ಮಾರ್ಚ್‌ 20ರೊಳಗೆ ಎಲ್ಲ ವಿಭಾಗಗಳಲ್ಲಿ ರಾಹುಲ್‌ ಪ್ರವಾಸ

7
ಪ್ರವಾಸದ ರೂಪುರೇಷೆ ಸಿದ್ಧಪಡಿಸಲು ಕೆಪಿಸಿಸಿಗೆ ಸೂಚನೆ

ಮಾರ್ಚ್‌ 20ರೊಳಗೆ ಎಲ್ಲ ವಿಭಾಗಗಳಲ್ಲಿ ರಾಹುಲ್‌ ಪ್ರವಾಸ

Published:
Updated:
ಮಾರ್ಚ್‌ 20ರೊಳಗೆ ಎಲ್ಲ ವಿಭಾಗಗಳಲ್ಲಿ ರಾಹುಲ್‌ ಪ್ರವಾಸ

ಬೆಂಗಳೂರು: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಾರ್ಚ್‌ 20ರೊಳಗೆ ಬೆಳಗಾವಿ, ಮೈಸೂರು, ಕಲಬುರ್ಗಿ, ಬೆಂಗಳೂರು ವಿಭಾಗಗಳಲ್ಲಿ ಪ್ರವಾಸ ಮಾಡಿ ಮೊದಲ ಸುತ್ತಿನ ಪ್ರಚಾರ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಪ್ರವಾಸ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸುವಂತೆ ಕೆಪಿಸಿಸಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೊದಲ ಹಂತದಲ್ಲಿ, ಫೆ. 10ರಿಂದ ಮೂರು ದಿನ ಹೈದರಾಬಾದ್‌– ಕರ್ನಾಟಕ ಭಾಗದಲ್ಲಿ ರಾಹುಲ್‌ ಪ್ರವಾಸ ಕೈಗೊಳ್ಳಲಿದ್ದಾರೆ. ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸಲಹೆಯಂತೆ ಮೊದಲು ಆ ಭಾಗದಲ್ಲಿ ಪಕ್ಷದ ಸಮಾವೇಶಗಳಲ್ಲಿ ಭಾಗವಹಿಸಲು ರಾಹುಲ್‌ ಒಪ್ಪಿದ್ದಾರೆ ಎನ್ನಲಾಗಿದೆ.

ಮೊದಲು ಕರಾವಳಿ ಭಾಗದಲ್ಲಿ ರಾಹುಲ್‌ ಪ್ರವಾಸ ಆಯೋಜಿಸಲು ಕೆಪಿಸಿಸಿ ಚಿಂತನೆ ನಡೆಸಿತ್ತು. ಅಷ್ಟೇ ಅಲ್ಲ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿರುವ ದೇವಸ್ಥಾನ, ಮಠಗಳಿಗೆ ಅವರನ್ನು ಕರೆದೊಯ್ಯಲು ಉದ್ದೇಶಿಸಲಾಗಿತ್ತು. ಆದರೆ, ಬಳ್ಳಾರಿ ಜಿಲ್ಲೆ ಹೊಸಪೇಟೆಯಿಂದ ಪ್ರವಾಸ ಆರಂಭಿಸಿ, ರಾಯಚೂರು, ಕೊಪ್ಪಳ ಮತ್ತು ಕಲಬುರ್ಗಿಗಳಲ್ಲಿ ಸಭೆಗಳನ್ನು ನಡೆಸಲು ಅವರು ಸಮ್ಮತಿಸಿದ್ದಾರೆ. ಪ್ರತಿ ಜಿಲ್ಲೆಯ ಮೂರ್ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ ಎಂದೂ ಮೂಲಗಳು ಹೇಳಿವೆ.

‘ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 2ರಿಂದ 3 ದಿನ ವಾಸ್ತವ್ಯ ಹೂಡುತ್ತೇನೆ. ಒಂದು ದಿನ ಉತ್ತರ ಕರ್ನಾಟಕದಲ್ಲಿ, ಮರುದಿನ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಿದರೆ ಓಡಾಟ ಕಷ್ಟ. ಹೀಗಾಗಿ, ಪ್ರವಾಸ ಕೈಗೊಳ್ಳಲು ಅನುಕೂಲವಾಗುವಂತೆ ಆಯಾ ಭಾಗದಲ್ಲಿ ಸಮಾವೇಶಗಳನ್ನು ಆಯೋಜಿಸಬೇಕು.  ಕರಾವಳಿಯಲ್ಲಿ ಒಂದು ಅಥವಾ ಎರಡು ದಿನ, ಮೈಸೂರಿನಲ್ಲಿ ಒಂದು ದಿನ ವಾಸ್ತವ್ಯ ಹೂಡಿ, ಬಸ್ಸಿನಲ್ಲಿ ಓಡಾಡಿ ಪಕ್ಷದ ಪರ ಪ್ರಚಾರ ನಡೆಸಲು ರಾಹುಲ್‌ ಉದ್ದೇಶಿಸಿದ್ದಾರೆ’ ಎಂದೂ ಪಕ್ಷದ ನಾಯಕರೊಬ್ಬರು ತಿಳಿಸಿದರು.

‘ಎಲ್ಲಿಗೆ, ಯಾವಾಗ ಹೋಗಬೇಕು ಎಂಬ ಬಗ್ಗೆ ದಿನ ನಿಗದಿಪಡಿಸುವಂತೆ ರಾಹುಲ್‌ ತಿಳಿಸಿದ್ದಾರೆ. ಹೀಗಾಗಿ, ಕೆಪಿಸಿಸಿ ಅಧ್ಯಕ್ಷರು ಇತರ ಪದಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ‍ಪಕ್ಷದ ಅಧ್ಯಕ್ಷರ ಜೊತೆ ಚರ್ಚಿಸಿದ ಬಳಿಕ ಕಾರ್ಯಕ್ರಮ ಅಂತಿಮಗೊಳಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry