ಲೈಂಗಿಕ ದೌರ್ಜನ್ಯ: ‘ಬಟ್ಟೆ ಸಂಗ್ರಹ’ ಪ್ರತಿರೋಧ!

7
‘ಬ್ಲ್ಯಾಂಕ್‌ ನಾಯ್ಸ್‌’ ಸ್ವಯಂ ಸೇವಾ ಸಂಸ್ಥೆ ಅಭಿಯಾನ

ಲೈಂಗಿಕ ದೌರ್ಜನ್ಯ: ‘ಬಟ್ಟೆ ಸಂಗ್ರಹ’ ಪ್ರತಿರೋಧ!

Published:
Updated:
ಲೈಂಗಿಕ ದೌರ್ಜನ್ಯ: ‘ಬಟ್ಟೆ ಸಂಗ್ರಹ’ ಪ್ರತಿರೋಧ!

ಚೆನ್ನೈ: ಕೆಲ ದಿನಗಳ ಹಿಂದೆ ಯಾಮಿನಿ ಕರುಣಾಕರನ್‌ ಅವರು ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ಬಸ್‌ ಹತ್ತಿದ್ದರು. ಮಹಿಳೆಯರಿಗೆ ಮೀಸಲಾದ ಆಸನದಲ್ಲಿ ಕುಳಿತಿದ್ದ ಅವರ ಪಕ್ಕ ಪುರುಷನೊಬ್ಬ ಬಂದು ಕುಳಿತ. ಯಾಮಿನಿ ಅವರನ್ನು ಕಾಮುಕದೃಷ್ಟಿಯಿಂದ ನೋಡತೊಡಗಿದ ಆತ, ಅವರು ಬಸ್‌ ಇಳಿದಾಗಲೂ ಬಿಡದೆ ಅವರನ್ನು ಹಿಂಬಾಲಿಸಿದ್ದ.

ಇದನ್ನು ಆಕೆ ಕೆಲವರಿಗೆ ವಿವರಿಸಿದಾಗ ಅವರಿಂದ ಬಂದ ಪ್ರತಿಕ್ರಿಯೆ, ಆ ಘಟನೆಯಷ್ಟೇ ಪ್ರಮಾಣದಲ್ಲಿ ಆಕೆಯ ನೆಮ್ಮದಿಗೆಡಿಸಿತ್ತು.

‘ಆ ದಿನ ನಾನು ಯಾವ ರೀತಿಯ ಬಟ್ಟೆ ಧರಿಸಿದ್ದೆ ಎಂದು ಜನ ಕೇಳಿದ್ದರಿಂದ ನನಗೆ ಎಲ್ಲಿಲ್ಲದ ಸಿಟ್ಟು ಬಂದಿತ್ತು’ ಎಂದು ಥಾಮ್ಸನ್‌ ರಾಯಿಟರ್ಸ್ ಫೌಂಡೇಷನ್‌ಗೆ ಯಾಮಿನಿ ತಿಳಿಸಿದ್ದಾರೆ.

ಈ ರೀತಿಯ ವರ್ತನೆಯು ಕಿರುಕುಳ ಮತ್ತು ದೌರ್ಜನ್ಯದ ರೀತಿಯಲ್ಲೇ ಇರುತ್ತದೆ; ಭಾರತದ ಪ್ರತಿ ಐವರು ಮಹಿಳೆಯರಲ್ಲಿ ನಾಲ್ವರು ಇಂತಹ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ ಎಂದು ಬ್ರಿಟನ್‌ನ ಸ್ವಯಂ ಸೇವಾ ಸಂಸ್ಥೆ ‘ಆ್ಯಕ್ಷನ್ ಏಡ್‌’ 2016ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಅಭಿಪ್ರಾಯಪಟ್ಟಿದೆ.

ಇಂಥ ಘಟನೆಗಳಿಗೆ ದೌರ್ಜನ್ಯ ಎಸಗುವವರನ್ನು ಹೊಣೆಮಾಡುವುದಕ್ಕಿಂತ, ಹೆಚ್ಚಿನವರು ಸಂತ್ರಸ್ತ ರನ್ನೇ ಬೈಯ್ಯುತ್ತಾರೆ. ಪಾರದರ್ಶಕ ಉಡುಪು ಧರಿಸಿ ಅಥವಾ ಜೋರಾಗಿ ನಗುವ ಮೂಲಕ ಬೇರೆಯವರ ಗಮನ ಸೆಳೆಯುತ್ತಾರೆ ಎಂದು ದೂರುತ್ತಾರೆ. ಇಂತಹ ನಡೆಗೆ ಪ್ರತಿಭಟನೆಯಾಗಿ, ಅಂದು ಬಸ್‌ನಲ್ಲಿ ತಾವು ಧರಿಸಿದ್ದ ಉಡುಪನ್ನು ಸ್ವಯಂ ಸೇವಾ ಸಂಸ್ಥೆ ‘ಬ್ಲ್ಯಾಂಕ್‌ ನಾಯ್ಸ್‌’ಗೆ ಯಾಮಿನಿ ನೀಡಿದ್ದಾರೆ.

ದೇಶದಾದ್ಯಂತ ಲೈಂಗಿಕ ದೌರ್ಜನ್ಯಗಳ ವಿರುದ್ಧ ಗಮನಸೆಳೆಯಲು ಈ ಸಂಸ್ಥೆ ‘ಐ ನೆವರ್‌ ಆಸ್ಕ್‌ ಫಾರ್‌ ಇಟ್‌’ ಆಂದೋಲನವನ್ನು ಆರಂಭಿಸಿದೆ. ಇದಕ್ಕಾಗಿ ವಿವಿಧ ನಗರಗಳಿಗೆ ತೆರಳಿ, ದೌರ್ಜನ್ಯದ ಸಂದರ್ಭದಲ್ಲಿ ಧರಿಸಿದ್ದ ಉಡುಪುಗಳನ್ನು ಮಹಿಳೆಯರಿಂದ ಸಂಗ್ರಹಿಸುತ್ತಿರುವ ಸಂಸ್ಥೆಯು, ಇದಕ್ಕೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮಗಳಲ್ಲಿ ಅವುಗಳನ್ನು ಪ್ರದರ್ಶನಕ್ಕೆ ಇಡುತ್ತಿದೆ.

‘ಕೆಲವರು ತಮ್ಮ ಸಂಬಂಧಿಗಳಾದ ಸಂತ್ರಸ್ತ ಮಹಿಳೆಯರ ಉಡುಪುಗಳನ್ನು ತಂದುಕೊಡುತ್ತಿದ್ದಾರೆ. ಇನ್ನು ಕೆಲವರು ತಾವು ಮಕ್ಕಳಾಗಿದ್ದಾಗ ಇಂತಹ ಕಿರುಕುಳ ಎದುರಿಸಿದ ಸಂದರ್ಭದಲ್ಲಿ ತೊಟ್ಟಿದ್ದ ಉಡುಪುಗಳನ್ನು ತಂದೊಪ್ಪಿಸುತ್ತಿದ್ದಾರೆ. ತಾವು ಈ ಉಡುಪುಗಳನ್ನು ತಮ್ಮ ಕಪಾಟಿನಲ್ಲಿ ಹೇಗೆ ಭದ್ರವಾಗಿ ಇರಿಸಿದ್ದರು ಎಂಬುದನ್ನು ಹಲವರು ವಿವರಿಸಿದ್ದಾರೆ. ಅಂತಹ ಘಟನೆಗಳು ಅವರ ಮನಸ್ಸಿನಲ್ಲಿ ಆಳವಾಗಿ ಬೇರೂರಿರುತ್ತವೆ ಎಂಬುದಕ್ಕೆ ಇದು ನಿದರ್ಶನ’ ಎಂದು ಸಂಸ್ಥೆಯ ಸ್ಥಾಪಕಿ ಜಾಸ್ಮಿನ್‌ ಪಥೀಜ ಹೇಳಿದ್ದಾರೆ.

‘ದೌರ್ಜನ್ಯಕ್ಕೆ ಒಳಗಾಗುವಾಗ ನೀವು ಯಾವ ರೀತಿಯ ಬಟ್ಟೆ ಧರಿಸಿರುತ್ತೀರಿ ಎಂಬುದು ಮುಖ್ಯವಾಗುವುದಿಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಈ ಬಟ್ಟೆಗಳು ನೆರವಾಗಲಿವೆ’ ಎಂದು ಮತ್ತೊಬ್ಬ ಸಂತ್ರಸ್ತೆ ಈಶಿತಾ ಹೇಳಿದ್ದಾರೆ.

ಭಾರತದ ಶೇ 80ರಷ್ಟು ಮಹಿಳೆಯರು ದುರುಗುಟ್ಟಿ ನೋಡುವುದು, ಕೆಟ್ಟ ದೃಷ್ಟಿಯಿಂದ ಸಿಳ್ಳೆ ಹೊಡೆಯುವುದು, ಹಿಂಬಾಲಿಸುವುದು, ಮೈಮುಟ್ಟುವಂತಹ ಕೃತ್ಯಗಳಿಗೆ ಈಡಾಗು ತ್ತಾರೆ; ಅತ್ಯಾಚಾರಕ್ಕೂ ಒಳಗಾಗುತ್ತಾರೆ. ಇದು ಬೀದಿಗಳು, ಉದ್ಯಾನಗಳು, ಕಾಲೇಜು ಕ್ಯಾಂಪಸ್‌ ಗಳು, ಸಾರ್ವಜನಿಕ ಸಾರಿಗೆಯಂತಹ ಸ್ಥಳಗಳಲ್ಲಿ ಎಲ್ಲಿ ಬೇಕಾದರೂ ಆಗಬಹುದು ಎಂದು ಆ್ಯಕ್ಷನ್‌ ಏಡ್‌ ಸಮೀಕ್ಷೆ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry