ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ವಿನ್ ಅವರನ್ನು ಸೆಳೆದುಕೊಳ್ಳಲು ಪ್ರಯತ್ನಿಸುತ್ತೇವೆ: ದೋನಿ

ನಮ್ಮ ತಂಡಕ್ಕೆ ಸ್ಪಿನ್ನರ್ ಅಶ್ವಿನ್ ಬೇಕು
Last Updated 19 ಜನವರಿ 2018, 19:30 IST
ಅಕ್ಷರ ಗಾತ್ರ

ಚೆನ್ನೈ: ‘ಮುಂಬರುವ ಆಟಗಾರರ ಹರಾಜಿನಲ್ಲಿ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್ ಅವರನ್ನು ತಂಡಕ್ಕೆ ಸೆಳೆದುಕೊಳ್ಳಲು ಫ್ರಾಂಚೈಸ್‌ ಪ್ರಯತ್ನಿಸಲಿದೆ’ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ ತಿಳಿಸಿದ್ದಾರೆ.

ಸೂ‍ಪರ್‌ ಕಿಂಗ್ಸ್‌ ತಂಡ ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ದೋನಿ, ಸುರೇಶ್‌ ರೈನಾ ಮತ್ತು ರವೀಂದ್ರ ಜಡೇಜ ಅವರನ್ನು ತಂಡದಲ್ಲೇ ಉಳಿಸಿಕೊಂಡಿತ್ತು. ಆದರೆ ಅಶ್ವಿನ್‌ ಅವರನ್ನು ಕೈಬಿಟ್ಟಿತ್ತು.

‘ಅಶ್ವಿನ್‌ ಸ್ಥಳೀಯ ಆಟಗಾರ. ಜನವರಿ 27 ಮತ್ತು 28ರಂದು ಬೆಂಗಳೂರಿನಲ್ಲಿ ನಡೆಯುವ ಹರಾಜಿನಲ್ಲಿ ಅವರನ್ನು ಕೊಂಡುಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ನಮ್ಮ ಬಳಿ ಇನ್ನು ಎರಡು ’ರೈಟ್‌ ಟು ಮ್ಯಾಚ್‌ ಕಾರ್ಡ್‌’ ಇದೆ. ಇದನ್ನು ಬಳಸಿ ಅವರನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳುವುದು ಕಷ್ಟ. ಆದರೆ ಹರಾಜಿನಲ್ಲಿ ಅವರ ಮೇಲೆ ಖಂಡಿತವಾಗಿಯೂ ಬಿಡ್‌ ಮಾಡುತ್ತೇವೆ’ ಎಂದು ದೋನಿ ನುಡಿದಿದ್ದಾರೆ.

‘ರೈಟ್‌ ಟು ಮ್ಯಾಚ್‌ ಕಾರ್ಡ್‌ ಬಳಸಿ ಯಾರನ್ನು ಸೆಳೆದುಕೊಳ್ಳುತ್ತೇವೆ ಎಂಬುದನ್ನು ಈಗಲೇ ಹೇಳುವುದು ಅಸಾಧ್ಯ. ಹಿಂದಿನ ಎರಡು ವರ್ಷ ಸಿಎಸ್‌ಕೆ ಐಪಿಎಲ್‌ನಲ್ಲಿ ಆಡಿಲ್ಲ. ಹೀಗಿದ್ದರೂ ಅಭಿಮಾನಿಗಳ ಪ್ರೀತಿ ಮಾತ್ರ ಎಳ್ಳಷ್ಟು ಕಡಿಮೆಯಾಗಿಲ್ಲ. ತಂಡ ಮತ್ತೆ ಐಪಿಎಲ್‌ನಲ್ಲಿ ಆಡುತ್ತಿರುವುದರಿಂದ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳು ಗರಿಗೆದರಿದೆ. ಅವರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.

‘ಚೆನ್ನೈ ನನ್ನ ಎರಡನೇ ತವರು. ಇಲ್ಲಿನ ಜನರ ಪ್ರೀತಿಗೆ ಋಣಿಯಾಗಿದ್ದೇನೆ. ಕೆಲ ಫ್ರಾಂಚೈಸ್‌ಗಳು ನನ್ನನ್ನು ಭೇಟಿ ಮಾಡಿ ತಮ್ಮ ತಂಡದಲ್ಲಿ ಆಡುವಂತೆ ಕೇಳಿಕೊಂಡಿದ್ದವು. ಸಿಎಸ್‌ಕೆ ಪರ ಆಡುವುದು ನನ್ನ ಮೊದಲ ಆದ್ಯತೆ. ಹೀಗಾಗಿ ಅವರ ಮನವಿಯನ್ನು ತಿರಸ್ಕರಿದ್ದೇನೆ’ ಎಂದರು.

ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಸೋತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಹಿ ‘ಪಂದ್ಯದಲ್ಲಿ ಸೋಲು ಗೆಲುವು ಇದ್ದಿದ್ದೆ. ಸೋಲಿನಲ್ಲೂ ನಾವು ಒಳ್ಳೆಯ ಅಂಶಗಳನ್ನು ಗುರುತಿಸಬೇಕು. ದಕ್ಷಿಣ ಆಫ್ರಿಕಾ ವಿರುದ್ಧ ನಮ್ಮ ಬೌಲರ್‌ಗಳು ಶ್ರೇಷ್ಠ ಸಾಮರ್ಥ್ಯ ತೋರಿದ್ದಾರೆ. ಟೆಸ್ಟ್‌ ಪಂದ್ಯವನ್ನು ಗೆಲ್ಲಬೇಕಾದರೆ  ಎದುರಾಳಿ ತಂಡದ 20 ವಿಕೆಟ್‌ಗಳನ್ನೂ ಉರುಳಿಸಬೇಕು. ನಮ್ಮ ಬೌಲರ್‌ಗಳು ಈ ಕೆಲಸ ಮಾಡಿತೋರಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡವನ್ನು ಅದರದ್ದೇ ನೆಲದಲ್ಲಿ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಆಲೌಟ್‌ ಮಾಡುವುದು ಸುಲಭದ ಮಾತಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT