ಬೆಳಗಾವಿ ವಿಭಾಗಕ್ಕೂ ‘ಬಸ್‌ ಆಂಬುಲೆನ್ಸ್‌’

7

ಬೆಳಗಾವಿ ವಿಭಾಗಕ್ಕೂ ‘ಬಸ್‌ ಆಂಬುಲೆನ್ಸ್‌’

Published:
Updated:
ಬೆಳಗಾವಿ ವಿಭಾಗಕ್ಕೂ ‘ಬಸ್‌ ಆಂಬುಲೆನ್ಸ್‌’

ಬೆಳಗಾವಿ: ಬೆಂಗಳೂರಿನಲ್ಲಿ ಈಚೆಗೆ ಪರಿಚಯಿಸಿರುವ ‘ಬಸ್‌ ಆಂಬುಲೆನ್ಸ್‌’ ಸೇವೆಯನ್ನು ಬೆಳಗಾವಿ ವಿಭಾಗದಲ್ಲೂ ಆರಂಭಿಸಲಾಗುವುದು ಎಂದು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ತಿಳಿಸಿದರು.

ಇಲ್ಲಿನ ಕೇಂದ್ರ ಬಸ್‌ ನಿಲ್ದಾಣದಿಂದ ಬೆಂಗಳೂರು– ಚೆನ್ನೈ, ಮೈಸೂರು ಹಾಗೂ ಬೀದರ್‌ಗೆ ಹೊಸದಾಗಿ ಆರಂಭಿಸಿರುವ ಐದು ಬಸ್‌ಗಳಿಗೆ ಗುರುವಾರ ಹಸಿರುನಿಶಾನೆ ತೋರಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಅಪಘಾತದಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಈ ಆಂಬುಲೆನ್ಸ್‌ ಹೊಂದಿರುತ್ತದೆ. ವಿಭಾಗಕ್ಕೊಂದು ಬಸ್‌ಗಳನ್ನು ಆಯ್ಕೆ ಮಾಡಿ ಅವುಗಳನ್ನು ಆ್ಯಂಬುಲೆನ್ಸ್‌ಗಳನ್ನಾಗಿ ಪರಿವರ್ತಿಸಲಾಗುವುದು’ ಎಂದು ಹೇಳಿದರು.

‘ಪ್ರಯಾಣಿಕರ ಅನುಕೂಲಕ್ಕಾಗಿ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಂಡರೆ, ಬಸ್‌ಗಳ ವೇಳಾಪಟ್ಟಿ, ಸೀಟುಗಳ ಲಭ್ಯತೆ, ಸಂಸ್ಥೆಯ ಕಾರ್ಯಕ್ರಮಗಳ ಮಾಹಿತಿಯನ್ನು ಕುಳಿತಲ್ಲಿಯೇ ತಿಳಿದುಕೊಳ್ಳಬಹುದಾಗಿದೆ’ ಎಂದು ವಿವರಿಸಿದರು.

‘ಸುಖಕರ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಸಾರ್ವಜನಿಕರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು ಎನ್ನುವುದಷ್ಟೇ ನಮ್ಮ ಉದ್ದೇಶ. ಖಾಸಗಿಯವರಂತೆ ಲಾಭ–ನಷ್ಟಕ್ಕೆ ಆದ್ಯತೆ ನೀಡುವುದಿಲ್ಲ. ನಮ್ಮಲ್ಲಿರುವ ಸೌಲಭ್ಯಗಳನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಮತ್ತಷ್ಟು ಹೊಸ ಬಸ್‌ಗಳು: ‘ಸಂಸ್ಥೆಗೆ ಹೊಸದಾಗಿ 650 ಬಸ್‌ಗಳು ಮಂಜೂರಾಗಿವೆ. ಈ ಪೈಕಿ ಈಗಾಗಲೇ 406 ಬಸ್‌ಗಳು ಬಂದಿವೆ. ಉಳಿದವು ಶೀಘ್ರವೇ ಸೇರ್ಪಡೆಯಾಗಲಿವೆ. ಐರಾವತ, ರಾಜಹಂಸ, ಸ್ಲೀಪರ್, ಸೆಮಿಸ್ಪೀಪರ್‌, ಎಸಿ ಸ್ಲೀಪರ್‌ ಸೇರಿ ಎಲ್ಲ ದರ್ಜೆಯ ಬಸ್‌ಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

‘ಕೇಂದ್ರ ಬಸ್‌ ನಿಲ್ದಾಣದ ನೂತನ ಕಟ್ಟಡದ ಕಾಮಗಾರಿ ಭರದಿಂದ ಸಾಗಿದೆ. ನಿಗದಿತ ಸಮಯದೊಳಗೆ ಪೂರ್ಣಗೊಳಿಸುವಂತೆ ಹಾಗೂ ಗುಣಮಟ್ಟ ಕಾಪಾಡಿಕೊಳ್ಳುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಪ್ರತಿಕ್ರಿಯಿಸಿದರು. ನಂತರ ನಿಲ್ದಾಣದ ಕಾಮಗಾರಿ ವೀಕ್ಷಣೆ ಮಾಡಿದರು.

ಮೂಗಬಸ್ತ ಅಜ್ಜ, ನಗರಪಾಲಿಕೆ ಸದಸ್ಯೆ ಜಯಶ್ರೀ ಮಾಳಗಿ, ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ ಎಲ್. ರಾಠೋಡ, ವಿಭಾಗೀಯ ತಾಂತ್ರಿಕ ಶಿಲ್ಪಿ ವಿಜಯಕುಮಾರ, ಸಾರಿಗೆ ಅಧಿಕಾರಿ ಬಿ.ಡಿ. ಜಾಧವ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಪ್ರಧಾನ ಕಾರ್ಯದರ್ಶಿ ರಾಜಾ ಸಲೀಂ ಇದ್ದರು.

ಪ್ರಮುಖ ನಿಲ್ದಾಣಗಳಲ್ಲಿ ಇಂದಿರಾ ಕ್ಯಾಂಟೀನ್‌

ಎಲ್ಲ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಊಟ ಮತ್ತು ಉಪಾಹಾರ ಕಲ್ಪಿಸಲು  ಸರ್ಕಾರದಿಂದ ಇಂದಿರಾ ಕ್ಯಾಂಟೀನ್‌ಗಳನ್ನು ಹಂತ ಹಂತವಾಗಿ ಸ್ಥಾಪಿಸಲಾಗುತ್ತಿದೆ.

ಬೆಳಗಾವಿ ನಿಲ್ದಾಣದಲ್ಲೂ ಕ್ಯಾಂಟೀನ್‌ ಆರಂಭಿಸಲಾಗುವುದು. ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದು. ನಿಲ್ದಾಣಗಳನ್ನು ಪ್ರಯಾಣಿಕ ಸ್ನೇಹಿಯಾಗಿ ರೂಪಿಸಲಾಗುವುದು ಎಂದು ಡಂಗನವರ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry