ನಿಚ್ಚಳವಾಗಿ ಪಡಿಮೂಡಲಿವೆಯೇ ಬಿಜೆಪಿ ಹೆಜ್ಜೆಗುರುತುಗಳು?

7

ನಿಚ್ಚಳವಾಗಿ ಪಡಿಮೂಡಲಿವೆಯೇ ಬಿಜೆಪಿ ಹೆಜ್ಜೆಗುರುತುಗಳು?

Published:
Updated:
ನಿಚ್ಚಳವಾಗಿ ಪಡಿಮೂಡಲಿವೆಯೇ ಬಿಜೆಪಿ ಹೆಜ್ಜೆಗುರುತುಗಳು?

ಭಾರತದಂತಹ ವಿಶಾಲ ದೇಶದಲ್ಲಿ ವಿಧಾನಸಭಾ ಚುನಾವಣೆಗಳ ದೈತ್ಯಯಂತ್ರ ಬಿಟ್ಟೂ ಬಿಡದೆ ಉರುಳುತ್ತಿರುತ್ತದೆ. ಗುಜರಾತ್ ಮತ್ತು ಹಿಮಾಚಲದ ನಂತರ ಇದೀಗ ಈಶಾನ್ಯ ಭಾರತದ ಸರದಿ. ತಲಾ 60 ಸದಸ್ಯಬಲದ ತ್ರಿಪುರಾ, ಮೇಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭೆಗಳಿಗೆ ಚುನಾವಣೆ ಘೋಷಿಸಲಾಗಿದೆ. ಮಾರ್ಚ್ ಮೊದಲ ವಾರ ಫಲಿತಾಂಶಗಳು ಹೊರಬೀಳಲಿವೆ. ಇಲ್ಲಿನ ಸದ್ಯದ ರಾಜಕೀಯ ಸ್ಥಿತಿಗತಿ ವಿವರಿಸುವ ಪ್ರಯತ್ನ...

ಮೂರು ರಾಜ್ಯಗಳಲ್ಲಿ ಯಾವ ಪಕ್ಷಗಳ ಸರ್ಕಾರಗಳಿವೆ?

ಮೇಘಾಲಯದಲ್ಲಿ ಕಾಂಗ್ರೆಸ್ ಪಕ್ಷ, ತ್ರಿಪುರಾದಲ್ಲಿ ಎಡರಂಗದ ಸರ್ಕಾರ ಹಾಗೂ ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಬೆಂಬಲಿತ ನಾಗಾ ಪೀಪಲ್ಸ್ ಫ್ರಂಟ್ ಸರ್ಕಾರ ಆಡಳಿತ ನಡೆಸುತ್ತಿವೆ.

ಈಶಾನ್ಯ ಭಾರತವನ್ನು ಗೆಲ್ಲಲು ಬಿಜೆಪಿ ಕಾರ್ಯತಂತ್ರ ಏನು?

ಈಶಾನ್ಯ ಭಾರತದ ಹೆಬ್ಬಾಗಿಲು ಅಸ್ಸಾಂ ಮೇಲೆ ಸಾಧಿಸಿದ ದಿಗ್ವಿಜಯವು ಕೇಸರಿ ಪಕ್ಷದ ಹುಮ್ಮಸ್ಸು- ಆತ್ಮವಿಶ್ವಾಸವನ್ನು ನೂರು ಪಟ್ಟು ಹೆಚ್ಚಿಸಿದೆ. ಈಶಾನ್ಯ ಜನತಾಂತ್ರಿಕ ಮೈತ್ರಿಕೂಟವನ್ನು ಬಿಜೆಪಿ ಮುನ್ನಡೆಸಿದೆ. ಮಣಿಪುರ ಮತ್ತು ಅರುಣಾಚಲ ಪ್ರದೇಶ ಕೇಸರಿ ಜೋಳಿಗೆ ಸೇರಿವೆ. ನಾಗಾಲ್ಯಾಂಡ್ ಮತ್ತು ಸಿಕ್ಕಿಂ ರಾಜ್ಯಗಳ ಆಡಳಿತ ಬಿಜೆಪಿ ನೇತೃತ್ವದ ಈಶಾನ್ಯ ಜನತಾಂತ್ರಿಕ ಮೈತ್ರಿಕೂಟದ ಪಕ್ಷಗಳ ಪಾಲಾಯಿತು. ಎಲ್ಲಾ ಎಂಟು ರಾಜ್ಯಗಳನ್ನು ತನ್ನ ಉಡಿಗೆ ಹಾಕಿಕೊಳ್ಳುವುದು ಬಿಜೆಪಿಯ ಅಂತಿಮ ಗುರಿ.

ಈಶಾನ್ಯ ಸೀಮೆಯಲ್ಲಿ ಬಿಜೆಪಿ ಕೈ ಮೇಲಾಗಿರುವುದು ಯಾಕೆ?

ಕೇಂದ್ರದ ಆರ್ಥಿಕ ನೆರವನ್ನೇ ಬಹುವಿಧವಾಗಿ ಅವಲಂಬಿಸಿರುವ ಈಶಾನ್ಯ ರಾಜ್ಯಗಳು ಕೇಂದ್ರದಲ್ಲಿ ಅಧಿಕಾರ ಹಿಡಿದ ಪಕ್ಷದ ಹಿಂದೆ ಬೀಳುವುದು ಐತಿಹಾಸಿಕ ವಾಸ್ತವ. ಮೋದಿಯ ಜನಪ್ರಿಯತೆ ಮತ್ತು ಸ್ಥಳೀಯ ಪಕ್ಷಗಳೊಂದಿಗೆ ಜಾಣತನದ ಗೆಳೆತನ ಬೆಳೆಸುವ ಹಾಗೂ ವಿರೋಧಿ ಬಣಗಳ ಅತೃಪ್ತ ನಾಯಕರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಸಾಮರ್ಥ್ಯಗಳು ಈಶಾನ್ಯ ಭಾರತದಲ್ಲಿ ಬಿಜೆಪಿ ದಾಪುಗಾಲಿಗೆ ಕಾರಣವಾಗಿವೆ.

ಸ್ಥಳೀಯ ಪಕ್ಷಗಳೊಂದಿಗೆ ಕೈ ಜೋಡಿಸಿ ಕಾಂಗ್ರೆಸ್ ಬೇರುಗಳನ್ನು ಕಿತ್ತೆಸೆದು, ಎಡಪಂಥೀಯರನ್ನು ಸೋಲಿಸುವುದು ಬಿಜೆಪಿಯ ಗುರಿ. ಗೋಮಾಂಸ ಸೇವನೆಗೆ ವಿರೋಧ ಮತ್ತು ನಿಷೇಧದ ಬಿಜೆಪಿ ರಾಜಕಾರಣದ ವಿರುದ್ಧ ಈಶಾನ್ಯ ಸಿಡಿದೆದ್ದಿತ್ತು. ಕಾಲಕ್ರಮೇಣ ತನ್ನ ನಿಲುವನ್ನು ಈ ಸೀಮೆಯಲ್ಲೂ ಸಡಿಲಿಸಿಕೊಂಡು ವಿರೋಧದ ಅಲೆಯನ್ನು ಅಡಗಿಸುವಲ್ಲಿ ಸಫಲವಾಗಿದೆ ಬಿಜೆಪಿ.

ಕಠಿಣ ಸವಾಲಿನ ತ್ರಿಪುರಾ ಬಿಜೆಪಿಯ ಬುಟ್ಟಿಗೆ ಬಿದ್ದೀತೇ?

ಮೂರೂ ರಾಜ್ಯಗಳ ಪೈಕಿ ಭರ್ಜರಿ ಬೇಟೆ ಎಂದು ಬಿಜೆಪಿ ಕಣ್ಣು ಹಾಕಿರುವುದು ಎಡರಂಗ ಸರ್ಕಾರ ಉಳ್ಳ ತ್ರಿಪುರಾದ ಮೇಲೆ. 1993ರಿಂದ ಇಲ್ಲಿಯವರೆಗೆ ಸತತ 24 ವರ್ಷಗಳ ಕಾಲ ಎಡರಂಗದ ಆಡಳಿತಕ್ಕೆ ಈ ರಾಜ್ಯದಲ್ಲಿ ಎದುರಾಳಿಯೇ ಇಲ್ಲ. ಸರಳ ಬದುಕಿಗೆ ಹೆಸರಾದವರು ಮುಖ್ಯಮಂತ್ರಿ ಮಾಣಿಕ್ ಸರ್ಕಾರ್. ಅವರ ಜನಪ್ರಿಯತೆಗೆ ಕನ್ನ ಹಾಕುವುದು ಸುಲಭ ಸಾಧ್ಯವಲ್ಲ ಎಂಬ ಸಂಗತಿ ಬಿಜೆಪಿಗೆ ಗೊತ್ತು. ಹಾಲಿ ವಿಧಾನಸಭೆಯ 60 ಸ್ಥಾನಗಳಲ್ಲಿ ಎಡರಂಗದ ಸದಸ್ಯಬಲ 51. ಈ ಪೈಕಿ ಸಿಪಿಐ(ಎಂ) ಶಾಸಕರು 50 ಮಂದಿ. ಆದರೆ ಈ ಸಂಗತಿಗಳು ಬಿಜೆಪಿಯನ್ನು ವಿಚಲಿತಗೊಳಿಸಿಲ್ಲ.

ಮಾಣಿಕ್ ಸರ್ಕಾರ್ ಮುಂದಿರುವ ಸವಾಲುಗಳೇನು?

ನಿರುದ್ಯೋಗ ಸಮಸ್ಯೆ ಮತ್ತು ಪ್ರತ್ಯೇಕ ರಾಜ್ಯ ಬಯಸಿ ಬುಡಕಟ್ಟು ಜನಾಂಗಗಳು ನಡೆಸಿರುವ ಆಂದೋಲನ. ಈ ಆಂದೋಲನವನ್ನು ಬಿಜೆಪಿ ಬೆಂಬಲಿಸಿದೆ. ಲೆನಿನ್, ಸ್ಟಾಲಿನ್, ಚೆ ಗೆವಾರ ಅವರಂತಹ ‘ಪರಕೀಯ ನಾಯಕರನ್ನು ಆರಾಧಿಸುವ ಸರ್ಕಾರ’ದ ವಿರುದ್ಧ ‘ಸ್ವಕೀಯ’ ತ್ರಿಪುರಾ ರಾಜಮನೆತನವನ್ನು ಎತ್ತಿಕಟ್ಟತೊಡಗಿದೆ.

ಈ ಬಾರಿ ಕಾಂಗ್ರೆಸ್ ಕೈ ತಪ್ಪುವುದೇ ಮೇಘಾಲಯ?

ಮೇಘಾಲಯದಲ್ಲಿ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದೇ ಮುಕುಲ್ ಸಂಗ್ಮಾ ನೇತೃತ್ಪದ ಕಾಂಗ್ರೆಸ್ ಸರ್ಕಾರದ ಬಲು ದೊಡ್ಡ ಸಾಧನೆ. ಭ್ರಷ್ಟಾಚಾರದ ಆಪಾದನೆಗಳು ಮತ್ತು ಅಭಿವೃದ್ಧಿ ಕಾರ್ಯದಲ್ಲಿ ಹಿಂದೆ ಬಿದ್ದಿರುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಮತದಾರರ ಅತೃಪ್ತಿ ಎದುರಿಸಿದೆ.

ದಿವಂಗತ ಪಿ.ಎ.ಸಂಗ್ಮಾ ಅವರ ಮಗ ಕೊನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಜೊತೆ ಚುನಾವಣೆಯ ನಂತರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಕಾತರಿಸಿದೆ ಬಿಜೆಪಿ. ಇಲ್ಲಿಯೂ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ರಾಷ್ಟ್ರಪತಿ ಆಡಳಿತ ಹೇರಿ ಹಿಂಬಾಗಿಲ ಮೂಲಕ ಸರ್ಕಾರ ನಡೆಸುವುದು ಬಿಜೆಪಿಯ ಕಾರ್ಯತಂತ್ರ.

ಹರಿದು ಹಂಚಿಹೋದ ನಾಗಾ ಪಕ್ಷಗಳು ಬಿಜೆಪಿಗೆ ಬಾಗಿಲು ತೆರೆಯಲಿವೆಯೇ?

ಸದ್ಯಕ್ಕೆ ನಾಗಾ ಪೀಪಲ್ಸ್ ಫ್ರಂಟ್ (ಎನ್.ಪಿ.ಎಫ್) ಸರ್ಕಾರವನ್ನು ಬಿಜೆಪಿ ಬೆಂಬಲಿಸುತ್ತಿದೆ. ಈ ಫ್ರಂಟ್‌ನಲ್ಲಿ ಮೂಡಿರುವ ಬಿರುಕುಗಳನ್ನು ಬಳಸಿ ತಾನೇ ಸರ್ಕಾರ ರಚಿಸುವ ಮಹತ್ವಾಕಾಂಕ್ಷೆಯನ್ನು ಬಿಜೆಪಿ ಹೊಂದಿದೆ.

ನಾಗಾ ಪೀಪಲ್ಸ್ ಫ್ರಂಟ್ ಅಧ್ಯಕ್ಷ ಶುರ್ಹೋಝೆಲೀ ಲೇಝೀತ್ಸು, ಮುಖ್ಯಮಂತ್ರಿ ಟಿ.ಆರ್.ಝೇಲಿಯಂಗ್ ಹಾಗೂ ಮೋದಿ ಮಂತ್ರಿಮಂಡಲ ಸೇರುವ ಮಹದಾಸೆಯಿಂದ ಮುಖ್ಯಮಂತ್ರಿ ಹುದ್ದೆ ತೊರೆದು ಸಂಸದರಾಗಿ ಚುನಾಯಿತರಾಗಿದ್ದ ನೇಯ್ಫಿಯೂ ರಯೋ ಇಂದಿನ ನಾಗಾ ರಾಜಕಾರಣದ ಮೂವರು ಮುಖ್ಯ ಧ್ರುವತಾರೆಗಳು.

ಮೂವರ ವ್ಯಕ್ತಿಗತ ಮಹತ್ವಾಕಾಂಕ್ಷೆಗಳು ನಾಗಾ ಪೀಪಲ್ಸ್ ಫ್ರಂಟ್ಅನ್ನು ಒಡೆದು ರಾಜಕೀಯ ಅಸ್ಥಿರತೆಯನ್ನು ಹುಟ್ಟು ಹಾಕಿವೆ. ತಮ್ಮ ಪಕ್ಷದಲ್ಲಿ ಇದ್ದುಕೊಂಡೇ ಹೊಸ ಪಕ್ಷ ನ್ಯಾಷನಲ್ ಡೆಮಾಕ್ರೆಟಿಕ್ ಪ್ರೊಗ್ರೆಸಿವ್ ಪಾರ್ಟಿಯ ಹುಟ್ಟಿಗೆ ನೆರವಾಗಿದ್ದರು. ತಾಯಿ ಪಕ್ಷವನ್ನು ತೊರೆದು ಹೊಸ ಪಕ್ಷವನ್ನು ಸೇರಿದ್ದಾರೆ. ಈ ಬೆಳವಣಿಗೆಯು ರಾಜ್ಯದಲ್ಲಿ ತ್ರಿಪಕ್ಷೀಯ ಚುನಾವಣಾ ರಾಜಕಾರಣಕ್ಕೆ ದಾರಿ ಮಾಡಿದೆ. ಶುರ್ಹೋಝೆಲೀ ಮತ್ತು ಝೇಲಿಯಂಗ್ ಅವರ ನಾಗಾ ಪೀಪಲ್ಸ್ ಫ್ರಂಟ್, ಉನ್ನತ ನಿವೃತ್ತ ಅಧಿಕಾರಿಗಳು ನೆರೆದು ಸೇರಿರುವ ರಯೋ ಅವರ ಹೊಸ ಪಕ್ಷ ನ್ಯಾಷನಲ್ ಡೆಮಾಕ್ರೆಟಿಕ್ ಪ್ರೊಗ್ರೆಸಿವ್ ಪಾರ್ಟಿ ಹಾಗೂ ಬಿಜೆಪಿ ಕಣದಲ್ಲಿವೆ.

ನಾಗಾಲ್ಯಾಂಡ್‌ನ ನಾಲ್ಕನೆಯ ಆಯಾಮ ಯಾವುದು?

ನಾಗಾಲ್ಯಾಂಡ್ ಚುನಾವಣೆಗೆ ನಾಲ್ಕನೆಯ ಆಯಾಮದ ಸಂಭವವೂ ಉಂಟು. ಶುರ್ಹೋಝೆಲಿ ಮತ್ತು ಝೇಲಿಯಂಗ್ ಗೆಳೆತನ ಅಷ್ಟೇನೂ ಗಟ್ಟಿಯಾಗಿಲ್ಲ. ನೆರೆಯ ರಾಜ್ಯ ಮೇಘಾಲಯದ ನಾಯಕ ದಿವಂಗತ ಪಿ.ಎ.ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿಯನ್ನು ಅವರ ಮಗ ಕೊನ್ರಾಡ್ ಸಂಗ್ಮಾ ಮುನ್ನಡೆಸುತ್ತಿದ್ದಾರೆ. ಈ ಪಕ್ಷದೊಂದಿಗೆ ಸೇರಿ ಚುನಾವಣೆ ಸೆಣೆಸುವ ಆಯ್ಕೆಯನ್ನು ಶುರ್ಹೋಝೆಲೀ ತೆರೆದು ಇರಿಸಿಕೊಂಡಿದ್ದಾರೆ. ಪರಿಣಾಮವಾಗಿ ಯಾವ ಪಕ್ಷಕ್ಕೂ ಬಹುಮತ ದೊರೆಯದೆ ಅತಂತ್ರ ವಿಧಾನಸಭೆಯ ಸಾಧ್ಯತೆಯನ್ನು ನಿರೀಕ್ಷಿಸಲಾಗಿದೆ.

ಅತಂತ್ರ ವಿಧಾನಸಭೆಯ ಲಾಭವನ್ನು ಬಿಜೆಪಿ ಪಡೆಯಲಿದೆ. ಯಾವ ಪಕ್ಷ ಅಧಿಕಾರ ಹಿಡಿದರೂ ಬಿಜೆಪಿಯ ಹಿಡಿತ ಗಟ್ಟಿಯಾಗುವುದು ನಿಶ್ಚಿತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry