ಮಹಿಳಾ ಮೀಸಲಾತಿಯನ್ನು ಪುರುಷರು ಬೆಂಬಲಿಸಲಿ: ಚಂಪಾ

6

ಮಹಿಳಾ ಮೀಸಲಾತಿಯನ್ನು ಪುರುಷರು ಬೆಂಬಲಿಸಲಿ: ಚಂಪಾ

Published:
Updated:
ಮಹಿಳಾ ಮೀಸಲಾತಿಯನ್ನು ಪುರುಷರು ಬೆಂಬಲಿಸಲಿ: ಚಂಪಾ

ಬೆಂಗಳೂರು: ಮಹಿಳೆಯರು ಶೇ 50ರಷ್ಟು ಮೀಸಲಾತಿ ಕೇಳಬೇಕು. ಅದಕ್ಕೆ ಪುರುಷರೂ ಬೆಂಬಲ ನೀಡಬೇಕು ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಹೇಳಿದರು.

ಮಾಧ್ಯಮ ಅಕಾಡೆಮಿ ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ವರ್ತಮಾನದ ವಿದ್ಯಮಾನಗಳು ಮತ್ತು ಪತ್ರಕರ್ತೆಯರು’ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ಬದುಕಿನ ಪಾಲುದಾರಿಕೆಯಲ್ಲಿ ಸಮಾನತೆ ಇಲ್ಲ. ಲಿಂಗ, ವರ್ಣ, ಜಾತಿ ಹೀಗೆ ಬೇರೆ ಬೇರೆ ಆಯಾಮಗಳಲ್ಲಿ ಅಸಮಾನತೆ ಕಾಣುತ್ತಿದ್ದೇವೆ. ಮಹಿಳೆ ಇಂತಹದ್ದೇ ಕೆಲಸ ಮಾಡಬೇಕು ಎಂಬ ಗೆರೆಗಳನ್ನು ಭಾರತೀಯ ಸಮಾಜದಲ್ಲಿ ಹಾಕಲಾಗಿದೆ. ಇದು ಸರಿಯಲ್ಲ ಎಂದರು.

‘ನಮ್ಮ ಅಸ್ತಿತ್ವ ಇರುವುದು ವರ್ತಮಾನದಲ್ಲಿ. ಅದರೊಳಗೆ ಸಿಲುಕಿ ನಾವು ಒದ್ದಾಡುತ್ತಿದ್ದೇವೆ. ಹೀಗಾಗಿ ವರ್ತಮಾನ ಮುಖ್ಯವಾಗುತ್ತದೆ. ಪತ್ರಿಕೆಗಳು ಜನರ ಮೇಲೆ ನೇರವಾಗಿ ಪ್ರಭಾವ ಬೀರುತ್ತವೆ. ಅನೇಕ ಬ್ಲಾಗರ್‌ಗಳ, ಪತ್ರಕರ್ತರ ಹತ್ಯೆಗಳು ಈ ಕಾರಣದಿಂದಾಗಿಯೇ ನಡೆಯುತ್ತಿವೆ’ ಎಂದು ಹೇಳಿದರು.

ಹಿರಿಯ ಪತ್ರಕರ್ತೆ ಆರ್‌.ಪೂರ್ಣಿಮಾ, ‘ವರ್ತಮಾನದ ವಿದ್ಯಮಾನಗಳಿಗೆ ಪತ್ರಕರ್ತೆಯರು ಹೇಗೆ ಸ್ಪಂದಿಸುತ್ತಿದ್ದಾರೆ ಎಂಬ ಬಗ್ಗೆ ಜಗತ್ತಿನೆಲ್ಲೆಡೆ ಚರ್ಚೆಯಾಗುತ್ತಿದೆ. 90ರ ನಂತರದಲ್ಲಿ ಪತ್ರಿಕಾ ರಂಗದ ಸ್ವರೂಪ ಬದಲಾಗಿದೆ. ಪತ್ರಕರ್ತೆಯರು ಏನಿದ್ದರೂ ಉತ್ಸವ, ಸಂಭ್ರಮ, ಜೀವನ ಶೈಲಿಯ ಕುರಿತು ಬರೆಯಲಷ್ಟೇ ಸೀಮಿತ ಎಂಬಂತಾಗಿದೆ. ಯುವ ಪತ್ರಕರ್ತೆಯರು ರಾಜಕೀಯ ಪ್ರಜ್ಞೆ, ಸಾಮಾಜಿಕ ಸಂವೇದನೆ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.  ರಾಜಕೀಯ ವರದಿಗಾರರು ಹೇಗೆ ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂಬುದನ್ನು ಹಿರಿಯ ಪತ್ರಕರ್ತೆ ಆಶಾ ಕೃಷ್ಣಸ್ವಾಮಿ ವಿವರಿಸಿದರು.

‘ಚುನಾವಣೆಗೆ ಸ್ಪರ್ಧಿಸಿದ ಮಹಿಳೆಯರಲ್ಲಿ ಶೇ 90 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. ಸಮಾಜಕ್ಕೆ ಮಹಿಳೆಯರ ಪ್ರಾತಿನಿಧ್ಯ ಬೇಡವಾಗಿದೆಯೇ’ ಎಂದು ಪ್ರಶ್ನಿಸಿದರು.   ಕರಾವಳಿಯಲ್ಲಿ ನಡೆಯುತ್ತಿರುವ ಗಲಭೆ ಜನರಲ್ಲಿ ಆತಂಕ ಸೃಷ್ಟಿಸುತ್ತಿರುವ ರೀತಿ ವಿಶ್ಲೇಷಿಸಿದ ಪತ್ರಕರ್ತೆ ಜ್ಯೋತಿ ಇರ್ವತ್ತೂರು, ‘ನಾವು ಯಾರ ಪರ ಅಥವಾ ವಿರೋಧವಾಗಿ ನಿಲ್ಲದೆ, ಸಂವಿಧಾನದ ಆಶಯ ಎತ್ತಿ ಹಿಡಿಯಬೇಕಾದ ಅಗತ್ಯ ಇದೆ’ ಎಂದರು. ಹಿರಿಯ ಪತ್ರಕರ್ತೆ ಕೆ.ಎಚ್‌.ಸಾವಿತ್ರಿ ಅಧ್ಯಕ್ಷತೆ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry