ಮಳೆಗಾಲದಲ್ಲಿ ನರಕ, ವರ್ಷವಿಡೀ ನಡುಕ!

7

ಮಳೆಗಾಲದಲ್ಲಿ ನರಕ, ವರ್ಷವಿಡೀ ನಡುಕ!

Published:
Updated:
ಮಳೆಗಾಲದಲ್ಲಿ ನರಕ, ವರ್ಷವಿಡೀ ನಡುಕ!

ಚಿಕ್ಕಬಳ್ಳಾಪುರ: ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಂತಪುರ ಗ್ರಾಮದ ಮಧ್ಯಭಾಗದ ರಸ್ತೆಯ ನಿವಾಸಿಗಳಿಗೆ ಕಳೆದ ಆರೇಳು ವರ್ಷಗಳಿಂದ ಕೊಚ್ಚೆ ನೀರು ದುಸ್ವಪ್ನದಂತೆ ಕಾಡುತ್ತಿದೆ. ಚರಂಡಿಗಳು ಇಲ್ಲದ ಈ ರಸ್ತೆಯಲ್ಲಿ ಸದಾ ಬಚ್ಚಲು ಮತ್ತು ಮನೆ ಬಳಕೆಯ ನೀರು ಹರಿಯುತ್ತದೆ. ಹೀಗಾಗಿ ಇಲ್ಲಿನ ಜನರಿಗೆ ಮಳೆಗಾಲದಲ್ಲಿ ನರಕ ದರ್ಶನವಾದರೆ, ಉಳಿದಂತೆ ವರ್ಷವೀಡಿ ನಡುಕ ಮನೆ ಮಾಡಿರುತ್ತದೆ.

ರಸ್ತೆಯಲ್ಲೇ ಮಹಿಳೆಯರು ಬಟ್ಟೆ ತೊಳೆಯುತ್ತಾರೆ ಆ ನೀರು, ಮನೆಗಳ ಬಚ್ಚಲು ನೀರು, ಪಾತ್ರೆಗಳನ್ನು ತೊಳೆದ ನೀರು ಜತೆಗೆ ಇದೇ ರಸ್ತೆಯಲ್ಲಿರುವ ಟ್ಯಾಂಕ್ ಆಗಾಗ ತುಂಬಿ ಹರಿಯುತ್ತಲೇ ಇರುತ್ತದೆ. ಈ ಎಲ್ಲ ನೀರು ಸೇರಿಕೊಂಡು ಕೊಚ್ಚೆಯ ತೊರೆಯಾಗಿ ರಸ್ತೆಯಲ್ಲಿ ಸದಾ ಹರಿಯುತ್ತಲೇ ಇರುತ್ತದೆ. ತ್ಯಾಜ್ಯ ನೀರಿನ ದುರ್ವಾಸನೆಗೆ ಬೆಳೆಗೆದ್ದು ಬಾಗಿಲು ತೆಗೆಯುವಾಗ ಈ ರಸ್ತೆಯ ಸುಮಾರು 20 ಮನೆ ಜನರು ನಿತ್ಯ ಮುಖ ಸಿಂಡರಿಸುವ ಸ್ಥಿತಿ ನಿರ್ಮಾಣವಾಗಿದೆ.

ಸದಾ ಕೊಚ್ಚೆ ನೀರು ಹರಿದು ರಸ್ತೆ ಮೇಲ್ಮೈ ಜಾರುತ್ತಲೇ ಇರುತ್ತದೆ. ಇಲ್ಲಿ ಪಾದಚಾರಿಗಳು ಯಾಮಾರಿ ಬಿದ್ದು ಪೆಟ್ಟು ತಿಂದ ಅನೇಕ ಉದಾಹರಣೆಗಳಿವೆ. ಈ ಗಲೀಜು ನೀರಿನಲ್ಲಿ ಮಕ್ಕಳು ಆಟವಾಡಲು ಹೋಗಿ ಬಿದ್ದು ಗಾಯಗೊಳ್ಳುತ್ತವೆ ಎನ್ನುವ ಭಯಕ್ಕೆ ಈ ರಸ್ತೆಯ ಜನರು ಮಕ್ಕಳನ್ನು ರಸ್ತೆಗೆ ಹೋಗದಂತೆ ಕಾಯುವುದೇ ಕೆಲಸವಾಗಿದೆ.

‘ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರ ಮನೆ ಸುತ್ತಲೂ ಎಲ್ಲವೂ ಚೆನ್ನಾಗಿದೆ. ನಾವು ಮಾತ್ರ ಈ ಪಡಿಪಾಟಲು ಅನುಭವಿಸಬೇಕಾಗಿದೆ. ಗ್ರಾಮ ಪಂಚಾಯಿತಿಯವರಿಗೆ, ಪಿಡಿಒ ಅವರಿಗೆ ದೂರು ನೀಡಿದರೆ ಯಾರು ಕೂಡ ಸಮಸ್ಯೆ ಗಂಭೀರತೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಚರಂಡಿ ಮಾಡಿಸಿ ಎಂದರೆ ದುಡ್ಡಿಲ್ಲ ಎಂದು ಹೇಳುತ್ತಾರೆ. ‘ಸ್ವಚ್ಛ ಭಾರತ’ದ ಜಾಗಟೆ ಬಾರಿಸುವ ಅಧಿಕಾರಿಗಳು ಒಮ್ಮೆ ಈ ನಮ್ಮ ರಸ್ತೆಗೆ ಬಂದು ಕಣ್ಣು ಹಾಯಿಸಲಿ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಚರಂಡಿ ನಿರ್ಮಿಸಿ ಎಂದು ಕೇಳಿ, ಕೇಳಿ ಸಾಕಾಗಿ ಹೋಗಿದೆ. ಹಾಗೇ ಕೇಳಿದಾಗಲೆಲ್ಲ ಶೀಘ್ರದಲ್ಲೇ ಮಾಡುತ್ತೇವೆ ಎಂದು ಇಷ್ಟು ವರ್ಷ ಕಾಲ ತಳ್ಳುತ್ತಲೇ ಬಂದಿದ್ದಾರೆ. ಚುನಾವಣೆ ಬಂದಾಗ ಮಾತ್ರ ಊರ ಕಡೆ ತಲೆ ಹಾಕುವ ರಾಜಕಾರಣಿಗಳು ಮತ್ತೆ ಹಳ್ಳಿಯ ಕಡೆಗೆ ತಲೆ ಹಾಕುವುದೇ ಇಲ್ಲ. ಇದು ನಮ್ಮ ದೌರ್ಭಾಗ್ಯ. ಇನ್ನು ಅಧಿಕಾರಿಗಳೋ, ಅವರ ಜಾಣ ಕುರುಡುತನದ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು’ ಎಂದು ಹನುಮಂತಪುರದ ನಿವಾಸಿ ಕೌಶಿಕ್‌ ಬೇಸರ ವ್ಯಕ್ತಪಡಿಸಿದರು.

‘ಆರೇಳು ವರ್ಷಗಳಿಂದ ನಾವು ಈ ಕೊಚ್ಚೆ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಯಾರು ಕೂಡ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ. ಪಂಚಾಯಿತಿ, ಪಿಡಿಒ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಈ ರಸ್ತೆಯಲ್ಲಿ ಚರಂಡಿ ನಿರ್ಮಿಸಬೇಕಾದರೆ ಒಂದು ಕಡೆ ಕಲ್ಲು ಬಂಡೆ ಕೊರೆಯಿಸುವ ಅಗತ್ಯವಿದೆ. ಅದಕ್ಕೆ ನನ್ನ ಸ್ವಂತ ದುಡ್ಡು ಕೊಡುತ್ತೇನೆ ಎಂದರೂ ಪಂಚಾಯಿತಿಯವರು ಚರಂಡಿ ನಿರ್ಮಿಸಲು ಮುಂದೆ ಬರುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಕೃಷ್ಣ ದೂರಿದರು.

ಈ ಕುರಿತು ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಜಿ.ಎಂ.ಮಮತಾ ಅವರನ್ನು ಕೇಳಿದರೆ, ‘ಹನುಮಂತಪುರದ ಊರ ಮಧ್ಯದ ರಸ್ತೆಯಲ್ಲಿ ಚರಂಡಿ ಕಾಮಗಾರಿಗಾಗಿ 2015–16ನೇ ಸಾಲಿನಲ್ಲಿ 14ನೇ ಹಣಕಾಸು ಆಯೋಗ ಅನುದಾನದಲ್ಲಿ ₹ 60 ಸಾವಿರ ಮಂಜೂರಾಗಿದೆ. ಆದರೆ ಯಾರು ಕೂಡ ಕಾಮಗಾರಿ ನಡೆಸಲು ಮುಂದೆ ಬರುತ್ತಿಲ್ಲ’ ಎಂದು ಹೇಳಿದರು.

‘ಆ ರಸ್ತೆಯಲ್ಲಿ ಚರಂಡಿ ನಿರ್ಮಿಸಬೇಕಾದರೆ ಬಂಡೆ ಅಡ್ಡ ಬರುತ್ತದೆ. ಸ್ಫೋಟಿಸಲು ಆಗುವುದಿಲ್ಲ. ಕೊರೆದು ಚರಂಡಿ ನಿರ್ಮಿಸಬೇಕು. ಅದಕ್ಕಾಗಿ ಹೆಚ್ಚು ಹಣ ಬೇಕಾಗುತ್ತದೆ. ಹೀಗಾಗಿಯೇ ಆ ಕಾಮಗಾರಿಯನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಕೈಗೊಳ್ಳಲು ಉದ್ದೇಶಿಸಿದ್ದೇವೆ’ ಎಂದು ತಿಳಿಸಿದರು.

ಏನು ಮಾಡುವುದೋ ತೋಚುತ್ತಿಲ್ಲ

‘ಚರಂಡಿ ಬಗ್ಗೆ ಪಂಚಾಯಿತಿಯಲ್ಲಿ ಕೇಳಿದರೆ ₹ 60 ಸಾವಿರ ಮಂಜೂರಾಗಿದೆ ಎನ್ನುತ್ತಾರೆ. 20 ಗುತ್ತಿಗೆದಾರರನ್ನು ಕರೆದು ತೋರಿಸಿದರೂ ಒಬ್ಬರೂ ಕೆಲಸ ಮಾಡಲು ಒಪ್ಪಲಿಲ್ಲ. ಕಲ್ಲು ಬಂಡೆ ಕೊರೆಯಿಸಲು ಸುಮಾರು ₹2 ಲಕ್ಷ ವೆಚ್ಚವಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ನರೇಗಾದಲ್ಲಿಯಾದರೂ ಆ ಕೆಲಸ ಮಾಡಿಸೋಣ ಎಂದರೆ ಅಧಿಕಾರಿಗಳು ಅಷ್ಟು ಖರ್ಚು ಮಾಡಲು ಬರುವುದಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಏನು ಮಾಡಬೇಕು ಎಂದು ತೋಚುತ್ತಿಲ್ಲ’ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯೆ ಸುನಂದ ಹೇಳಿದರು.

* * 

ಸಮಸ್ಯೆ ನನ್ನ ಗಮನಕ್ಕೆ ಬಂದಿರಲಿಲ್ಲ. ಸಂಬಂಧಪಟ್ಟ ಪಿಡಿಒ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳುತ್ತೇನೆ.

ಗುರುದತ್ ಹೆಗ್ಡೆ, ಜಿಲ್ಲಾ ಪಂಚಾಯಿತಿ ಸಿಇಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry