ನೀರಿಗೆ ಅನುದಾನಕ್ಕೆ ಸಿ.ಎಂಗೆ ಪತ್ರ: ದೇವೇಗೌಡ

7

ನೀರಿಗೆ ಅನುದಾನಕ್ಕೆ ಸಿ.ಎಂಗೆ ಪತ್ರ: ದೇವೇಗೌಡ

Published:
Updated:
ನೀರಿಗೆ ಅನುದಾನಕ್ಕೆ ಸಿ.ಎಂಗೆ ಪತ್ರ: ದೇವೇಗೌಡ

ಚಿಕ್ಕಮಗಳೂರು: ‘ಜಿಲ್ಲೆಯ ಕುಡಿಯುವ ನೀರಿಗೆ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ ಬರೆಯುತ್ತೇನೆ’ ಎಂದು ಸಂಸದ ಎಚ್‌.ಡಿ.ದೇವೇಗೌಡ ಹೇಳಿದರು.

ಜಿಲ್ಲಾ ಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ(ದಿಶಾ) ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಜಿಲ್ಲೆಯು ಕುಡಿಯುವ ನೀರಿನ ಸಮಸ್ಯೆ ಕುರಿತು ಸಿದ್ದರಾಮಯ್ಯ ಅವರೊಂದಿಗೆ ಮಾತನಾಡುತ್ತೇನೆ. ಕುಡಿಯುವ ನೀರಿನ ನಿರ್ವಹಣೆಗೆ ಅನುದಾನ ಒದಗಿಸಲು ಹೇಳುತ್ತೇನೆ’ ಎಂದು ತಿಳಿಸಿದರು.

ಶಾಸಕ ವೈಎಸ್‌ವಿ ದತ್ತ ಮಾತನಾಡಿ, ‘ಕಡೂರು ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಬವಣೆ ವಿಪರೀತವಾಗಿದೆ. ಕೊಳವೆ ಬಾವಿ ಕೊರೆದರೆ ನೀರು ಸಿಗುತ್ತಿಲ್ಲ. ಹೀಗಾಗಿ, ಟ್ಯಾಂಕರ್‌ನಲ್ಲಿಯೇ ನೀರು ಪೂರೈಸುವುದು ಅನಿವಾರ್ಯವಾಗಿದೆ. ಹಿಂದಿನ ಬಾಡಿಗೆ ಬಾಕಿ ಚುಕ್ತಾ ಮಾಡುವಂತೆ ಟ್ಯಾಂಕರ್‌ನವರು ಪಟ್ಟು ಹಿಡಿದಿದ್ದಾರೆ. ಕಡೂರು ತಾಲ್ಲೂಕಿನಲ್ಲಿ ಟ್ಯಾಂಕರ್‌ ಬಾಡಿಗೆ ಬಾಕಿ₹ 1 ಕೋಟಿ ಇದೆ’ ಎಂದು ಸಭೆಯ ಗಮನಕ್ಕೆ ತಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್‌.ಚೈತ್ರಶ್ರೀ ಮಾತನಾಡಿ, ‘ಕುಡಿಯುವ ನೀರಿನಗೆ ಅನುದಾನ ಒದಗಿಸದಿದ್ದರೆ ನಿಭಾವಣೆ ಬಹಳ ಕಷ್ಟವಾಗುತ್ತದೆ’ ಎಂದರು. ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ, ‘ಜಿಲ್ಲೆಗೆ ಕುಡಿಯುವ ನೀರಿಗೆ ತುರ್ತಾಗಿ ₹ 23 ಕೋಟಿ ಅನುದಾನ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿ, ‘ಟ್ಯಾಂಕರ್‌ ಬಾಡಿಗೆ ಬಾಕಿ ಪಾವತಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುವುದು. ಕುಡಿಯುವ ನೀರಿನ ನಿರ್ವಹಣೆಗೆ 14ನೇ ಹಣಕಾಸು ಆಯೋಗದ ಅನುದಾನ ಬಳಸಿಕೊಳ್ಳಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದ್ದೇವೆ’ ಎಂದು ಹೇಳಿದರು.

ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ‘ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಮಗಾರಿ ಮಲೆನಾಡು ಭಾಗದಲ್ಲಿ ಸರಿಯಾಗಿ ಕಾರ್ಯಗತವಾಗಿಲ್ಲ. ಖಾತರಿ ಯೋಜನೆಯಲ್ಲಿ ಸಮುದಾಯ ಕಾಮಗಾರಿ ಮಾಡಬೇಕು ಎಂಬ ಕಟ್ಟಳೆಯನ್ನು ಸಡಿಲಿಸಿ, ವೈಯುಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಬೇಕು’ ಎಂದು ಹೇಳಿದರು.

ಖಾತರಿ ಯೋಜನೆಯಡಿ ವೈಯುಕ್ತಿಕ ಕಾಮಗಾರಿಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅವಕಾಶ ಮಾಡಿದ್ದಾರೆ. ಆ ಮಾದರಿಯನ್ನು ತರಿಸಿಕೊಂಡು ಅದನ್ನು ಇಲ್ಲಿಯು ಅನ್ವಯಿಸಲು ಕ್ರಮ ವಹಿಸಬೇಕು ಎಂದು ವೈಎಸ್‌ವಿ ದತ್ತ ಸಲಹೆ ನೀಡಿದರು.

‘ಫಸಲ್‌ ಬಿಮಾ ಯೋಜನೆ ವಿಮಾ ಹಣ ಬಿಡುಗಡೆ ನಿಟ್ಟಿನಲ್ಲಿ ಈಗಾಗಲೇ ವಿಮಾ ಕಂಪನಿಯೊಂದಿಗೆ ಎರಡು ಬಾರಿ ಮಾತುಕತೆ ಮಾಡಿದ್ದೇವೆ. ವಿಮಾ ಮೊತ್ತ ಬಿಡುಗಡೆ ಮಾಡುವಂತೆ ಒತ್ತಡ ಹಾಕಿದ್ದೇವೆ. ವಿಮಾನ ಕಂಪನಿಯವರು ನಿರ್ಲಕ್ಷ್ಯ ತೋರಿದರೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಸಭೆಗೆ ತಿಳಿಸಿದರು.

‘ಮರಳಿನ ಸಮಸ್ಯೆ ವಿಪರೀತ ಇದೆ. ದಂಧೆ ಮಾಡುವವರು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಬಡವರು ತೀವ್ರ ತೊಂದರೆ ಎದುರಿಸುವಂತಾಗಿದೆ. ಮರಳಿನ ಸಮಸ್ಯೆ ಪರಿಹಾರಕ್ಕೆ ತುರ್ತಾಗಿ ಕ್ರಮ ವಹಿಸಬೇಕು. ಮರಳಿನ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಬೇಕು’ ಎಂದು ವೈಎಸ್‌ವಿ ದತ್ತ ಮತ್ತು ಬಿ.ಬಿ.ನಿಂಗಯ್ಯ ಮನವಿ ಮಾಡಿದರು. ‘ಕಡೂರು ತಾಲ್ಲೂಕಿನವರು ಮೂಡಿಗೆರೆಯಿಂದ ಮರಳು ಖರೀದಿಸಿ ಒಯ್ಯಲು ಅವಕಾಶ ಕಲ್ಪಿಸಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ (ಪಿಎಜಿಎಸ್‌ವೈ) ಜಿಲ್ಲೆಯಲ್ಲಿ 2013–14ನೇ ಸಾಲಿನ ನಂತರ ಒಂದೂ ಕಾಮಗಾರಿ ನಡೆದಿಲ್ಲ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ(ಆರ್‌ಎಂಎಸ್‌ಎ) ಜಿಲ್ಲೆಗೆ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ, ಶಾಲಾ ಕಟ್ಟಡ ರಿಪೇರಿ ಮಾಡಿಸುವುದಕ್ಕೆ ಅನುದಾನ ಇಲ್ಲವಾಗಿದೆ’ ಎಂದು ವೈಎಸ್‌ವಿ ದತ್ತ ಸಭೆಗೆ ತಿಳಿಸಿದರು.

* * 

ಹೈನುಗಾರಿಕೆ ರೈತರ ಆದಾಯದ ಎರಡನೇ ಮೂಲ. ಚಿಕ್ಕಮಗಳೂರಿನಲ್ಲಿ ಕೆಎಂಎಫ್‌ ಡೇರಿ ಸ್ಥಾಪಿಸಲು ಪ್ರಯತ್ನಿಸಲಾಗುವುದು

ಎಚ್‌.ಡಿ.ದೇವೇಗೌಡ

ಸಂಸದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry