ಮತ್ತೆ ಮೈಕೊಡವಿ ನಿಂತ ನಾಯಕರು

7

ಮತ್ತೆ ಮೈಕೊಡವಿ ನಿಂತ ನಾಯಕರು

Published:
Updated:
ಮತ್ತೆ ಮೈಕೊಡವಿ ನಿಂತ ನಾಯಕರು

ಮೈಸೂರು: ಉಪಚುನಾವಣೆ ವೇಳೆ ಪ್ರತಿಷ್ಠೆಯ ಕಣವಾಗಿದ್ದ ನಂಜನಗೂಡು ಕ್ಷೇತ್ರವು ಇದೀಗ ಟಿಕೆಟ್‌ ವಿಚಾರದಲ್ಲಿ ಗೊಂದಲದ ಗೂಡಾಗಿ ಪರಿಣಮಿಸಿದೆ. ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಖಚಿತವಾಗಿಲ್ಲ. ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆ ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಬಿಂಬಿತವಾಗಿತ್ತು. ಈ ಎರಡೂ ಕ್ಷೇತ್ರಗಳನ್ನು ಕಾಂಗ್ರೆಸ್‌ ಗೆದ್ದದ್ದು ಈಗ ಇತಿಹಾಸ. ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದ ಕಳಲೆ ಕೇಶವಮೂರ್ತಿ ನಂಜನಗೂಡಿನಲ್ಲಿ ಗೆಲುವು ಪಡೆದಿದ್ದರು.

ಕಳಲೆ ಅವರನ್ನು ಮತ್ತೆ ಗೆಲ್ಲಿಸುವಂತೆ ನಂಜನಗೂಡಿನಲ್ಲಿ ಇತ್ತೀಚೆಗೆ ನಡೆದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಕಳಲೆಗೆ ಸಿಗಲಿದೆ ಎಂದು ಹೇಳುತ್ತಿದ್ದರೂ ಇನ್ನೂ ಖಚಿತವಾಗಿಲ್ಲ. ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಟಿಕೆಟ್‌ಗಾಗಿ ಪ್ರಯತ್ನ ಮುಂದುವರಿಸಿದ್ದಾರೆ. ತಿ.ನರಸೀಪುರ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಡುವ ಉದ್ದೇಶದಿಂದ ನಂಜನಗೂಡು ಅಥವಾ ಬೆಂಗಳೂರಿನಲ್ಲಿ ಟಿಕೆಟ್ ಟಿಕೆಟ್ ಕೇಳುತ್ತಿದ್ದಾರೆ. ನಂಜನಗೂಡು ಕ್ಷೇತ್ರವನ್ನು ಮೊದಲ ಆದ್ಯತೆಯಾಗಿ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ‘ನಂಜನಗೂಡಿನಲ್ಲಿ ನಾನೇ ನಿಲ್ಲಬೇಕು ಎಂದು ಕಾರ್ಯಕರ್ತರು ಬಯಸುತ್ತಿದ್ದಾರೆ’ ಎಂದು ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ಹೇಳಿದ್ದರು. ಇಂತಹ ವಾತಾವರಣದಿಂದಾಗಿ ಕಳಲೆಗೆ ಟಿಕೆಟ್ ಖಚಿತ ಎಂದು ಹೇಳುವುದು ಕಷ್ಟಕರ ಎಂಬ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಹರಿದಾಡುತ್ತಿವೆ.

ಬಿಜೆಪಿಯಲ್ಲಿ ಹಲವರು: ಬಿಜೆಪಿ ಟಿಕೆಟ್‌ಗೆ ಹೆಚ್ಚಿನ ಆಕಾಂಕ್ಷಿಗಳಿದ್ದು, ಪಕ್ಷದ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿದೆ. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ವಿ.ಶ್ರೀನಿವಾಸಪ್ರಸಾದ್‌ ಹೇಳಿರುವುದು ಇಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ಬೆಳೆಯಲು ಕಾರಣ. ‘ಮುಂದಿನ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ಮತ್ತೆ ಜನರ ಮುಂದೆ ಕೈಮುಗಿದು ನಿಂತು ಮತ ನೀಡಿ ಎಂದು ಕೇಳುವ ವ್ಯಕ್ತಿ ನಾನಲ್ಲ. ಚುನಾವಣಾ ರಾಜಕೀಯಕ್ಕೆ ಇತಿಶ್ರೀ ಹಾಡಿದ್ದೇನೆ’ ಎಂದು ಖಚಿತಪಡಿಸಿದ್ದಾರೆ.

ಆದರೆ ಪ್ರಸಾದ್‌ ಅವರು ಅಳಿಯ ಹರ್ಷವರ್ಧನ ಅವರಿಗೆ ಟಿಕೆಟ್‌ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಉಪಚುನಾವಣೆಯಲ್ಲಿ ಶ್ರೀನಿವಾಸಪ್ರಸಾದ್‌ ಅವರಿಗೆ ಟಿಕೆಟ್‌ ಬಿಟ್ಟುಕೊಟ್ಟಿದ್ದ ಎಸ್‌.ಮಹದೇವಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಎಸ್‌.ದಯಾನಂದಮೂರ್ತಿ ಮತ್ತು ಡಾ.ಶಿವರಾಂ ಅವರೂ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

‘ಶ್ರೀನಿವಾಸಪ್ರಸಾದ್‌ ಈ ಭಾಗದ ಪ್ರಭಾವಿ ನಾಯಕರು. ಅವರು ಸ್ಪರ್ಧಿಸಬೇಕು ಎಂದು ಜನರು ಬಯಸುತ್ತಿದ್ದಾರೆ. ಅವರು ಸ್ಪರ್ಧಿಸಲು ಒಪ್ಪಿದರೆ ನಮಗೆ ಸಂತಸ. ನಿರ್ಧಾರ ಬದಲಿಸದಿದ್ದರೆ ನಾನೂ ಸೇರಿದಂತೆ ಕೆಲವು ಟಿಕೆಟ್‌ ಆಕಾಂಕ್ಷಿಗಳು ಇದ್ದೇವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಹೇಳಿದ್ದಾರೆ.

ಜೆಡಿಎಸ್‌ನಲ್ಲಿ ಇಬ್ಬರು: ಉಪ ಚುನಾವಣೆಯಲ್ಲಿ ತಟಸ್ಥವಾಗಿದ್ದ ಜೆಡಿಎಸ್ ಈ ಬಾರಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಸರತ್ತು ನಡೆಸುತ್ತಿದೆ. ಕಳಲೆ ಅವರು ಪಕ್ಷ ತೊರೆದ ಬಳಿಕ ಈ ಕ್ಷೇತ್ರದಲ್ಲಿ ಪಕ್ಷಕ್ಕೆ ಪ್ರಭಾವಿ ನಾಯಕನ ಕೊರತೆ ಕಾಡುತ್ತಿದೆ.

ಜೆಡಿಎಸ್‌ ಪರಿಶಿಷ್ಟ ಜಾತಿ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಬೆಳವಾಡಿ ಶಿವಕುಮಾರ್‌ ಮತ್ತು ಆರ್‌.ಸೋಮಸುಂದರ್‌ ಅವರ ಹೆಸರು ಕೇಳಿಬರುತ್ತಿದೆ. ಇಬ್ಬರೂ ಈಗಾಗಲೇ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಜನಬೆಂಬಲ ಗಳಿಸಲು ಪ್ರಯತ್ನಿಸುತ್ತಿದ್ದಾರೆ.

ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆ ಮಾಡುವಂತೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಸೋಮಸುಂದರ್‌ಗೆ ಸೂಚಿಸಿದ್ದಾರೆ ಎಂದು ಪಕ್ಷದ ಕೆಲವು ಮೂಲಗಳು ತಿಳಿಸಿವೆ. ಅವರು ಇದೀಗ ನಂಜನಗೂಡು ಎನ್‌ಜಿಒ ಕಾಲೊನಿಯಲ್ಲಿ ಕಚೇರಿಯನ್ನು ತೆರೆದಿದ್ದು, ಪಕ್ಷ ಸಂಘಟಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

* * 

ನಂಜನಗೂಡು ಕ್ಷೇತ್ರದಲ್ಲಿ ನಾನೂ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಸ್ಪರ್ಧಿಸುವ ತೀರ್ಮಾನವನ್ನು ಪಕ್ಷದ ಮುಖಂಡರಿಗೆ ತಿಳಿಸಿದ್ದೇನೆಕೋಟೆ

ಎಂ.ಶಿವಣ್ಣ

ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry