ಹರಿದಿರುತ್ತಿದ್ದಿಲ್ಲ. ನಿಗಿನಿಗಿ ಕೆಂಡದ ಝಳ ಎಷ್ಟು ಹಿತವಾಗಿರುತ್ತಿತ್ತು. ಅದೆಷ್ಟು ಬೆಚ್ಚಗಿನ ನೆಮ್ಮದಿ ಅದು. ಗೋಣಿತಾಟಿನ ಮೇಲೆ ಕುಳಿತು ಬೆಳಕು ಹರಿಯುವ ತನಕ ಕುಸುರೆಳ್ಳು ಹಚ್ಚಿ. ಅದನ್ನು ಅಷ್ಟಕ್ಕೆ ನಿಲ್ಲಿಸಿ ಸ್ಪೆಷಲ್‌ ಕ್ಲಾಸು, ಶಾಲೆಗೆ ಹೋಗುವ ಕೆಲಸಗಳತ್ತ ಗಮನ ಕೊಡುತ್ತಿದ್ದೆವು. ಸಂಜೆ ಶಾಲೆಯಿಂದ ಬಂದ ನಂತರವೇ ಮತ್ತೆ ಕುಸುರೆಳ್ಳಿನ ಕ್ರಿಯೆ ಪುನರಾವರ್ತನೆಯಾಗುತ್ತಿತ್ತು. ಬೆಳಗಿನ ನೀರವತೆಯಲ್ಲಿ ನಮ್ಮ ಪಕ್ಕದ ಮನೆಯ ಬೂಬುವಿನ ಕೋಳಿ ಕೂಗುವುದು, ಸೈಯ್ಯದ ತನ್ನ ಟಾಂಗಾಗಾಡಿಗೆ ಕುದುರೆಯನ್ನು ಕಟ್ಟಿ ಹೊರಡುವುದು, ನಲ್ಲಿ ನೀರು ಬರುವುದು, ಮನೆಮನೆಗಳಲ್ಲಿ ನೀರು ತುಂಬುವ ಸಡಗರ.

ಸಡಗರವೆನ್ನುವುದಕ್ಕಿಂತ ಬಿಡಲಾರದ ಕರ್ಮ! ಸವಿನಿದ್ದೆಯ ಹೊದಿಕೆಯನ್ನು ಕಿತ್ತೆಸೆದು, ಅಳುವ ಕೂಸುಗಳ ಬಾಯಿಂದ ಮೊಲೆ ಬಿಡಿಸಿಕೊಂಡೆದ್ದು - ‘ಅಯ್ಯೋ ಸುಡಗಾಡು ನಳ! ಸತ್ತರೂ ಎದ್ದು ನೀರು ತುಂಬುವುದು ತಪ್ಪೂದಿಲ್ಲವಲ್ಲ’– ಎಂದು ಗೊಣಗುವ ಹೆಣ್ಮಕ್ಕಳ ದರ್ದು, ಅಸಹನೆ ಅವರು ಕೊಡಪಾನಗಳನ್ನು ಬೆಳಗುವ, ಕುಕ್ಕುವ ಸದ್ದಿನಿಂದಲೇ ತಿಳಿಯಬಹುದಿತ್ತು. ಇನ್ನು ಯಾರದೋ ಮನೆಯಲ್ಲಿ ಆಗಲೇ ರೊಟ್ಟಿ ಬಡಿಯುವ ಸಪ್ಪಳ ಎಲ್ಲವೂ ಹಿನ್ನೆಲೆ ಸಂಗೀತದಂತೆ ಶ್ರುತಿ ಹಿಡಿದಿರುತ್ತಿತ್ತು. ಆದರೆ ಎಷ್ಟು ಮೋಹಕ ಬೆಳಗದು. ನಿಚ್ಚ ನೀಲೋತ್ಪಲ ನೀಲಾಕಾಶದಲ್ಲಿ ಬೆಳ್ಳಿ ಬೆಳ್ಳಿ ನಕ್ಷತ್ರಗಳ ರಾಶಿ… ಶಿವನ ಕೈಯಲಗು ಹೊಳೆದಂತ ಅರೆಚಂದ್ರ… ಚಿಲಿಪಿಲಿ ಹಕ್ಕಿಗಳ ಹಾಡು, ನಾಚಿಕೊಂಡ ಮೂಡಣ!

ಇನ್ನು ರಜೆಯಲ್ಲಿ ನನ್ನ ಕಾಕೂನ ಊರಿಗೆ ಹೋದರಂತೂ ಕೇಳಬೇಡಿ. ಆಗ ಇಟಗಿ ಒಂದು ಕಗ್ಗಳ್ಳಿ. ಲೈಟು, ನಲ್ಲಿ ನೀರು, ಡಾಂಬರ್ ರಸ್ತೆ ಯಾವುದೂ ಇರದ ಹಳ್ಳಿ. ನನಗದೇ ಧಾರವಾಡಕ್ಕಿಂತಲೂ ಹೆಚ್ಚು ಪ್ರಿಯ! ಯಾಕಂತೀರಾ? ಅಲ್ಲಿ ಲೈಟಿನ ಬೆಳಕಿನ ಶಿಕ್ಷೆಯಿದ್ದಿಲ್ಲ. ಸಾಲೆಗೆ ಸೂಟಿಯಿರುತ್ತಿದ್ದರಿಂದ ಯಾರೂ ಕೂತು ಓದಿಕೊ ಅಂತಿರಲಿಲ್ಲ. ಹಗಲೋ ಇರುಳೋ ಮನೆಯೊಳಗೆ ಒಂದು ಮೆದುವಾದ ಬೆಲ್ಲದುಂಡೆಯಂಥ ಕತ್ತಲು ಉರುಳಾಡುತ್ತಿರುತ್ತಿತ್ತು. ಹಗಲಲ್ಲಿ ಹೆಂಚಿನ ಕಿಂಡಿಗಳಿಂದ ಕತ್ತಲ ಕೋಣೆಗಳೊಳಗೆ ಇಷ್ಟಿಷ್ಟೇ ಬೆಳಕು ಕಳ್ಳನಂತೆ ಇಳಿದು ಅಡಗಿ ಕುಳಿತಿರುತ್ತಿತ್ತು. ಅದರಲ್ಲೇ ನಾವು ಕಣ್ಣೆಮುಚ್ಚೆ ಕಾಡೇಗೂಡೇ ಆಡೋದು, ಕಳ್ಳ–ಪೋಲಿಸ್ ಆಡೋದು. ಅಡಗಿಕೊಳ್ಳುವ ಜಾಗ ಎಲ್ಲಿ ಅಂತೀರಿ? ಕದದ ಸಂದಿಗೊಂದಿ, ಕಪಾಟು, ಮಂಚದ ಕೆಳಗೆ, ಅಜ್ಜಿಯ ಬೆನ್ನ ಹಿಂದೆ, ಗೂಟಕ್ಕೆ ಸಾಲಾಗಿ ತೂಗುಬಿಟ್ಟ ಜೋಮಾಲಿಯ ಹಿಂದೆ, ದೇವರ ಮನೆಯ ಮೂಲೆ, ಇದೂ ಸಾಲದಿದ್ದರೆ ಭತ್ತ ತುಂಬಿಟ್ಟ ಕಣಜದಲ್ಲಿ ಇಳಿದು ಕೂರುತ್ತಿದ್ದೆವು.

ಬೆಳದಿಂಗಳ ಇರುಳಲ್ಲಿ ಕತ್ತಲೆಯ ಕಟ್ಟೆ ಮೇಲೆ ನನ್ನ ತಮ್ಮನನ್ನು ಕಾಲ ಮೇಲೆ ಕುಳ್ಳಿರಿಸಿಕೊಂಡು ಕತೆ ಹೇಳುತ್ತಿದ್ದದ್ದು ನೆನಪಿದೆ. ತೆಂಗಿನ ಗರಿಗಳ ಮರೆಯಿಂದ ಚಂದ್ರನೂ ಕತೆ ಕೇಳಲು ಇಣುಕುತ್ತಿರುತ್ತಿದ್ದ. ಹಾಗೆ ಕಟ್ಟೆ ಮೇಲೆ ಕುಳಿತರೆ ಹರಟೆಯೇ! ಆಜೂಬಾಜೂ ಮನೆಯ ಹೆಂಗಸರೂ ಒಲೆಯ ಮೇಲೆ ಅನ್ನಕ್ಕಿಟ್ಟೊ, ಪಲ್ಲೆಗೆ ಇಟ್ಟೋ ಕಾಡುವ ಕೂಸುಗಳನ್ನೆತ್ತಿಕೊಂಡು ಹೊರಬಂದು ಅಷ್ಟು ಇಷ್ಟು ಬಾಯಿಚಪಲವನ್ನು ತೀರಿಸಿಕೊಂಡು ಮರೆಯಾಗುತ್ತಿದ್ದರು. ಹೆಚ್ಚು ನಿಂತರೆ ಅತ್ತೆಯ ಕೈಯಲ್ಲಿ ಪೂಜೆ ಮಾಡಿಸಿಕೊಳ್ಳಬೇಕಲ್ಲ ! 

ಬಾವಿಗೆ ಹೋದ ಹೆಂಗಸರು ರಸ್ತೆಯಲ್ಲಿ ತಮ್ಮ ಮನೆಯ ಕತೆಗಳನ್ನೋ, ಮನೆಯಲ್ಲಿ ಅವರಿಗಾಗಿ ಬಿದ್ದುಕೊಂಡಿರುವ ಕೆಲಸಗಳನ್ನು ನೆನೆಪಿಸಿಕೊಳ್ಳುತ್ತ, ಬೈದುಕೊಳ್ಳುತ್ತ, ಕಟ್ಟೆ ಮೇಲೆ ಕುಳಿತ ನಮ್ಮ ಕಾಕೂನನ್ನು ಬಾಯಿ ತುಂಬ – ‘ಅಡಿಗ್ಯಾತ್ರೀ, ಯಾರ ಬಂದಾರ್ರಿ ಮನೀಗೆ’ ಅಂತ ವಿಚಾರಿಸಿಕೊಳ್ಳುತ್ತ ನಡೆಯುತ್ತಿದ್ದರು. ಇಡೀ ಓಣಿಯೇ ಮಿಣಿ ಮಿಣಿ ದೀಪಗಳ ನದಿ ಮೆಲ್ಲಗೇ ಉರಿಯುತ್ತ ಬೆಳಕು ಹರಿವುದನ್ನೇ ಕಾಯುತ್ತಿರುವಂತೆ ಕಾಣುತ್ತಿತ್ತು.

ಅಲ್ಲಿಯೇ ನಾಲ್ಕಾರು ಮನೆಗಳನ್ನು ದಾಟಿ ಇನ್ನೊಬ್ಬ ದೊಡ್ಡವ್ವನ ಮನೆಗೆ ಹೋದರೆ ಅಲ್ಲಿ ನಮ್ಮ ಸರಸಮ್ಮ ನಮ್ಮನ್ನೆಲ್ಲ ತನ್ನ ಮಾತುಗಳಿಂದ ಹೊಟ್ಟೆ ಹುಣ್ಣಾಗುವಂತೆ ನಗಿಸಿಬಿಡೋಳು. ಈಗ ಅವಳ ಮಾತುಗಳೂ ನೆನಪಾಗುತ್ತಿಲ್ಲ. ಏನಾದರೂ ಪೋಲಿ ಮಾತಾಡಿಬಿಡೋಳು. ದಿನವೂ ಹಾಸಿಗೆಯಲ್ಲಿ ಉಚ್ಚೆ ಹೊಯ್ದುಕೊಳ್ಳುವ ಅಶೋಕನಿಗೆ – ‘ಇವ್ವತ್ತೇನಾರ ನೀ ಉಚ್ಚಿ ಹೋಯ್ಕಂಡ್ರ, ಬುಲ್ಲಿಕಾಯಿಗೆ ಇಲಿಮರೀನ ಕಟ್ಟತೀನಿ, ಕಟ್ಟಿರಿಬಿ (ಕಟ್ಟಿರುವೆ) ತಂದು ಚಡ್ಡ್ಯಾಗ ಬಿಡತೇನಿ’ ಅಂತ ಹೇಳಿ ಅಸ್ಯಾ ಅತ್ತು, ನಾವೆಲ್ಲ ನಕ್ಕು ನಕ್ಕು ಅವನನ್ನು ಅಳಿಸಿ ದೊಡ್ದವ್ವನಿಂದ ಬೈಸಿಕೊಳ್ಳುತ್ತಿದ್ದೆವು. ಈಗ ನೆನಪಾಗಿ ನಗುತ್ತಲೇ ಇದ್ದೇನೆ… ಪಾಪ ಅಸ್ಯಾ.. ಆಗ ಸರಸೋತಜ್ಜಿಯನ್ನು ಎಷ್ಟು ಮನಸ್ಸಿನಲ್ಲಿ ಹಳಿದಿರಬಹುದು!

ಮುಂದೆ ನನ್ನ ಮಗ ಹಾಸಿಗೆಯಲ್ಲಿ ಉಚ್ಚೆ ಮಾಡಿಕೊಳ್ಳುವಾಗ ನನ್ನ ಅವ್ವ ಒಂದು ಕತೆ ಹೇಳಿ ನಗಿಸುತ್ತಿದ್ದಳು. ‘ನಮ್ಮ ಓಣಿಯಲ್ಲಿ ಒಬ್ಬ ಧರ್ಯಾ ಅಂತ ಇದ್ದನಂತೆ, ಮದುವಿಯಾದ್ರೂ ಉಚ್ಚಿ ಹೊಯ್ತಾನ ಇದ್ದನಂತ. ದಿನಾ ಅವನ ಹೆಂಡತಿ ಉಚ್ಚಿಯ ಕೌದಿ ಒಯ್ದು ಮಾಳಿಗೆ ಮೇಲೆ ಒಣಗಲು ಹಾಕ್ತಿದ್ಲಂತ.’ - ಹೀಗೆಲ್ಲ ಕೇಳಿ ನನ್ನ ಮಗನ ಮನಸ್ಸಿನಲ್ಲಿ ಯಾವ ಭಾವ ಹುಟ್ಟುತ್ತಿತ್ತೋ ಗೊತ್ತಿಲ್ಲ. ನಾವಂತೂ ಧರಿಯಾನ ಹೆಂಡತಿಯನ್ನು ಕಲ್ಪಿಸಿಕೊಂಡು ನಗುತ್ತಿದ್ದೆವು.

ಚಿಕ್ಕವರು ದೊಡ್ದವರೆನ್ನದೇ ಎಲ್ಲರಿಗೂ ಇಷ್ಟವಾಗುತ್ತಿದ್ದ ಸರಸಮ್ಮನ ವಿಶೇಷತೆಯೆಂದರೆ ಅವಳು ಯಾರ ಮನೆಯಲ್ಲಿ ಬೇಕಾದರೂ ನುಗ್ಗಿ, ರುಚಿರುಚಿಯಾಗಿ ಅಡುಗೆ ಮಾಡಿ ಬಡಿಸಿ, ಅವರಿಗೊಂದು ಚೆಂದದ ಒಲೆ ಹೂಡಿಕೊಟ್ಟು, ಬಾಯಿ ತುಂಬ ಹೊಗಳಿಸಿಕೊಂಡು ಬಂದರೆ ಆಯ್ತು. ಲಿಂಗಾಯತರ ಮನೆ, ಸಿಂಪಿಗರ ಮನೆ, ಅವರ ಮನೆ, ಇವರ ಮನೆಯೆಂಬ ಯಾವ ಭೇದಭಾವವೂ ಸರಸೋತಜ್ಜಿಗಿಲ್ಲದಿರುವುದರಿಂದಲೇ ಆಕೆ ಎಲ್ಲರ ಅಚ್ಚುಮೆಚ್ಚಿನ ಊರಿನ ಅಜ್ಜಿಯಾಗಿದ್ದಳು.

ಏನಾದರೂ ಹೇಳಿ ನಗುವ ನಗಿಸುವ ಸರಸಮ್ಮ ಯಾರಿಗೆ ಬೇಡ ಹೇಳಿ! ನನ್ನ ಮದುವೆಯಾದಾಗ ಸರಸಮ್ಮ ನನ್ನ ಜೊತೆಗೇ ಇದ್ದಳು. ಒಂದು ಪುಟ್ಟ ಚಹ ಕುಡಿಯುವ ಬಟ್ಟಲು ಕೊಟ್ಟು, ‘ಈ ಲೋಟದಿಂದ ಒಂದು ಅಕ್ಕಿಹಾಕಿ ಅನ್ನ ಮಾಡು ಇಬ್ಬರಿಗೆ ಸಾಕಾಗುತ್ತದೆ. ಹೀಗೆ ಸಾರು ಮಾಡು,’ ಅಂತೆಲ್ಲ ಹೇಳಿಕೊಟ್ಟಿದ್ದಳು. ಅದೇ ಅಳತೆಯಿಂದ ನಾನು ನಾಲ್ಕು ಜನರಿಗೆ ಇಷ್ಟು, ಎಂಟು ಜನರಿಗೆ ಇಷ್ಟು ಅಂತ ಲೆಕ್ಕ ಹಾಕಿ ಅಡುಗೆ ಮಾಡುತ್ತಿದ್ದೆ. ಈಗಲೂ ಅದು ನನ್ನ ಜೊತೆಗಿದೆ ಸರಸಮ್ಮನ ನೆನಪಿನಂತೆ!

ಯಾಕೋ ಇಟಗಿಯ ನೆನಪೆಂದರೆ ದೂರ ತೀರದಲ್ಲಿ ಸಣ್ಣಗೇ ಮಿಣಿಮಿಣಿ ದೀಪದ ಬೆಳಕಿನಲ್ಲಿ ಹೋಯ್ದಾಡುತ್ತ ನಿಂತ ದೋಣಿಯ ನೆನಪಾಗುತ್ತದೆ. ಆ ದೋಣಿಯನ್ನು ಹತ್ತಿ ಈ ಬೆಳಕಿನ ಗೋಳದಿಂದ ಮಾಯವಾಗಿಬಿಡಬೇಕಿದೆ. ಚಿಟಿಕೆ ಬೂದಿಯಿಂದ ಬೆಳಗಿ, ಮಸಿ ಬಟ್ಟೆಯಿಂದ ಒರೆಸಿ ಬೆಳಗಿದ ಲಾಟೀನು ಮನೆಯಲ್ಲೆಲ್ಲ ಬೆಳಕು ಚೆಲ್ಲುವಾಗ ಸರಸೋತಜ್ಜಿಯ ಉರಿವ ಒಲೆಗಳು ನೆನೆಪಿಗೆ ಬರುತ್ತವೆ. ಕಾಕೂ ಒಲೆಮುಂದೆ ಕೂತು ಭಕ್ಕರಿ ಬಡಿಯುತ್ತಿರುವ ನೋಟ, ಪಕ್ಕದ ಇದ್ದಿಲು ಒಲೆಯ ಮೇಲೆ ಸಣ್ಣ ಉರಿಯಲ್ಲಿ ಬೇಯಲಿಟ್ಟ ಬೇಳೆ, ಕಮ್ಮಗೆ ಅರಳುತ್ತಿರುವ ಅಕ್ಕಿತರಿಯ ಉಪ್ಪಿಟ್ಟು ಈಗಲೂ ಬಾಯಲ್ಲಿ ನೀರೂರಿಸುತ್ತದೆ. ಸರಸೋತಜ್ಜಿಗೆ ಅದೆಂಥ ಜೀವನೋತ್ಸಾಹ. ಒಂದಿನವೂ ವಟಗುಟ್ಟಿದ್ದಿಲ್ಲ.

ಆಗಲೋ ಈಗಲೋ ನೋಡಿಕೊಳ್ಲಲಾರದ ತನ್ನ ಮಗ ಸೊಸೆಯನ್ನು ನೆನೆದು ಕಣ್ಣೀರುಹಾಕಿದ್ದನ್ನು ಬಿಟ್ತರೆ ಆಕೆ ಸದಾ ಉತ್ಸಾಹದ ಚಿಲುಮೆ. ಅವಳೇ ಕೆರೆಮಣ್ಣನ್ನು ಹದಗೊಳಿಸಿ ಮಾಟವಾದ ಒಲೆಗಳನ್ನು ತಯಾರಿಸಿ. ಒಣಗಿಸಿ. ಹಳೆ ಒಲೆಗಳನ್ನು ತೆಗೆದು ಹೊಸ ಒಲೆ ಹಾಕಿ ಅಡುಗೆಮನೆಯನ್ನು ಅಂದಗೊಳಿಸುವಳು. ಎಲ್ಲಿಹೋದರೂ ಅದೊಂದು ಕಾಯಕ ಅವಳಿಗೆ. ಕಾಕೂ ಮನೆ, ದೊಡ್ದವ್ವನ ಮನೆ, ನಮ್ಮನೆ ಎಲ್ಲಿಹೋದರೂ ಸದಾ ಅಡುಗೆಮನೆಯಲ್ಲೇ ಅವಳ ವಾಸ. ಈ ಕೆಮ್ಮಣ್ಣು ಸಾರಿಸಿದ ಒಲೆಗಳು ದೊಡ್ದ ದೊಡ್ದ ಹಣತೆಗಳು ಪ್ರಶಾಂತವಾಗಿ ಉರಿದಂತೆ ಇಡೀ ಮನೆಯೇ ನೆಮ್ಮದಿಯ ಹಡಗಿನಂತೆ ನಾವೆಲ್ಲ ಅದರಲ್ಲಿ ಪ್ರಯಾಣಿಸುತ್ತಿರುವಂತೆ ನಾನು ಕನಸು ಕಾಣುತ್ತಿದ್ದೆ.

ಆದರೆ ದೀಪವಿರದ ಮನೆಗಳಲ್ಲಿ ಹಣತೆಯಂತೆ ಉರಿಯುತ್ತಿದ್ದ ಸರಸಮ್ಮನ ಒಲೆಗಳು ಮಾತ್ರ ಈಗಿಲ್ಲ. ಕುಸುರೆಳ್ಳಿನ ಸಂಭ್ರಮವೂ ಈಗಿಲ್ಲ. ಈಗ ಕಗ್ಗಳ್ಳಿಯೂ ಬೆಳಕಿನ ಗೋಳದಲ್ಲಿ ತೇಲತೊಡಗಿದೆ!

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry