ಮಾವಿನ ಬೆಳೆಗೆ ಬೂದಿರೋಗ

7

ಮಾವಿನ ಬೆಳೆಗೆ ಬೂದಿರೋಗ

Published:
Updated:
ಮಾವಿನ ಬೆಳೆಗೆ ಬೂದಿರೋಗ

ಗುಬ್ಬಿ: ತಾಲ್ಲೂಕಿನಲ್ಲಿ ರೈತರು ತಮ್ಮ ಮಾವಿನ ಬೆಳೆಗೆ ಹಬ್ಬಿರುವ ಜಿಗಿಹುಳು ರೋಗ ಹಾಗೂ ಬೂದಿರೋಗ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಈ ರೋಗ ಹೀಗೆ ಮುಂದುವರಿದರೆ ಮಾವು ಫಸಲು ಈ ವರ್ಷ ಕಟ್ಟದು.

ಗುಬ್ಬಿ ತಾಲ್ಲೂಕು ಮಾವು ಬೆಳೆಯುವಲ್ಲಿ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ. ಉದ್ಯೋಗ ಖಾತರಿ ಯೋಜನೆ ಹಾಗೂ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಅಡಿಯಲ್ಲಿ ರೂಪಿಸಿರುವ ಕಾರ್ಯಕ್ರಮಗಳಿಂದ ಪ್ರಸಕ್ತ ಸಾಲಿನಲ್ಲಿ ಶೇ 10ರಷ್ಟು ಮಾವಿನ ಸಸಿ ನಾಟಿ ಹೆಚ್ಚಿದೆ.

ಕಳೆದ ವರ್ಷ ಇದೆ ಸಮಯಕ್ಕೆ ಶೇ 80ರಷ್ಟು ಹೂ ಕಾಣಿಸಿಕೊಂಡಿತ್ತು. ಈ ವರ್ಷ 40ರಷ್ಟು ಮಾವು ಮಾತ್ರ ಹೂ ಕಟ್ಟಿದೆ ಎನ್ನುವ ತೋಟಗಾರಿಕಾ ಅಧಿಕಾರಿ ರಾಘವೇಂದ್ರ ಅವರು, ಬೂದಿರೋಗ, ಜಿಗಿಹುಳುರೋಗ, ಕಾಂಡಕೋರಕ, ಕುಡಿಕೊರಕ ಮಾವು ಬೆಳೆವ ರೈತರನ್ನು ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರೋಗ ನಿಯಂತ್ರಿಸಲು ರೈತರು ಹಾಗೂ ಮಾವಿನ ತೋಟ ಮಾಡಿಕೊಂಡವರು ಹೂ ಮತ್ತು ಕಾಯಿ ಉಳಿಸಿಕೊಳ್ಳಲು ಕೀಟನಾಶಕ ಸಿಂಪಡಿಸುತ್ತಿದ್ದಾರೆ. ಬೂದಿರೋಗ ನಿಯಿಂತ್ರಿಸಲು ಒಂದು ಲೀಟರ್ ನೀರಿಗೆ 3ಗ್ರಾಂ ಸಲ್ಪರ್ ಮಿಕ್ಸ್ ಮಾಡಿ ಸಿಂಪಡಿಸಬೇಕು. ಹೊಸ ಕುಡಿ ತಿನ್ನುವ ಕುಡಿಕೊರಕ ಹುಳು ನಿಯಂತ್ರಣಕ್ಕೆ ಇಮಿಡಾಕೋಪ್ರಿಡ್ ಕಾನ್ಪಿಡಾರ್ ಔಷಧಿಯನ್ನು ಪ್ರತಿ ಲೀಟರ್‌ಗೆ 0.5 ಎಂಎಲ್ ಬೆರೆಸಿ ಸಿಂಪಡಿಸಬೇಕು. ಜಿಗಿಹುಳು ನಿಯಂತ್ರಿಸಲು ಡೈಫೆ ನ್ಯೂನೋಜೋಲ್ 0.5 ಮಿಲಿ ದ್ರಾವಣವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಸಿದರೆ ರೋಗ ನಿಯಂತ್ರಿಸಬಹುದು ಎನ್ನುತ್ತಾರೆ ಮಾವು ಬೆಳೆಗಾರ ಜಗದೀಶ್.

ಮಾವು ಬೆಳೆಯ ಮೇಲೆ ಐಎಸ್‌ಒ ಪ್ರಯೋಗ

ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ಗೌರಿಪುರದ ಬಳಿ ಒಂದು ಕ್ಲಸ್ಟರ್ (25 ಎಕರೆ) ಮಾವಿನ ತೋಟದ ರೈತರಿಗೆ ಗುಬ್ಬಿ ತೋಟಗಾರಿಕಾ ಇಲಾಖೆ ಮಾರ್ಗದರ್ಶನ ನೀಡುತ್ತಿದೆ. ಉಳುಮೆ ಮಾಡುವುದು, ಗೊಬ್ಬರ, ನೀರಾವರಿ, ರಾಸಾಯನಿಕ ಸಿಂಪಡಣೆ ಮಾಡಿ ಉತ್ತಮ ಬೆಳೆ ತೆಗೆಯುವ ಬಗ್ಗೆ ಈ ತೋಟದಲ್ಲಿ ಪ್ರಯೋಗ ನಡೆದಿದೆ. ಇಲ್ಲಿ ಬೆಳೆದ ಮಾವು ಐಎಸ್‌ಒ ಮಾನ್ಯತೆ ಪಡೆಯುವಂತೆ ನಿಗಾಮಾಡಲಾಗುತ್ತಿದೆ ಎನ್ನುತ್ತಾರೆ ಗುಬ್ಬಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಪ್ಪ.

ಕಾಂಡಕೊರಕ ಹುಳದ ಕಾಟ

ಹೆಚ್ಚು ಆದಾಯ ತರುವ ಬಾದಾಮಿ ಮಾವಿನ ತಳಿಯ ಮರಗಳಿಗೆ ಕಾಂಡಕೊರಕ ಹುಳು ಕಾಟ ಹೆಚ್ಚಾಗಿದೆ. ನಿಧಾನ ಗತಿಯಲ್ಲಿ ಕಾಂಡ ಕೊರೆದು ಮರದ ಸಾರವನ್ನು ಹೀರಿ ಮರವನ್ನೇ ಒಣಗುವಂತೆ ಮಾಡುತ್ತಿದೆ. ಈ ಮಾವಿನ ಮರದಿಂದಲೇ ರೈತರಿಗೆ ಹೆಚ್ಚು ಆದಾಯವಿದ್ದರೂ ಕಾಂಡಕೊರಕ ಹುಳುವಿನ ಬಾಧೆಯಿಂದ ಅಪಾರ ನಷ್ಟ ಅನುಭವಿಸುತ್ತಿದ್ದಾರೆ.

ಮಾವು ನಾಟಿಗೆ ಉತ್ಸುಕತೆ

ಅಕಾಲಿಕ ಮಳೆ, ಕೊಳವೆಬಾವಿ ನೀರಿನ ಕೊರತೆ ನಡುವೆ ಮಾವು ನಾಟಿ ಮಾಡಲು ಉತ್ಸುಕತೆ ತೋರುತ್ತಿದ್ದಾರೆ ತಾಲ್ಲೂಕಿನ ರೈತರು. ಒಂದು ಎಕರೆ ಭೂಮಿಯಲ್ಲಿ 10 ಕ್ವಿಂಟಲ್ ರಾಗಿ ಬೆಳೆಯಲು ಆಗದು. ಕ್ವಿಂಟಲ್ ರಾಗಿಗೆ ಮೂರ್ನಾಲ್ಕು ಸಾವಿರ ಪಡೆಯಲು ಐದಾರು ತಿಂಗಳು ಒಣಗಬೇಕಿದೆ ಎನ್ನುವ ರೈತರು ಎರಡು ವರ್ಷ ನೀರು ಹೊತ್ತೊಯ್ದು ಮಾವಿನ ಸಸಿ ಬೆಳೆಸಿದರೆ ಹತ್ತಾರು ವರ್ಷ ಕುಳಿತು ಉಣ್ಣಬಹುದು.

ಅಂಕಿ ಅಂಶ

(ಮಾವು ಬೆಳೆ ಗುಬ್ಬಿ ತಾಲ್ಲೂಕು ಒಟ್ಟು 5895 ಹೆಕ್ಟೇರ್)

ಕಸಬಾ ಹೋಬಳಿ 670 ಹೆಕ್ಟೇರ್

ಚೇಳೂರು ಹೋಬಳಿ 3424 ಹೆಕ್ಟೇರ್

ಹಾಗಾಲವಾಡಿ ಹೋಬಳಿ 369 ಹೆಕ್ಟೇರ್

ನಿಟ್ಟೂರು ಹೋಬಳಿ 561 ಹೆಕ್ಟೇರ್

ಕಡಬ ಹೋಬಳಿ 569 ಹೆಕ್ಟೇರ್

ಸಿ.ಎಸ್.ಪುರ ಹೋಬಳಿ 302 ಹೆಕ್ಟೇರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry