ಮುಂದುವರಿದ ಅಕ್ರಮ ಪಂಪ್‌ಸೆಟ್‌ ತೆರವು

7

ಮುಂದುವರಿದ ಅಕ್ರಮ ಪಂಪ್‌ಸೆಟ್‌ ತೆರವು

Published:
Updated:
ಮುಂದುವರಿದ ಅಕ್ರಮ ಪಂಪ್‌ಸೆಟ್‌ ತೆರವು

ದಾವಣಗೆರೆ/ಮಾಯಕೊಂಡ: ಭದ್ರಾ ನಾಲಾ ವ್ಯಾಪ್ತಿಯಲ್ಲಿ ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಯಿತು. ಮಾಯಕೊಂಡ ಪಿಸ್‌ಐ ಹಾಗೂ ಬೆಸ್ಕಾಂ ಎಇಇ ನೇತೃತ್ವದ ತಂಡ ನಲ್ಕುಂದ ಹಾಗೂ ಅಣಬೇರು ಗ್ರಾಮಗಳಲ್ಲಿ ಹಾದುಹೋಗಿರುವ ಭದ್ರಾನಾಲಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿತು.

ಈ ವ್ಯಾಪ್ತಿಯಲ್ಲಿ ಅಚ್ಚುಕಟ್ಟು ವ್ಯಾಪ್ತಿಯೇತರ ರೈತರ ಅಳವಡಿಸಿಕೊಂಡಿದ್ದ 400ಕ್ಕೂ ಹೆಚ್ಚು ಪಂಪ್‌ಸೆಟ್‌ಗಳನ್ನು ತಂಡ ತೆರವುಗೊಳಿಸಿತು. ಬೆಸ್ಕಾಂ ಅಧಿಕಾರಿಗಳು ಪಂಪ್‌ಸೆಟ್‌ಗೆ ಕಲ್ಪಿಸಲಾಗಿದ್ದ ವಿದ್ಯುತ್‌ ಸಂಪರ್ಕವನ್ನು ಸ್ಥಗಿತಗೊಳಿಸಿದರು.

ಸುಮಾರು 2 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಯಿತು. ಎಲ್ಲಿಯೂ ರೈತರಿಂದ ಪ್ರತಿರೋಧ ಎದುರಾಗಲಿಲ್ಲ. ಕೆಲವರು ಸ್ವಯಂಪ್ರೇರಿತರಾಗಿ ಮೋಟಾರ್‌ಗಳನ್ನು ತೆಗೆದುಕೊಂಡು ಹೋದರು ಎಂದು ತಹಶೀಲ್ದಾರ್ ಸಂತೋಷ್‌ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಯಕೊಂಡ ವರದಿ

ಹೋಬಳಿ ವ್ಯಾಪ್ತಿಯಲ್ಲೂ ಅಕ್ರಮ ಮೋಟರ್‌ಗಳನ್ನು ತೆರವುಗೊಳಿಸಿತು. ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಬೆಸ್ಕಾಂ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳ ತಂಡ ನಾಲೆಯಲ್ಲಿ ಅಳವಡಿಸಿದ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿದರು.

ಗಲಾಟೆಗೆ ಆಸ್ಪದ ವಾಗದಂತೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ವಾಹನ ತರಿಸಿ ಬಂದೋಬಸ್ತ್ ಮಾಡಲಾಗಿತ್ತು. ರೈತರು ಗುಂಪಾಗಿ ನಿಂತು ಅಧಿಕಾರಿಗಳ ಕ್ರಮದ ವಿರುದ್ಧ ಅಕ್ರೋಶ ವ್ಯಕ್ತಪಡಿಸುತ್ತಿದ್ದರು. ಕೆಲವರು ಪರಿಸ್ಥಿತಿ ಮನವರಿಕೆ ಮಾಡಲು ಯತ್ನಿಸುತ್ತಿದ್ದರು. ಅಧಿಕಾರಿಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಲೇ ಅಸಾಹಯಕತೆ ಪ್ರದರ್ಶಿಸುತ್ತಿದ್ದರು.

ಉಪ ತಹಶೀಲ್ದಾರ್ ರಾಮಸ್ವಾಮಿ ಮತ್ತು ಕಂದಾಯ ನಿರೀಕ್ಷಕ ಚಂದ್ರಪ್ಪ ಮಾತನಾಡಿ, ಜಿಲ್ಲಾಡಳಿತದ ಆದೇಶದಂತೆ ಕಾರ್ಯಾಚರಣೆ ನಡೆಯುತ್ತಿದೆ. ಚಾನೆಲ್‌ ಏರಿಗೆ ಹಾನಿ ಮಾಡಿ ಪೈಪ್ ಲೈನ್ ಅಳವಡಿಸಿಕೊಂಡವರಿಂದಲೇ ದುರಸ್ತಿ ವೆಚ್ಚ ಭರಿಸುವಂತೆ ಸೂಚನೆ ನೀಡಲಾಗಿದೆ. ಟ್ರ್ಯಾಕ್ಟರ್ ಬಳಸಿಯೂ ನೀರು ಪಂಪ್ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಕೊನೆಯ ಭಾಗದ ರೈತರ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದರು.

ಬೆಸ್ಕಾಂ ಎಇಇ ನಾಗರಾಜ ಮಾತನಾಡಿ, ಕೆಲವೇ ಮೋಟರ್‌ಗಳಿಗೆ ಮಾತ್ರ ಅಧಿಕೃತ ಸಂಪರ್ಕವಿದೆ. 35 ಟಿ.ಸಿಗಳಲ್ಲಿನ ಸಂಪರ್ಕ ಕಡಿತಗೊಳಿಸಲಾಗಿದೆ. ಭದ್ರಾನಾಲೆಯ ಚನ್ನಗಿರಿ ವ್ಯಾಪ್ತಿಯವರೆಗೂ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ನೀರಾವರಿ ಇಲಾಖೆಯ ಎಇಇ ಹನುಮಂತಪ್ಪ ಇಲಾಖೆಯ ಸವಡಿಗಳು ಇದ್ದರು.

ರೈತರ ಗೋಳು, ಆಕ್ರೋಶ

ಕಾರ್ಯಾಚರಣೆಗೆ ಬಂದ ಅಧಿಕಾರಿಗಳೊಂದಿಗೆ ರೈತರು ಸಮಸ್ಯೆ ತೆರೆದಿಟ್ಟರು. ಮೋಟಾರ್ ಅಳವಡಿಕೆಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದೇವೆ. ಫಲಕ್ಕೆ ಬಂದಿರುವ ತೋಟಗಳು ಒಣಗುತ್ತಿವೆ. ನಮ್ಮ ಗೋಳು ಕೇಳುವವರಿಲ್ಲ. ನೀರನ್ನು ಕಾರ್ಖಾನೆಗೆ ಬಳಸುತ್ತಿಲ್ಲ ಎಂದು ರೈತರು ಶಾಪ ಹಾಕುವ ದೃಶ್ಯ ಸಾಮಾನ್ಯವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry