ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ

7

ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ

Published:
Updated:
ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ

ಬೆಂಗಳೂರು: ಬೆಳ್ಳಂದೂರು ಕೆರೆಯ ಇಬ್ಬಲೂರು ಮತ್ತು ಈಜಿಪುರ ಕಡೆಯ ದಡದಲ್ಲಿನ ಹುಲ್ಲಿಗೆ ಶುಕ್ರವಾರ ಬೆಂಕಿ ಹತ್ತಿದೆ. ಆಳೆತ್ತರ ಹಬ್ಬುತ್ತಿದ್ದ ಬೆಂಕಿಯ ಜ್ವಾಲೆ ಹಾಗೂ ಇದರಿಂದ ಉಂಟಾದ ದಟ್ಟ ಹೊಗೆಯನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದರು.

ಅಗ್ನಿಶಾಮಕ ದಳದ 70 ಸಿಬ್ಬಂದಿ ಹಾಗೂ ಸೇನಾ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬೆಳಿಗ್ಗೆ 9 ಗಂಟೆ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ರಾತ್ರಿ 10 ಗಂಟೆವರೆಗೂ ಪೂರ್ತಿ ನಿಯಂತ್ರಣಕ್ಕೆ ಬಂದಿಲ್ಲ.

‘ಬೆಂಕಿ ನಂದಿಸಲು 12 ಅಗ್ನಿಶಾಮಕ ವಾಹನಗಳನ್ನು ಬಳಸಲಾಯಿತು. ಸಂಜೆ ವೇಳೆ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳ್ಳಂದೂರು ಕೆರೆಯನ್ನು ಸಂಪೂರ್ಣ ಸ್ವಚ್ಛ ಮಾಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅನೇಕ ಬಾರಿ ತಾಕೀತು ಮಾಡಿದೆ. ಆದರೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ), ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ಕೆಎಲ್‌ಸಿಡಿಎ), ಬಿಡಿಎ ಹಾಗೂ ಬಿಬಿಎಂಪಿ ನಿರ್ಲಕ್ಷ್ಯ ವಹಿಸಿವೆ’ ಎಂದು ಸ್ಥಳೀಯರು ದೂರಿದರು.

‘ಕೆರೆಯನ್ನು ಮಾಲಿನ್ಯ ಮುಕ್ತಗೊಳಿಸುವ ಕಾರ್ಯ ಇನ್ನಷ್ಟು ವೇಗವಾಗಿ ನಡೆಯಬೇಕು’ ಎಂದು ಅವರು ಒತ್ತಾಯಿಸಿದರು.

ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ‘ಕೆರೆ ಅಂಗಳದಲ್ಲಿನ ಹುಲ್ಲುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಸಾಧ್ಯತೆ ಇದೆ. ಅಲ್ಲದೆ, ಕೆರೆ ಅಂಗಳದಲ್ಲಿ ಶೇಖರಣೆಯಾಗಿರುವ ನೀರಿನಲ್ಲಿ ರಾಸಾಯನಿಕ ಪ್ರಮಾಣ ಹೆಚ್ಚಿದ್ದು, ಅದರ ಪರಿಣಾಮದಿಂದಲೂ ಬೆಂಕಿ ಹತ್ತಿರುವ ಸಾಧ್ಯತೆ ಇದೆ. ಹುಲ್ಲಿನ ರಾಶಿ ಒಣಗಿದ್ದರಿಂದ ಬೃಹತ್‌ ಪ್ರಮಾಣದಲ್ಲಿ ಬೆಂಕಿ ಆವರಿಸಿದೆ’ ಎಂದು ಅವರು ವಿವರಿಸಿದರು.

ಆದರೆ, ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ ರಂಗರಾವ್‌ ಇದನ್ನು ಅಲ್ಲಗಳೆದಿದ್ದಾರೆ. ‘ರಕ್ಷಣಾ ಇಲಾಖೆಗೆ ಸೇರಿದ ಜಾಗದಲ್ಲಿ ಬೆಂಕಿ ಹತ್ತಿದೆ. ಇದು ಕೆರೆಯಲ್ಲಿನ ರಾಸಾಯನಿಕಗಳಿಂದ ಉಂಟಾದ ಬೆಂಕಿಯಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಕೆರೆಯ ನೀರಿನಲ್ಲಿ ಬೆಂಕಿ ಕಾಣಿಸಿಕೊಂಡಿಲ್ಲ. ಒಣಗಿದ ಹುಲ್ಲುಗಳಿಗೆ ಬೆಂಕಿ ಹತ್ತಿದೆ’ ಎಂದು ಕೆಎಲ್‌ಸಿಡಿಎ ಮುಖ್ಯ ಕಾರ್ಯನಿರ್ವಣಾಧಿಕಾರಿ ಸೀಮಾ ಗರ್ಗ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಈ ರೀತಿಯ ಅವಘಡ ಮತ್ತೆ ಮರುಕಳಿಸದಂತೆ ಕೆರೆಯ ಸುತ್ತಲು ಕಾವಲು ಹಾಗೂ ಗಸ್ತು ವ್ಯವಸ್ಥೆಗೆ ಅಗತ್ಯ ಸಿಬ್ಬಂದಿಯನ್ನು ‌ನಿಯೋಜಿಸಿದ್ದೇವೆ’ ಎಂದರು.

ಯಾವಾಗೆಲ್ಲ ಬೆಂಕಿ ಕಾಣಿಸಿಕೊಂಡಿತ್ತು: ಮೂರು ವರ್ಷಗಳ ಹಿಂದೊಮ್ಮೆ ಬೆಳ್ಳಂದೂರು ಕೆರೆಯಲ್ಲಿ ವಿಷಪೂರಿತ ನೊರೆ ಹಾಗೂ ದಟ್ಟ ಬೆಂಕಿ ಕಾಣಿಸಿಕೊಂಡಿತ್ತು. ಆ ಬಳಿಕ 2016ರ ಫೆಬ್ರುವರಿಯಲ್ಲಿ ನೊರೆ ಸಮಸ್ಯೆಯಿಂದ ಕೆರೆಗೆ ಬೆಂಕಿ ಹತ್ತಿಕೊಂಡಿತ್ತು. ಇದು ರಾಷ್ಟ್ರಮಟ್ಟದಲ್ಲಿ ಬಾರಿ ಸುದ್ದಿಯಾಗಿತ್ತು. ಕೆರೆಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡದ ಬಗ್ಗೆ ಹಸಿರು ನ್ಯಾಯ ಮಂಡಳಿ ಬಿಡಿಎ, ಬಿಬಿಎಂಪಿ, ಕೆಎಸ್‌ಪಿಸಿಬಿ ಹಾಗೂ ಕೆಎಲ್‌ಸಿಡಿಎ ಗಳನ್ನು ತರಾಟೆಗೆ ತೆಗೆದುಕೊಂಡಿತ್ತು.

ನ್ಯಾಯಮಂಡಳಿ ಎಚ್ಚರಿಕೆ ನೀಡಿದ ಬಳಿಕ ಈ ಕೆರೆಯ ಕಳೆಯನ್ನು ಹೊರಗೆ ತೆಗೆಯಲಾಗಿದೆ. ಕೆರೆಯ ಸುತ್ತಲೂ ಬೇಲಿ ಹಾಕಲಾಗಿದೆ. ನೀರನ್ನು ಶುದ್ಧೀಕರಿಸಲು ಎರೇಟರ್‌ ಗಳನ್ನು ಅಳವಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry