ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಪೈಪೋಟಿ: ಗುಣಮಟ್ಟದ ಶಿಕ್ಷಣ ಅಗತ್ಯ

Last Updated 20 ಜನವರಿ 2018, 8:53 IST
ಅಕ್ಷರ ಗಾತ್ರ

ಬೆಳಗಾವಿ: ಇಂದಿನ ವಿದ್ಯಾರ್ಥಿಗಳು ವಿಶ್ವ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ನೀಡಬೇಕಾದರೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯವಾಗಿದೆ ಎಂದು ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಅಭಿಪ್ರಾಯಪಟ್ಟರು. ಇಲ್ಲಿನ ನೆಹರೂ ನಗರದಲ್ಲಿ ಶುಕ್ರವಾರ ನಡೆದ ಶೇಖ್‌ ಸಂಸ್ಥೆ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘2025ರ ವೇಳೆಗೆ ಭಾರತವು ಅತಿಹೆಚ್ಚಿನ ಯುವಜನರನ್ನು ಹೊಂದಿರುವ ದೇಶವಾಗಲಿದೆ. ಅಷ್ಟು ದೊಡ್ಡ ಸಂಖ್ಯೆಯ ಯುವಜನರಿಗೆ ಉದ್ಯೋಗ ಒದಗಿಸುವುದು ಹೇಗೆ? ಹೀಗಾಗಿ, ಅವರನ್ನು ಉದ್ಯೋಗಿಗಳನ್ನಾಗಿ ಮಾಡುವ ಬದಲಿಗೆ, ಉದ್ಯೋಗಪತಿಗಳನ್ನಾಗಿ ರೂಪಿಸಬೇಕು. ಜಾಗತಿಕ ಮಾರುಕಟ್ಟೆಯ ಸ್ಪರ್ಧೆಗೆ ಸ್ಪಂದಿಸುವುದಕ್ಕಾಗಿ ಬಹಳಷ್ಟು ಕಂಪೆನಿಗಳು ರೋಬೊಗಳನ್ನು ಬಳಸುತ್ತಿವೆ.

ಉದ್ಯೋಗಿಗಳ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳುತ್ತಿವೆ. ಹೀಗಾಗಿ, ಇದೊಂದು ಎಚ್ಚರಿಕೆ ಗಂಟೆಯಾಗಿದೆ. ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಪದವೀಧರರಿಗೆ ಉದ್ಯೋಗ ಪಡೆದುಕೊಳ್ಳುವುದಕ್ಕೆ ಬೇಕಾದಂತಹ ಕೌಶಲಗಳನ್ನು ಕಲಿಸಬೇಕಾಗಿದೆ’ ಎಂದು ಹೇಳಿದರು.

ಆಯುಷ್‌ ಆಸ್ಪತ್ರೆ ಸ್ಥಾಪನೆ: ‘ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಡಾ.ಎ.ಎಂ. ಷೇಕ್‌ ದೂರದೃಷ್ಟಿಯ ಫಲವಾಗಿ ಶಿಕ್ಷಣ ಸಂಸ್ಥೆಗಳು ಮೈದಳೆದಿವೆ. ದೇಶದಲ್ಲಿಯೇ ಉತ್ತಮ ಹೆಸರು ಗಳಿಸಿವೆ. ಸಂಸ್ಥಾಪಕರ ದೂರದೃಷ್ಟಿಗೆ ನಾವೆಲ್ಲರೂ ನಮನ ಸಲ್ಲಿಸಬೇಕು’ ಎಂದು ಶ್ಲಾಘಿಸಿದರು.

‘ಹೋಮಿಯೋಪತಿಗೆ ಇಂದು ಹೆಚ್ಚಿನ ಮಹತ್ವ ದೊರೆಯುತ್ತಿದೆ. ಹೀಗಾಗಿ, ನಮ್ಮ ಸರ್ಕಾರವು ರಾಜ್ಯದ ವಿವಿಧೆಡೆ 176 ಆಯುಷ್‌ ಆಸ್ಪತ್ರೆಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿದೆ’ ಎಂದರು.

‘ದೇಶ ಹಾಗೂ ರಾಜ್ಯ ಸಮೃದ್ಧಿಯಿಂದ ಇರಬೇಕಾದರೆ, ಜಾಗತಿಕ ನಾಯಕರಾಗಬೇಕಾದರೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲರಿಗೂ ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸುತ್ತಿದೆ. ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎನ್ನುವ ಉದ್ದೇಶ ಹೊಂದಿದೆ’ ಎಂದು ತಿಳಿಸಿದರು.

ಸ್ಪರ್ಧೆಗೆ ಸಜ್ಜುಗೊಳಿಸಿ: ‘ಪ್ರಸ್ತುತ ವಿಶ್ವವೇ ಸಣ್ಣ ಹಳ್ಳಿಯಾಗಿದೆ. ಇದರಿಂದ ಸ್ಪರ್ಧೆ ತೀವ್ರವಾಗಿದೆ. ಪರಿಣಾಮ, ಗುಣಮಟ್ಟಕ್ಕೆ ಮಹತ್ವ ಬಂದಿದೆ. ಇದನ್ನು ಶಿಕ್ಷಣ ಸಂಸ್ಥೆಗಳು ಮರೆಯಬಾರದು. ಇಂದಿನ ಸ್ಪರ್ಧೆಗೆ ತಕ್ಕಂತೆ ವಿದ್ಯಾರ್ಥಿ ಗಳನ್ನು ಸಜ್ಜುಗೊಳಿಸಬೇಕು. ಶಿಕ್ಷಕರುಗಡಿಯಾರ ನೋಡಿಕೊಂಡು ಪಾಠ ಮಾಡಬಾರದು. ವಾಣಿಜ್ಯ ದೃಷ್ಟಿಯಿಂದ ನೋಡಬಾರದು’ ಎಂದು ಹೇಳಿದರು.

ಉತ್ತರಕ್ಷೇತ್ರದ ಶಾಸಕ ಫಿರೋಜ್‌ಸೇಠ್‌, ‘ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಹೆಚ್ಚಿನ ಆದ್ಯತೆ ಕೊಡಬೇಕು’ ಎಂದು ಸಲಹೆ ನೀಡಿದರು. ಸಂಸ್ಥೆ ಅಧ್ಯಕ್ಷ ಎ.ಆರ್‌.ಎ. ಶೇಖ್‌ ಅಧ್ಯಕ್ಷತೆ ವಹಿಸಿದ್ದರು. ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ, ಶಾಸಕ ಎ.ಬಿ. ಮಾಲಕರೆಡ್ಡಿ, ಹೋಮಿಯೋಪತಿ ವೈದ್ಯ ಬಿ.ಟಿ. ರುದ್ರೇಶ್‌, ಸಂಸ್ಥೆ ಕಾರ್ಯದರ್ಶಿ ಡಾ. ಸಬಿನಾ ಎ. ಅಲಿ, ಮುಖ್ಯ ಸಂಯೋಜಕ ಡಾ.ಎಂ.ಜೆ. ಅತ್ತಾರ ಹಾಗೂ ಪ್ರಾಂಶುಪಾಲ ಡಾ.ಜಿ.ಎಂ. ಮೂಗಿ ಭಾಗವಹಿಸಿದ್ದರು.

* * 

ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಎಲ್ಲಿದೆ ಉದ್ಯೋಗ? ಆದರೆ, ನಾವು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದ್ದೇವೆ ಆರ್‌.ವಿ.ದೇಶಪಾಂಡೆ ಕೈಗಾರಿಕಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT