ಶಾರದೆಗೆ ನಮಿಸಿದ ‘ಕಿತಾಬೆ ನವರಸ’

7

ಶಾರದೆಗೆ ನಮಿಸಿದ ‘ಕಿತಾಬೆ ನವರಸ’

Published:
Updated:
ಶಾರದೆಗೆ ನಮಿಸಿದ ‘ಕಿತಾಬೆ ನವರಸ’

ಧಾರವಾಡ: ಮಧ್ಯಯುಗೀನ ಭಾರತದ ಮುಸ್ಲಿಂ ರಾಜರು, ಅವರ ರಾಜಾಶ್ರಯದಲ್ಲಿದ್ದ ಕವಿಗಳು ಹಾಗೂ ಸಾಹಿತಿಗಳು ಬರೆದ ಬಹುತೇಕ ಕೃತಿಗಳು ‘ಬಿಸ್ಲಿಲ್ಲಾ’ ಸ್ಮರಣೆಯಿಂದ ಆರಂಭವಾಗುತ್ತವೆ. ಆದರೆ, ಸ್ವತಃ ದೊರೆಯಾಗಿದ್ದ ಎರಡನೇ ಇಬ್ರಾಹಿಂ ಆದಿಲ್‌ ಶಹಾನ ದಖಣಿ ಭಾಷೆಯ ಗೀತೆಗಳ ಸಂಕಲನ ‘ಕಿತಾಬೆ ನವರಸ’ ಮಾತ್ರ ಸರಸ್ವತಿ ಶ್ಲೋಕದೊಂದಿಗೆ ಆರಂಭವಾಗುತ್ತದೆ.

ಇತಿಹಾಸ ಲೇಖಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಈ ಮಾತುಗಳನ್ನು ಹೇಳುತ್ತಿದ್ದಂತೆಯೇ ಸಭಿಕರು ಇನ್ನಷ್ಟು ಕಿವಿ ಅಗಲಿಸಿ ಕೇಳತೊಡಗಿದರು.

ಗೋಷ್ಠಿಯ ನಿರ್ದೇಶಕರಾಗಿದ್ದ ಗಿರೀಶ ಕಾರ್ನಾಡರು ಕರತಾಡನ ಮಾಡುವ ಮೂಲಕ ಏಕಕಾಲಕ್ಕೆ ಡಾ. ಕುಲಕರ್ಣಿ ಅವರನ್ನೂ ಸಭಿಕರನ್ನೂ ಉತ್ತೇಜಿಸಿದರು. ಧಾರವಾಡ ಸಾಹಿತ್ಯ ಸಂಭ್ರಮದ ಎರಡನೇ ಗೋಷ್ಠಿ ’ಆದಿಲ್‌ ಶಾಹಿಗಳ ಸಾಹಿತ್ಯ’ ಕುರಿತ ಗೋಷ್ಠಿಯುದ್ದಕ್ಕೂ ಕಾರ್ನಾಡರು ಪ್ರಶ್ನೆ ಕೇಳಿದಂತೆಲ್ಲ ಕೃಷ್ಣ ಕೊಲ್ಹಾರ ಕುಲಕರ್ಣಿ ಇಂತಹ ಹಲವು ರೋಚಕ ಸಂಗತಿಗಳನ್ನು ಹೇಳುತ್ತಾ ಹೋದರು.

‘ಹೇಗಾದರೂ ಆರಂಭ ಮಾಡಬೇಕಲ್ಲ, ಅದಕ್ಕೇ ಒಂದು ಪ್ರಶ್ನೆ ಕೇಳ್ತೀನಿ. ಆದಿಲ್‌ ಶಾಹಿ ಸಾಹಿತ್ಯ ಸಂಪುಟ ಮಾಡಬೇಕು ಅಂತ ಏಕೆ ಅನ್ನಿಸ್ತು. ಅದನ್ನ ಎಲ್ಲಿಂದ ಶುರು ಮಾಡಿದ್ರಿ’ ಎಂದು ಕಾರ್ನಾಡರು ಕೇಳಿದರು.

ಇದಕ್ಕೆ, ಉತ್ತರಿಸಿದ ಕುಲಕರ್ಣಿ ಅವರು, ‘ಇದು ಎಂ.ಎಂ. ಕಲಬುರ್ಗಿ ಅವರ ಕನಸಿನ ಕೂಸು. ನಾನು, ಅವರು ವಿಜಯಪುರ ಜಿಲ್ಲೆಯವರು. ಆಗಾಗ ಭೇಟಿ ಆಗುತ್ತಿದ್ದೆವು. ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಸಂದರ್ಭದಲ್ಲಿ ಆಗಾಗ ಫೋನ್ ಮಾಡಿ, ಏನು ಮಾಡಾಕತ್ತೀರಿ ಎನ್ನುತ್ತಿದ್ದರು.

‘ಆದಿಲ್‌ಶಾಹಿಗಳ ಬಗ್ಗೆ ಏನಾದರೂ ಬರೆಯಬೇಕು. ಸಂಶೋಧನೆ ಮಾಡ್ತಿದ್ದೀನಿ’ ಎನ್ನುತ್ತಿದ್ದೆ. ಇಷ್ಟು ಅಂದಿದ್ದೇ ತಡ. ‘ಸರಿ, ನಮ್ಮ ಯೂನಿವರ್ಸಿಟಿಯಲ್ಲಿ ಮೂರು ದಿನ ಈ ಬಗ್ಗೆ ಉಪನ್ಯಾಸ ಕೊಟ್ಟು ಬಿಡಿ ಎಂದು ಬಿಟ್ಟರು. ಆ ನಂತರ, ಆದಿಲ್‌ಶಾಹಿಗಳ ಕಾಲದಲ್ಲಿ ರಚನೆಯಾದ ಹಸ್ತಪ್ರತಿಗಳನ್ನು ಅಧ್ಯಯನ ಮಾಡಿ ಕನ್ನಡಕ್ಕೆ ತರುವ ಬಗ್ಗೆಯೂ ಯೋಜನೆ ರೂಪಿಸಿದರು. ಅವರು ಈ ಯೋಜನೆಯ ಅಧ್ಯಕ್ಷರು, ನಾನು ನಿರ್ದೇಶಕ. ಇನ್ನು ಐವರನ್ನು ಒಳಗೊಂಡ ಸಮಿತಿ ರಚನೆಯಾಯಿತು. ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷರಾದ ಸಚಿವ ಎಂ.ಬಿ. ಪಾಟೀಲರು ಯೋಜನೆಗೆ ಆರ್ಥಿಕ ನೆರವು ಕೊಡುವುದಾಗಿ ಭರವಸೆ ನೀಡಿದರು. ಒಂದು ಕೋಟಿ ರೂಪಾಯಿ ಪ್ರಸ್ತಾವ ಇಟ್ಟೆವು. ಸಚಿವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹ 75 ಲಕ್ಷ ಕೊಡಿಸಿದರು’ ಎಂದರು.

‘ನಿಜವಾದ ಸವಾಲು ಎದುರಾದದ್ದೇ ಇಲ್ಲಿ. ಕೈಯಲ್ಲಿ ಸಾಕಷ್ಟು ಅಧ್ಯಯನ ಸಾಮಗ್ರಿ ಇಲ್ಲದೇ ಅಷ್ಟೊಂದು ಸಂಪುಟಗಳನ್ನು ಹೇಗೆ ತರುವುದು ಎಂಬ ಆತಂಕ ಶುರುವಾಯಿತು. ಅಂತಿಮವಾಗಿ ಮುಸ್ಲಿಂ ರಾಜರು ಆಳ್ವಿಕೆ ನಡೆಸಿದ ಆಂಧ್ರಪ್ರದೇಶದಲ್ಲೇ ದಾಖಲೆಗಳನ್ನು ಹುಡುಕುವುದು ಲೇಸು ಎಂದು ನಿರ್ಧರಿಸಿ ಹೈದರಾಬಾದ್‌ನ ಸಾಲಾರಜಂಗ್‌ ವಸ್ತು ಸಂಗ್ರಹಾಲಯ, ಪುಣೆ, ಔರಂಗಾಬಾದ್‌ನ ಸಂಗ್ರಹಾಲಯ, ಪುಣೆಯ ಭಾರತ ಇತಿಹಾಸ ಸಂಶೋಧಕ ಮಂಡಳಿ, ದೆಹಲಿಯ ರಾಷ್ಟ್ರೀಯ ಪತ್ರಾಗಾರಗಳಲ್ಲಿ ದೊರೆತ ದಾಖಲೆಗಳನ್ನು ಹುಡುಕಿದಾಗ ಈ ಅನುವಾದ ಕಾರ್ಯಕ್ಕೊಂದು ಸ್ಪಷ್ಟರೂಪು ದೊರೆಯಿತು’ ಎಂದು ನೆನಪಿಸಿಕೊಂಡರು.

ಸೂಫಿಗಳ ನೆಲೆವೀಡು: ವಿಜಯಪುರವನ್ನು ಎಂಟು ಜನ ಅರಸರು ಸುಮಾರು 200 ವರ್ಷಗಳವರೆಗೆ ಆಳ್ವಿಕೆ ನಡೆಸಿದರು. ಅವರ ಪೈಕಿ ಬಹುತೇಕ ಅರಸರು ಸಂಗೀತ, ಸಾಹಿತ್ಯ ಬಲ್ಲವರಾಗಿದ್ದರು. ಸ್ವತಃ ಬರಹಗಾರರೂ ಆಗಿದ್ದರು. ಆ ಕಾಲದಲ್ಲಿ ದಿಲ್ಲಿಯ ಮೊಗಲ್‌ ಸಾಮ್ರಾಟರ ಆಸ್ಥಾನದಲ್ಲಿ ಇರದಷ್ಟು ಸೂಫಿ ಸಂತರು ವಿಜಯಪುರದಲ್ಲಿದ್ದರು. ಒಂದು ಅಂದಾಜಿನ ಪ್ರಕಾರ 700 ಸೂಫಿಗಳ ಗೋರಿಗಳು ವಿಜಯಪುರದಲ್ಲಿ ಸಿಕ್ಕಿವೆ ಎಂದು ಕುಲಕರ್ಣಿ ಮಾಹಿತಿ ನೀಡಿದರು.

ಸಾಮಾನ್ಯವಾಗಿ ಕವಿಗಳು, ಲೇಖಕರು ತಮಗೆ ರಾಜಾಶ್ರಯ ನೀಡಿದವರ ಪಕ್ಷಪಾತಿಗಳಾಗಿರುತ್ತಾರೆ. ಅಷ್ಟಾಗಿಯೂ ಆದಿಲ್‌ ಶಾಹಿಗಳ ಕುರಿತಾಗಿ ಬಂದ 18 ಸಂಪುಟಗಳಲ್ಲಿಯೂ ದೊರೆಗಳ ಬಗ್ಗೆ ಬರೆದ ಹಲವು ಇತಿಹಾಸಕಾರರು ವಾಸ್ತವ ಪರಿಸ್ಥಿತಿಯನ್ನೇ ಬಿಚ್ಚಿಟ್ಟಿದ್ದಾರೆ ಎಂದರು.

ಅಕ್ಬರ್‌ ಪ್ರೇಮಪ್ರಸಂಗ: ಆದಿಲ್‌ಶಾಹಿ ಸಾಹಿತ್ಯದ 18 ಸಂಪುಟಗಳ ಪೈಕಿ 10ನೇ ಸಂಪುಟವಾಗಿ ಪ್ರಕಟವಾದ ‘ತಝ್ಕೀರತುಲ್‌ ಮುಲೂಕ್‌’ ಕೃತಿ ಬರೆದ ರಫಿಯುದ್ದೀನ್‌ ಇಬ್ರಾಹಿಂ ಶಿರಾಜಿಯು ಮೊಗಲ್‌ ದೊರೆ ಅಕ್ಬರ್‌, ಬ್ರಾಹ್ಮಣ ಹೆಣ್ಣುಮಗಳ ಪ್ರೇಮಕ್ಕೆ ಒಳಗಾಗಿದ್ದ. ಆ ಪ್ರೇಮದಿಂದಾಗಿ ತೀರ್ಥ–ಪ್ರಸಾದವಿಲ್ಲದೆ ಊಟವನ್ನು ಸೇವಿಸುತ್ತಿರಲಿಲ್ಲ ಎನ್ನುವ ಸಂಗತಿಯನ್ನು ಶಿರಾಜಿ ದಾಖಲಿಸಿದ್ದಾರೆ ಎಂದು ಹೇಳಿದರು.

ಅನುವಾದ ಸಂದರ್ಭದಲ್ಲಿ ಪರ್ಷಿಯನ್‌, ಉರ್ದು ಹಾಗೂ ಅರೆಬಿಕ್‌ ಭಾಷೆಗಳಲ್ಲಿದ್ದ ಹಸ್ತಪ್ರತಿಗಳನ್ನು ಕುಲಕರ್ಣಿ ಅವರಿಗೆ ಓದಿ ಹೇಳಿರುವ ಮೌಲಾನಾ ಎಂ. ರೆಹಮಾನ್‌ ಮದನಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಲಂಗ, ಲುಂಗಿ, ಲಂಗೋಟಿಯೂ ನಮ್ಮದಲ್ಲ

ಕನ್ನಡದಲ್ಲಿ ಬಳಕೆಯಾಗುವ 4000ಕ್ಕೂ ಅಧಿಕ ಶಬ್ದಗಳ ಮೂಲ ಕನ್ನಡವಲ್ಲ. ಪರ್ಷಿಯನ್‌, ಅರೆಬಿಕ್‌ ಪದಗಳನ್ನೇ ಇಂದಿಗೂ ಬಳಸುತ್ತಿದ್ದೇವೆ. ಇಲಾಖೆ, ಖಾತೆ, ಕಿರ್ದಿ, ಮೇಜು, ದಫ್ತರ್‌, ದಸ್ತಾವೇಜು, ಖರೀದು, ಮುದ್ದಾಮ, ಕೈಫಿಯತ್ತು, ಮೇಜವಾನಿ, ಸಾಮಾನು, ತಹಶೀಲ್ದಾರ್‌, ಅಮಲ್ದಾರ್‌ ಇವೆಲ್ಲವೂ ಪರ್ಷಿಯನ್‌ ಮೂಲಗಳಿಂದ ಬಂದಿವೆ. ಲಂಗ, ಲುಂಗಿ, ಲಂಗೋಟಿಯೂ ನಮ್ಮವಲ್ಲ ಎಂದು ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಹೇಳುತ್ತಿದ್ದಂತೆಯೇ ಸಭೆಯಲ್ಲಿ ನಗುವಿನ ಅಲೆಗಳೆದ್ದವು.

ಈ ಚರ್ಚೆಗೆ ಇಂಬು ನೀಡಿದ ಗಿರೀಶ ಕಾರ್ನಾಡರು, ’ಕರ್ನಾಟಕ ಒಂದೇ ನಮ್ಮದು. ಸರ್ಕಾರ ಅಲ್ಲ’ ಎಂದರು. ಸರ್ಕಾರ ಬೇರೆ ಭಾಷೆಯಿಂದ ಬಂದುದು ಎಂದು ವಿವರಣೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry