ನೀರಾವರಿಗೆ ₹ 1,500 ಕೋಟಿ ಮೀಸಲು

7

ನೀರಾವರಿಗೆ ₹ 1,500 ಕೋಟಿ ಮೀಸಲು

Published:
Updated:
ನೀರಾವರಿಗೆ ₹ 1,500 ಕೋಟಿ ಮೀಸಲು

ಮಂಡ್ಯ: ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಬಜೆಟ್‌ನಲ್ಲಿ ₹ 1,500 ಕೋಟಿ ಹಣ ಮೀಸಲಿಡಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಮದ್ದೂರು ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

‘ಈಗ ಬಿಜೆಪಿ 19 ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ. ಇನ್ನು ಆರು ತಿಂಗಳಲ್ಲಿ ಬಿಜೆಪಿ ಸರ್ಕಾರ 22 ರಾಜ್ಯಗಳಲ್ಲಿ ಅಧಿಕಾರ ಹಿಡಿಯಲಿದೆ. ಅದರಲ್ಲಿ ಕರ್ನಾಟಕ ರಾಜ್ಯವೂ ಒಂದು. ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ₹ 1 ಲಕ್ಷ ಕೋಟಿ ಹಣವನ್ನು ನೀರಾವರಿಗೆ ಮೀಸಲಿಡಲಾಗುವುದು. ಕೆಆರ್‌ಎಸ್‌ ನೀರನ್ನು ಮಾರ್ಕೋನಹಳ್ಳಿ ಜಲಾಶಯಕ್ಕೆ ಹರಿಸುವ ಕಾಲುವೆ ನಿರ್ಮಾಣ ಕಾಮಗಾರಿಗೆ ಅಗತ್ಯ ಸಹಾಯ ಮಾಡಲಾಗುವುದು’ ಎಂದು ಹೇಳಿದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಖಜಾನೆಯನ್ನು ಲೂಟಿ ಮಾಡುತ್ತಿದ್ದಾರೆ. ಎರಡು ದಿನಕ್ಕೆ ಒಂದು ದಲಿತ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣ ನಡೆಯುತ್ತಿವೆ. ಮೂರು ದಿನಕ್ಕೆ ಒಂದರಂತೆ ಕೊಲೆಗಳು ನಿರಂತರವಾಗಿ ನಡೆಯುತ್ತಿವೆ. ಈ ಕುರಿತು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಆದರೂ ರಾಜ್ಯ ಸರ್ಕಾರಕ್ಕೆ ಬುದ್ಧಿ ಬಂದಿಲ್ಲ. ಇಂದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವವೇ ಮೆಚ್ಚುವಂತಹ ಕೆಲಸ ಮಾಡುತ್ತಿದ್ದಾರೆ. ಅವರ ಕೈ ಬಲಪಡಿಸಬೇಕಾದರೆ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಬೇಕಾಗಿದೆ’ ಎಂದು ಹೇಳಿದರು.

‘ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತಿದೆ. ಈಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋನಿಯಾಗಾಂಧಿ ಹಾಗೂ ರಾಹುಲ್‌ ಗಾಂಧಿ ಪ್ರತಿನಿಧಿಸುವ ರಾಯ್‌ಬರೇಲಿ ಹಾಗೂ ಅಮೇಠಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸಂಪೂರ್ಣವಾಗಿ ಸೋತಿದೆ. ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಶೀಘ್ರದಲ್ಲಿ ಅಧಿಕಾರ ಕಳೆದುಕೊಳ್ಳಲಿದ್ದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ’ ಎಂದು ಹೇಳಿದರು.

ರೈತರ ಜೊತೆ ಚೆಲ್ಲಾಟ: ನಗರದ ಸಿಲ್ವರ್‌ ಜ್ಯೂಬಿಲಿ ಉದ್ಯಾನದಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಯಡಿಯೂರಪ್ಪ ‘ರಾಜ್ಯ ಸರ್ಕಾರ ರೈತರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರಿಗಾಗಿ ಪ್ರತ್ಯೇಕ ಕೃಷಿ ಬಜೆಟ್‌ ಮಂಡನೆ ಮಾಡಿದ್ದೆ. ಉಚಿತ ವಿದ್ಯುತ್‌, ಹಾಲು ಉತ್ಪಾದಕರಿಗೆ ಸಹಾಯಧನ, ಬಡ್ಡಿ ರಹಿತ ಸಾಲ ಯೋಜನೆಗಳನ್ನು ಜಾರಿಗೊಳಿಸಿದ್ದೆ. ನಮ್ಮ ಸರ್ಕಾರ ಎರಡು ಬಾರಿ ರೈತರ ಸಾಲ ಮನ್ನಾ ಮಾಡಿತ್ತು. ಆದರೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎಲ್ಲಾ ಯೋಜನೆಗಳಿಗೆ ತಿಲಾಂಜಲಿ ನೀಡಿ ರೈತರಿಗೆ ಅನ್ಯಾಯ ಮಾಡಿದೆ’ ಎಂದು ಹೇಳಿದರು.

‘ಮಹಿಳೆಯರ ಸಬಲೀಕರಣಕ್ಕಾಗಿ 18 ಲಕ್ಷ ಹೆಣ್ಣುಮಕ್ಕಳಿಗೆ ಅನುಕೂಲವಾಗುವಂತೆ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರ ಅಭಿವೃದ್ಧಿಗಾಗಿ ನೂರಾರು ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಯಾಗಿದ್ದವು. ಆದರೆ ಈಗ ಅವುಗಳನ್ನು ಉಳಿಸಿಕೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿ, ಅಮೃತ್‌ ಯೋಜನೆ, ಸ್ಮಾರ್ಟ್‌ ಸಿಟಿ, ಸಾರ್ವಜನಿಕ ಶೌಚಾಲಯಕ್ಕೆ ಆದ್ಯತೆ ನೀಡಿದ್ದೆವು. ಬಿಜೆಪಿ ಅಧಿಕಾರಕ್ಕೆ ಬಂದರೆ ಇಂಹತ ಜಯಪ್ರಿಯ ಯೋಜನೆಗಳು ಮತ್ತೆ ಜಾರಿಯಾಗಲಿವೆ’ ಎಂದು ಹೇಳಿದರು.‌

ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಶಾಸಕ ಸಿ.ಪಿ.ಯೋಗೇಶ್ವರ್‌, ವಿಧಾನಪರಿಷತ್‌ ಸದಸ್ಯ ಡಿ.ಎಸ್‌.ವೀರಯ್ಯ, ಮುಖಂಡರಾದ ಅಬ್ದುಲ್‌ ಅಜೀಮ್‌, ಕೆ.ಶಿವರಾಂ, ತೇಜಶ್ವಿನಿ ರಮೇಶ್‌ಗೌಡ, ಕೆ.ಶಿವರಾಂ, ನಾಗಣ್ಣಗೌಡ, ಎಚ್‌.ಆರ್‌.ಅರವಿಂದ್‌ ಹಾಜರಿದ್ದರು.

ಆಕರ್ಷಣೆ ತಂದ ಮಂಡ್ಯ ಜಿಲ್ಲೆಯ ಮಾಜಿ ಮುಖ್ಯಮಂತ್ರಿಗಳು

ಮದ್ದೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆ ವೇದಿಕೆಯಲ್ಲಿ ಜಿಲ್ಲೆಯ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಹಾಗೂ ಎಸ್‌.ಎಂ.ಕೃಷ್ಣ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಎಸ್‌.ಎಂ.ಕೃಷ್ಣ ಮೊದಲ ಬಾರಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡ ಕಾರಣ ಬಿ.ಎಸ್‌.ಯಡಿಯೂರಪ್ಪ ಅಪಾರ ಸಂತಸ ವ್ಯಕ್ತಪಡಿಸಿದರು.

‘200 ಯಾತ್ರೆಗಳಲ್ಲಿ ಪಾಲ್ಗೊಂಡಿದ್ದೇನೆ. ಆದರೆ ಇಂದು ನನಗೆ ಅತೀವ ಸಂತಸವಾದ ದಿನ. ನಮ್ಮ ಹಿರಿಯ ಮುಖಂಡರಾದ ಎಸ್‌.ಎಂ.ಕೃಷ್ಣ ಅವರು ಪಾಲ್ಗೊಂಡಿರುವುದು ನನ್ನ ಸಂತಸ ಅರಳಿದೆ. ಇಂದು ನಾನು ಏನನ್ನೂ ಮಾತನಾಡಲಾರೆ’ ಎಂದರು. ‘ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ನಮ್ಮೂರಿನ ಜಾತ್ರೆಯಲ್ಲಿ ಪಾಲ್ಗೊಳ್ಳತ್ತಿರುವಂತೆ ಸಂತೋಷವಾಗಿದೆ’ ಎಂದು ಎಸ್‌.ಎಂ.ಕೃಷ್ಣ ಹೇಳಿದರು.

ತವರಿನಿಂದ ಗೆಲ್ಲಿಸಿಕೊಡಿ

‘ಮಂಡ್ಯ ನನ್ನ ತವರು ಜಿಲ್ಲೆ. ಇಲ್ಲಿ ಬಿಜೆಪಿಯಿಂದ ಶಾಸಕರು ಇಲ್ಲದೇ ಇರುವುದು ನನ್ನ ಮನಸ್ಸನ್ನು ಕಿತ್ತು ಕಿನ್ನುತ್ತಿದೆ. ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಎರಡು–ಮೂರು ಕ್ಷೇತ್ರಗಳಲ್ಲಿ ಶಾಸಕರನ್ನು ಗೆಲ್ಲಿಸಿ ಕೊಡಿ. ತಾಯಂದಿರು, ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಕೆಲಸ ಮಾಡಿ ನಮ್ಮ ಕೈ ಬಲಪಡಿಸಿ’ ಎಂದು ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry