‘ಲಗ್ನ ಒಲ್ಲೆ ಅಂದಿದ್ದಕ್ಕ ಇಂಥಾ ಅನ್ಯಾಯ..’

7
ಪ್ರಕರಣದ ಸಂಧಾನಕ್ಕೆ ಒತ್ತಡ; ಅತ್ಯಾಚಾರ ಸಂತ್ರಸ್ತೆಯ ನೋವಿನ ನುಡಿ

‘ಲಗ್ನ ಒಲ್ಲೆ ಅಂದಿದ್ದಕ್ಕ ಇಂಥಾ ಅನ್ಯಾಯ..’

Published:
Updated:
‘ಲಗ್ನ ಒಲ್ಲೆ ಅಂದಿದ್ದಕ್ಕ ಇಂಥಾ ಅನ್ಯಾಯ..’

ವಿಜಯಪುರ: ‘ನಾ, ಲಗ್ನ ಆಗಾಕ ಒಲ್ಲೆ ಅಂದಿದ್ದಕ್ಕ ಇಂಥಾ ಅನ್ಯಾಯ ಮಾಡಿದ್ರು. ಅವರಿಗೆಲ್ಲ ಸಜಾ ಆಗ್ಬೇಕು. ನನ್ನ ಸ್ಥಿತಿ ಬ್ಯಾರೆ ಯಾ ಹೆಣ್ಮಕ್ಳಿಗೂ ಬರಬಾರ್ದು... ’

ಇಂಡಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಜ.11ರಂದು ಅತ್ಯಾಚಾರಕ್ಕೀಡಾದ ಬಾಲಕಿಯ ನೋವಿನ ನುಡಿಗಳಿವು.

‘ಅಪ್ಪ ಊರಿಗೆ ಹೋಗಿದ್ದ. ಅವ್ವ ಕೆಲಸಕ್ಕೆ ಹೋಗಿದ್ಲು. ತಂಗಿ, ಸಾಲಿಗೆ ಹೋದಾಕಿ ಇನ್ನೂ ಬಂದಿದ್ದಿಲ್ಲ. ನಾನು ಹೊಲದಾಗ ಆಡು ಮೇಯಿಸಾಕ

ತ್ತಿದ್ದೆ. ಮುಖಕ್ಕೆ ಅರಿಬಿ ಸುತ್ತಿಕೊಂಡವ ಒಬ್ಬಂವಾ ನನ್ನ ಹತ್ರ ಬಂದು, ಕಾಕಾ ಮೊಬೈಲ್‌ ಬಿಟ್ಟು ಹೋಗ್ಯಾನಂತ; ಕೊಡ ಬಾ ಅಂತ ಕರದ. ಅದಕ್ಕ ನಾನು, ಯಾರ್‌ ನೀನು? ಮಾರಿ ಮ್ಯಾಲಿನ ಅರಿಬಿ ತಗಿ ಅಂದೆ. ಅದಕ್ಕ ಅಂವ, ಬ್ಯಾನಿ ಆಗೇತಿ; ತಗ್ಯಾಕ ಬರಂಗಿಲ್ಲ ಅಂದ. ‘ನಾ ನಿನ್ನ ಕಾಕಾನ ಮಗಾನ. ನೀ ನೋಡಿಲ್ಲ’ ಅಂದ. ನಂಬಿ ಪತ್ರಾಸ ಶೆಡ್‌ ಹತ್ರ ಹೋದೆ. ಅಲ್ಲೆ ಅಂಜುಟಗಿಯ ಕಂಟೆಪ್ಪ ಕೋಣೆಗೋಳ ಕುಂತಿದ್ದ. ಜತಿಗೆ, ಮಾರಿಗೆ ಅರಿಬಿ ಸುತ್ತಗೊಂಡವ್ರು ಇನ್ನೂ ಇಬ್ಬರಿದ್ರು. ಕಂಟೆಪ್ಪ ಕುಡ್ಯಾಕ ನೀರ್‌ ಕೇಳ್ದ. ಕೊಟ್ಟೆ. ಚಾ ಮಾಡು ಅಂದ; ಮಾಡಲ್ಲ ಅಂದೆ. ನಮ್ಮ ಹುಡುಗನ್ನ ಲಗ್ನಾ ಆಗು ಅಂದ. ನಾ ಆಗಲ್ಲ ಅಂದೆ. ಹಂಗ ಅನತಿದ್ದಂಗ... ಬಾಯಾಗ ಅರಿಬಿ ತುರುಕಿ ಶೆಡ್‌ ಒಳಗ ದೂಕಿದ’....

ಎಂದು ಬಾಲಕಿ, ಕರಾಳ ದಿನ ನಡೆದುದನ್ನು ಭಯದಲ್ಲೇ ವಿವರಿಸಲು ಮುಂದಾದಳು.

‘ಆಮ್ಯಾಲೆ, ಕೈ–ಕಾಲು ಕಟ್ಟಿದ್ರು. ಒಬ್ಬಂವ ಕೈ ಹಿಡಕೊಂಡ್ರ, ಇನ್ನೊಬ್ಬಂವ ಕಾಲ್‌ ಹಿಡದ. ಮತ್ತೊಬ್ಬ ಅರಿಬಿ ಬಿಚ್ಚಿದ. ನಾ ಗಾಬರಿ ಆದೆ. ಬಲವಂತದಿಂದ ದೌರ್ಜನ್ಯ ಮಾಡಿದ್ರು. ಆದ್ರ ಯಾರ್‌ ಅನ್ನೋದ ತಿಳಿವಲ್ದು’ ಎಂದು ಆಕೆ ದುಃಖಿಸಿದಳು.

‘ನಂಗ ಓದಬೇಕು ಅಂತ ಆಸೆ. ಎಂಟನೆತ್ತ ಮಟ ಕಲ್ತೇನಿ. 9ನೆತ್ತಕ್ಕ ಹಚ್ಚಿದ್ದೆ. ಆದ್ರ, ಸಾಲಿ ದೂರ ಆಗತೈತಿ ಅಂತ ಹೋಗಲಿಲ್ಲ. ಇದೀಗ ಲಗ್ನ ಒಲ್ಲೆ ಅಂದಿದ್ದಕ್ಕ, ನನ್ನ ಭವಿಷ್ಯಾನ ಹಾಳ್‌ ಮಾಡ್ಯಾರ’ ಎಂದು ಗದ್ಗದಿತಳಾದಳು.

ಸಾಯೋದೊಂದ ದಾರಿ: ತಮ್ಮ ಮಗಳಿಗೆ ಹೀಗಾದ ಮೇಲೆ, ಸಾಂತ್ವನ ಹೇಳುವ ನೆಪದಲ್ಲಿ ಮನೆಗೆ ಭೇಟಿ ನೀಡಿದವರ ಪೈಕಿ 100ಕ್ಕೂ ಹೆಚ್ಚು ಜನ ಈ ವಿಷಯವನ್ನು ‘ನಮ್ಮ ನಮ್ಮಲ್ಲೇ ಬಗೆಹರಿಸಿಕೊಳ್ಳೋಣ’ ಎಂದು ಹೇಳಿದ್ದಾಗಿ ತಿಳಿಸುತ್ತಾರೆ ಬಾಲಕಿಯ ತಂದೆ.

ಕಂಟೆಪ್ಪ ಎನ್ನುವಾತ, ತನ್ನ ಸಂಬಂಧಿ ಯುವಕನಿಗೆ ಮಗಳನ್ನು ಕೇಳಿದ್ದ. ಆಕೆ ನಿರಾಕರಿಸಿದ್ದಕ್ಕೆ ಇಂಥ ನೀಚ ಕೆಲಸ ಮಾಡಿಸಿದ್ದಾರೆಂದು ಕಣ್ಣೀರಿಟ್ಟ ಅವರು, ‘ಉರ್ಲು ಹಾಕ್ಕೊಂಡು ಸಾಯೋದೊಂದ ನಮಗಿರೋ ದಾರಿ’ ಎಂದು ದುಃಖಿಸಿದರು.

ಆರೋಪಿ ಬಂಧನ

ಸಂತ್ರಸ್ತೆ ಕೊಟ್ಟ ದೂರಿನ ಅನ್ವಯ ಆರೋಪಿ ಕಂಟೆಪ್ಪ ಕೋಣೆಗೋಳ ಎಂಬಾತನನ್ನು ಚಡಚಣ ಪೊಲೀಸರು ಬಂಧಿಸಿದ್ದಾರೆ. ‘ತನಿಖೆ ನಡೆಯುತ್ತಿದೆ. ವೈದ್ಯಕೀಯ ವರದಿ ಬಂದಿಲ್ಲ. ಈ ಹಂತದಲ್ಲಿ ಯಾವುದೇ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry