ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿ: ವ್ಯಕ್ತಿ ಪ್ರತಿಷ್ಠೆಗೆ ಹಲವು ಸವಾಲು

Last Updated 20 ಜನವರಿ 2018, 7:00 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಂತ ಕುತೂಹಲಕಾರಿ ಕ್ಷೇತ್ರ ಭದ್ರಾವತಿ. 1957ರಿಂದ ಇಲ್ಲಿಯವರೆಗೆ ನಡೆದ ಬಹುತೇಕ ಚುನಾವಣೆಗಳಲ್ಲಿ ಪಕ್ಷಕ್ಕಿಂತ ವ್ಯಕ್ತಿ ಪ್ರತಿಷ್ಠೆಗೇ ಇಲ್ಲಿನ ಮತದಾರರು ಮನ್ನಣೆ ನೀಡಿದ್ದಾರೆ.

ಕ್ಷೇತ್ರದಲ್ಲಿ ಕಳೆದೆರಡು ದಶಕಗಳಿಂದ ಸಾಂಪ್ರದಾಯಿಕ ಎದುರಾಳಿಗಳು ಎಂದೇ ಗುರುತಿಸಿಕೊಂಡಿರುವ ವಿಭಿನ್ನ ವ್ಯಕ್ತಿತ್ವದ ಎಂ.ಜೆ. ಅಪ್ಪಾಜಿ, ಬಿ.ಕೆ. ಸಂಗಮೇಶ್ವರ ಈ ಬಾರಿಯೂ ಮುಖಾಮುಖಿಯಾಗಲಿದ್ದಾರೆ. ಆದರೆ, ಈ ಬಾರಿ ಹೊಸ ಮುಖಗಳ ಪ್ರವೇಶ ಇಬ್ಬರ ನಿದ್ದೆಗೆಡಿಸಿದೆ.

1994ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಪಡೆದಿದ್ದ ಅಪ್ಪಾಜಿ, 1999ರಲ್ಲೂ ಕಾಂಗ್ರೆಸ್‌ನ ಸಂಗಮೇಶ್ ವಿರುದ್ಧ ಸ್ವತಂತ್ರವಾಗಿ ಸ್ಪರ್ಧಿಸಿ ವಿಜಯ ದಾಖಲಿಸಿದ್ದರು. ನಂತರ ಬದಲಾದ ಕಾಲಘಟ್ಟದಲ್ಲಿ ಬಿ.ಕೆ. ಸಂಗಮೇಶ್ ಎದುರು ಎರಡು ಬಾರಿ ಸೋಲುಕಂಡ ನಂತರ ಜೆಡಿಎಸ್ ಮೊರೆ ಹೋಗಿದ್ದರು. 2013ರಲ್ಲಿ ಜೆಡಿಎಸ್‌ನಿಂದಲೇ ಸ್ಪರ್ಧಿಸಿ ಭಾರಿ ಅಂತರದ ಗೆಲುವು ಪಡೆದಿದ್ದರು.

2004ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಅಪ್ಪಾಜಿ ಅವರನ್ನು ಸೋಲಿಸಿದ್ದ ಸಂಗಮೇಶ್ವರ 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. 2013ರಲ್ಲಿ ಸಂಗಮೇಶ್ವರ್ ಅವರಿಗೆ ಕೈಕೊಟ್ಟ ಕಾಂಗ್ರೆಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಿ.ಎಂ. ಇಬ್ರಾಹಿಂ ಅವರನ್ನು ಕಣಕ್ಕೆ ಇಳಿಸಿತ್ತು. ಬಂಡಾಯದ ಬಾವುಟ ಹಾರಿಸಿದ್ದ ಸಂಗಮೇಶ್ವರ ಹಾಗೂ ಇಬ್ರಾಹಿಂ ಅವರ ಕಿತ್ತಾಟದ ಲಾಭ ಪಡೆದ ಅಪ್ಪಾಜಿ ಭಾರಿ ಮತಗಳ ಅಂತರದಲ್ಲಿ ಗೆದ್ದಿದ್ದರು. ಟಿಕೆಟ್ ಹಂಚಿಕೆಯ ಯಡವಟ್ಟಿನಿಂದ ಕಾಂಗ್ರೆಸ್‌ ಗೆಲುವಿನ ಅವಕಾಶ ಕಳೆದುಕೊಂಡಿತ್ತು.

ಬದಲಾದ ಪರಿಸ್ಥಿತಿಯ ಸವಾಲುಗಳು: ಎರಡು ದಶಕ ಸಾಂಪ್ರದಾಯಿಕ ಎದುರಾಳಿಗಳಾಗಿದ್ದ ಈ ಇಬ್ಬರಿಗೆ ಈ ಬಾರಿ ಹಲವು ಸವಾಲುಗಳು ಎದುರಾಗಿವೆ. ಭದ್ರಾವತಿ ಜೆಡಿಎಸ್‌ನ ಪ್ರಶ್ನಾತೀತ ನಾಯಕರಾಗಿದ್ದ ಅಪ್ಪಾಜಿ ಅವರಿಗೆ ಅವರೇ ಬೆಳೆಸಿದ ಶಿಷ್ಯ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಸ್. ಕುಮಾರ್ (ಕುಮಾರ್ ಪತ್ನಿ ಜ್ಯೋತಿ ಅವರು ಪ್ರಸ್ತುತ ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ) ಗುರುವಿನ ವಿರುದ್ಧವೇ ಕಣಕ್ಕೆ ಇಳಿಯಲು ತೆರೆಮರೆಯ ಸಿದ್ಧತೆ ನಡೆಸಿದ್ದಾರೆ.

ಕಳೆದ ಬಾರಿ ಟಿಕೆಟ್ ವಂಚಿತರಾಗಿದ್ದ ಸಂಗಮೇಶ್‌ ಪರ ಈ ಬಾರಿ ವರಿಷ್ಠರು ಒಲವು ತೋರುತ್ತಿದ್ದರೂ, 2013ರಲ್ಲಿ ಬಂಡಾಯವಾಗಿ ಸ್ಪರ್ಧಿಸಿ, ಕಾಂಗ್ರೆಸ್‌ ಸೋಲಿಗೆ ಕಾರಣವಾಗಿದ್ದ ಅಂಶ ಅವರಿಗೆ ತೊಡಕಾಗುವ ಸಾಧ್ಯತೆ ಇದೆ. ಅವರಿಗೆ ಟಿಕೆಟ್ ನೀಡಲೇಬಾರದು ಎಂದು ಇಬ್ರಾಹಿಂ ಪಟ್ಟು ಹಿಡಿದಿದ್ದಾರೆ. ಕಾಂಗ್ರೆಸ್‌ನಲ್ಲಿದ್ದರೂ ಎಂದೂ ಕಾಂಗ್ರೆಸ್‌ಗೆ ನಿಷ್ಠವಾಗಿರದ ಅವರಿಗೆ ಟಿಕೆಟ್ ನೀಡಬಾರದು ಎಂದು ಮೂಲ ಕಾಂಗ್ರೆಸ್ಸಿಗರೂ ಒತ್ತಡ ಹಾಕುತ್ತಿದ್ದಾರೆ.

ಮಾಜಿ ಶಾಸಕರ ಪುತ್ರ ಪ್ರವೇಶ: ಈ ಎಲ್ಲ ಬೆಳವಣಿಗಳ ಮಧ್ಯೆ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಪಟೇಲ್‌ ಸದ್ದಿಲ್ಲದೇ ಕ್ಷೇತ್ರ ಸುತ್ತುತ್ತಿದ್ದಾರೆ. ಅವರ ತಂದೆ ಜಿ. ರಾಜಶೇಖರಪ್ಪ ಅವರು ಗುಂಡೂರಾವ್ ಅವಧಿಯಲ್ಲಿ (1978–83) ಭದ್ರಾವತಿಯ ಶಾಸಕರಾಗಿದ್ದರು. ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ರಾಜಶೇಖರಪ್ಪ ಅವರ ಸಜ್ಜನಿಕೆ, ಅಭಿವೃದ್ಧಿ ಕಾಮಗಾರಿಗಳ ಶ್ರೀರಕ್ಷೆ ಪ್ರವೀಣ್ ಬೆಂಬಲಕ್ಕಿದೆ. ಯುವ ಕಾಂಗ್ರೆಸ್‌ನ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಅವರು ಕಾಂಗ್ರೆಸ್ ವರಿಷ್ಠರ ಜತೆಗೂ ಉತ್ತಮ ಒಡನಾಟ ಹೊಂದಿದ್ದಾರೆ.

ಕ್ಷೇತ್ರದ ಹಲವು ಮುಖಂಡರು ಪಕ್ಷಾತೀತವಾಗಿ ಅವರ ಜತೆಗೆ ಗುರುತಿಸಿಕೊಳ್ಳುತ್ತಿರುವುದು, ಹೊಸ ಮುಖಕ್ಕೆ ಜನರು ಮನ್ನಣೆ ನೀಡುತ್ತಿರುವುದು ಸಾಂಪ್ರದಾಯಿಕ ಎದುರಾಳಿಗಳಿಗೆ ಸವಾಲಾಗಿದೆ.

ಈ ನಡುವೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಬಲ್ಕಿಶ್ ಬಾನು, ಅಂದಿನ ಶಿವಮೊಗ್ಗ–ಭದ್ರಾವತಿ ನಗರ ಪಾಲಿಕೆ ಉಪ ಮೇಯರ್ ಸನಾವುಲ್ಲಾ
ಕಾಂಗ್ರೆಸ್ ಟಿಕೆಟ್‌ಗೆ ಲಾಬಿ ಆರಂಭಿಸಿದ್ದಾರೆ.

ಎಂದೂ ಗೆಲುವು ಕಾಣದ ಬಿಜೆಪಿ: ಭದ್ರಾವತಿ ಕ್ಷೇತ್ರದ 6 ದಶಕಗಳ ಇತಿಹಾಸದಲ್ಲಿ ಬಿಜೆಪಿ ಇದುವರೆಗೂ ಒಂದು ಬಾರಿಯೂ ಗೆಲುವು ದಾಖಲಿಸಿಲ್ಲ. ಕಳೆದ ಬಾರಿ ಪಕ್ಷದಿಂದ ಸ್ಪರ್ಧಿಸಿದ್ದ ಕದಿರೇಶ್ ಈ ಬಾರಿಯೂ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಆರ್‌ಎಸ್‌ಎಸ್‌ನ ಧರ್ಮಪ್ರಸಾದ್, ಮರಿಸ್ವಾಮಿ, ಮೆಡಿಕಲ್‌ ಶಾಪ್ ಆನಂದ್, ನಗರಸಭೆ ಸದಸ್ಯ ಜಿ. ಆನಂದ್‌ಕುಮಾರ್, ಮಂಗೋಟೆ ರುದ್ರೇಶ್ ಬಿಜೆಪಿ ಟಕೆಟ್ ಆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT