ಸಾಹಿತ್ಯ ಸ್ವಾಯತ್ತತೆ ಕಳೆದುಕೊಂಡಿದೆಯೇ?

7
ಪ್ರಭುತ್ವದ ದಮನಕಾರಿ ನೀತಿಯ ಬಗ್ಗೆ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಟೀಕೆ

ಸಾಹಿತ್ಯ ಸ್ವಾಯತ್ತತೆ ಕಳೆದುಕೊಂಡಿದೆಯೇ?

Published:
Updated:
ಸಾಹಿತ್ಯ ಸ್ವಾಯತ್ತತೆ ಕಳೆದುಕೊಂಡಿದೆಯೇ?

ಧಾರವಾಡ: ಎಲ್ಲ ಮಾಧ್ಯಮಗಳೂ ಸ್ವಾಯತ್ತತೆ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸಾಹಿತ್ಯ ಕೂಡ ಸ್ವಾಯತ್ತತೆ ಕಳೆದುಕೊಂಡಿದೆಯೇ?

ಇದು ಸಾಹಿತ್ಯ ಸಂಭ್ರಮದ 6ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಆಶಯ ಭಾಷಣ ಮಾಡಿದ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ವ್ಯಕ್ತಪಡಿಸಿದ ಆತಂಕ.

‘ಪ್ರಭುತ್ವವನ್ನು ಪ್ರಶ್ನಿಸುವ ಸ್ವಾತಂತ್ರ್ಯವನ್ನು ಕಾಯ್ದಿರಿಸಿಕೊಂಡಿದ್ದ ಪ್ರಮುಖ ಪ್ರಾತಿನಿಧಿಕ ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಂಡಿವೆ. ನ್ಯಾಯಾಂಗ ಕೂಡ ಬಿಕ್ಕಟ್ಟು ಎದುರಿಸುತ್ತಿರುವುದನ್ನು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಬೇಕಿದೆ’ ಎಂದವರು ಅಭಿಪ್ರಾಯಪಟ್ಟರು.

‘ಸ್ವಾಯತ್ತತೆ ಮೇಲೆ ಪ್ರಭುತ್ವ ಸದ್ದಿಲ್ಲದೆ ಆಕ್ರಮಣ ನಡೆಸುತ್ತಿದೆ. ಇದು ಸ್ವತಂತ್ರವಾಗಿ ಆಲೋಚಿಸುವ ಸಮುದಾಯದ ಧ್ವನಿ ಅಡಗಿಸುವ ಪ್ರಯತ್ನವಾಗಿದೆ. ಪ್ರಭುತ್ವದ ಈ ಪ್ರಯತ್ನಕ್ಕೆ ಬಂಡವಾಳಶಾಹಿ ಕೈಜೋಡಿಸಿದೆ. ಜನಾಭಿಪ್ರಾಯ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಧ್ಯಮಗಳು ಇಂದು ರಾಜಕೀಯ ವ್ಯಕ್ತಿಗಳ ತುತ್ತೂರಿಯಾಗಿವೆ. ಧ್ವನಿ ಇಲ್ಲದಂತೆ ಮಾಡುವ ಯಜಮಾನ ಸಂಸ್ಕೃತಿಯ ಲಕ್ಷಣ ಈಗ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯವನ್ನೂ ವ್ಯಾಪಿಸಿರುವುದು ದೊಡ್ಡ ದುರಂತ’ ಎಂದರು.

‘ಅಧಿಕಾರ ಕೇಂದ್ರಗಳಾದ ರಾಜಕೀಯ ಹಾಗೂ ಧರ್ಮ ಪ್ರಶ್ನಿಸುವ ಮನಸ್ಥಿತಿಯನ್ನು ಸಹಿಸುವುದಿಲ್ಲ. ಆದರೆ ಸಾಹಿತ್ಯದ ಶಕ್ತಿ ಇರುವುದೇ ಈ ಸ್ವಾಯತ್ತ ಪ್ರಜ್ಞೆಯಲ್ಲಿ. ಈ ವಲಯವೂ ತನ್ನ ಸ್ವಾಯತತ್ತತೆಯನ್ನೂ ಕಳೆದುಕೊಳ್ಳುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯನ್ನು ಎದರಿಸಬೇಕಿದೆ. 70ರ ದಶಕದಲ್ಲಿ ಗೋಪಾಲಕೃಷ್ಣ ಅಡಿಗರು ಇದೇ ಎಚ್ಚರಿಕೆಯ ಮಾತುಗಳನ್ನಾಡಿದ್ದರು. ಅವರ ಮಾತುಗಳು ಇಂದು ಇನ್ನೂ ಹೆಚ್ಚು ಪ್ರಸ್ತುತ’ ಎಂದು ಹೇಳಿದರು.

ಅಪಮೌಲ್ಯಗೊಂಡ ಭಕ್ತಿ

ಪರಂಪರೆ: ‘ಭಕ್ತಿ ಎಂಬುದು ಶರಣಾಗತಿಯಲ್ಲ, ಅದು ಬಂಡಾಯ. ಭಕ್ತಿಯ ಪರಿಕಲ್ಪನೆಯೂ ಅಪಮೌಲ್ಯಗೊಂಡಿದೆ. ಬಂಡವಾಳಶಾಹಿ ಭಕ್ತಿಯನ್ನು ತನ್ನ ಉದ್ಯಮದ ಭಾಗವಾಗಿಸಿಕೊಂಡಿದೆ. ರಾಜಕೀಯ ತನ್ನ ದಾಳವಾಗಿಸಿಕೊಂಡಿದೆ. ಧರ್ಮ ಅದನ್ನು ಮೌಢ್ಯ ಎಂಬಂತೆ ಸ್ವೀಕರಿಸಿದೆ. ಆದರೆ ಕನ್ನಡ ಸಾಹಿತ್ಯ ಪರಂಪರೆ ಮಾತ್ರ ಭಕ್ತಿಯನ್ನು ಜನಸಾಮಾನ್ಯರ ಪ್ರತಿಭಟನೆಯ ಶಕ್ತಿಯಾಗಿ ಗ್ರಹಿಸಿದೆ. ಇದರ ಹರಿವು ಇಂದಿನ ಅಗತ್ಯ’ ಎಂದವರು ಹೇಳಿದರು.

‘ಆಧುನಿಕ ಬದುಕಿನಲ್ಲಿ ಭೋಗದ ಹಸಿವು ಮಿತಿಮೀರಿದೆ. ಎಂದೂ ತಣಿಯದ ಬೇಕುಗಳನ್ನು ಸದಾ ನಮ್ಮ ಮುಂದಿಡುವ ಆಧುನಿಕ ಬಂಡವಾಳಶಾಹಿ ಜಗತ್ತು ಒಂದನ್ನು ತೃಪ್ತಿಪಡಿಸುತ್ತಾ, ಮತ್ತೊಂದನ್ನು ನಮ್ಮ ಎದುರು ತಂದಿಡುತ್ತಿದೆ. ಮುಕ್ತಿ ಇಲ್ಲದ ಈ ದಾಸ್ಯದಿಂದ ಬಿಡುಗಡೆಗೆ ಕುವೆಂಪು ಅವರ ನಿರಂಕುಶಮತಿ ಪ್ರಜ್ಞೆ ಇಂದಿನ ಅಗತ್ಯ. ಆತ್ಮಸ್ವಾತಂತ್ರ್ಯ ಇರುವ ಬುದ್ಧಿಸ್ವಾತಂತ್ರ್ಯವೇ ಇಂದು ಹಲವು ಒತ್ತಡಗಳ ನಡುವೆ ಸತ್ವರಹಿತವಾಗಿದೆ. ಹೀಗೆ ಜಡವಾಗಿರುವ ಮತಿಯನ್ನು ಜಾಗೃತಗೊಳಿಸವುದು ಸಾಹಿತ್ಯದ ಕೆಲಸ’ ಎಂದರು.

ತೌಡು ಕುಟ್ಟುವ ಕೆಲಸ: ‘ಭಾಷೆಗಳನ್ನು ಉಳಿಸುವ ನಿಟ್ಟಿನಲ್ಲಿ ಪಾಶ್ಚಾತ್ಯ ವಿಶ್ವವಿದ್ಯಾಲಯಗಳು ಭಾಷಾ ಲ್ಯಾಬ್‌ಗಳನ್ನು ಸ್ಥಾಪಿಸಿವೆ. ಭಾಷೆ ಮತ್ತು ಸಂಸ್ಕೃತಿಯನ್ನು ಇತರೆ ಜ್ಞಾನಶಾಖೆಗಳೊಂದಿಗೆ ಬೆಸೆಯುವ ಹಾಗೂ ವಿಸ್ತರಿಸುವ ಕೆಲಸ ನಡೆಯುತ್ತಿದೆ. ನಮ್ಮಲ್ಲಿರುವ ವಿಶ್ವವಿದ್ಯಾಲಯಗಳು ಈ ಕುರಿತು ಯಾವ ಪ್ರಯತ್ನವನ್ನೂ ನಡೆಸಿಲ್ಲ. ಕನ್ನಡದಲ್ಲಿ ಸಂಶೋಧನೆ ಎಂದರೆ ತೌಡು ಕುಟ್ಟುವ ಕೆಲಸವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಅನ್ಯರ ಆಕ್ರಮಣವನ್ನು ವಿರೋಧಿಸುತ್ತಲೇ ತನ್ನ ಸ್ವಾಯತ್ತತೆ ಕಾಪಾಡಿಕೊಂಡು ಬಂದಿರುವ ಕನ್ನಡ ಇಂದು ನಮ್ಮನ್ನು ಮುನ್ನಡೆಸಬೇಕಿದೆ’ ಎಂದವರು ಆಶಿಸಿದರು.

ಮುಕ್ತ ಸಂವಾದಕ್ಕೆ ವೇದಿಕೆಇಲ್ಲ: ಇಂದು ಪೂರ್ವಗ್ರಹವೇ ನಮ್ಮನ್ನು ಆಳುತ್ತಿದೆ. ಸತ್ಯ ಹೇಳಿದರೆ ಜೀವಕ್ಕೆ ಕುತ್ತು ಬರುವ ಸ್ಥಿತಿ ನಿರ್ಮಾಣವಾಗಿದೆ. ಪರಸ್ಪರ ಸಂವಾದಕ್ಕೆ ವೇದಿಕೆಯೇ ಇಲ್ಲದಂತಾಗಿರುವುದು ನಮ್ಮ ಕಾಲದ ದುರಂತ ವ್ಯಂಗ್ಯ.

ಸಮೂಹ ಮಾಧ್ಯಮಗಳಲ್ಲಿ ಮುದ್ರಣ ಮಾಧ್ಯಮ ಈ ಮೊದಲು ಇದ್ದ ಅಲ್ಪ ಅವಕಾಶವನ್ನೂ ಕಸಿದುಕೊಂಡಿದೆ. ದೃಶ್ಯ ಮಾಧ್ಯಮದಲ್ಲಿನ ಚರ್ಚೆ ಹೆಸರಿನಲ್ಲಿ ನಡೆಯುತ್ತಿರುವುದು ಏನು ಎಂಬುದರ ಕುರಿತು ವಿವರಣೆ ಅನಗತ್ಯ. ಸಾಮಾಜಿಕ ಜಾಳತಾಣಗಳಲ್ಲಿ ಮುಕ್ತ ಅಭಿವ್ಯಕ್ತಿಗೆ ಅವಕಾಶವಿದ್ದರೂ ಅದಕ್ಕೊಂದು ಸಾಮಾಜಿಕ ಬದ್ಧತೆ ಇದ್ದಂತಿಲ್ಲ ಎಂದು ನರಹಳ್ಳಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry