ಕರಾವಳಿ ಹಬ್ಬ

7

ಕರಾವಳಿ ಹಬ್ಬ

Published:
Updated:
ಕರಾವಳಿ ಹಬ್ಬ

ಕರಾವಳಿಯ ಖಾದ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುವ ‘ನಮ್ಮೂರ ಹಬ್ಬ 2018’ಕ್ಕೆ ವೇದಿಕೆ ಸಿದ್ಧವಾಗಿದೆ. ನಗರದಲ್ಲಿನ ಕರಾವಳಿ ಮೂಲದವರಿಗೆ ಮತ್ತು ಕರಾವಳಿ ಸಂಸ್ಕೃತಿಯ ಬಗ್ಗೆ ಆಸಕ್ತಿ ಇರುವ ಎಲ್ಲರ ಸಂಭ್ರಮದ ಕೂಡುವಿಕೆಗೆ ಈ ಹಬ್ಬ ಒಂದು ಕೊಂಡಿ.

‘ನಮ್ಮೂರ ಹಬ್ಬ’ ಜನವರಿ 20 ಹಾಗೂ 21 (ಶನಿವಾರ, ಭಾನುವಾರ) ಜಯನಗರದ 5ನೇ ಬ್ಲಾಕ್‌ನ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10ರಿಂದ ರಾತ್ರಿ 10ರ ತನಕ ನಡೆಯಲಿದೆ. ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ ಕಳೆದ ಐದು ವರ್ಷಗಳಿಂದ ಈ ಹಬ್ಬವನ್ನು ಆಯೋಜಿಸಿಕೊಂಡು ಬರುತ್ತಿದೆ.

‘ಕರಾವಳಿ ಭಾಗದ ಕಡಿಮೆಯೆಂದರೂ 10 ಲಕ್ಷಕ್ಕೂ ಹೆಚ್ಚು ಜನರು  ಬೆಂಗಳೂರಿನಲ್ಲಿದ್ದಾರೆ. ನಗರದ ಜಂಜಡದ ನಡುವೆ ಊರು ನೆನಪಾಗುತ್ತಲೇ ಇರುತ್ತದೆ. ಆದರೆ ಊರಿಗೆ ಹೋಗಲಾಗುವುದಿಲ್ಲ. ಅಂತಹವರಿಗೆ ತಮ್ಮ ಊರಿನ ನೆನಪು ಹಾಗೂ ಬೆಂಗಳೂರಿನ ಜನರಿಗೆ ಕರಾವಳಿಯ ಬಗ್ಗೆ ಪರಿಚಯ ಮಾಡಿಕೊಡಲು ನಮ್ಮೂರ ಹಬ್ಬ ಆಯೋಜಿಸಲಾಗುತ್ತಿದೆ. ಕಾಸರಗೋಡಿನಿಂದ ಕಾರವಾರದವರೆಗಿನ ಜನರಿಗೆ ಈ ಹಬ್ಬ ಆಪ್ತವಾಗುತ್ತದೆ. ಕಳೆದ ವರ್ಷ ಸುಮಾರು ಒಂದು ಲಕ್ಷ  ಜನ ಬಂದಿದ್ದರು. ಈ ವರ್ಷ ಜನರ ಸಂಖ್ಯೆ ಹೆಚ್ಚಾಗಲಿದೆ ಎಂಬ ನಿರೀಕ್ಷೆಯಿದೆ’ ಎನ್ನುತ್ತಾರೆ  ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ ಕಾರ್ಯಕಾರಿ ಸದಸ್ಯ ಲೋಹಿತ್‌ ಕಾಂಚನ್‌.

ಈ ಹಬ್ಬದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಜನಪದ ಆಟಗಳ ಸ್ಪರ್ಧೆಗಳು, ಸಾಧಕರಿಗೆ ಸನ್ಮಾನ, ಖಾದ್ಯಗಳು ಹೀಗೆ ವಿವಿಧ ಕಾರ್ಯಕ್ರಮಗಳು ಇರಲಿವೆ. ಸಾಂಸ್ಕೃತಿಕ ಸಡಗರದಲ್ಲಿ ಕರಾವಳಿಯ ವಿಶೇಷ ಕಲೆಯಾದ ಭೂತಾರಾಧನೆ, ಯಕ್ಷಗಾನ, ಹುಲಿವೇಷ, ಗಾಯನ, ಸಂಗೀತ, ನೃತ್ಯ, ಫ್ಯಾಷನ್‌ ಷೋ ಹೀಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕಾಯಿಮಿಳ್ಳಿ ಓಟ, ರಥದ ಓಟ, ಹನಿಬೊಂಡ ಹಿಡಿಯುವುದು, ದೋಣಿ ಓಟ, ಕಂಬಳದ ಓಟ, ಸಪ್ತಪದಿ ಆಟ, ಹಗ್ಗಜಗ್ಗಾಟ ಮುಂತಾದ ಜನಪದ ಕ್ರೀಡೆಗಳನ್ನು ಆಡಬಹುದು.

ಕರಾವಳಿ ತಿನಿಸುಗಳ ಪ್ರಿಯರಿಗಾಗಿ ದೇಸಿ ಆಹಾರೋತ್ಸವದಲ್ಲಿ 200ಕ್ಕೂ ಹೆಚ್ಚಿನ ಬಗೆಯ ಕರಾವಳಿ ಖಾದ್ಯಗಳು ಈ ಹಬ್ಬದಲ್ಲಿ ಇರಲಿವೆ. ಸಸ್ಯಾಹಾರಿ, ಮಾಂಸಾಹಾರಿ ಎರಡೂ ಬಗೆಯ ರಸಾಸ್ವಾದಕ್ಕೂ ಇಲ್ಲಿ ಸಾಕಷ್ಟು ಅವಕಾಶವಿದೆ. ನಮ್ಮೂರ ತಿಂಡಿ ವಿಭಾಗದಲ್ಲಿ ಅವರೆಕಾಳು ಉಪ್ಪಿಟ್ಟು, ಹಲಸಿನ ಹಣ್ಣಿನ ಕೇಸರಿಬಾತ್, ಕೊಟ್ಟೆಕಡುಬು, ನೀರುದೋಸೆ, ಮಂಗಳೂರು ಬನ್ಸ್, ಗುಳಿಯಪ್ಪ, ಒತ್ತುಶಾವಿಗೆ, ಪತ್ರೊಡೆ, ಮಾವಿನಕಾಯಿ ಚಿತ್ರಾನ್ನ, ಗೋಲಿಬಜೆ, ಹಯಗ್ರೀವ, ಹಲಸಿನ ಹಣ್ಣಿನ ಮುಳಕ, ಕೋರಿ ರೊಟ್ಟಿ, ಮೀನು, ಸಿಗಡಿಯ ವಿವಿಧ ಅಪರೂಪದ ಖಾದ್ಯಗಳು ಈ ಬಾರಿಯ ವಿಶೇಷ.

ಸಾಧಕರಿಗೆ ಗೌರವ: ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ ಕರಾವಳಿ ಭಾಗದ ಸಾಧಕರನ್ನು ಗುರುತಿಸಿ ಪ್ರತಿವರ್ಷ ಕಿರೀಟ ಪ್ರಶಸ್ತಿ ನೀಡುತ್ತದೆ. ಈ ಬಾರಿ ಮಣಿಪಾಲ ವಿಶ್ವವಿದ್ಯಾಲಯದ ಡಾ.ಬಿ.ಎಂ.ಹೆಗ್ಡೆ ಹಾಗೂ ನಟ, ನಿರ್ದೇಶಕ ಉಪೇಂದ್ರ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.  ಭಾನುವಾರ ಈ ಕಾರ್ಯಕ್ರಮ ನಡೆಯಲಿದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry