ಲಾಭಕ್ಕಾಗಿ ಮಹಾಪುರುಷರ ಜಯಂತಿ ಆಚರಿಸುವುದಿಲ್ಲ’

7

ಲಾಭಕ್ಕಾಗಿ ಮಹಾಪುರುಷರ ಜಯಂತಿ ಆಚರಿಸುವುದಿಲ್ಲ’

Published:
Updated:

ಬೆಂಗಳೂರು: ‘ರಾಜಕೀಯ ಲಾಭಕ್ಕಾಗಿ ರಾಜ್ಯ ಸರ್ಕಾರ ಮಹಾಪುರುಷರ ಜಯಂತಿ ಆಚರಿಸುವುದಿಲ್ಲ. ಈ ಕುರಿತು ಯಾವುದೇ ಟೀಕೆಗಳಿಗೂ ಸೊಪ್ಪು ಹಾಕುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶುಕ್ರವಾರ ನಡೆದ ಶ್ರೀ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಸಮಾಜದ ಹಿತಕ್ಕಾಗಿ ತೆಲುಗಿನಲ್ಲಿ ವೇಮನ ನಾಲ್ಕು ಸಾವಿರ ವಚನಗಳನ್ನು ರಚಿಸಿದ್ದಾರೆ. ವೇಮನರು ಸೀಮಾತೀತರು, ಜಾತ್ಯತೀತರು’ ಎಂದು ಬಣ್ಣಿಸಿದರು.

‘ಮನುಕುಲದ ಉದ್ಧಾರಕ್ಕಾಗಿ ಬದುಕು ಮುಡಿಪಿಟ್ಟ ಸುಮಾರು 27 ಮಹಾಪುರುಷರು ಮತ್ತು ಮಹಾಮಾತೆಯರ ಜಯಂತಿಯನ್ನು ಸರ್ಕಾರ ಆಚರಿಸುತ್ತಿದೆ. ಅವರ ಆಚಾರ, ವಿಚಾರಗಳು ಎಂದಿಗೂ ಪ್ರಸ್ತುತ’ ಎಂದರು.

‘ವೇಮನರು ಸಮಾಜಕ್ಕೆ ಕೊಟ್ಟ ನೀತಿ ಬೋಧನೆ ಜೀವಂತ ಮತ್ತು ಎಂದಿಗೂ ಪ್ರಸ್ತುತ. ಹೀಗಾಗಿ ವೇಮನರು ಆಂಧ್ರಪ್ರದೇಶದಲ್ಲಿ ಹುಟ್ಟಿದರೂ ನಮ್ಮ ಸರ್ಕಾರ ಅವರ ಜಯಂತಿ ಆಚರಿಸುತ್ತಿದೆ’ ಎಂು ವಿವರಿಸಿದರು.

‘ಬಿಜೆಪಿಯವರು ಧರ್ಮದ ಹೆಸರಿನಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಧರ್ಮದ ತಪ್ಪು ವ್ಯಾಖ್ಯಾನ ಮಾಡುವವರ ವಿರುದ್ಧ ಎಚ್ಚರದಿಂದ ಇರಬೇಕು’ ಎಂದರು.

‘ಪ್ರಬಲವಾಗಿ ಬೇರೂರಿರುವ ಜಾತಿ ವ್ಯವಸ್ಥೆ ಸಡಿಲಗೊಳ್ಳಬೇಕು. ಮಹಾಪುರುಷರು ಆ ಕೆಲಸ ಮಾಡಿದರೂ ಅದಿನ್ನೂ ಗಟ್ಟಿಯಾಗಿ ಉಳಿದಿದೆ. ಅದನ್ನು ಅಲುಗಾಡಿಸಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ವಿಶ್ವ ಮಾನವರಾಗಬೇಕು’ ಎಂದು ಹೇಳಿದರು.

‘ವಿಧಾನಸೌಧದ ಆವರಣದಲ್ಲಿ ಕೆ.ಸಿ. ರೆಡ್ಡಿ ಪ್ರತಿಮೆ ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ’ ಎಂದೂ ಮುಖ್ಯಮಂತ್ರಿ ತಿಳಿಸಿದರು.

‘ಪುರೋಹಿತಶಾಹಿ, ಶ್ರೇಣೀಕೃತ ಸಮಾಜ ವ್ಯವಸ್ಥೆಯನ್ನು ವಿರೋಧಿಸಿದ್ದ ಮಹಾಪುರುಷ ವೇಮನರ ಸಾವಿರಾರು ಅನುಯಾಯಿಗಳು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಇದ್ದಾರೆ. ಅವರ ತತ್ವ, ಆದರ್ಶಗಳನ್ನು ಪಾಲಿಸುವುದು ಮುಖ್ಯ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ವೇಮನ ಪುಸ್ತಕ ಲೋಕಾರ್ಪಣೆ:

‘ಮಹಾಯೋಗಿ ವೇಮನ’ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಹೈದರಾಬಾದ್ ತೆಲುಗು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎನ್. ಗೋಪಿ, ನಿವೃತ್ತ ಪ್ರಾಧ್ಯಾಪಕಿ ಡಾ. ಶಾಂತಾದೇವಿ ಸಣ್ಣೆಲ್ಲಪ್ಪನವರ್ ಉಪನ್ಯಾಸ ನೀಡಿದರು.

ಎರೆಹೊಸಹಳ್ಳಿ ರೆಡ್ಡಿ ಗುರುಪೀಠದ ವೇಮನಾನಂದ ಮಹಾಸ್ವಾಮೀಜಿ, ವಿಧಾನಸಭೆ ಉಪಾಧ್ಯಕ್ಷ ಶಿವಶಂಕರ ರೆಡ್ಡಿ, ಸಚಿವರಾದ ರಾಮಲಿಂಗಾ ರೆಡ್ಡಿ, ಉಮಾಶ್ರೀ, ರೋಷನ್‌ ಬೇಗ್, ಬಸವರಾಜ ರಾಯರಡ್ಡಿ, ಆರ್.ಬಿ. ತಿಮ್ಮಾಪೂರ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ, ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ, ಸರ್ಕಾರದ ದೆಹಲಿ ಪ್ರತಿನಿಧಿ ಅಪ್ಪಾಜಿ ನಾಡಗೌಡ, ಶಾಸಕ ಹಂಪನಗೌಡ ಬಾದರ್ಲಿ, ಮೇಯರ್ ಸಂಪತ್‌ರಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry