19 ವರ್ಷದೊಳಗಿನವರ ವಿಶ್ವಕಪ್: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಜಯ

7
ನಾಲ್ಕು ವಿಕೆಟ್‌ ಕಬಳಿಸಿದ ಅನುಕೂಲ್‌ ರಾಯ್‌

19 ವರ್ಷದೊಳಗಿನವರ ವಿಶ್ವಕಪ್: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಜಯ

Published:
Updated:
19 ವರ್ಷದೊಳಗಿನವರ ವಿಶ್ವಕಪ್: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಜಯ

ಮೌಂಟ್‌ ಮೌಂಗನೂಯಿ, ನ್ಯೂಜಿಲೆಂಡ್‌: ಅಮೋಘ ಆಟದ ಮೂಲಕ ಜಿಂಬಾಬ್ವೆ ವಿರುದ್ಧ 10 ವಿಕೆಟ್‌ಗಳ ಜಯ ಸಾಧಿಸಿದ ಭಾರತ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಲೀಗ್ ಹಂತವನ್ನು ಅಜೇಯವಾಗಿ ಪೂರ್ಣಗೊಳಿಸಿತು.

ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಆಸ್ಟ್ರೇಲಿಯಾ ಮತ್ತು ಪಪುವಾ ನ್ಯೂಗಿನಿ ತಂಡಗಳ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ಶುಕ್ರವಾರ ಜಿಂಬಾಬ್ವೆ ವಿರುದ್ಧ ಆಧಿಪತ್ಯ ಸಾಧಿಸಿತು. ಎಡಗೈ ಸ್ಪಿನ್ನರ್‌ಗಳಾದ ಅನುಕೂಲ್ ರಾಯ್‌, ಅಭಿಷೇಕ್‌ ಶರ್ಮಾ ಮತ್ತು ಎಡಗೈ ಮಧ್ಯಮ ವೇಗಿ ಆರ್ಷದೀಪ್ ಸಿಂಗ್ ದಾಳಿಗೆ ನಲುಗಿದ ಜಿಂಬಾಬ್ವೆ 154 ರನ್‌ಗಳಿಗೆ ಆಲೌಟಾಯಿತು.

ಗುರಿ ಬೆನ್ನತ್ತಿದ ಭಾರತ 21.4 ಓವರ್‌ಗಳಲ್ಲಿ ವಿಕೆಟ್‌ ಕಳೆದುಕೊಳ್ಳದೆ ಜಯದ ನಗೆ ಬೀರಿತು. ಹಾರ್ವಿಕ್ ದೇಸಾಯಿ ಮತ್ತು ಶುಭ್‌ಮನ್ ಗಿಲ್‌ ಅವರ ವಿಕೆಟ್ ಕಬಳಿಸಲು ಜಿಂಬಾಬ್ವೆ ಬೌಲರ್‌ಗಳು ನಡೆಸಿದ ಶ್ರಮ ವ್ಯರ್ಥವಾಯಿತು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಗಿಲ್‌ 59 ಎಸೆತಗಳಲ್ಲಿ 90 ರನ್‌ (1 ಸಿಕ್ಸರ್‌, 14 ಬೌಂಡರಿ) ಗಳಿಸಿದರೆ ಅವರಿಗೆ ದೇಸಾಯಿ ತಾಳ್ಮೆಯಿಂದ ಸಹಕಾರ ನೀಡಿದರು. 73 ಎಸೆತಗಳಲ್ಲಿ 56 ರನ್ ಗಳಿಸಿದ ದೇಸಾಯಿ ಒಂದು ಸಿಕ್ಸರ್ ಮತ್ತು ಎಂಟು ಬೌಂಡರಿ ಸಿಡಿಸಿದರು.

ಈ ಜಯದೊಂದಿಗೆ ನಿರಂತರ ಎರಡು ಬಾರಿ 10 ವಿಕೆಟ್‌ಗಳಿಂದ ಗೆದ್ದ ದಾಖಲೆಯನ್ನು ಭಾರತ ಸರಿಗಟ್ಟಿತು. 2008ರಲ್ಲಿ ಇಂಗ್ಲೆಂಡ್‌ ಈ ಸಾಧನೆ ಮಾಡಿತ್ತು.

ಟಾಸ್ ಗೆದ್ದ ಜಿಂಬಾಬ್ವೆ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಏಳು ರನ್ ಗಳಿಸುವಷ್ಟರಲ್ಲಿ ಗ್ರೆಗರಿ ಡಾಲರ್ ಔಟ್ ಆಗಿ ನಿರಾಸೆ ಮೂಡಿಸಿದರು. ತಂಡದ ಮೊತ್ತ 36 ರನ್ ಆಗುವಷ್ಟರಲ್ಲಿ ಮೈಯ್ಯರ್ ಕೂಡ ಔಟಾದರು. ಮಧೆವೆರೆ, ಶುಂಭ ಮತ್ತು ರೋಚೆ ಅವರ ಸಾಮರ್ಥ್ಯದಿಂದ ತಂಡ ಮೂರಂಕಿ ಮೊತ್ತ ದಾಟಿತು. ಆದರೆ ನಂತರ ನಿರಂತರ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು. 32ನೇ ಓವರ್‌ನಲ್ಲಿ 110ಕ್ಕೆ ಮೂರು ವಿಕೆಟ್ ಕಳೆದುಕೊಂಡಿದ್ದ ತಂಡ 44 ರನ್‌ ಸೇರಿಸುವಷ್ಡರಲ್ಲಿ ಕೊನೆಯ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತು.

ಹೊಸ ಜೋಡಿ: ಭಾರತದ ಆರಂಭಿಕ ಜೋಡಿ ಪೃಥ್ವಿ ಶಾ ಮತ್ತು ಮನ್‌ಜೋತ್ ಕಾರ್ಲಾ ಶುಕ್ರವಾರ ಕಣಕ್ಕೆ ಇಳಿಯಲಿಲ್ಲ. ಕ್ವಾರ್ಟರ್‌ ಫೈನಲ್‌ಗೆ ‘ಅಭ್ಯಾಸ’ ಮಾಡಲು ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಹಾರ್ವಿಕ್ ದೇಸಾಯಿ ಮತ್ತು ಶುಭ್‌ಮನ್ ಗಿಲ್‌ ಅವರನ್ನು ಇನಿಂಗ್ಸ್ ಆರಂಭಿಸಲು ಕಳುಹಿಸಲಾಗಿತ್ತು. ರಿಯಾಗ್ ಪರಾಗ್‌ ಬದಲಿಗೆ ತಂಡದಲ್ಲಿ ಸ್ಥಾನ ಗಳಿಸಿದ ದೇಸಾಯಿ ಯಾವುದೇ ಅಪಾಯಕ್ಕೆ ಅವಕಾಶ ನೀಡದೆ ಬ್ಯಾಟ್‌ ಬೀಸಿ ಗಮನ ಸೆಳೆದರು. ಗಿಲ್‌ ನಿರಂತರ ಎರಡನೇ ಶತಕದೊಂದಿಗೆ ಮಿಂಚಿದರು. ಸ್ಟ್ರೇಟ್ ಡ್ರೈವ್ ಮೂಲಕ ಬೌಂಡರಿ ಬಾರಿಸಿ ವಿಜಯದ ರನ್‌ ಕೂಡ ಅವರೇ ಗಳಿಸಿದರು.

‘ಪಿಚ್‌ ಬ್ಯಾಟಿಂಗ್‌ಗೆ ಪೂರಕವಾಗಿತ್ತು. ಉತ್ತಮ ನಮ್ಮಿಬ್ಬರ ಆರಂಭ ಉತ್ತಮವಾಗಿತ್ತು. ಅದನ್ನೇ ಮುಂದುವರಿಸಿ ಬೌಲರ್‌ಗಳ ಮೇಲೆ ಆಧಿಪತ್ಯ ಸ್ಥಾಪಿಸಿದೆವು’ ಎಂದು ಪಂದ್ಯದ ನಂತರ ಗಿಲ್ ಹೇಳಿದರು.

ಉಳಿದೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ಕ್ರಮವಾಗಿ ಪಪುವಾ ನ್ಯೂಗಿನಿ ಮತ್ತು ಶ್ರೀಲಂಕಾ ವಿರುದ್ಧ ಜಯ ಸಾಧಿಸಿದವು.

ಸಂಘಟಿತ ಆಟಕ್ಕೆ ಸಂದ ಜಯ

‘ತಂಡ ಸಂಘಟಿತ ಆಟವಾಡಿದೆ. ಅದಕ್ಕೆ ಸಂದ ಜಯ ಇದು. ಬೌಲರ್‌ಗಳು ಮತ್ತೊಮ್ಮೆ ಉತ್ತಮ ಸಾಮರ್ಥ್ಯ ತೋರಿದರು. ಬ್ಯಾಟ್ಸ್‌ಮನ್‌ಗಳು ಕೂಡ ಮಿಂಚಿದರು. ಇದೇ ರೀತಿಯ ಆಟವನ್ನು ಮುಂದುವರಿಸಲಿದ್ದೇವೆ’ ಎಂದು ನಾಯಕ ಪೃಥ್ವಿ ಶಾ ಹೇಳಿದರು.

‘ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಅತ್ಯುತ್ತಮ ಆಟವಾಡಲು ಕಾತರರಾಗಿದ್ದೇವೆ. ಆ ಪಂದ್ಯಕ್ಕೆ ಇನ್ನೂ ಆರು ದಿನಗಳು ಇವೆ. ಆದ್ದರಿಂದ ಚೆನ್ನಾಗಿ ಅಭ್ಯಾಸ ನಡೆಸಿ ಕಣಕ್ಕೆ ಇಳಿಯಲಿದ್ದೇವೆ’ ಎಂದು ಅವರು ಹೇಳಿದರು.

ಸಂಕ್ಷಿಪ್ತ ಸ್ಕೋರ್‌

ಜಿಂಬಾಬ್ವೆ: 48.1 ಓವರ್‌ಗಳಲ್ಲಿ 154 (ಮಧೆವೆರೆ 30, ಶುಂಭ 36, ರೋಚೆ 31; ಆರ್ಷದೀಪ್ ಸಿಂಗ್‌ 10ಕ್ಕೆ2, ಅಭಿಷೇಕ್ ಶರ್ಮಾ 22ಕ್ಕೆ2, ಅನುಕೂಲ್ ರಾಯ್‌ 20ಕ್ಕೆ4);

ಭಾರತ: 21.4 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 155 (ಹಾರ್ವಿಕ್ ದೇಸಾಯಿ 56, ಶುಭ್‌ಮನ್ ಗಿಲ್‌ 90).

ಫಲಿತಾಂಶ: ಭಾರತಕ್ಕೆ 10 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಶುಭಮನ್‌ ಗಿಲ್‌. 

ಇತರೆ ಪಂದ್ಯಗಳು

ಶ್ರೀಲಂಕಾ: 48.2 ಓವರ್‌ಗಳಲ್ಲಿ 188 (ಡ್ಯಾನಿಯಲೆ 53, ಭಂಡಾರ 37; ಶಾಹೀನ್ ಶಾ ಅಫ್ರಿದಿ 41ಕ್ಕೆ2, ಸುಲೇಮಾನ್ ಶಫ್ಕತ್‌ 29ಕ್ಕೆ3);

ಪಾಕಿಸ್ತಾನ: 43.3 ಓವರ್‌ಗಳಲ್ಲಿ 7ಕ್ಕೆ 190 (ಮಹಮ್ಮದ್ ಜೈದ್ ಆಲಂ 28, ಅಲಿ ಜೈರಬ್ ಆಸಿಫ್‌ 59, ಮಹಮ್ಮದ್ ತಾಹ 24, ಹಸನ್ ಖಾನ್‌ ಔಟಾಗದೆ 24; ರಷ್ಮಿಕಾ 47ಕ್ಕೆ3).

ಫಲಿತಾಂಶ: ಪಾಕಿಸ್ತಾನಕ್ಕೆ 3 ವಿಕೆಟ್ ಜಯ. ಪಂದ್ಯಶ್ರೇಷ್ಠ: ಅಲಿ ಜೈರಬ್‌.

ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 370 (ನೇಥನ್ ಮೆಕ್‌ಸ್ವೀನಿ 156, ಜೇಸನ್ ಸಂಘಾ 88, ಪಿ.ಉಪ್ಪಲ್‌ 61; ತೌ 42ಕ್ಕೆ2, ಕಮೀ 63ಕ್ಕೆ2, ಮೋರೀ 59ಕ್ಕೆ2, ಐಗಾ 89ಕ್ಕೆ2);

ಪಪುವಾ ನ್ಯೂಗಿನಿ: 24.5 ಓವರ್‌ಗಳಲ್ಲಿ 59 (ಜೆ.ಜೆ. ರಾಲ್‌ಸ್ಟನ್‌ 15ಕ್ಕೆ7).

ಫಲಿತಾಂಶ: ಆಸ್ಟ್ರೇಲಿಯಾಗೆ 311 ರನ್‌ಗಳ ಜಯ. ಪಂದ್ಯಶ್ರೇಷ್ಠ: ನೇಥನ್ ಮೆಕ್‌ಸ್ವೀನಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry