ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎಲ್ಲ ಪಕ್ಷಗಳೂ ಕುರುಡು

ಇತಿಹಾಸಕಾರ ಅಂಧಾಭಿಮಾನ ಮೀರಬೇಕು: ಇತಿಹಾಸಕಾರ ರಾಮಚಂದ್ರ ಗುಹಾ
Last Updated 19 ಜನವರಿ 2018, 19:51 IST
ಅಕ್ಷರ ಗಾತ್ರ

ಧಾರವಾಡ: ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಿಂದೆಂದಿಗಿಂತಲೂ ಹೆಚ್ಚು ತೀವ್ರವಾಗಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಕಲಾವಿದರು, ಬರಹಗಾರರು, ನಿರ್ದೇಶಕರ ಅಭಿವ್ಯಕ್ತಿಗೆ ಮುಕ್ತ ಅವಕಾಶ ಸಿಗುತ್ತಿಲ್ಲ. ಯಾವ ಪಕ್ಷದ ಒಬ್ಬ ರಾಜಕಾರಣಿಯೂ ಇದುವರೆಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯ ಬಗ್ಗೆ ಮಾತನಾಡಿಲ್ಲ’ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಬೇಸರ ವ್ಯಕ್ತಪಡಿಸಿದರು.

ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ‘ಇತಿಹಾಸ ಮತ್ತು ಅಂಧಾಭಿಮಾನ’ ಎಂಬ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚೆಗೆ ‘ಪದ್ಮಾವತ್‌’ ಸಿನಿಮಾಕ್ಕೆ ಎದುರಾಗುತ್ತಿರುವ ವಿರೋಧವನ್ನು ತಮ್ಮ ಮಾತಿಗೆ ಉದಾಹರಣೆಯಾಗಿ ನೀಡಿದರು.

‘ಬಿಜೆಪಿ ಆಡಳಿತ ಮಾಡುತ್ತಿರುವ ಐದಾರು ರಾಜ್ಯಗಳಲ್ಲಿ ‘ಪದ್ಮಾವತ್‌’ ಸಿನಿಮಾ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ವಿರುದ್ಧ ಗೂಂಡಾಗಿರಿ ಮಾಡಲಾಗುತ್ತಿದೆ. ನಮ್ಮ ಕರ್ನಾಟಕದ ದೀಪಿಕಾ ಪಡುಕೋಣೆ ಅವರನ್ನೂ ಅವಹೇಳನ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿಯೂ ಇತಿಹಾಸವನ್ನು ತಮ್ಮ ಉದ್ದೇಶಗಳಿಗಾಗಿ ದುರ್ಬಳಕೆ ಮಾಡುತ್ತಿರುವುದು ನಡೆಯುತ್ತಲೇ ಇದೆ’ ಎಂದರು.

‘ಇಂದು ಭಾರತದ ಹಲವು ವಿಶ್ವವಿದ್ಯಾಲಯಗಳಲ್ಲಿ ಮಾರ್ಕ್ಸಿಸ್ಟ್‌ಗಳು ಇತಿಹಾಸ ಬರೆಯುತ್ತಿದ್ದಾರೆ. ಮಾರ್ಕ್ಸಿಸಂಗೆ ಅಂಟಿಕೊಂಡಿರುವ ಇತಿಹಾಸಕಾರರು ಅಪರಿಪೂರ್ಣರಾಗಿರುತ್ತಾರೆ, ಸಂಕುಚಿತ ಮನಸ್ಥಿತಿಯವರಾಗಿರುತ್ತಾರೆ ಎನ್ನುವುದು ನಿಜ. ಆದರೆ ಅವರ ಬದಲಿಗೆ ಆರ್‌ಎಸ್‌ಎಸ್‌ನವರು ನಮ್ಮ ಇತಿಹಾಸ ಬರೆಯಲು ತೊಡಗಿದರೆ ಇತಿಹಾಸ ಕೆಡುವುದಷ್ಟೇ ಅಲ್ಲ, ಬೀದಿ ಜಗಳಕ್ಕೂ ಕಾರಣವಾಗುತ್ತದೆ' ಎಂದು ಅಭಿಪ್ರಾಯಪಟ್ಟರು.

‘ಇತಿಹಾಸ ಎನ್ನುವುದು ಅಂಧಾಭಿಮಾನವನ್ನು ಮೀರಿದ್ದು. ಆದ್ದರಿಂದ ಇತಿಹಾಸಕಾರರೂ ಎಲ್ಲ ರೀತಿಯ ಅಂಧಾಭಿಮಾನಗಳನ್ನು ಮೀರುವುದು ಅನಿವಾರ್ಯ’ ಎಂದು ಪ್ರತಿಪಾದಿಸಿದ ಅವರು, ‘ನಿರ್ದಿಷ್ಟ ಭಾಷೆ ಮಾತನಾಡುವ ಕಾರಣಕ್ಕೆ, ನಿರ್ದಿಷ್ಟ ರಾಜ್ಯಕ್ಕೆ ಸಂಬಂಧಿಸಿದ ಕಾರಣಕ್ಕೆ, ನಿರ್ದಿಷ್ಟ ರಕ್ತ, ಜಾತಿ, ಧರ್ಮದ ಕಾರಣಕ್ಕೆ ಭಾರತದಲ್ಲಿ ಯಾರೂ ಉಳಿದವರಿಗಿಂತ ಶ್ರೇಷ್ಟರಾಗಲು ಸಾಧ್ಯವಿಲ್ಲ’ ಎಂದರು.

ಅಂಧಾಭಿಮಾನ ಎನ್ನುವ ಶಾಪ: ‘ಅಂಧಾಭಿಮಾನ ಎನ್ನುವುದು ರಾಜಕಾರಣಕ್ಕೆ ಮತ್ತು ಸಾಮಾಜಿಕ ಬದುಕಿಗೆ ಅಂಟಿದ ಶಾಪ’ ಎಂದು ಕಟುವಾಗಿ ನುಡಿದ ಗುಹಾ, ಇತಿಹಾಸಕಾರರಲ್ಲಿ ಸಾಮಾನ್ಯವಾಗಿ ಎದ್ದು ಕಾಣುವ ಅಂಧಾಭಿಮಾನಗಳನ್ನು ವಿಶ್ಲೇಷಿಸಿದರು.

‘ಇತಿಹಾಸ ವಿಷಯದಲ್ಲಿ ಪದವಿ ಗಳಿಸಿದವರು ಮಾತ್ರ ಇತಿಹಾಸಕಾರರಾಗಬಲ್ಲರು. ಇತಿಹಾಸಕಾರರು ಆ ವಿಭಾಗಕ್ಕೆ ಮಾತ್ರ ನಿಷ್ಠರಾಗಿರಬೇಕು ಎನ್ನುವುದು ಎಲ್ಲ ಕಡೆಗಳಲ್ಲಿ ಸಾಮಾನ್ಯವಾಗಿ ಕಾಣುವ ಅಂಧಾಭಿಮಾನ. ನಾನು ಯಾವತ್ತೂ ವಿದ್ಯಾಲಯಗಳಲ್ಲಿ ಇತಿಹಾಸವನ್ನು ಕಲಿತಿಲ್ಲ. ನಾನು ಇತಿಹಾಸಕಾರನಾಗಿದ್ದು ಆಕಸ್ಮಿಕ ಅಷ್ಟೆ. ಭಾರತದ ಹಲವು ಶ್ರೇಷ್ಠ ಇತಿಹಾಸಕಾರರು ಇತಿಹಾಸವನ್ನು ವಿದ್ಯಾಲಯಗಳಲ್ಲಿ ಕಲಿತವರಲ್ಲ. ಇತಿಹಾಸಕಾರನಾಗಲು ಪದವಿ ಬೇಕಾಗಿಲ್ಲ. ಸಂಶೋಧನೆಯ ಕಲೆ, ಬೇರೆ ಯಾರೂ ಕಂಡುಹಿಡಿಯದ ದಾಖಲೆಗಳನ್ನು ಹುಡುಕಿ ಅದನ್ನು ತುಲನಾತ್ಮಕವಾಗಿ ಮಂಡಿಸಬಲ್ಲ ಭಿನ್ನ ದೃಷ್ಟಿಕೋನ ಇರುವುದು ಮುಖ್ಯ’ ಎಂದು ಹೇಳಿದರು.

ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಇತಿಹಾಸ ವಿಭಾಗಗಳ ಕಾರ್ಯನಿರ್ವಹಣೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು ‘ಇತಿಹಾಸ ವಿಭಾಗಗಳು ಸೀಮಿತ ಚೌಕಟ್ಟಿನಲ್ಲಿ ಸಿಲುಕಿಕೊಂಡಿವೆ. ಅಲ್ಲಿನವರ ಪ್ರಕಾರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಕ್ಷಣದಿಂದ ಇತಿಹಾಸ ಕೊನೆಗೊಂಡು, ರಾಜ್ಯಶಾಸ್ತ್ರ ಆರಂಭಗೊಂಡಿದೆ. ಆದರೆ ಇತಿಹಾಸ ಎನ್ನುವುದು ಎಲ್ಲವನ್ನೂ ಒಳಗೊಳ್ಳುವ ಅಂಧಾಭಿಮಾನರಹಿತ ಜ್ಞಾನಶಾಖೆ. ಇತಿಹಾಸಕಾರ ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಸಾಹಿತ್ಯ, ಮಾನವಶಾಸ್ತ್ರ, ಭಾಷಾಶಾಸ್ತ್ರ ಎಲ್ಲ ಶಾಖೆಗಳಿಂದಲೂ ಕಲಿತುಕೊಳ್ಳಬೇಕು. ಚರಿತ್ರಕಾರ ಬರೀ ಇತಿಹಾಸ ವಿಭಾಗಕ್ಕೆ ಮಾತ್ರ ಅಂಟಿಕೊಂಡಿರುವುದೂ ಅಂಧಾಭಿಮಾನವೇ ಆಗಿದೆ’ ಎಂದರು.

ಆಕರಗಳ ಬಲ: ‘ಸಂಶೋಧನೆ ಮೂಲ ಆಕರಗಳನ್ನು ಆಧರಿಸಿರಬೇಕು. ಯಾರದೋ ಅಭಿಪ್ರಾಯ ಅಥವಾ ಸಾಮಾಜಿಕ ಜಾಲತಾಣಗಳನ್ನು ಆಧರಿಸಿ ಸಂಶೋಧನೆ ನಡೆಸುವುದು ಸರಿಯಲ್ಲ’ ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ.

‘ಮೂಲ ಆಕರಗಳು ಹಲವು ರೂಪಗಳಲ್ಲಿರುತ್ತವೆ. ಭಾರತೀಯ ಇತಿಹಾಸ ಸಂಶೋಧನೆಯ ಸಂದರ್ಭದಲ್ಲಿ ಕೆಲವೇ ಕೆಲವು ಮೂಲ ಆಕರಗಳನ್ನು ಅವಲಂಬಿಸುವುದು ಕಂಡುಬರುತ್ತದೆ. ಪ್ರಾಚೀನ ಭಾರತದ ಇತಿಹಾಸಕಾರರು ಶಾಸನಗಳನ್ನು ಮಾತ್ರ ತಮ್ಮ ಸಂಶೋಧನೆಗೆ ಆಕರವನ್ನಾಗಿ ಬಳಸಿಕೊಳ್ಳುತ್ತಾರೆ. ಉಳಿದ ಇತಿಹಾಸಕಾರರೂ ಸರ್ಕಾರಿ ದಾಖಲೆಗಳನ್ನು ಮಾತ್ರ ಅವಲಂಬಿಸುತ್ತಾರೆ’ ಎಂದು ವಿವರಿಸಿದರು.

‘ಇತಿಹಾಸ ಎನ್ನುವುದು ಒಂದು ಕುಶಲಕಲೆ’ ಎಂದ ಅವರು, ತಮ್ಮ ಮಾತನ್ನು ಸಮರ್ಥಿಸುವುದಕ್ಕಾಗಿ ಮನೆ ಕಟ್ಟುವ ಕಲೆಯನ್ನು ನಿದರ್ಶನವಾಗಿ ಬಳಸಿಕೊಂಡರು. ‘ಮನೆ ಕಟ್ಟಲು ಕೇವಲ ಕಲ್ಲೊಂದೇ ಇದ್ದರೆ ಸಾಲದು. ಅದಕ್ಕೆ ನೀರು, ಮಣ್ಣು, ಗಾರೆ ಹೀಗೆ ಹಲವು ಮೂಲವಸ್ತುಗಳು ಬೇಕು. ಹಾಗೆಯೆ ಇತಿಹಾಸದ ಸಂಶೋಧನೆಗೂ ಹಲವು ಮೂಲಗಳ ಆಕರಗಳನ್ನು ಹುಡುಕಿ ಅಭ್ಯಸಿಸುವುದು ಅವಶ್ಯ. ವೃತ್ತಪತ್ರಿಕೆಯೂ ಇತಿಹಾಸಕ್ಕೆ ಒಳ್ಳೆಯ ಆಕರವಾಗಬಲ್ಲದು’ ಎಂದರು.

ಗುರುತಿನ ಚಹರೆಯ ಮೀರುವಿಕೆ: ‘ಗುರುತಿನ (ಐಡೆಂಟಿಟಿ) ಅಂಧಾಭಿಮಾನವನ್ನೂ ಇತಿಹಾಸಕಾರರು ಮೀರಲೇಬೇಕು’ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದರು. ‘ನಾವು ಯಾರು, ಯಾವ ಲಿಂಗದವರು, ಯಾವ ದೇಶ, ಭಾಷೆ, ಶಿಕ್ಷಣ, ಜಾತಿಯವರು ಎನ್ನುವುದರ ಮೇಲೆ ಜಗತ್ತನ್ನು ನೋಡುವ ರೀತಿಯೂ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಆದರೆ ಇತಿಹಾಸಕಾರ ಈ ಎಲ್ಲ ಅಂಶಗಳನ್ನು ಮೀರಬೇಕು. ಐತಿಹಾಸಿಕ ಸತ್ಯವನ್ನು ಅರಿಯುವುದು, ಇತಿಹಾಸಕಾರ ತನ್ನ ವೈಯಕ್ತಿಕ ಗುರುತುಗಳನ್ನು ಎಷ್ಟರ ಮಟ್ಟಿಗೆ ಮೀರಲು ಯಶಸ್ವಿಯಾಗಿದ್ದಾನೆ ಎನ್ನುವುದನ್ನು ಅವಲಂಬಿಸಿದೆ’ ಎಂದು ವಿಶ್ಲೇಷಿಸಿದರು.

‘ಸಾಂಪ್ರದಾಯಿಕವಾಗಿ ಇತಿಹಾಸ ಬರವಣಿಗೆಯಲ್ಲಿ ಮೇಲ್ಜಾತಿಯ ಬ್ರಾಹ್ಮಣ ಪುರುಷರೇ ಹೆಚ್ಚಾಗಿದ್ದಾರೆ. ದಲಿತರು, ಮುಸ್ಲಿಮರು, ಮಹಿಳೆಯರೂ ಇತಿಹಾಸ ಬರೆಯುವಂತಾಗಬೇಕು. ಆದರೆ ಅವರು ಕೂಡ ತಮ್ಮ ಗುರುತಿನ ಅಂಧಾಭಿಮಾನವನ್ನು ಮೀರಬೇಕು. ಬರೀ ಭಾಷೆ, ಜಾತಿ, ಧರ್ಮದ ಅಂಧಾಭಿಮಾನ ಅಷ್ಟೇ ಅಲ್ಲ, ರಾಷ್ಟ್ರೀಯ ಅಂಧಾಭಿಮಾನವನ್ನೂ ಮೀರಬೇಕು’ ಎಂದು ಇತಿಹಾಸಕಾರರು ಎದುರಿಸುವ ಸವಾಲುಗಳ ಬಗ್ಗೆ ಬೆಳಕು ಚೆಲ್ಲಿದರು.

ಗೋಷ್ಠಿಯನ್ನು ನಡೆಸಿಕೊಟ್ಟ ಹಿರಿಯ ಸಾಹಿತಿ ಓ.ಎಲ್‌. ನಾಗಭೂಷಣಸ್ವಾಮಿ ‘ಚರಿತ್ರೆಯನ್ನು ನಾವು ನಮ್ಮ ಕಾಲದ ನಮ್ಮ ಅಗತ್ಯಕ್ಕೆ ತಕ್ಕ ಹಾಗೆ ಸೃಷ್ಟಿಸಿಕೊಳ್ಳುತ್ತೇವೆ. ಇಂದು ನಾವು ಚರಿತ್ರೆಯನ್ನು ನಮ್ಮ ವರ್ತನೆಯ ಸಮರ್ಥನೆಗಾಗಿಯೂ ಬಳಸಿಕೊಳ್ಳುತ್ತಿದ್ದೇವೆಯೇ’ ಎನ್ನುವ ಪ್ರಶ್ನೆಯನ್ನು ಎತ್ತಿದರು.

’ಚರಿತ್ರೆಯಿಂದ ಬಿಡುಗಡೆ ಪಡೆಯದೆ ಹೊಸತನ್ನು ಸೃಷ್ಟಿಸಲು ಸಾಧ್ಯವಿಲ್ಲ’ ಎನ್ನುವ ಕೀರ್ತಿನಾಥ ಕುರ್ತಕೋಟಿಯವರ ಮಾತನ್ನು ನೆನಪಿಸಿಕೊಂಡ ಅವರು, ’ಸತ್ಯ ಮತ್ತು ವೈಜ್ಞಾನಿಕ ಸತ್ಯದ ಹೊರತು ಬೇರೆ ಸತ್ಯವೂ ಇರಬಹುದೇ ಎನ್ನುವುದನ್ನು ನಾವು ಹುಡುಕಬೇಕಿದೆ’ಎಂದರು.

**

ಸರ್ಕಾರದಿಂದ ಟಿಪ್ಪು ಜಯಂತಿ ಬೇಡ

‘ಸರ್ಕಾರ ಟಿಪ್ಪು ಜಯಂತಿ ಆಚರಿಸುವುದನ್ನು ನಾನು ಬೆಂಬಲಿಸುವುದಿಲ್ಲ. ಅದರ ನೆಪದಲ್ಲಿ ಆರ್‌ಎಸ್‌ಎಸ್‌ ಅಥವಾ ಬಜರಂಗದಳ ತೊಂದರೆಯನ್ನು ಉಂಟುಮಾಡುವುದು ನನಗೆ ಇಷ್ಟವಿಲ್ಲ’ ಎಂದು ಗುಹಾ ಹೇಳಿದರು.

ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದ ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ’ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹನುಮಜಯಂತಿ ಆಚರಿಸುವುದನ್ನೂ ನಾನು ಬೆಂಬಲಿಸುವುದಿಲ್ಲ. ಶ್ರೀರಂಗಪಟ್ಟಣದ ಸ್ಥಳೀಯರು ಟಿಪ್ಪು ಜಯಂತಿ ಆಚರಿಸಿಕೊಳ್ಳಲಿ. ಯಾವುದೋ ಒಂದು ಶಾಖೆಯಲ್ಲಿ ಆರ್‌ಎಸ್‌ಎಸ್‌ನವರು ಹನುಮಜಯಂತಿ ಆಚರಿಸಲಿ, ತೊಂದರೆಯಿಲ್ಲ. ಆದರೆ ಸರ್ಕಾರ ಯಾವುದೋ ಶತಮಾನದ ಐತಿಹಾಸಿಕ ಮನುಷ್ಯರ ಜಯಂತಿಗಳನ್ನು ಯಾಕೆ ಆಚರಿಸಬೇಕು? ಅದರ ಬದಲು ನಮ್ಮ ಸರ್ಕಾರ ಶಿವರಾಮ ಕಾರಂತ, ಕೆ.ವಿ. ಸುಬ್ಬಣ್ಣ ಅವರಂಥ ನಮ್ಮ ಗಣರಾಜ್ಯದಲ್ಲಿ ಬದುಕಿದ್ದವರ ಜಯಂತಿಗಳನ್ನು ಆಚರಿಸಲಿ’ ಎಂದರು.

ಟಿಪ್ಪು ಸುಲ್ತಾನ್‌ ದೇಶಭಕ್ತನೋ ದೇಶದ್ರೋಹಿಯೋ ಎಂಬ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ನಮ್ಮ ಕಾಲದ ಸಮಸ್ಯೆಗಳಿಗೆ ಇತಿಹಾಸದಲ್ಲಿ ಉತ್ತರ ಕಂಡುಕೊಳ್ಳುವುದು ಸರಿಯಲ್ಲ. ನಮ್ಮ ಇಂದಿನ ಜಗಳಗಳಿಗೆ ಇತಿಹಾಸ ಬಡಿಗೆಯಂತೆ ಬಳಕೆ ಆಗಬಾರದು. ಅದು ನಮ್ಮನ್ನು ನಾವೇ ನೋಡಿಕೊಳ್ಳುವ ಪ್ರಕ್ರಿಯೆಯಾಗಬೇಕು’ ಎಂದು ಹೇಳಿದರು.

’ಪ್ರಜಾವಾಣಿ’ ಅಂಕಣದ ನಂಟು!

ನಾನು ಕನ್ನಡ ಮಾತನಾಡದ ಕನ್ನಡಿಗ. ಕನ್ನಡ ಮಾತನಾಡದೆ ಹೋದರೂ ಈ ನಾಡಿನ ಜನರಿಂದ ಅದ್ಭುತ ಸ್ಪಂದನ, ಲೇಖಕರ ಸ್ನೇಹ ನನಗೆ ದೊರೆತಿದೆ. ಈ ನಿಟ್ಟಿನಲ್ಲಿ ’ಪ್ರಜಾವಾಣಿ’ ಅಂಕಣಬರಹಗಳು ಹಾಗೂ ಕರ್ನಾಟಕ ಕ್ರಿಕೆಟ್‌ ತಂಡದ ಕುರಿತ ನನ್ನ ಪ್ರೀತಿ ಕಾರಣವಾ
ಗಿರಬಹುದು ಎಂದು ಗುಹಾ ಹೇಳಿದರು.

**

ಭಾರತದ ಬಹುತ್ವವನ್ನು ಕಾಪಾಡಿಕೊಳ್ಳಲು ಸಾಂವಿಧಾನಿಕ ಮೌಲ್ಯಗಳಿಗೆ ಮರಳಬೇಕೇ ಹೊರತು ವೇದ, ಬೈಬಲ್‌ ಅಥವಾ ಕುರಾನ್‌ಗಳಿಗಲ್ಲ.

–ರಾಮಚಂದ್ರ ಗುಹಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT