ಕೈಬರಹದ ಮೂಲಕ ಹಿರಿಯರ ನೆನಪು!

7

ಕೈಬರಹದ ಮೂಲಕ ಹಿರಿಯರ ನೆನಪು!

Published:
Updated:
ಕೈಬರಹದ ಮೂಲಕ ಹಿರಿಯರ ನೆನಪು!

ಧಾರವಾಡ: ಈ ಬಾರಿಯ ಆರನೇ ಆವೃತ್ತಿಯ ಸಾಹಿತ್ಯ ಸಂಭ್ರಮದಲ್ಲಿ ಸಂಘಟಕರು ಅಪರೂಪದ ಸಾಹಿತಿ ಗಳು, ಕವಿಗಳ ಕೈಬರಹಗಳನ್ನು ಅಚ್ಚುಕಟ್ಟಾಗಿ ಚಿತ್ರಗಳನ್ನಾಗಿ ಮಾಡಿಸಿ ಪ್ರದರ್ಶನಕ್ಕಿಟ್ಟಿದ್ದರು.

ಕಾರ್ಯಕ್ರಮ ನಡೆಯುತ್ತಿರುವ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದ ಬಲಬದಿಯಲ್ಲಿ ಸಾಹಿತಿಗಳಾದ ಡಾ. ದ.ರಾ. ಬೇಂದ್ರೆ, ಕುವೆಂಪು, ಶಿವರಾಮ ಕಾರಂತ, ಡಾ. ಚಂದ್ರಶೇಖರ ಕಂಬಾರ, ಡಾ. ಯು.ಆರ್‌. ಅನಂತಮೂರ್ತಿ, ಡಾ. ಚೆನ್ನವೀರ ಕಣವಿ, ಎ.ಆರ್‌. ಕೃಷ್ಣಶಾಸ್ತ್ರಿ, ವಿ. ಸೀತಾರಾಮಯ್ಯ, ಎಸ್‌.ಎಲ್. ಭೈರಪ್ಪ, ಆನಂದ, ರಂಗರಾವ್‌ ದಿವಾಕರ, ತಿರುಮಲೆ ತಾತಾಚಾರ್ಯ, ಜಿ.ಪಿ. ರಾಜರತ್ನಂ, ಡಿ.ಎಸ್. ಕರ್ಕಿ, ದಿನಕರ ದೇಸಾಯಿ, ಸಿದ್ದವನಹಳ್ಳಿ ಕೃಷ್ಣಶರ್ಮ, ಮಧುರಚೆನ್ನ, ಬೀಚಿ, ಪಿ. ಲಂಕೇಶ್‌, ಜಿ.ಬಿ. ಜೋಶಿ (ಜಡಭರತ), ಡಾ. ಜಿ.ಎಸ್. ಆಮೂರ, ಡಾ. ಎಂ.ಎಂ. ಕಲಬುರ್ಗಿ, ಗಿರೀಶ ಕಾರ್ನಾಡ, ದೇವನೂರು ಮಹಾದೇವ ಸೇರಿದಂತೆ 113 ಸಾಹಿತಿಗಳ ಹಸ್ತಾಕ್ಷರಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಜೊತೆಗೆ ಈ ಸಾಹಿತಿಗಳ ಕಿರು ಪರಿಚಯ, ಪ್ರಮುಖ ಕೃತಿಗಳು ಹಾಗೂ ಪಡೆದ ಪ್ರಶಸ್ತಿಗಳ ಮಾಹಿತಿಯನ್ನೂ ಫಲಕದಲ್ಲಿ ಅಳವಡಿಸಲಾಗಿದೆ. ಡಾ.ಜಿ.ಬಿ. ಜೋಶಿ ಮೆಮೋರಿಯಲ್‌ ಟ್ರಸ್ಟ್‌ ಈ ಪ್ರದರ್ಶನವನ್ನು ಆಯೋಜಿಸಿದೆ.

ಸಾಹಿತ್ಯಾಸಕ್ತರಿಗೆ ಪುಸ್ತಕ ಮಳಿಗೆಗಳು

ಸಭಾಂಗಣದ ಹೊರಭಾಗದಲ್ಲಿ ಸಪ್ನ ಬುಕ್‌ ಹೌಸ್‌, ಸಾಹಿತ್ಯ ಭಂಡಾರ, ಮನೋಹರ ಗ್ರಂಥಮಾಲೆ, ಪುಸ್ತಕ ಪ್ರಕಾಶಕರ ಸಂಘ ಸೇರಿದಂತೆ ಹಲವು ಪ್ರಕಾಶನ ಸಂಸ್ಥೆಗಳು ತಾವು ಪ್ರಕಟಿಸಿದ ಕೃತಿಗಳನ್ನು ಮಾರಾಟ ಮಾಡುತ್ತಿದ್ದರು.

ಸಾಹಿತ್ಯ ಭಂಡಾರದ ಮಳಿಗೆಯಲ್ಲಿ ‘ಪ್ರಜಾವಾಣಿ’ ಪ್ರಕಾಶನದ ಕೃತಿಗಳಾದ ಹೊನ್ನಕಣಜ, ಅಂಕುರ, ಸಮಾನತೆ ಕನಸನ್ನು ಮತ್ತೆ ಕಾಣುತ್ತ, ಜಾತಿ ಸಂವಾದ, ನಾರಿ ಕೇಳಾ ಕೃತಿಗಳನ್ನು ಮಾರಾಟಕ್ಕಿಡಲಾಗಿದೆ.

ಹೂರಣ ಕಡುಬು, ತೊಂಡೆಕಾಯಿ ಪಲ್ಯ

ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಸಾಹಿತ್ಯಾಸಕ್ತರಿಗೆ ಸಂಘಟಕರು ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು ಶಿರಾ ವ್ಯವಸ್ಥೆ ಮಾಡಿದ್ದರೆ, ಮಧ್ಯಾಹ್ನದ ಊಟಕ್ಕೆ ಹೂರಣದ ಕಡುಬು, ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಚಪಾತಿ, ತೊಂಡೆಕಾಯಿ ಪಲ್ಯ, ಮೊಳಕೆ ಕಾಳು, ಹಸಿ ಮೆಣಸಿನಕಾಯಿ ಚಟ್ನಿ, ಮೊಸರು, ಅನ್ನ, ಕಟ್ಟಿನ ಸಾಂಬಾರ್‌ ವ್ಯವಸ್ಥೆ ಮಾಡಿದ್ದರು. ಸಂಜೆ ಸಮೋಸಾ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry