ಹಣ, ಚಿನ್ನದ ಉಂಗುರ, ಬೆಳ್ಳಿ ಬಟ್ಟಲಿನ ಆಮಿಷ...!

7

ಹಣ, ಚಿನ್ನದ ಉಂಗುರ, ಬೆಳ್ಳಿ ಬಟ್ಟಲಿನ ಆಮಿಷ...!

Published:
Updated:
ಹಣ, ಚಿನ್ನದ ಉಂಗುರ, ಬೆಳ್ಳಿ ಬಟ್ಟಲಿನ ಆಮಿಷ...!

ಬೆಂಗಳೂರು: ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಹಣ, ಚಿನ್ನ–ಬೆಳ್ಳಿ, ಮದ್ಯ ಹಂಚಿಕೆ, ಪುಕ್ಕಟೆ ಊಟ, ಮತದಾರರನ್ನು ಸಂತೃಪ್ತಿಪಡಿಸಿ ಮನವೊಲಿಸುವ ಭರಾಟೆ ಭರ್ಜರಿಯಾಗಿ ಸಾಗಿದೆ.

‘ಮತವೊಂದಕ್ಕೆ ₹ 2 ಸಾವಿರದಿಂದ ₹ 5 ಸಾವಿರದವರೆಗೆ ಹಂಚಲಾಗುತ್ತಿದೆ. ಕೆಲವು ಅಭ್ಯರ್ಥಿಗಳು ಮತದಾರರಿಗೆ ಚಿನ್ನದ ಉಂಗುರ, ಬೆಳ್ಳಿ ನಾಣ್ಯ, ಮಹಿಳೆಯರಿಗೆ ಕುಂಕುಮದ ಬೆಳ್ಳಿ ಬಟ್ಟಲು ಹಾಗೂ ಸೀರೆಗಳನ್ನೂ ಆಮಿಷವಾಗಿ ನೀಡಿದ್ದಾರೆ’ ಎಂದು ಕೆಲ ವಕೀಲರು ಆರೋಪಿಸಿದ್ದಾರೆ.

ಔತಣ ಕೂಟ: ‘ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿ ಮಧ್ಯಾಹ್ನ ಪುಕ್ಕಟೆಯಾಗಿ ಬಿರಿಯಾನಿ ಊಟ ವಿತರಿಸಲಾಗಿದ್ದು ರಾತ್ರಿ ವೇಳೆ ನಿಗದಿತ ಸ್ಥಳಗಳಲ್ಲಿ ಮೋಜು–ಮೇಜುವಾನಿ ಕೂಟಗಳನ್ನೂ ನಡೆಸಲಾಗಿದೆ.

ಶುಕ್ರವಾರ (ಜ.19) ರಾತ್ರಿ ಅರಮನೆ ಮೈದಾನದಲ್ಲಿ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಗಳು ಔತಣ ಕೂಟ ಹಾಗೂ ಪಾನಗೋಷ್ಠಿ ಏರ್ಪಡಿಸಿದ್ದರು ಎಂಬುದು ವಿಶೇಷ.

ಪಕ್ಷಗಳ ನಿಯಂತ್ರಣ: ಕಣದಲ್ಲಿರುವ ಅಭ್ಯರ್ಥಿಗಳನ್ನು ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಪರೋಕ್ಷವಾಗಿ ನಿಯಂತ್ರಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಬಹುತೇಕ ಎಲ್ಲಾ ಅಭ್ಯರ್ಥಿಗಳು ಪ್ರಚಾರಕ್ಕೆ ಎಸ್‌ಎಂಎಸ್, ವಾಟ್ಸ್‌ಆ್ಯಪ್‌, ಯೂ ಟ್ಯೂಬ್‌ ವೀಡಿಯೊ ತುಣುಕುಗಳು, ಫೇಸ್‌ ಬುಕ್‌ ಮುಖಾಂತರ ಹಾಗೂ ವಾಯ್ಸ್‌ ಕಾಲ್‌ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದಾರೆ.

ಎಲ್ಲಾ ಕೋರ್ಟ್‌ಗಳಲ್ಲಿ ಕಳೆದ 10 ದಿನಗಳಿಂದಲೇ ಬಿರುಸಿನ ಪ್ರಚಾರ ನಡೆಸಲಾಗಿದೆ. ಕೋರ್ಟ್‌ ಆವರಣಗಳಲ್ಲಿ ಟನ್‌ಗಟ್ಟಲೆ ಪ್ರಚಾರ ಸಾಮಗ್ರಿ ಬಿದ್ದಿದೆ. ಕಾರಿಡಾರ್‌ ಮತ್ತು ಆವರಣಗಳಲ್ಲಿ ಕಲಾಪದ ವೇಳೆ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮತ ಯಾಚಿಸುವುದು ಸಾಮಾನ್ಯವಾಗಿದೆ.

ಜಾತಿ ಅಸ್ತ್ರ: ‘ಒಬ್ಬಂಟಿಯಾಗ ಸಿಕ್ಕಾಗ ಜಾತಿಯ ಅಸ್ತ್ರ ಹಾಗೂ ಸಮೂಹದಲ್ಲಿದ್ದಾಗ ಅಭಿವೃದ್ಧಿಯ ಮಂತ್ರ ಪಠಿಸುತ್ತಿರುವ ಅಧ್ಯಕ್ಷೀಯ ಅಭ್ಯರ್ಥಿಗಳು ಕನಿಷ್ಠ ₹ 1 ಕೋಟಿಯಿಂದ ಗರಿಷ್ಠ ₹ 3 ಕೋಟಿವರೆಗೆ ಖರ್ಚು ಮಾಡಿದ್ದಾರೆ’ ಎಂದು ಅಂದಾಜಿಸಲಾಗಿದೆ.

ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಹುದ್ದೆಗೆ ಸ್ಪರ್ಧಿಸಿರುವ ಒಬ್ಬೊಬ್ಬ ಅಭ್ಯರ್ಥಿಗಳ ಬೆನ್ನಹಿಂದೆ ಏನಿಲ್ಲವೆಂದೂ 200 ರಿಂದ 300 ಬೆಂಬಲಿಗ ವಕೀಲರು ಕಾರ್ಯಕರ್ತರಾಗಿ ಮತ ಪ್ರಚಾರ ನಡೆಸಿದ್ದಾರೆ.

ಆನೇಕಲ್‌, ದೊಡ್ಡಬಳ್ಳಾಪುರ, ನೆಲಮಂಗಲ, ಕನಕಪುರ, ಹೊಸಕೋಟೆ, ದೇವನಹಳ್ಳಿ ವಕೀಲರು ಬೆಂಗಳೂರು ವಕೀಲರ ಸಂಘದ ಸದಸ್ಯರಿದ್ದಾರೆ. ಮತ್ತೂ ಕೆಲವರು, ‘ಬಾಡಿಗೆ ಜನರನ್ನೂ ಕರೆತಂದು ಕೋಟು ಹಾಕಿಸಿ ಪ್ರಚಾರ ನಡೆಸುತ್ತಿದ್ದಾರೆ’ ಎಂಬ ಆರೋಪಗಳೂ ಕೇಳಿ ಬಂದಿವೆ.

‘ಹಾಸನ, ಮಂಡ್ಯ, ಕೋಲಾರ, ಮೈಸೂರು ನಗರಗಳಲ್ಲೂ ಸದಸ್ಯ ವಕೀಲರಿದ್ದು ಅಭ್ಯರ್ಥಿಗಳು ಅವರನ್ನು ತಮ್ಮದೇ ಖರ್ಚಿನಲ್ಲಿ ಕರೆತರುವ ಜವಾಬ್ದಾರಿ ಹೊತ್ತಿದ್ದಾರೆ’ ಎಂದು ಹೇಳಲಾಗಿದೆ.

ಪ್ರಮುಖ ಅಭ್ಯರ್ಥಿಗಳು: ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾಗಿ ಹಾಲಿ ಅಧ್ಯಕ್ಷ ಎಚ್‌.ಸಿ.ಶಿವರಾಮು, ಮಾಜಿ ಕಾರ್ಯದರ್ಶಿಗಳಾದ ಎ.ಪಿ.ರಂಗನಾಥ್‌ ಹಾಗೂ ಆರ್.ರಾಜಣ್ಣ, ರಾಜ್ಯ ವಕೀಲರ ಪರಿಷತ್ತಿನ ಸದಸ್ಯರೂ ಆದ ಸಿ.ಆರ್. ಗೋಪಾಲಸ್ವಾಮಿ ಕಣದಲ್ಲಿರುವ ಪ್ರಮುಖರು.

ಕಾರ್ಯದರ್ಶಿ ಸ್ಥಾನಕ್ಕೆ ಹಾಲಿ ಕಾರ್ಯದರ್ಶಿ ಪುಟ್ಟೇಗೌಡ, ಹಾಲಿ ಖಜಾಂಚಿ ಎಚ್‌.ವಿ.ಪ್ರವೀಣ್‌ ಗೌಡ, ಟಿ.ಜಿ.ರವಿ, ಬಿ.ಎಸ್‌.ರಾಜಶೇಖರ್, ಗಂಗಾಧರಯ್ಯ ಕಣದಲ್ಲಿರುವ ಪ್ರಮುಖರೆನಿಸಿದ್ದಾರೆ.

ಚುನಾವಣೆ: ಎಲ್ಲಿ? ಹೇಗೆ? ಮತದಾರರೆಷ್ಟು?

ಏಷ್ಯಾದಲ್ಲೇ ಅತಿದೊಡ್ಡ ವಕೀಲರ ಸಂಘ ಎನಿಸಿರುವ ‘ಬೆಂಗಳೂರು ವಕೀಲರ ಸಂಘ’ದ (ಎಎಬಿ) ಪದಾಧಿಕಾರಿಗಳ ಸ್ಥಾನಕ್ಕೆ ಇದೇ 21ರಂದು ಚುನಾವಣೆ ನಡೆಯಲಿದೆ.

ನಗರದ ಸಿಟಿ ಸಿವಿಲ್‌ ಕೋರ್ಟ್‌ನ ವಾಹನ ನಿಲ್ದಾಣದ ಆವರಣದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮತದಾನ ನಡೆಯಲಿದೆ. ಅಂದೇ ಸಂಜೆ 4 ಗಂಟೆಯಿಂದ ಮತ ಎಣಿಕೆಯೂ ನಡೆದು ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.

ಒಟ್ಟು 14,682 ಮತದಾರರನ್ನು ಹೊಂದಿರುವ ಸಂಘದ ನಾಲ್ಕು ಘಟಕಗಳಾದ ಹೈಕೋರ್ಟ್‌, ಸಿಟಿ ಸಿವಿಲ್‌ ಕೋರ್ಟ್‌, ಮ್ಯಾಜಿಸ್ಟ್ರೇಟ್‌ ಹಾಗೂ ಮೇಯೊ ಹಾಲ್‌ ಕೋರ್ಟ್‌ಗಳ ಗೌರ್ನಿಂಗ್‌ ಕೌನ್ಸಿಲ್‌ ಪದಾಧಿಕಾರಗಳ ಸ್ಥಾನಕ್ಕೂ ಇದೇ ವೇಳೆ ಮತದಾನ ನಡೆಯಲಿದೆ.

ಹೈಕೋರ್ಟ್‌ ಘಟಕದಲ್ಲಿ 3,119 ಮತದಾರರು, ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ 8,220, ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ 2,422 ಹಾಗೂ ಮೇಯೊ ಹಾಲ್‌ ಕೋರ್ಟ್‌ನಲ್ಲಿ 921 ಮತದಾರ ವಕೀಲರಿದ್ದಾರೆ.

ಸಿಟಿ ಸಿವಿಲ್ ಕೋರ್ಟ್‌ ಗೌರ್ನಿಂಗ್‌ ಕೌನ್ಸಿಲ್‌ಗೆ ಬ್ಯಾಲೆಟ್ ಪೇಪರ್‌ ಬಳಸಲಾಗುತ್ತದೆ. ಉಳಿದ ಮೂರೂ ಘಟಕಗಳ ಮತದಾನಕ್ಕೆ ಇವಿಎಂಗಳನ್ನು ಬಳಸಲಾಗುತ್ತಿದೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಒಟ್ಟು 10 ಜನ ಅಭ್ಯರ್ಥಿಗಳು ಕಣದಲ್ಲಿದ್ದರೆ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ 7 ಮತ್ತು ಖಜಾಂಚಿ ಸ್ಥಾನಕ್ಕೆ 13 ಜನ ಸೆಣಸಾಟ ನಡೆಸಿದ್ದಾರೆ.

ಹೈಕೋರ್ಟ್‌ ಗೌರ್ನಿಂಗ್ ಕೌನ್ಸಿಲ್‌ಗೆ 7 ಜನ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕಿದ್ದು ಕಣದಲ್ಲಿ 28 ಜನ ಇದ್ದಾರೆ. ಇವರಲ್ಲಿ ಎಚ್‌.ಆರ್‌.ಅನಿತಾ ಒಬ್ಬರೇ ಮಹಿಳಾ ಅಭ್ಯರ್ಥಿ.

ಸಿಟಿ ಸಿವಿಲ್‌ ಕೋರ್ಟ್‌ಗೆ 12 ಜನರನ್ನು ಆಯ್ಕೆ ಮಾಡಬೇಕಿದ್ದು ಕಣದಲ್ಲಿ 78 ಅಭ್ಯರ್ಥಿಗಳಿದ್ದಾರೆ. ಇವರಲ್ಲಿ 11 ಮಹಿಳಾ ಅಭ್ಯರ್ಥಿಗಳು.

ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ 5 ಜನರನ್ನು ಆಯ್ಕೆ ಮಾಡಬೇಕಿದ್ದು ಕಣದಲ್ಲಿ 18 ಜನ ಇದ್ದಾರೆ. ಇವರಲ್ಲಿ ಮೂವರು ಮಹಿಳಾ ಅಭ್ಯರ್ಥಿಗಳಿದ್ದಾರೆ.

ಮೇಯೊ ಹಾಲ್‌ ಘಟಕಕ್ಕೆ 5 ಜನರನ್ನು ಆಯ್ಕೆ ಮಾಡಬೇಕಿದ್ದು 19 ಜನ ಸ್ಪರ್ಧಿಗಳಿದ್ದಾರೆ. ಇವರಲ್ಲಿ ಯಾರೂ ಮಹಿಳಾ ಅಭ್ಯರ್ಥಿಗಳಿಲ್ಲ.

‘ಎಲ್ಲ ಮತದಾರರಿಗೂ ಸ್ಮಾರ್ಟ್‌ ಕಾರ್ಡ್‌ ನೀಡಲಾಗಿದೆ. ಸ್ಮಾರ್ಟ್‌ ಕಾರ್ಡ್‌ ಇದ್ದವರಿಗೆ ಮಾತ್ರ ಮತದಾನ ಕೇಂದ್ರಕ್ಕೆ ಪ್ರವೇಶ. ಸ್ಮಾರ್ಟ್‌ ಕಾರ್ಡ್‌ಗಳ ಜೆರಾಕ್ಸ್‌ ಅಥವಾ ಸ್ಕ್ಯಾನ್‌ ಪ್ರತಿಗಳಿಗೆ ಅವಕಾಶವಿಲ್ಲ’ ಎಂದು ಚುನಾವಣಾ ಅಧಿಕಾರಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಜಿ.ಶಿವಣ್ಣ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry