ಆದಾಯ ₹ 600 ಕೋಟಿ ಕುಸಿತ

7
ಅಬಕಾರಿ ಇಲಾಖೆ: ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗದ ಮದ್ಯ

ಆದಾಯ ₹ 600 ಕೋಟಿ ಕುಸಿತ

Published:
Updated:
ಆದಾಯ ₹ 600 ಕೋಟಿ ಕುಸಿತ

ಬೆಂಗಳೂರು: ರಾಜ್ಯ ಸರ್ಕಾರ ಪ್ರಸಕ್ತ ವರ್ಷ ಮದ್ಯ ಮಾರಾಟಕ್ಕೆ ನಿಗದಿಪಡಿಸಿರುವ ಗುರಿ ತಲುಪಲು ಸಾಧ್ಯವಾಗುವುದಿಲ್ಲ ಎಂದು ಅಬಕಾರಿ ಇಲಾಖೆ ಅಸಹಾಯಕತೆ ವ್ಯಕ್ತಪಡಿಸಿದೆ.

ಮದ್ಯ ಮಾರಾಟದಿಂದ ಪ್ರಸಕ್ತ ಸಾಲಿನಲ್ಲಿ ₹ 18,050 ಕೋಟಿ ಆದಾಯ ಸಂಗ್ರಹ ಗುರಿ ನೀಡಲಾಗಿತ್ತು. ಈ ಗುರಿ ತಲುಪಲು ಆಗುವುದಿಲ್ಲ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹಣಕಾಸು ಇಲಾಖೆಗೆ ಪತ್ರ ಬರೆದಿದ್ದಾರೆ.

2017ರ ಏಪ್ರಿಲ್‌ 1ರಿಂದ ಅಬಕಾರಿ ಸುಂಕ ಹೆಚ್ಚಳ ಮಾಡಿದ ಸರ್ಕಾರ, ಕಳೆದ ಸಾಲಿಗಿಂತ ₹ 1,567 ಕೋಟಿ ಹೆಚ್ಚು ಆದಾಯ ನಿರೀಕ್ಷಿಸಿದೆ.

ಹೆದ್ದಾರಿ ಬದಿಯ ಮದ್ಯದಂಗಡಿ ಮುಚ್ಚುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಿಂದ ಜುಲೈನಲ್ಲಿ ಮೂರೂವರೆ ಸಾವಿರ ಮದ್ಯದಂಗಡಿಗಳು ಬಾಗಿಲು ಮುಚ್ಚಿಕೊಂಡಿದ್ದವು. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲೂ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ ಎಂದು ವಿವರಿಸಿದ್ದಾರೆ.

ನಗರ ವ್ಯಾಪ್ತಿಯ ಹೆದ್ದಾರಿಗಳಿಗೆ ಈ ಆದೇಶ ಅನ್ಯಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆನಂತರ ಸ್ಪಷ್ಟಪಡಿಸಿದರೂ, ಗ್ರಾಮೀಣ ಭಾಗದಲ್ಲಿ ಬಾಗಿಲು ಮುಚ್ಚುವುದು ಅನಿವಾರ್ಯವಾಯಿತು. ಹೀಗಾಗಿ, ಮದ್ಯ ಮಾರಾಟ ನಿರೀಕ್ಷೆಯಷ್ಟು ಆಗಿಲ್ಲ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸುಂಕ, ಪರವಾನಗಿ ಶುಲ್ಕ, ದಂಡ ಹಾಗೂ ಇತರೆ ಮೂಲದ ಆದಾಯ ಸೇರಿ ಈವರೆಗೆ ₹ 13,300 ಕೋಟಿ ಸಂಗ್ರಹವಾಗಿದೆ ಎಂದೂ ಹೇಳಿದರು.

‌ಬೆಲೆ ಹೆಚ್ಚಳ:ಅಗ್ಗದ ದರದ ಮದ್ಯಕ್ಕೆ ಶೇ6ರಷ್ಟು, ದುಬಾರಿ ದರದ ಮದ್ಯಕ್ಕೆ ಶೇ15ರಿಂದ ಶೇ21ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಲಾಯಿತು. ಆದರೆ, ಮದ್ಯದ ಅಂಗಡಿಗಳಲ್ಲಿ ಅಗ್ಗದ ‌ಮದ್ಯಕ್ಕೂ ಕನಿಷ್ಠ ₹10 ಹೆಚ್ಚಳ ಮಾಡಲಾಗಿದೆ.  ಮದ್ಯ ಮಾರಾಟ ಕಡಿಮೆಯಾಗಲು ಇದೂ ಕಾರಣ ಇರಬಹುದು ಎನ್ನುತ್ತಾರೆ ಅಧಿಕಾರಿಗಳು.‌

ಅಬಕಾರಿ ಆದಾಯ ನಿರೀಕ್ಷೆಗಿಂತ ₹ 600 ಕೋಟಿ ಕಡಿಮೆಯಾಗಲಿದ್ದು, ಸರ್ಕಾರಕ್ಕೆ ಪತ್ರ ಬರೆದು ತಿಳಿಸಲಾಗಿದೆ

- ರಾಜೇಂದ್ರ ಪ್ರಸಾದ್,ಅಬಕಾರಿ ಜಂಟಿ ಆಯುಕ್ತ

ಅಂಕಿ ಅಂಶ

ವರ್ಷ         ಸಂಗ್ರಹವಾದ ವರಮಾನ (₹ ಕೋಟಿಗಳಲ್ಲಿ) ಶೇಕಡವಾರು ಹೆಚ್ಚಳ

2012-13   11069.73    12.64

2013-14   12,828       15.89

2014-15   13,801       7.58

2015-16   15,332       11.10

2016–17  16,483       7.51

2017–18  13,300       5.53

(ಈವರೆಗೆ)

 

ಮದ್ಯ ಮಾರಾಟದ ವಿವರ (ಲಕ್ಷ ಪೆಟ್ಟಿಗೆಗಳಲ್ಲಿ)

ವರ್ಷ        ಮದ್ಯ          ಬಿಯರ್‌

2012-13   506.61    222.41

2013-14   526.25     243.85

2014-15   559.90     253.46

2015-16   566.79     270.58

2016–17  558.57      244.22

2017–18  325.21      150.20

(ಈವರೆಗೆ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry