ಗುಡುಗಿದ ಮಹಿಳೆಯರು: ಸಭೆ ಮೊಟಕು

7

ಗುಡುಗಿದ ಮಹಿಳೆಯರು: ಸಭೆ ಮೊಟಕು

Published:
Updated:
ಗುಡುಗಿದ ಮಹಿಳೆಯರು: ಸಭೆ ಮೊಟಕು

ಯಾದಗಿರಿ: ಜಿಲ್ಲಾ ಪಂಚಾಯಿತಿ ಕೆಡಿಪಿ ಅಥವಾ ಸಾಮಾನ್ಯಸಭೆಯಲ್ಲಿ ತಣ್ಣಗೆ ಕುಳಿತು ಒಂದೆರಡು ಅಹವಾಲು ಸಲ್ಲಿಸಿ ಮೌನಗೌರಿಯಂತಿರುತ್ತಿದ್ದ ಜಿಲ್ಲಾ ಪಂಚಾಯಿತಿಯ ಸಮಸ್ತ ಸದಸ್ಯೆಯರು ಶುಕ್ರವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಕ್ಷರಶಃ ಗುಡುಗಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರೆಡ್ಡಿ, ಸಿಇಒ ಅವಿನಾಶ್ ವಿರುದ್ಧ ಸಿಡಿದೆದ್ದರು.

ಸಭೆ ಆರಂಭವಾಗುತ್ತಿದ್ದಂತೆ ಸದಸ್ಯೆ ರಾಜಶ್ರೀ, ಹಿಂದಿನ ಸಭೆಯ ಅನುಪಾಲನಾ ವರದಿ ನೀಡುವಂತೆ ಅಧಿಕಾರಿಗಳನ್ನು ಕೇಳಿದರು. ‘ಅನುಪಾಲನಾ ವರದಿ ತಡವಾಗಿ ಬರಲಿದೆ. ತರಲು ಹೋಗಿದ್ದಾರೆ’ ಎಂಬುದಾಗಿ ಸಿಇಒ ಉತ್ತರಿಸುತ್ತಿದ್ದಂತೆ ಅಸಮಾಧಾನಗೊಂಡ ಸದಸ್ಯೆಯರು, ‘ಇದುವರೆಗೂ ಒಟ್ಟು ಏಳು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ನಡೆಸಲಾಗಿದೆ. ಒಂದೂ ಸಭೆಯಲ್ಲಿ ಅನುಪಾಲನಾ ವರದಿ ನೀಡಿಲ್ಲ’ ಎಂದು ಸಿಇಒ, ಅಧ್ಯಕ್ಷರ ವಿರುದ್ಧ ಆಕ್ಷೇಪಿಸಿದರು. ಇದಕ್ಕೆ ಸದಸ್ಯರಾದ ಕಿಶನ್‌ ರಾಥೋಡ, ಭೀಮರೆಡ್ಡಿ ಗೌಡ, ಅಮರದೀಪ ದನಿಗೂಡಿಸಿದರು.

‘ಸಾಮಾನ್ಯ ಸಭೆಯ ನಡಾವಳಿ ಏನಿದೆ? ಮೊದಲು ಅನುಪಾಲನಾ ವರದಿ ನೀಡಬೇಕು. ಅದರ ಕುರಿತು ಚರ್ಚೆ ನಡೆಯಬೇಕು. ನಂತರ ಸಭೆಯ ಅಜೆಂಡಾ ಚರ್ಚೆಯಾಗಬೇಕು. ಇದುವರೆಗೂ ಅನುಪಾಲನಾ ವರದಿ ಕುರಿತು ಎಂದೂ ಚರ್ಚೆ ನಡೆಸಿಲ್ಲ ಏಕೆ? ಅನುಪಾಲನಾ ವರದಿ ಸಿದ್ಧಪಡಿಸದೇ ಸಾಮಾನ್ಯಸಭೆಯ ಅಜೆಂಡಾ ಹೇಗೆ ಸಿದ್ಧಪಡಿಸಿದ್ದೀರಿ?’ ಎಂದು ಸದಸ್ಯ ಭೀಮರೆಡ್ಡಿ ಗೌಡ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.

‘ಗುರುಮಠಕಲ್‌ ನೂತನ ತಾಲ್ಲೂಕಿನ ಉಪ್ಪಾರಗಡ್ಡೆ ಗ್ರಾಮದ ಪ್ರೌಢಶಾಲೆ ಛಾವಣಿ ಕುಸಿಯುವ ಹಂತದಲ್ಲಿದೆ. ಮೂರುಬಾರಿ ನಡೆದಿರುವ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ದುರಸ್ತಿಗೆ ಅನುದಾನ ಒದಗಿಸುವಂತೆ ಒತ್ತಾಯಿಸಿದ್ದೇನೆ. ಇದುವರೆಗೂ ಡಿಡಿಪಿಐ ಅತ್ತ ತಿರುಗಿಯೂ ನೋಡಿಲ್ಲ’ ಎಂದು ಸದಸ್ಯೆ ರಾಜಶ್ರೀ ಆರೋಪಿಸಿದರು.

‘ಚಿಕ್ಕಪುಟ್ಟ ಅಭಿವೃದ್ಧಿ ಕಾಮಗಾರಿಗಳಿಗೆ ತುರ್ತು ನಿಧಿಯಿಂದ ಅನುದಾನ ಒದಗಿಸಬೇಕು. ಆದರೆ, ಇದುವರೆಗೂ ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಸ್ಪಂದಿಸದಿರುವ ಕುರಿತಂತೆ ಸಿಇಒ ಅವರಿಗೆ ಹಲವು ಬಾರಿ ದೂರಿದರೂ, ಕ್ರಮ ಜರುಗಿಸಿಲ್ಲ. ಇದರಿಂದ ಅಧಿಕಾರಿಗಳು ಮನಸೋ ಇಚ್ಛೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಡಳಿತ ನಡೆಸಲು ನಿಮಗೆ ಬರುವುದಿಲ್ಲ’ ಎಂದು ಅವರು ಸಿಇಒ, ಅಧ್ಯಕ್ಷರ ವಿರುದ್ಧ ಹರಿಹಾಯ್ದರು.

‘ನಾವು ಕೇಳುವುದು ಅಣೆಕಟ್ಟು, ಬೃಹತ್‌ ಸೇತುವೆ, ಹೆದ್ದಾರಿ ನಿರ್ಮಿಸಿ ಅಂತಲ್ಲ. ಜನರಿಗೆ ಬೇಕಾಗಿರುವ ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಸಮಸ್ಯೆಗಳಿಗೆ ಪರಿಹಾರ. ಇಂಥಾ ಸಮಸ್ಯೆಗಳನ್ನು ಪರಿಹರಿಸಲು ನಾವು ಎರಡು ವರ್ಷ ಕಾಯಬೇಕಾ? ಜನರು ನಮ್ಮನ್ನು ಶತ್ರುಗಳಂತೆ ನೋಡುತ್ತಿದ್ದಾರೆ. ಅವರಿಗೇನು ಉತ್ತರ ಹೇಳಬೇಕು? ಎಂದು ಸದಸ್ಯೆ ಶಶಿಕಲಾ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಸದಸ್ಯೆಯರಾದ ನಾಗಮ್ಮ ಬಸನಗೌಡ, ಭೀಮಾಬಾಯಿ ಮಲ್ಲಿಕಾರ್ಜುನ, ಶರಣಮ್ಮ ನಾಗಪ್ಪ, ದೇವಕಮ್ಮ ಮುನಮುಟಗಿ, ಗಿರಿಜಮ್ಮ ಸದಾಶಿವಪ್ಪ, ಅನಿತಾಬಾಯಿ, ಅರುಣಾ ಶಾಂತಿಲಾಲ, ಲಕ್ಷ್ಮಿ ದೇಸಾಯಿ, ರಾಜಶ್ರೀ, ಶಶಿಕಲಾ ಸಭೆಯಿಂದ ಹೊರನಡೆದರು. ಸದಸ್ಯೆಯರನ್ನು ಬೆಂಬಲಿಸಿ ಕೆಲ ಸದಸ್ಯರು ಸಭೆಯಿಂದ ಹೊರನಡೆದಾಗ ಸಭೆ ಮುಕ್ತಾಯಗೊಂಡಿದೆ ಎಂಬುದಾಗಿ ಸಿಇಒ ಘೋಷಿಸಿ ಸಭೆ ಮುಗಿಸಿದರು.

₹7 ಕೋಟಿ ಅವ್ಯವಹಾರ: ಆರೋಪ

ಜಿಲ್ಲಾ ಪಂಚಾಯಿತಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಸಮಗ್ರ ತನಿಖೆ ನಡೆಸುವಂತೆ ಸಾಮಾನ್ಯಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು ಆರೋಪಿಸಿದರು.

‘ಕುಡಿಯುವ ನೀರು, ಶಾಲೆ ದುರಸ್ತಿಯಂತಹ ಸಮಸ್ಯೆಗಳಿಗೆ ಅನುದಾನ ಇಲ್ಲ ಎಂದು ಹೇಳುತ್ತಾರೆ. ಆದರೆ, ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲೆಯಲ್ಲಿ ಒಟ್ಟು 600 ಕೊಳವೆ ಬಾವಿ ಕೊರೆಯಿಸಲು ಒಟ್ಟು ₹7 ಕೋಟಿ ಅನುದಾನ ಮೊತ್ತ ಬಿ.ಎಲ್. ಬೋರ್‌ವೆಲ್‌ ಏಜೆನ್ಸಿಗೆ ಪಾವತಿಸಲಾಗಿದೆ. ಇದನ್ನು ಯಾರಿಗೆ ಕೇಳಿ ಅನುದಾನ ನೀಡಲಾಗಿದೆ? ಈ ಕುರಿತು ಒಬ್ಬ ಸದಸ್ಯರಿಗೂ ಮಾಹಿತಿ ಇಲ್ಲ’ ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಶೇಖರ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಜಿಲ್ಲಾ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರ, ಭ್ರಷ್ಟಾಚಾರದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರೆಡ್ಡಿ ಮಾಲಿಪಾಟೀಲ, ಸಿಇಒ ಅವಿನಾಶ್ ನೇರವಾಗಿ ಭಾಗಿಯಾಗಿದ್ದಾರೆ. ಆದ್ದರಿಂದಲೇ ಸದಸ್ಯರನ್ನು ಕತ್ತಲಲ್ಲಿಟ್ಟು ಅನುಪಾಲನಾ ವರದಿ ನೀಡದೆ ಅಧಿಕಾರಿಗಳನ್ನು ತಮ್ಮ ಬಿಗಿಮುಷ್ಟಿಯಲ್ಲಿಟ್ಟುಕೊಂಡಿದ್ದಾರೆ. ಇದರಿಂದ ಯಾವೊಬ್ಬ ಸದಸ್ಯರಿಗೆ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಪರಿಪೂರ್ಣವಾಗಿ ನೀಡುತ್ತಿಲ್ಲ’ ಎಂದು ಕಿಶನ್‌ ರಾಥೋಡ ಆರೋಪಿಸಿದರು.

‘ಜಿಲ್ಲೆ ಬಗ್ಗೆ ಸಚಿವರಿಗೆ ಆಸಕ್ತಿ ಇಲ್ಲ’

‘ಅಧಿಕಾರಕ್ಕೆ ಬಂದಾಗಿನಿಂದಲೂ ಜಿಲ್ಲಾ ಪಂಚಾಯಿತಿ ವತಿಯಿಂದ ಒಂದೂ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಆಡಳಿತ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಅಧಿಕಾರ ಹಿಡಿದು ಎರಡು ವರ್ಷ ಕಳೆದಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಅವರಿಗೆ ಆಸಕ್ತಿ ಇಲ್ಲ’ ಎಂಬುದಾಗಿ ಜಿಲ್ಲಾ ಪಂಚಾಯಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ಸಭೆ ಬಹಿಷ್ಕಾರ ಪ್ರಜಾಪ್ರಭುತ್ವ ವಿರೋಧಿ’

‘ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ನೂರಾರು ಸಮಸ್ಯೆಗಳಿವೆ. ನಿನ್ನೆ ರಾತ್ರಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಯಂತೆ ಇಡೀ ರಾತ್ರಿ ಅಧ್ಯಯನ ಮಾಡಿ ಬಂದಿದ್ದೇನೆ. ಇಲ್ಲಿ ನೋಡಿದರೆ ಸಭೆ ಬಹಿಷ್ಕರಿಸಲ್ಪಟ್ಟಿದೆ. ಸಭೆಯಿಂದ ಹೊರನಡೆಯುವುದು, ಬಹಿಷ್ಕರಿಸುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗುತ್ತದೆ’ ಎಂದು ಸದಸ್ಯ ಬಸನಗೌಡ ಯಡಿಯಾಪುರ ಅಸಮಾಧಾನ ವ್ಯಕ್ತಪಡಿಸಿದರು.

* * 

ಸರ್ಕಾರ ಅನುದಾನ ನೀಡಿಲ್ಲ. ಅಧಿಕಾರಿಗಳು ಜೇಬಿನಿಂದ ಕೊಡಲು ಸಾಧ್ಯವೆ? ಭ್ರಷ್ಟಾಚಾರದ ಶಂಕೆ ಇದ್ದರೆ ನಿರ್ಣಯ ಕೈಗೊಂಡು ತನಿಖೆ ನಡೆಸಬಹುದಿತ್ತಲ್ಲ. ಬಸರೆಡ್ಡಿ ಮಾಲಿಪಾಟೀಲ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry