ಮೈಸೂರು ಸೋಪ್‌ ಸಂತೆಗೆ ಜನಸಾಗರ!

7

ಮೈಸೂರು ಸೋಪ್‌ ಸಂತೆಗೆ ಜನಸಾಗರ!

Published:
Updated:
ಮೈಸೂರು ಸೋಪ್‌ ಸಂತೆಗೆ ಜನಸಾಗರ!

ವಿಜಯಪುರ: ಬರೋಬ್ಬರಿ ವರ್ಷದ ಬಳಿಕ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ತನ್ನ ಉತ್ಪನ್ನಗಳ ಮೇಳವನ್ನು, ನಗರದ ಆರಾಧ್ಯದೈವ ಸಿದ್ಧೇಶ್ವರ ದೇಗುಲ ಬಳಿಯ ಶಿವಾನುಭವ ಮಂಟಪದಲ್ಲಿ ಆಯೋಜಿಸಿದ್ದು, ಅಭೂತಪೂರ್ವ ಸ್ಪಂದನೆ ದೊರಕಿದೆ.

ಹಿಂದಿನ ವರ್ಷದ ಸಿದ್ಧೇಶ್ವರ ಸಂಕ್ರಮಣ ಜಾತ್ರೆ ಸಂದರ್ಭ ವಿಜಯಪುರದಲ್ಲಿ ಮೊದಲ ಬಾರಿಗೆ ಸೋಪು ಸಂತೆ ನಡೆಸಿದ್ದ ಸಂಸ್ಥೆ, ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ಮೇಳ ಆಯೋಜಿಸಿರುವುದು ಜಾತ್ರಾ ಶತಮಾನೋತ್ಸವದಲ್ಲಿ ಎಂಬುದು ವಿಶೇಷ.

ಹತ್ತು ದಿನ ಮೇಳ ಆಯೋಜನೆ ಯಾಗಿದ್ದು (ಜ. 13ರಿಂದ 22), ಈಗಾಗಲೇ ಏಳು ದಿನ ಪೂರೈಸಿದೆ. ಆರು ದಿನದ ವಹಿವಾಟಿನ ಚಿತ್ರಣ ಲಭ್ಯವಿದ್ದು, ಹಿಂದಿನ ವರ್ಷದ ದಾಖಲೆಗಳನ್ನು ಈಗಾಗಲೇ ಹಿಂದಿಕ್ಕಿದೆ. ಉಳಿದ ಮೂರು ದಿನಗಳಲ್ಲಿ ವ್ಯಾಪಕ ಪ್ರಮಾಣದ ವಹಿವಾಟು ನಡೆಯಲಿದೆ. ಶನಿವಾರ, ಭಾನುವಾರ ಇದು ದುಪ್ಪಟ್ಟುಗೊಳ್ಳಲಿದೆ ಎಂದು ಕೆಎಸ್‌ಡಿಎಲ್‌ನ ಮಾರಾಟ ವಿಭಾಗದ ವ್ಯವಸ್ಥಾಪಕ ಎಚ್.ಹೂಲಯ್ಯ ತಿಳಿಸಿದರು.

‘ಕಲಬುರ್ಗಿ, ಬಳ್ಳಾರಿಯಲ್ಲಿ ತಲಾ ಒಂದೊಂದು ಬಾರಿ, ಹುಬ್ಬಳ್ಳಿಯಲ್ಲಿ ಮೂರು ಬಾರಿ, ವಿಜಯಪುರದಲ್ಲಿ ಇದೀಗ ಎರಡನೇ ಬಾರಿಗೆ ‘ಸೋಪು ಸಂತೆ’ ನಡೆಸುತ್ತಿದ್ದೇವೆ. ಈ ಬಾರಿ ಮಧ್ಯಮ ವರ್ಗದ ಜನತೆ, ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡು ₹ 20ರ ಬೆಲೆಯ 100 ಗ್ರಾಂ ತೂಕದ ‘ಮೈ ಸೋಪ್‌’ ಎಂಬ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದ್ದೇವೆ. ಸಾಕಷ್ಟು ಬೇಡಿಕೆ ವ್ಯಕ್ತವಾಗಿದೆ’ ಎಂದು ಹೇಳಿದರು.

‘ನಮ್ಮ ಮೇಳದಲ್ಲಿ 15ಕ್ಕೂ ಹೆಚ್ಚು ಬಗೆಯ ಸಾಬೂನು, ಕಾಸ್ಮೆಟಿಕ್ಸ್‌, ಡಿಟರ್ಜೆಂಟ್ಸ್‌, ಅಗರಬತ್ತಿ, ಫೇಸ್‌ ಪ್ಯಾಕ್‌, ಮಸಾಜ್‌ ಆಯಿಲ್‌, ಧೂಪ, ಕರ್ಪೂರ, ಪೂಜಾ ಕಿಟ್‌, ಪೌಡರ್, ಬಹು ಬಳಕೆಯ ಕ್ಲೀನಾಲ್‌ ಫಿನಾಯಿಲ್‌ ಲಭ್ಯ.

ಹೋದ ವರ್ಷ ಖರೀದಿಸಿದ ಗ್ರಾಹಕರು ಈ ಬಾರಿ ತಮ್ಮ ಜತೆಯಲ್ಲೇ ಸ್ನೇಹಿತರನ್ನು ಖರೀದಿಗಾಗಿ ಕರೆ ತರುತ್ತಿದ್ದಾರೆ. ನಿತ್ಯ 10 ಸಾವಿರಕ್ಕೂ ಅಧಿಕ ಜನ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಇವರಲ್ಲಿ ಶೇ 10ರಿಂದ 15ರಷ್ಟು ಮಂದಿ ಖರೀದಿ ನಡೆಸಿ, ಉತ್ಪನ್ನಗಳ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಕೆಎಸ್‌ಡಿಎಲ್‌ನ ಕಿರಿಯ ಅಧಿಕಾರಿ ವಿಜಯ ಮಹಾಂತೇಶ ಮಾಹಿತಿ ನೀಡಿದರು.

‘ಕಾರ್ಖಾನೆಯಿಂದ ನೇರವಾಗಿ ಗ್ರಾಹಕರ ಕೈಗೆ ಉತ್ಪನ್ನ ಇಲ್ಲಿ ದೊರಕಲಿದೆ. 100% ಗ್ಯಾರಂಟಿಯ ನಂಬಿಕೆ. ರಿಯಾಯಿತಿಯೂ ಇದೆ. ಇನ್ನೂ ಮೂರು ದಿನ ಮೇಳ ನಡೆಯಲಿದೆಯಂತೆ. ಮತ್ತೊಮ್ಮೆ ಬಂದು ಸಾಕಷ್ಟು ಸಾಬೂನು, ಡಿಟರ್ಜೆಂಟ್ಸ್‌ ಖರೀದಿಸಲಿದ್ದೇವೆ’ ಎಂದು ಗ್ರಾಹಕಿ ಜಯಶ್ರೀ ಕುಲಕರ್ಣಿ ತಿಳಿಸಿದರು.

‘ಹಿಂದಿನ ವರ್ಷವೂ ಇಲ್ಲಿ ಖರೀದಿಸಿದ್ದೆವು. ಈ ಬಾರಿಯೂ ಬಂದಿದ್ದೇವೆ. ಚಲೋ ಉತ್ಪನ್ನ. ಪ್ರತಿ ವರ್ಷ ಈ ಮೇಳ ಆಯೋಜಿಸಿದರೆ ಗ್ರಾಹಕರಿಗೆ ಅನುಕೂಲವಾಗಲಿದೆ. ನಾವೂ ಖುಷಿಯಿಂದ ಖರೀದಿಸ ಬಹುದು. ಈ ಬಾರಿ ಪೋಸ್ಟರ್‌ ಅನಾವರಣಗೊಳಿಸಿದ್ದಾರೆ. ಗ್ರಾಹಕರನ್ನು ಸೆಳೆಯಲು ಒಳ್ಳೆಯ ಪ್ರಯತ್ನ ನಡೆದಿದೆ’ ಎಂದು ಗ್ರಾಹಕ ಬಸವರಾಜ ಅಡವಿ ಪ್ರತಿಕ್ರಿಯಿಸಿದರು.

* * 

ಪೈಪೋಟಿ ನಮಗೆ ಬೇಕಿಲ್ಲ. ನಮ್ಮ ಉತ್ಪನ್ನವನ್ನು ಎಲ್ಲರಿಗೂ ತಲುಪಿಸುವ ದೃಷ್ಟಿಯಿಂದ ಮೇಳ ಆಯೋಜಿಸುತ್ತೇವೆ. ಉತ್ತಮ ಸ್ಪಂದನೆ ದೊರಕಿದೆ

ಎಚ್‌.ಹೂಲಯ್ಯ ಮಾರಾಟ ವಿಭಾಗದ ವ್ಯವಸ್ಥಾಪಕ, ಕೆಎಸ್‌ಡಿಎಲ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry