ನೀವೂ ಆಗಿ ಸಿಂಡ್ರೆಲಾ

7

ನೀವೂ ಆಗಿ ಸಿಂಡ್ರೆಲಾ

Published:
Updated:
ನೀವೂ ಆಗಿ ಸಿಂಡ್ರೆಲಾ

ಕನಸಿನ ಕನ್ಯೆಯರು ಎಂದಾಕ್ಷಣ ನೆನಪಾಗುವುದು ಅವರ ದಿರಿಸು. ಮಾಯಾಲೋಕದ ಸೃಷ್ಟಿಯಲ್ಲಿ ಗೌನ್‌ಗೆ ಮೇರು ಸ್ಥಾನ. ಸಿಂಡ್ರೆಲಾ, ಏಂಜೆಲ್‌ ಚಿತ್ರಣದಲ್ಲಿ ಕಾಣುವುದು ಇದೇ ಬೆಡಗಿನ ದಿರಿಸು. ಪಾದ ಮುಚ್ಚುವ ಈ ಉಡುಪು ವಸ್ತ್ರವಿನ್ಯಾಸಕರ ಕೈಲಿ ಹಲವು ರೂಪುಗಳನ್ನು ಪಡೆದಿದೆ. ಗೌನ್‌ ವಿನ್ಯಾಸದಲ್ಲಿ ಆಗುತ್ತಿರುವ ಪ್ರಯೋಗ ಅಂತಿಂಥದ್ದಲ್ಲ. ಈ ಬಗೆಯ ಉಡುಪಿನಲ್ಲಿ ಸಿಂಡ್ರಲಾ ಗೌನ್‌ಗೆ ಹೆಚ್ಚು ಪ್ರಾಶಸ್ತ್ಯ.

ಎದೆಯಿಂದ ಸೊಂಟದವರೆಗೂ ಬಿಗಿದಪ್ಪುವ ಗೌನ್ ಕೆಳಗೆ ಬಲೂನ್‌ನಂತೆ ಊದಿಕೊಂಡಿರುತ್ತದೆ. ಕೆಂಪು ನೆಲಹಾಸಿನ ಮೇಲೆ ನಡೆಯುವ ನಟಿಯರಿಗೂ ಇದು ನೆಚ್ಚಿನ ದಿರಿಸು. ಕಾನ್‌ ಚಿತ್ರೋತ್ಸವದಲ್ಲಿ 2017ರಲ್ಲಿ ತಿಳಿನೀಲಿ ಬಣ್ಣದ ಇದೇ ಬಗೆಯ ಉಡುಗೆ ತೊಟ್ಟ ಐಶ್ವರ್ಯಾ ಫ್ಯಾಷನ್‌ ಪ್ರಿಯರ ಮೆಚ್ಚುಗೆ ಗಳಿಸಿದ್ದರು. ಈ ಉಡುಗೆಯ ನಿರ್ವಹಣೆ ಸವಾಲಿನ ಕೆಲಸ. ಮೊದಲ ಬಾರಿ ಧರಿಸುವವರು ತೆಳು ಬಟ್ಟೆಗಳಿಂದ ತಯಾರಾದ ಉಡುಪನ್ನೇ ಆರಿಸಿಕೊಳ್ಳಿ. ಬಿಗ್‌ಬಾಸ್ ಮನೆಯಲ್ಲಿ ಡಾಲ್‌ ಎಂದೇ ಕರೆಸಿಕೊಳ್ಳುವ ನಿವೇದಿತಾ ಗೌಡ ಕೂಡ ಹಲವು ಬಾರಿ ಸಿಂಡ್ರಲಾ ಗೌನ್ ಧರಿಸಿದ್ದರು.

ಈ ದಿರಿಸು ಎಲ್ಲಾ ಸಂದರ್ಭಕ್ಕೂ ಹೊಂದಿಕೆಯಾಗುವುದಿಲ್ಲ. ವಿಶೇಷ ಸಮಾರಂಭಗಳಲ್ಲಿ ಮಾತ್ರವೇ ಧರಿಸಿದರೆ ಚಂದ. ಕಾಲೇಜು ಯುವತಿಯರು ಇಂಥ ಉಡುಗೆಗಳನ್ನು ಹೆಚ್ಚು ಮೆಚ್ಚುತ್ತಿದ್ದಾರೆ. ಇದರ ಮೇಲೆ ಹೆಚ್ಚು ಚಿತ್ತಾರ ಇರಬೇಕಾದ ಅಗತ್ಯವೂ ಇಲ್ಲ. ಸಾದ ಬಟ್ಟೆಯ ಗೌನ್‌ ಕೂಡ ಸುಂದರವಾಗಿಯೇ ಕಾಣುತ್ತದೆ. ಬಣ್ಣಗಳ ಆಯ್ಕೆಯಲ್ಲಿ ಜಾಣ್ಮೆ ವಹಿಸಬೇಕು. ಈ ದಿರಿಸಿನಲ್ಲಿ ಫ್ಲೋರಲ್‌ ವಿನ್ಯಾಸದ ಆಯ್ಕೆಯೂ ಇದೆ. ತುಂಬಾ ತೆಳ್ಳಗಿರುವವರು ದೊಡ್ಡ ಹೂವಿನ ವಿನ್ಯಾಸವಿರುವ ಗೌನ್‌ ತೊಟ್ಟರೆ ಚೆನ್ನಾಗಿ ಕಾಣುತ್ತಾರೆ. ದಪ್ಪಗಿರುವವರಿಗೆ ಚಿಕ್ಕ ಹೂಗಳಿರುವ ವಿನ್ಯಾಸ ಚಂದ ಕಾಣುತ್ತದೆ. ಮೈತುಂಬಾ ಬಳ್ಳಿ, ಎಲೆಯ ಚಿತ್ರವಿರುವ ಗೌನ್‌ಗಳು ಸರಳ ಮತ್ತು ಸುಂದರವಾಗಿ ಕಾಣುತ್ತವೆ.

ಸರಳವಾದ ಬ್ರೆಸ್‌ಲೆಟ್‌, ಕತ್ತನ್ನು ಬಿಗಿದಪ್ಪುವ ಸರ, ಚಿಕ್ಕದೊಂದು ಕಿವಿಯೋಲೆ ಹಾಕಿಕೊಂಡರೆ ಸಾಕು. ಇಳಿಬಿಟ್ಟ ಕೇಶ ವಿನ್ಯಾಸದ ಜೊತೆಗೆ ತುರುಬು ಹಾಕಿಕೊಳ್ಳಬಹುದು. ಮಿನುಗುವ ಶೂ, ಹೀಲ್ಡ್‌ ಚಪ್ಪಲಿಗಳು ಹೊಂದಿಕೆಯಾಗುತ್ತವೆ. ಸಿಂಡ್ರಲಾ ಗೌನ್‌ ಸೊಂಟಕ್ಕೆ ಅಂಟಿ ಕೊಳ್ಳುವುದರಿಂದ ದಪ್ಪಗಿರುವವರಿಗಿಂತ ತೆಳುವಾಗಿರುವ ವರೆಗೆ ಹೆಚ್ಚು ಒಪ್ಪುತ್ತದೆ. ಕುಳ್ಳಗಿರುವವರೂ ತುಸ ಉದ್ದ ಕಾಣುತ್ತಾರೆ. ಇದರಲ್ಲಿ ಕೋಲ್ಡ್‌ ಮತ್ತು ಕೂಲ್‌ ಶೋಲ್ಡರ್‌ ಆಯ್ಕೆಯೂ ಇದೆ.

ಚಿಕ್ಕ ಮಕ್ಕಳಿಗೆ ಈ ದಿರಿಸಿನಲ್ಲಿ ಹಲವು ಆಯ್ಕೆಗಳಿವೆ. ದಿರಿಸಿಗೊಪ್ಪುವ ಹೇರ್‌ ಕ್ಲಿಪ್‌, ಕಾಲಿಗೊಂದು ಮಿನುಗುವ ಶೂ, ಕತ್ತಿಗೆ ಮಣಿ ಸರವನ್ನು ಹಾಕಿದರೆ ಮಗುವಿನ ಚೆಲುವು ದುಪ್ಪಟ್ಟಾಗುವುದರಲ್ಲಿ ಸಂಶಯವೇ ಇಲ್ಲ.

ಪ್ರಸಿದ್ಧ ಬ್ರಾಂಡ್‌ನ ಮಳಿಗೆಗಳಲ್ಲೂ ರೆಡಿ ಸಿಂಡ್ರಲಾ ಗೌನ್‌ಗಳು ಸಿಗುತ್ತಿವೆ. ಆನ್‌ಲೈನ್‌ ಸ್ಟೋರ್‌ನಲ್ಲೂ ನೂರಾರು ಬಗೆಯ ಗೌನ್‌ಗಳು ಲಭ್ಯವಿವೆ. ಬಟ್ಟೆ ಕೊಂಡು ನಿಮಗೆ ಬೇಕಾದಂತೆ ಹೊಲಿಸಿಕೊಳ್ಳುವ ಆಯ್ಕೆಯೂ ಇದೆ.

ಗುಣಮಟ್ಟದ್ದನ್ನೇ ಆಯ್ಕೆ ಮಾಡಿ

ಸಿಂಡ್ರೆಲಾ ಗೌನ್‌ ಈಗ ಟ್ರೆಂಡ್‌ ಆಗಿದೆ. ಐಶ್ವರ್ಯಾ ಕಾನ್ ಚಿತ್ರೋತ್ಸವದಲ್ಲಿ ಈ ಉಡುಪನ್ನು ತೊಟ್ಟ ನಂತರದಲ್ಲಿ ಇದರ ಜನಪ್ರಿಯತೆ ಹೆಚ್ಚಾಯಿತು. ಉತ್ತಮ ಗುಣಮಟ್ಟದ ದಿರಿಸನ್ನೇ ಆಯ್ಕೆ ಮಾಡಿಕೊಳ್ಳಬೇಕು. ಒಳಗಡೆ ವೈರಿಂಗ್‌ ಇರುವುದರಿಂದ ಫಿನಿಶಿಂಗ್‌ ಚೆನ್ನಾಗಿಲ್ಲದಿದ್ದರೆ ಕಾಲಿಗೆ ತಾಕುವ ಸಂಭವವಿರುತ್ತದೆ.

–ನಿಶಾ ಕಿರಣ್‌,

ವಸ್ತ್ರ ವಿನ್ಯಾಸಕಿ

*ಸಿಂಡ್ರಲಾ ಗೌನ್‌ ತೊಟ್ಟ ಐಶ್ವರ್ಯಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry