ಹಗಲು ನಿರ್ಲಕ್ಷ್ಯ, ರಾತ್ರಿ ಗುಟ್ಟಾಗಿ ವ್ಯವಹಾರ

7

ಹಗಲು ನಿರ್ಲಕ್ಷ್ಯ, ರಾತ್ರಿ ಗುಟ್ಟಾಗಿ ವ್ಯವಹಾರ

Published:
Updated:
ಹಗಲು ನಿರ್ಲಕ್ಷ್ಯ, ರಾತ್ರಿ ಗುಟ್ಟಾಗಿ ವ್ಯವಹಾರ

ಬೆಂಗಳೂರು: ‘ಉದ್ಯಮಿಗಳನ್ನು ಹಗಲಿನಲ್ಲಿ ನಿರ್ಲಕ್ಷ್ಯ ಮಾಡುವ ರಾಜಕಾರಣಿಗಳು, ರಾತ್ರಿ ಅವರೊಂದಿಗೆ ಯಾರಿಗೂ ಗೊತ್ತಾಗದಂತೆ ವ್ಯವಹಾರ ನಡೆಸುತ್ತಾರೆ’ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ 28ನೇ ಅಖಿಲ ಭಾರತ ಕಟ್ಟಡ ನಿರ್ಮಾಣಗಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಬಿಲ್ಡರ್‌ಗಳು ಯೋಜನೆಗಳಿಗೆ ಅನುಮತಿ ಪಡೆಯಲು ಅಧಿಕಾರಿಗಳ ಕೈಕುಲುಕುತ್ತಾರೆ. ರಾಜಕಾರಣಿಗಳೂ ಇದಕ್ಕೆ ಹೊರತಲ್ಲ. ಈ ಭ್ರಷ್ಟ ವ್ಯವಸ್ಥೆ ಕಿತ್ತು ಹಾಕಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದು ತಿಳಿಸಿದರು.

‘ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ ವರ್ಷವಾದರೂ ಅವು ವಿಲೇವಾರಿಯಾಗುವುದಿಲ್ಲ.  ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಸರ್ಕಾರಿ ಕೆಲಸಗಳು ನಿಧಾನವಾಗುತ್ತಿರುವುದು ನಾಚಿಗೇಡು’ ಎಂದರು.

ಈ ವಿಳಂಬ ತಪ್ಪಿಸಲು ಏಕಗವಾಕ್ಷಿ ವ್ಯವಸ್ಥೆ ಜಾರಿ ತರುವ ಅಗತ್ಯವಿದೆ. 60 ದಿನಗಳೊಳಗೆ ಅನುಮತಿ ನೀಡುವುದನ್ನು ಕಡ್ಡಾಯಗೊಳಿಸಬೇಕು. ಗಡುವು ಮೀರಿದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜಾರಿಯಾಗಬೇಕು ಮತ್ತು ಸ್ವಯಂ ಅನುಮೋದನೆ ದೊರೆಯುವಂತಾಗಬೇಕು ಎಂದೂ ಅವರು ಹೇಳಿದರು.

‘ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕೆಲವರು ಕೆಟ್ಟ ಹೆಸರು ತಂದಿದ್ದಾರೆ. ನಾನು ಕೇಂದ್ರ ಸಚಿವನಾಗಿದ್ದಾಗ ರೇರಾ ಕಾಯ್ದೆ ಜಾರಿಗೆ ತಂದಿದ್ದೇನೆ’ ಎಂದರು.

‌ರಾಜ್ಯಪಾಲ ವಜುಭಾಯಿ ವಾಲಾ ಮಾತನಾಡಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳಾಗಿದ್ದು, ಎಂಜಿನಿಯರ್‍ಗಳಿಗೆ, ವಿನ್ಯಾಸಕಾರರಿಗೆ ಈ ತಂತ್ರಜ್ಞಾನದ ತರಬೇತಿ ನೀಡುವ ಅಗತ್ಯವಿದೆ ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷ ಭೀಷ್ಮ ಆರ್. ರಾಧಾಕೃಷ್ಣನ್, ಅಖಿಲ ಭಾರತ ಕಟ್ಟಡ ನಿರ್ಮಾಣಗಾರರ ಸಂಘದ ರಾಷ್ಟ್ರೀಯ ಅಧ್ಯಕ್ಷ ಎಚ್.ಎನ್. ವಿಜಯರಾಘವ ರೆಡ್ಡಿ, ಮುಖ್ಯ ಪೋಷಕ ಬಿ. ಸೀನಯ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry