ಸಹೋದರಿಯರ ಜುಗಲ್‌ಬಂದಿ

7

ಸಹೋದರಿಯರ ಜುಗಲ್‌ಬಂದಿ

Published:
Updated:
ಸಹೋದರಿಯರ ಜುಗಲ್‌ಬಂದಿ

ಸಂಗೀತ ವಲಯದಲ್ಲಿ ಪಿಟೀಲುವಾದಕರಾಗಿ, ಗಾಯಕಿಯರಾಗಿ, ಸಂಗೀತ ಸಂಯೋಜಕಿಯರಾಗಿ ಗುರುತಿಸಿಕೊಂಡವರು ರಂಜನಿ, ಗಾಯತ್ರಿ ಸಹೋದರಿಯರು. ಪಾಲಕ್ಕಾಡ್ ಅಯ್ಯರ್ ಕುಟುಂಬದ ಎನ್. ಬಾಲಸುಬ್ರಮಣ್ಯನ್ ಮತ್ತು ಮೀನಾಕ್ಷಿ ಅವರ ಮಕ್ಕಳಾದ ರಂಜನಿ ಮತ್ತು ಗಾಯತ್ರಿ ಅವರಿಗೆ ಸಂಗೀತದ ಒಲುಮೆ ಬಾಲ್ಯದಿಂದಲೂ ಬಂದಿದೆ.

ಅಪ್ಪ, ಅಮ್ಮ ಇಬ್ಬರೂ ಸಂಗೀತ ಆರಾಧಕರು. ಅಮ್ಮ ಕರ್ನಾಟಕ ಸಂಗೀತಗಾರರಾಗಿ ಗುರುತಿಸಿಕೊಂಡಿದ್ದರೆ, ಅಪ್ಪ ಪಿಟೀಲು ವಾದಕರಾಗಿ ಹೆಸರು ಗಳಿಸಿದವರು. ಇದೇ ಕಾರಣಕ್ಕೆ ಇವರಲ್ಲೂ ಸಂಗೀತಾಸಕ್ತಿ ಹುಟ್ಟಿಕೊಂಡಿತು. ಗುರು ಟಿ.ಎಸ್. ಕೃಷ್ಣಸ್ವಾಮಿ ಅವರ ಮಾರ್ಗದರ್ಶನದಲ್ಲಿ ಇವರಿಬ್ಬರೂ ಪಿಟೀಲು ಕಲಿತರು. ಮೊದಲ ಬಾರಿಗೆ ಇವರು ಪಿಟೀಲು ಹಿಡಿದು ವೇದಿಕೆ ಏರಿದಾದ ಗಾಯತ್ರಿಗೆ 10 ವರ್ಷ, ರಂಜನಿಗೆ 13 ವರ್ಷ.

‘ತಂದೆ ಪಿಟೀಲು ವಾದಕರಾಗಿದ್ದರು. ಚಿಕ್ಕವಳಿದ್ದಾಗ ನನಗೆ ಅದರ ಬಗ್ಗೆ ಕುತೂಹಲ ಬೆಳೆಯಿತು. ಮಕ್ಕಳೆಲ್ಲ ಆಟದ ಸಾಮಗ್ರಿಗಳ ಜೊತೆಗೆ ಆಡುತ್ತಿದ್ದರೆ, ನಾನು ಪಿಟೀಲು ನುಡಿಸಾಣಿಕೆಯಲ್ಲಿ ಸ್ವರ ಹೊಮ್ಮಿಸಿ ಖುಷಿ ಪಡುತ್ತಿದ್ದೆ. ನನ್ನನ್ನು ಅನುಕರಿಸಿ ಬೆಳೆಯುತ್ತಿದ್ದ ನನ್ನ ತಂಗಿ ಗಾಯತ್ರಿಗೂ ಸಹಜವಾಗಿಯೇ ಪಿಟೀಲು ಆಸಕ್ತಿ ಮೂಡಿಸಿತು’ ಎನ್ನುತ್ತಾರೆ ರಂಜನಿ.

‘ವಾದ್ಯರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ನಮಗೆ ಗಾಯನದತ್ತ ಒಲವು ಬೆಳೆಯಿತು. ಗಾಯನದ ಸ್ಪರ್ಶದಿಂದ ವಾದನದಲ್ಲಿ ಮತ್ತಷ್ಟು ಪರಿಪೂರ್ಣತೆ ಸಿಗುತ್ತದೆ ಎಂದು ಸಂಗೀತ ಕಲಿಯಲು ಅಣಿಯಾದೆವು. ಗುರು ಪಿ.ಎಸ್. ನಾರಾಯಣಸ್ವಾಮಿ ಅವರ ಬಳಿ ಸಂಗೀತಾಭ್ಯಾಸ ಪ್ರಾರಂಭ ಮಾಡಿದೆವು. ಸಂಗೀತದಲ್ಲಿ ಪ್ರತಿ ರಾಗವೂ ಸೊಗಸಾಗಿದೆ. ವಸಂತ ಪಲ್ಲವಿ, ಕುಮುದಾ ಕ್ರಿಯಾ ರಾಗವನ್ನು ಹೆಚ್ಚು ಜನರು ಹಾಡುವುದಿಲ್ಲ. ಇತ್ತೀಚೆಗೆ ನಾವು ಇದನ್ನು ಪ್ರಯತ್ನಿಸುತ್ತಿದ್ದೇವೆ. ಅಪರೂಪದ್ದನ್ನು ಪ್ರಯತ್ನಿಸುವಾಗ ಸವಾಲುಗಳು ಹೆಚ್ಚಿರುತ್ತವೆ.

‘ನಾವು ಏನೇ ಮಾಡುತ್ತಿದ್ದರೂ ಸಂಗೀತ ನಮ್ಮ ಮನಸು, ತಲೆ ಆವರಿಸಿರುತ್ತದೆ. ಅಡುಗೆ ಮಾಡುವಾಗ, ಮಕ್ಕಳ ಕಾಳಜಿ ವಹಿಸುವಾಗ, ಮನೆಯ ಜವಾಬ್ದಾರಿ ಹೊತ್ತಾಗ... ಹೀಗೆ ಎಲ್ಲ ಕ್ಷಣವೂ ಸಂಗೀತದ ಬಗ್ಗೆ ಯೋಚಿಸುತ್ತಿರುತ್ತೇವೆ. ನಮ್ಮ ಬದುಕಿನ ಪ್ರತಿ ಕ್ಷಣದಲ್ಲಿಯೂ ಸಂಗೀತ ನಮ್ಮೊಂದಿಗೆ ಪಯಣಿಸುತ್ತಿರುತ್ತದೆ.

‘ಇತರರಂತೆ ನಮ್ಮ ನಡುವೆಯೂ ಸೃಜನಶೀಲ ಭಿನ್ನಾಭಿಪ್ರಾಯಗಳುಂಟು. ಆದರೆ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತೇವೆ. ಸ್ವಪ್ರತಿಷ್ಠೆಗೆ ಅವಕಾಶ ಕೊಡುವುದಿಲ್ಲ. ಬಾಲ್ಯದಿಂದಲೂ ಒಟ್ಟಿಗೆ ಬೆಳೆದಿರುವುದರಿಂದ ಒಬ್ಬರ ಆಲೋಚನೆಯನ್ನು ಇನ್ನೊಬ್ಬರು ಅರಿತಿದ್ದೇವೆ. ಸಂಗೀತವೇ ಮುಖ್ಯವಾದಾಗ ಬೇರೆಲ್ಲ ಭಿನ್ನಾಭಿಪ್ರಾಯ ಗೌಣವೆನ್ನಿಸುತ್ತದೆ’ ಎನ್ನುತ್ತಾರೆ ರಂಜನಿ.

2001ರಲ್ಲಿ ವಿಶ್ವಬ್ಯಾಂಕ್ ಉದ್ಯೋಗಿ ಹಾಗೂ ಹಿಂದೂಸ್ತಾನಿ ಸಂಗೀತ ಪ್ರಿಯರಾಗಿದ್ದ ವಿಶ್ವಾಸ್ ಶಿರ್ಗಾಂವ್ಕರ್ ಅವರನ್ನು ಭೇಟಿಯಾದ ಬಳಿಕ ಅವರಿಂದ ‘ಅಭಂಗ್’, ‘ಭೂತ್ ಮೋಟೆ’ಯನ್ನು ಇವರು ಕಲಿತಿದ್ದಾರೆ. ಮುಂಬೈ, ಗುಜರಾತ್‌, ಕೋಲ್ಕತ್ತ, ಬೆಂಗಳೂರು... ಹೀಗೆ ದೇಶದ ವಿವಿಧ ಭಾಗಗಳಲ್ಲಿ, ವಿದೇಶಗಳಲ್ಲಿಯೂ ಇವರು ಕಛೇರಿ ನಡೆಸಿಕೊಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry