ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ವಡ್ನಾಳ್‌ ರಾಜಣ್ಣ

7

ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ವಡ್ನಾಳ್‌ ರಾಜಣ್ಣ

Published:
Updated:

ಚನ್ನಗಿರಿ: ಕಾಂಗ್ರೆಸ್ ಸರ್ಕಾರದ ಐದು ವರ್ಷದ ಆಡಳಿತದ ಅವಧಿಯಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ₹ 2 ಸಾವಿರ ಕೋಟಿಗಿಂತಲೂ ಹೆಚ್ಚು ಅನುದಾನ ತರಲಾಗಿದೆ ಎಂದು ಶಾಸಕ ವಡ್ನಾಳ್ ರಾಜಣ್ಣ ತಿಳಿಸಿದರು.

ತಾಲ್ಲೂಕಿನ ಅಗರಬನ್ನಿಹಟ್ಟಿ ಗ್ರಾಮದಲ್ಲಿ ಲೋಕೋಪಯೋಗಿ ಹಾಗೂ ನೀರಾವರಿ ನಿಗಮದಿಂದ ಶುಕ್ರವಾರ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ರೈತರ ಬದುಕು ಹಸನು ಮಾಡಲು ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ₹ 446 ಕೋಟಿ, ಬೀರೂರು–ಸಮ್ಮಸಗಿ ರಾಜ್ಯ ಹೆದ್ದಾರಿಗೆ ₹ 325 ಕೋಟಿ, ಚಿತ್ರದುರ್ಗ–ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಗೆ ₹ 375 ಕೋಟಿ, 220 ಕೆ.ವಿ. ವಿದ್ಯುತ್ ವಿತರಣಾ ಘಟಕಕ್ಕೆ ₹ 115 ಕೋಟಿ, ರಸ್ತೆ ₹ 75 ಕೋಟಿ, 200 ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ₹ 10 ಕೋಟಿ ಸೇರಿದಂತೆ ಒಟ್ಟು ₹ 2 ಸಾವಿರಕ್ಕಿಂತ ಹೆಚ್ಚು ಅನುದಾನವನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಬುಸ್ಸೇನಹಳ್ಳಿ–ದೋಣಿಹಳ್ಳಿ ರಸ್ತೆ ಅಭಿವೃದ್ಧಿಗೆ ನೀರಾವರಿ ನಿಗಮದಿಂದ ₹ 72 ಲಕ್ಷ, ಅಗರಬನ್ನಿಹಟ್ಟಿ–ಹೊಸಬನ್ನಿಹಟ್ಟಿ ರಸ್ತೆಗೆ ₹ 75 ಲಕ್ಷ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಗರಗ–ಅಗರಬನ್ನಿಹಟ್ಟಿ ರಸ್ತೆ ಅಭಿವೃದ್ಧಿಗೆ ₹ 80 ಲಕ್ಷ ಅನುದಾನ ನೀಡಲಾಗಿದೆ ಎಂದರು.

‘ಕಾಂಗ್ರೆಸ್ ಸರ್ಕಾರ ₹ 8560 ಕೋಟಿ ರೈತರ ಸಾಲವನ್ನು ಮನ್ನಾ ಮಾಡಿದೆ. ಆದರೆ ಅಚ್ಛೇ ದಿನ್ ಎಂದು ಹೇಳುವ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಇರುವ ರೈತರ ಸಾಲವನ್ನು ಮನ್ನಾ ಮಾಡಲು ಆಗುವುದಿಲ್ಲ ಎಂದು ಹೇಳಿದೆ. ಇದುವರೆಗೆ ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ. ಭದ್ರಾ ಕಾಲುವೆಗೆ ರೈತರು ಪಂಪ್‌ಸೆಟ್‌ಗಳನ್ನು ಹಾಕಬೇಡಿ ಎಂದು ನಾನು ಹೇಳುವುದಿಲ್ಲ. ಆದರೆ ಕೆಳಭಾಗದ ರೈತರಿಗೂ ನೀರು ಅಗತ್ಯವಾಗಿದ್ದು, ಹೊಂದಾಣಿಕೆಯಿಂದ ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ನಿಮ್ಮೊಂದಿಗೆ ನಾನು ಇದ್ದೇನೆ. ಎಲ್ಲಾ ರೈತರು ಉಳಿಯಬೇಕು’ ಎಂದು ಹೇಳಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗರಾಜಾಚಾರ್, ಉಪಾಧ್ಯಕ್ಷೆ ಅಶ್ರಂ ಖಾನಂ, ಸದಸ್ಯರಾದ ಜಯ್ಯಮ್ಮ, ಅನ್ನಪೂರ್ಣಮ್ಮ, ಲೋಕೋಪಯೋಗಿ ಇಲಾಖೆ ಎಇಇ ಶಂಕರಮೂರ್ತಿ, ನೀರಾವರಿ ನಿಗಮದ ಎಇಇ ಓಂಕಾರಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry