ಕರ್ನಾಟಕ ತಂಡಕ್ಕೆ ಗೆಲುವಿನ ಸಿಹಿ

7
ಸಂತೋಷ್‌ ಟ್ರೋಫಿ ಫುಟ್‌ಬಾಲ್‌; ಶಹಬಾಜ್‌, ಅಮೋಸ್‌ ಮಿಂಚಿನ ಆಟ

ಕರ್ನಾಟಕ ತಂಡಕ್ಕೆ ಗೆಲುವಿನ ಸಿಹಿ

Published:
Updated:
ಕರ್ನಾಟಕ ತಂಡಕ್ಕೆ ಗೆಲುವಿನ ಸಿಹಿ

ಬೆಂಗಳೂರು: ಚುರುಕು ಬಿಸಿಲನ್ನೂ ಲೆಕ್ಕಿಸದೆ ತಲೆಯ ಮೇಲೆ ಕರವಸ್ತ್ರ ಹಾಕಿಕೊಂಡು ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ತವರಿನ ಅಭಿಮಾನಿಗಳಿಗೆ ಶಹಬಾಜ್ ಖಾನ್‌ ಮತ್ತು ಅಮೋಸ್‌ ಅವರು ಭರಪೂರ ಮನರಂಜನೆ ನೀಡಿದರು.

ಇವರ ಆಟದಲ್ಲಿ ಅರಳಿದ ತಲಾ ಒಂದು ಗೋಲುಗಳ ನೆರವಿನಿಂದ ಕರ್ನಾಟಕ ತಂಡ ಸಂತೋಷ್‌ ಟ್ರೋಫಿ ದಕ್ಷಿಣ ವಲಯ ಅರ್ಹತಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡನೇ ಗೆಲುವಿನ ಸಿಹಿ ಸವಿಯಿತು.

ಅಶೋಕ ನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ‘ಎ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ವಿಘ್ನೇಶ್‌ ಗುಣಶೇಖರನ್‌ ಬಳಗ 2–0 ಗೋಲುಗಳಿಂದ ಪುದುಚೇರಿ ಸವಾಲು ಮೀರಿತು.

ಮೊದಲ ಪಂದ್ಯದಲ್ಲಿ ತೆಲಂಗಾಣವನ್ನು ಕಟ್ಟಿಹಾಕಿ ವಿಶ್ವಾಸದಿಂದ ಬೀಗುತ್ತಿದ್ದ ಆತಿಥೇಯ ಆಟಗಾರರು ಶುಕ್ರವಾರವೂ ಪ್ರಾಬಲ್ಯ ಮೆರೆದರು.

ಶುರುವಿನಿಂದಲೇ ಎದುರಾಳಿಗಳ ರಕ್ಷಣಾಕೋಟೆ ಭೇದಿಸುವ ತಂತ್ರ ಅನುಸರಿಸಿದ ಆತಿಥೇಯರಿಗೆ 12ನೇ ನಿಮಿಷದಲ್ಲಿ ಖಾತೆ ತೆರೆಯುವ ಅವಕಾಶ ಸಿಕ್ಕಿತ್ತು. ಲಿಟನ್‌ ಶಿಲ್‌ ಬಾರಿಸಿದ ಚೆಂಡನ್ನು ತಲೆತಾಗಿಸಿ ಗುರಿಮುಟ್ಟಿಸುವ ರಾಜೇಶ್  ಪ್ರಯತ್ನ ವಿಫಲವಾಯಿತು. ಹೀಗಿದ್ದರೂ ಆಟಗಾರರು ಎದೆಗುಂದಲಿಲ್ಲ. ಛಲದಿಂದ ಹೋರಾಡಿದ ವಿಘ್ನೇಶ್‌ ಪಡೆ ಆ ನಂತರದ 9 ನಿಮಿಷಗಳಲ್ಲಿ ಎರಡು ಬಾರಿ ಗೋಲು ಗಳಿಸುವ ಅವಕಾಶ ಸೃಷ್ಟಿಸಿಕೊಂಡಿತ್ತು. ಮಿಡ್‌ಫೀಲ್ಡರ್‌ ಲಿಯೊನ್‌ ಅಗಸ್ಟೀನ್‌ ಅವುಗಳನ್ನು ಹಾಳು ಮಾಡಿದರು.

16ನೇ ನಿಮಿಷದಲ್ಲಿ ಲಿಯೊನ್‌, ಎದುರಾಳಿ ಆವರಣದ ಬಲತುದಿಯಿಂದ ಒದ್ದ ಚೆಂಡು ಗೋಲುಪೆಟ್ಟಿಗೆಯ ಮೇಲಿನಿಂದ ಸಾಗಿ ಅಂಗಳದ ಆಚೆ ಬಿತ್ತು. 21ನೇ ನಿಮಿಷದಲ್ಲಿ ಅವರು ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ಆವರಣ ಪ್ರವೇಶಿಸಿದಾಗ ಅದನ್ನು ಗುರಿ ಮುಟ್ಟಿಸುತ್ತಾರೆ ಎಂದೇ ಭಾವಿಸಲಾಗಿತ್ತು. ಲಿಯೊನ್‌ ಒದ್ದ ಚೆಂಡನ್ನು ಪುದುಚೇರಿ ಗೋಲ್‌ಕೀಪರ್‌ ದಿವಾಕರ್‌ ಆಕರ್ಷಕ ರೀತಿಯಲ್ಲಿ ತಡೆದರು.

22 ಮತ್ತು 24ನೇ ನಿಮಿಷಗಳಲ್ಲಿ ಲಿಟನ್‌ ಶಿಲ್‌, ಆ ನಂತರ ರಾಜೇಶ್‌ ಮತ್ತು ಸುನಿಲ್‌ ಕುಮಾರ್‌ ಸಿಕ್ಕ ಅವಕಾಶಗಳ ಲಾಭ ಎತ್ತಿಕೊಳ್ಳಲು ವಿಫಲರಾದರು.

39ನೇ ನಿಮಿಷದಲ್ಲಿ ನಾಯಕ ವಿಘ್ನೇಶ್‌ ತಮ್ಮತ್ತ ಒದ್ದು ಕಳುಹಿಸಿದ ಚೆಂಡನ್ನು ಲಿಟನ್‌ ಚಾಕಚಕ್ಯತೆಯಿಂದ ಗುರಿ ತಲುಪಿಸಿದಾಗ ಕ್ರೀಡಾಂಗಣದಲ್ಲಿ ಸಂಭ್ರಮ ಗರಿಗೆದರಿತ್ತು. ರೆಫರಿ ಅದು ‘ಫೌಲ್‌’ ಎಂದು ತೀರ್ಪು ನೀಡಿದಾಗ ಅಭಿಮಾನಿಗಳು ನಿರಾಸೆಯಿಂದ ತಲೆ ಮೇಲೆ ಕೈಹೊತ್ತು ಕುಳಿತರು. ಹೀಗಾಗಿ ಮೊದಲರ್ಧ ಗೋಲುರಹಿತವಾಯಿತು.

ದ್ವಿತೀಯಾರ್ಧದಲ್ಲಿ ಭಿನ್ನ ರಣನೀತಿ ಹೆಣೆದಿದ್ದ ಕರ್ನಾಟಕ ಮತ್ತಷ್ಟು ಅವಕಾಶಗಳನ್ನು ಸೃಷ್ಟಿಸಿಕೊಂಡಿತ್ತು. ಆದರೆ ಯಶಸ್ಸು ಮಾತ್ರ ಸಿಗಲಿಲ್ಲ.

ಶಹಬಾಜ್‌ ಮೋಡಿ: 64ನೇ ನಿಮಿಷದಲ್ಲಿ ರಕ್ಷಣಾ ವಿಭಾಗದ ಆಟಗಾರ ಶಹಬಾಜ್‌ ಖಾನ್‌ ಮೋಡಿ ಮಾಡಿದರು. ಸಹ ಆಟಗಾರನಿಂದ ಚೆಂಡು ಪಡೆದು ತಮ್ಮತ್ತ ನುಗ್ಗಿ ಬರುತ್ತಿದ್ದ ಅವರನ್ನು ತಡೆಯಲು ಪುದುಚೇರಿ ಗೋಲ್‌ಕೀಪರ್‌ ದಿವಾಕರ್‌ ಧಾವಿಸಿದರು.  ಆದರೆ ಚುರುಕಾಗಿ ಆಡಿದ ಶಹಬಾಜ್‌ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದರು.

ಈ ಹಂತದಲ್ಲಿ ಕರ್ನಾಟಕದ ಕೋಚ್‌ ಮುರಳೀಧರನ್‌, ಲಿಟನ್‌ ಬದಲು ಅಮೋಸ್‌ ಅವರನ್ನು ಕಣಕ್ಕಿಳಿಸಿದರು. ಅವರ ಈ ನಿರ್ಧಾರ ಫಲ ನೀಡಿತು. 89ನೇ ನಿಮಿಷದಲ್ಲಿ ಪುದುಚೇರಿ ರಕ್ಷಣಾಕೋಟೆ ಭೇದಿಸಿದ ಅಮೋಸ್‌ ತವರಿನ ಆಟಗಾರರು ಖುಷಿಯ ಕಡಲಲ್ಲಿ ತೇಲುವಂತೆ ಮಾಡಿದರು.

**

ಪಂದ್ಯ ವೀಕ್ಷಿಸಿದ ನಟ ಯಶ್‌

ನಟ ಯಶ್‌, ಶುಕ್ರವಾರ ಕರ್ನಾಟಕ ಮತ್ತು ಪುದುಚೇರಿ ನಡುವಣ ಪಂದ್ಯ ವೀಕ್ಷಿಸಿದರು. ಪಂದ್ಯಕ್ಕೂ ಮುನ್ನ ಆಟಗಾರರನ್ನು ಭೇಟಿ ಮಾಡಿ ಶುಭ ಕೋರಿದ ಅವರು ನಂತರ ಗಣ್ಯರ ಗ್ಯಾಲರಿಯಲ್ಲಿ ಕುಳಿತು ಕೆಲ ಕಾಲ ಪಂದ್ಯ ನೋಡಿ ಆಟಗಾರರನ್ನು ಹುರಿದುಂಬಿಸಿದರು.

*

ಸರ್ವಿಸಸ್‌ಗೆ ಜಯ

‘ಎ’ ಗುಂಪಿನ ಇನ್ನೊಂದು ಪಂದ್ಯದಲ್ಲಿ ಸರ್ವಿಸಸ್‌ 2–1 ಗೋಲುಗಳಿಂದ ತೆಲಂಗಾಣವನ್ನು ಮಣಿಸಿತು.

ಸರ್ವಿಸಸ್‌ ಪರ ನಾನಿಶ್‌ ಸಿಂಗ್‌ 25ನೇ ನಿಮಿಷದಲ್ಲಿ ಗೋಲು ಬಾರಿಸಿದರು. 59ನೇ ನಿಮಿಷದಲ್ಲಿ ತೆಲಂಗಾಣದ ಕುಮಾರ್‌ ಧನಾಲ ಚೆಂಡನ್ನು ಗುರಿ ಮುಟ್ಟಿಸಿ 1–1ರ ಸಮಬಲಕ್ಕೆ ಕಾರಣರಾದರು.

89ನೇ ನಿಮಿಷದಲ್ಲಿ ಲಾಯಿಶ್ರಮ್‌ ಹೇರೊಜಿತ್‌ ಸಿಂಗ್‌ ಗೋಲು ತಂದಿತ್ತು ಸರ್ವಿಸಸ್‌ ಸಂಭ್ರಮಕ್ಕೆ ಕಾರಣರಾದರು.

**

ನಮ್ಮವರ ಆಟ ಖುಷಿ ನೀಡಿದೆ. ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಿದ್ದರೆ ಕನಿಷ್ಠ 10 ಗೋಲು ಗಳಿಸಬಹುದಿತ್ತು

–ಪಿ.ಮುರಳೀಧರನ್‌, ಕರ್ನಾಟಕ ತಂಡದ ಕೋಚ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry