ಬಿಜೆಪಿ, ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಹೋರಾಟ: ಎಚ್‌.ಡಿ.ದೇವೇಗೌಡ

7

ಬಿಜೆಪಿ, ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಹೋರಾಟ: ಎಚ್‌.ಡಿ.ದೇವೇಗೌಡ

Published:
Updated:
ಬಿಜೆಪಿ, ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಹೋರಾಟ: ಎಚ್‌.ಡಿ.ದೇವೇಗೌಡ

ಚಿಕ್ಕಮಗಳೂರು: ಬಿಜೆಪಿ ಕಟು ಹಿಂದುತ್ವ ಪ್ರತಿಪಾದಿಸುತ್ತಿದೆ, ಕಾಂಗ್ರೆಸ್‌ ಈಗ ಮೃದು ಹಿಂದುತ್ವ ಪ್ರತಿಪಾದನೆ ಶುರುಮಾಡಿದೆ. ಜೆಡಿಎಸ್‌ ಮಾರ್ಗವೇ ಬೇರೆ, ಕಾಂಗ್ರೆಸ್‌ ಮತ್ತು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತದೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಇಲ್ಲಿ ಶುಕ್ರವಾರ ಹೇಳಿದರು.

‘ಕಟು, ಮೃದು ಇವೆರಡೂ ಜೆಡಿಎಸ್‌ನಲ್ಲಿ ಇಲ್ಲ. ನಾವು ತಪ್ಪುಗಳ ವಿರುದ್ಧ ಗಂಭೀರವಾಗಿ ಹೋರಾಡುತ್ತೇವೆ. ರಾಜ್ಯದಲ್ಲಿ ನೆಮ್ಮದಿ ಕಾಪಾಡುವುದು ಜೆಡಿಎಸ್‌ ಉದ್ದೇಶ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕಾಂಗ್ರೆಸ್‌ನವರು ತಮ್ಮ ನೀತಿಯನ್ನು ಸ್ವಲ್ಪ ಸಡಿಲ ಮಾಡಿದ್ದಾರೆ. ಅಲ್ಪಸಂಖ್ಯಾತರನ್ನಷ್ಟೇ ತುಂಬಾ ಓಲೈಕೆ ಮಾಡಬಾರದು, ಎಲ್ಲ ಸಮುದಾಯಗಳನ್ನು ಓಲೈಸಿಕೊಂಡು ಹೋಗಬೇಕು ಎಂದು ರಾಹುಲ್‌ ಗಾಂಧಿ ಪಕ್ಷದವರಿಗೆ ಸೂಚನೆ ನೀಡಿದ್ದಾರೆ. ಗುಜರಾತ್‌ ಚುನಾವಣೆ ಸಂದರ್ಭದಲ್ಲಿ ಅವರು 32 ಪುಣ್ಯಕ್ಷೇತ್ರಗಳ ದರ್ಶನ ಮಾಡಿದ್ದಾರೆ. ಅಮೇಥಿ ಕ್ಷೇತ್ರಕ್ಕೆ ಹೋಗಿದ್ದಾಗ ಆಂಜನೇಯ ದೇಗುಲದಲ್ಲಿ ಪೂಜೆ ನೆರವೇರಿಸಿದ್ದಾರೆ’ ಎಂದರು.

‘ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಈ ಕರಾವಳಿ ಭಾಗದಲ್ಲಿ ವ್ಯವಸ್ಥೆ ಹದಗೆಟ್ಟಿದೆ. ಮೂರ್ನಾಲ್ಕು ತಿಂಗಳಲ್ಲಿ ಹಲವಾರು ಅಮಾಯಕರು ಹತ್ಯೆಯಾಗಿದ್ದಾರೆ. ಇದರ ಹೊಣೆಯನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ಹೊರಬೇಕು. ಈ ಎರಡೂ ರಾಷ್ಟ್ರೀಯ ಪಕ್ಷಗಳ ನಡವಳಿಕೆಯಿಂದ ಅಮಾಯಕರಿಗೆ ತೊಂದರೆಯಾಗುತ್ತಿದೆ. ಕಾಂಗ್ರೆಸ್‌ ಎಂಬುದು ‘ಶಾಪ’, ಬಿಜೆಪಿ ಎಂಬುದು ‘ಕ್ಯಾನ್ಸರ್‌’ ಎಂದು ಜೆ.ಎಚ್‌.ಪಟೇಲ್‌ ಹೇಳಿದ್ದರು’ ಎಂದರು.

‘ಕರಾವಳಿಯಲ್ಲಿನ ಅಶಾಂತಿಗೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾರೇ ಆಗಿದ್ದರೂ ಬಂಧಿಸಲು ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೇ, 2–3 ಸಂಘಟನೆಗಳನ್ನು ನಿಷೇಧಿಸಲು ಶಿಫಾರಸು ಮಾಡುತ್ತೇವೆ ಎಂದೂ ಹೇಳಿದ್ದಾರೆ. ಸಂಘಟನೆಗಳ ನಿಷೇಧಕ್ಕೆ ಶಿಫಾರಸು ಮಾಡಲು ಬಲವಾದ ಪುರಾವೆಗಳು ಬೇಕು. ಬಿಜೆಪಿಯ ಶಕ್ತಿ ಕೇಂದ್ರ ಆರ್‌ಎಸ್‌ಎಸ್‌ ಸಂಘಟನೆ. ಇದರ ಜತೆಗೆ 10–12 ಸಂಘಟನೆಗಳು ಇವೆ’ ಎಂದರು.

‘ದೈವದಲ್ಲಿ ನಂಬಿಕೆ ನನಗೆ ಆಜನ್ಮಸಿದ್ಧವಾಗಿ ಬಂದಿದೆ. ಅದು ವಂಶಪಾರಂಪರ್ಯವಾಗಿ ಬಂದಿದೆ. ಶೃಂಗೇರಿ ದೇಗುಲಕ್ಕೆ 60 ವರ್ಷಗಳಿಂದ ಬರುತ್ತಿದ್ದೇನೆ. ತೋರಿಕೆಗೆ ಇದನ್ನೆಲ್ಲ ಮಾಡುವುದಿಲ್ಲ. ಶ್ರದ್ಧೆ, ಭಕ್ತಿಯಿಂದ ಮಾಡುತ್ತೇನೆ. ಅಜ್ಮೀರ್‌ ದರ್ಗಾಕ್ಕೆ ಮೂರು ಬಾರಿ ಹೋಗಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

‘ಹಳಬರನ್ನು ಕಡೆಗಣಿಸುವುದಿಲ್ಲ. ಅಭ್ಯರ್ಥಿ ಯಾರು ಎಂಬುದನ್ನು ಸಮಿತಿ ನಿರ್ಧರಿಸುತ್ತದೆ. ಜಾತಿ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಿಲ್ಲ. ಯಾವ ಕ್ಷೇತ್ರಗಳಲ್ಲಿ ಗೊಂದಲಗಳಿವೆ ಅವುಗಳನ್ನು ಈ ತಿಂಗಳ ಅಂತ್ಯದ ಹೊತ್ತಿಗೆ ಪರಿಹರಿಸುತ್ತೇವೆ. ಫೆಬ್ರುವರಿ ಅಂತ್ಯಕ್ಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ’ ಎಂದು ಉತ್ತರಿಸಿದರು.

‘ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯಲು ಇಚ್ಛಿಸಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ ಪಕ್ಷದಿಂದ ಬೇರೆ ಯಾರೂ ಆಕಾಂಕ್ಷಿ ಇಲ್ಲ. ಅಲ್ಲಿ ಯಾರೊಬ್ಬರೂ ಟಿಕೆಟ್‌ಗೆ ಅರ್ಜಿ ಹಾಕಿಲ್ಲ. ಯಾರಾದರೂ ಒಬ್ಬರು ಮುಂದೆ ಬನ್ನಿ ಎಂದು ಬಹಿರಂಗವಾಗಿ ಹೇಳಿದ್ದೇನೆ. ಆದರೂ, ಯಾರೂ ಮನಸ್ಸು ಮಾಡಿಲ್ಲ. ಆ ಕ್ಷೇತ್ರದಲ್ಲಿ ಅನಿತಾ ಅವರನ್ನು ಕಣಕ್ಕಿಳಿಸುವುದು ಅನಿವಾರ್ಯವಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ಜೆಡಿಎಸ್‌ನ ಇಬ್ಬರು ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡದೆ, ಬಿಜೆಪಿಗೆ ಸೇರ್ಪಡೆಯಾಗಿರುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಪೀಕರ್‌ಗೆ ದೂರು ನೀಡಲಾಗಿದೆ. ಸ್ಪೀಕರ್‌ ಅವರು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಉತ್ತರಿಸಿದರು.

ಜೆಡಿಎಸ್‌ ಮುಖಂಡರಾದ ವೈಎಸ್‌ವಿ ದತ್ತ, ಬಿ.ಬಿ.ನಿಂಗಯ್ಯ, ರಂಜನ್‌ ಅಜಿತ್‌ಕುಮಾರ್‌, ಎಸ್‌.ಎಲ್‌.ಭೋಜೇಗೌಡ, ಎಲ್‌.ಎಲ್‌.ಧರ್ಮೇಗೌಡ, ಬಿ.ಎಚ್‌.ಹರೀಶ್‌, ಹೊಲದಗದ್ದೆ ಗಿರೀಶ್‌ ಇದ್ದರು.ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry