ಮಹಿಳೆ ಜೊತೆ ಅನುಚಿತ ವರ್ತನೆ: ಆರೋಪಿ ಸೆರೆ

7

ಮಹಿಳೆ ಜೊತೆ ಅನುಚಿತ ವರ್ತನೆ: ಆರೋಪಿ ಸೆರೆ

Published:
Updated:

ಬೆಂಗಳೂರು: 50 ವರ್ಷದ ಮಹಿಳೆ ಜತೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಪೆಟ್ರೋಲ್ ಬಂಕ್ ನೌಕರ ಶಿವಾನಂದ (23) ಎಂಬಾತನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಬಸವನಪುರದಲ್ಲಿ ‘ಕೆರಾಕ್ಸ್‌ ಕೆಮಿಕಲ್ಸ್’ ಕಂಪನಿ ಇದೆ. ಅದರ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಆರ್‌.ಕೋಟ, ಕಂಪನಿ ಆವರಣದಲ್ಲೇ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಸಂತ್ರಸ್ತೆಯು ಒಂದು ವರ್ಷದಿಂದ ಅವರ ಮನೆಯಲ್ಲಿ ಕೆಲಸಕ್ಕಿದ್ದಾರೆ. ಪಕ್ಕದಲ್ಲೇ ಇರುವ ‘ಭಾರತ್ ಪೆಟ್ರೋಲಿಯಂ’ ಬಂಕ್‌ನಲ್ಲಿ ಆರೋಪಿ ಶಿವಾನಂದ್ ಕೆಲಸ ಮಾಡುತ್ತಾನೆ ಎಂದು ಪೊಲೀಸರು ಹೇಳಿದ್ದಾರೆ.

‘ಜ.10ರ ರಾತ್ರಿ 9 ಗಂಟೆ ಸುಮಾರಿಗೆ ಮನೆ ಮುಂದೆ ಕುಳಿತಿದ್ದೆ. ಈ ವೇಳೆ ಕಾಂಪೌಂಡ್ ಮೇಲೆ ಕುಳಿತಿದ್ದ ಬಂಕ್ ನೌಕರನೊಬ್ಬ, ‘ಓಯ್.. ಓಯ್‌..’ ಎಂದು ಕರೆದು ಕಣ್ಣು ಹೊಡೆದ. ಆತನ ವರ್ತನೆಯನ್ನು ಪ್ರಶ್ನಿಸಲು ಮುಂದಾದಾಗ ಕೌಂಪೌಂಡ್ ಜಿಗಿದು ಬಂದ ಆತ, ‘ಏನ್‌ ಮಾಡ್ತೀಯಾ. ನಿನ್ನನ್ನು ಯಾರು ರಕ್ಷಿಸುತ್ತಾರೆ’ ಎನ್ನುತ್ತಾ ನನ್ನ ಹೆಗಲ ಮೇಲೆ ಕೈ ಇಟ್ಟ. ಗಾಬರಿಯಿಂದ ಕಿರುಚಿಕೊಳ್ಳುತ್ತಿದ್ದಂತೆಯೇ ನನ್ನನ್ನು ಕೆಳಗೆ ತಳ್ಳಿ ಓಡಿ ಹೋದ’ ಎಂದು ಸಂತ್ರಸ್ತೆ ಬುಧವಾರ ದೂರು ಕೊಟ್ಟಿದ್ದಾರೆ.

‘ದೂರಿನ ಅನ್ವಯ ಲೈಂಗಿಕ ಕಿರುಕುಳ (354), ಅತಿಕ್ರಮ ಪ್ರವೇಶ (441) ಹಾಗೂ ಸಂಜ್ಞೆ ಮೂಲಕ ಮಹಿಳೆ ಗೌರವಕ್ಕೆ ಧಕ್ಕೆ ತಂದ (509) ಆರೋಪಗಳಡಿ ಎಫ್‌ಐಆರ್ ದಾಖಲಿಸಿದ್ದೇವೆ. ನ್ಯಾಯಾಧೀಶರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು’ ಎಂದು ಹುಳಿಮಾವು ಪೊಲೀಸರು ಹೇಳಿದರು.

ಸತಾಯಿಸಿದ ಪೊಲೀಸರು: ‘ಕೃತ್ಯ ನಡೆದ ದಿನ ನಾನು ಊರಿನಲ್ಲಿ ಇರಲಿಲ್ಲ. ಕಂಪನಿ ನೌಕರರು ಮಹಿಳೆಯನ್ನು ರಕ್ಷಿಸಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದು ಹೋದ ಪೊಲೀಸರು, ಯಾವುದೇ ಕ್ರಮವನ್ನು ತೆಗೆದುಕೊಳ್ಳುವ ಗೋಜಿಗೆ ಹೋಗಲಿಲ್ಲ. ಜ.15ರಂದು ನಾನೇ ಖುದ್ದು ಠಾಣೆಗೆ ತೆರಳಿ ದೂರು ಕೊಟ್ಟೆ. ಅಷ್ಟೇ ಅಲ್ಲದೆ, ಆರೋಪಿ ಅನುಚಿತವಾಗಿ ವರ್ತಿಸಿ ಹೋಗಿರುವುದಕ್ಕೆ ಸಾಕ್ಷ್ಯವಾಗಿ ಸಿ.ಸಿ ಟಿ.ವಿ ಕ್ಯಾಮೆರಾಗಳ ದೃಶ್ಯಗಳನ್ನೂ ನೀಡಿದೆ. ಆದರೆ, ಸಂತ್ರಸ್ತೆಯ ಹೇಳಿಕೆ ಇಲ್ಲದೆ ಪ್ರಕರಣ ದಾಖಲಿಸುವುದಿಲ್ಲ ಎಂದು ಪೊಲೀಸರು ಪಟ್ಟು ಹಿಡಿದರು’ ಎಂದು ಪ್ರಕಾಶ್ ಕೋಟ ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry