ರೈಲಿನಲ್ಲಿ 19 ಕೆ.ಜಿ ಚಿನ್ನ ಕಳವು!

7

ರೈಲಿನಲ್ಲಿ 19 ಕೆ.ಜಿ ಚಿನ್ನ ಕಳವು!

Published:
Updated:

ಬೆಂಗಳೂರು: ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಕುರ್ಲಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ದುಷ್ಕರ್ಮಿಗಳು ಉದ್ಯಮಿಯೊಬ್ಬರ 19 ಕೆ.ಜಿ 239 ಗ್ರಾಂ ಚಿನ್ನ ದೋಚಿದ್ದಾರೆ.

ಈ ಸಂಬಂಧ ಮುಂಬೈನ ‘ಐ–3 ಗಿಫ್ಟಿಂಗ್ ಪ್ರೈವೇಟ್ ಸೊಲ್ಯುಷನ್’ ಕಂಪನಿ ಮಾಲೀಕ ರಿಜಾಯ್ ಸಿ.ರಾಯ್ ಅವರು ಗುರುವಾರ ರಾತ್ರಿ ಕಂಟೋನ್ಮೆಂಟ್ ರೈಲ್ವೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

‘ನಮ್ಮದು ಚಿನ್ನದ ಗಟ್ಟಿಗಳನ್ನು ಗ್ರಾಹಕರ ಇಚ್ಛೆಗೆ ತಕ್ಕಂತೆ ವಿನ್ಯಾಸ ಮಾಡಿಕೊಡುವ ಕಂಪನಿ. 2013ರಲ್ಲಿ ಸ್ನೇಹಿತರ ಸಹಭಾಗಿತ್ವದಲ್ಲಿ ಕಂಪನಿ ಪ್ರಾರಂಭಿಸಿದೆ. ಬೆಂಗಳೂರಿನ ದಿಣ್ಣೂರು ಮುಖ್ಯರಸ್ತೆಯಲ್ಲಿ ನಮ್ಮ ಶಾಖೆ ಇದೆ. ಚಿನ್ನದ ಗಟ್ಟಿಗಳ ಗುಣಮಟ್ಟ ಪರಿಶೀಲಿಸಿಕೊಂಡು ಹೋಗುವ ಸಲುವಾಗಿ ನಗರಕ್ಕೆ ಬರುತ್ತಿದ್ದೆ’ ಎಂದು ರಿಜಾಯ್ ದೂರಿನಲ್ಲಿ ತಿಳಿಸಿದ್ದಾರೆ.

‘ಬುಧವಾರ ಮುಂಬೈನ ಲೋಕಮಾನ್ಯ ತಿಲಕ್ ನಿಲ್ದಾಣದಿಂದ ರೈಲಿನಲ್ಲಿ ಹೊರಟೆ. ಅನಂತರಪುರ ನಿಲ್ದಾಣದಲ್ಲಿ ನೋಡಿಕೊಂಡಾಗ ನನ್ನ ಬ್ಯಾಗ್ ಇತ್ತು. ಧರ್ಮಾವರ ನಿಲ್ದಾಣ ಬಂದಾಗ ನಿದ್ರೆಗೆ ಜಾರಿದ ನನಗೆ, ಹಿಂದೂಪುರದಲ್ಲಿ ಎಚ್ಚರವಾಯಿತು. ಆಗ ಬ್ಯಾಗ್ ಇರಲಿಲ್ಲ.’

‘ಸಹ ಪ್ರಯಾಣಿಕರನ್ನು ವಿಚಾರಿಸಿದೆ. ಯಾವುದೇ ಪ್ರಯೋಜನವಾಗಲಿಲ್ಲ. ತಕ್ಷಣ ಟಿಟಿಇಗೆ ವಿಷಯ ತಿಳಿಸಿದೆ. ಅವರು ರೈಲ್ವೆ ಭದ್ರತಾ ಪಡೆಯ (ಆರ್‌ಪಿಎಫ್‌) ಸಿಬ್ಬಂದಿಯನ್ನು ಕರೆಸಿ ಪರಿಶೀಲಿಸಿದರು. ಬ್ಯಾಗ್ ಸಿಗಲೇ ಇಲ್ಲ.’

‘ಸ್ವಲ್ಪ ಸಮಯದಲ್ಲೇ ರೈಲು ಹೊರಟಿದ್ದರಿಂದ ನಾನು ಹಿಂದೂಪುರ ನಿಲ್ದಾಣದಲ್ಲಿ ಇಳಿಯಲಿಲ್ಲ. ಬದಲಾಗಿ, ಎಲ್ಲ ಬೋಗಿಗಳಿಗೂ ತೆರಳಿ ಹುಡುಕಾಟ ಪ್ರಾರಂಭಿಸಿದೆ. ರಾತ್ರಿ 11.30ಕ್ಕೆ ರೈಲು ಕಂಟೋನ್ಮೆಂಟ್ ನಿಲ್ದಾಣಕ್ಕೆ ಬಂತು. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡಿ, ನನ್ನ ಚಿನ್ನವನ್ನು ವಾಪಸ್ ಕೊಡಿಸಿ’ ಎಂದು ರಿಜಾಯ್ ದೂರಿನಲ್ಲಿ ಕೋರಿದ್ದಾರೆ.

‘ಧರ್ಮಾವರ ಹಾಗೂ ಹಿಂದೂಪುರ ನಿಲ್ದಾಣಗಳ ನಡುವೆಯೇ ಬ್ಯಾಗ್‌ ಕಳವಾಗಿದೆ’ ಎಂದು ದೂರುದಾರರು ಹೇಳಿದ್ದಾರೆ. ಹೀಗಾಗಿ, ಪ್ರಕರಣವನ್ನು ಧರ್ಮಾವರ ರೈಲ್ವೆ ಪೊಲೀಸರಿಗೆ ವರ್ಗಾಯಿಸಿದ್ದೇವೆ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry