ವಿವಿಧ ಸಂಘಟನೆಗಳಿಂದ ಪ್ರತಿಭಟನೆ: ಎಚ್ಚರಿಕೆ

7

ವಿವಿಧ ಸಂಘಟನೆಗಳಿಂದ ಪ್ರತಿಭಟನೆ: ಎಚ್ಚರಿಕೆ

Published:
Updated:

ಗಜೇಂದ್ರಗಡ: ಗಜೇಂದ್ರಗಡವನ್ನು ಜ.26ರಂದು ತಾಲ್ಲೂಕು ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸುತ್ತಿರುವುದು ಶ್ಲಾಘನೀಯ. ಆದರೆ ಅದರ ಕಚೇರಿಯನ್ನು ಭೂಮರಡ್ಡಿ ಅವರ ಹಳೆಯ ನಿವಾಸದಲ್ಲಿ ತೆರೆಯಬಾರದು ಎಂದು ಪುರಸಭೆ ಸದಸ್ಯ ಅಶೋಕ ವನ್ನಾಲ ಆಗ್ರಹಿಸಿದರು.

ಪುರಸಭೆಯಲ್ಲಿ ಶುಕ್ರವಾರ ನಡೆದ ಹೊಸ ತಾಲ್ಲೂಕು ರಚನೆ ಮತ್ತು ಗಣರಾಜ್ಯೋತ್ಸವ ಆಚರಣೆಗೆ ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಒಂದು ವೇಳೆ ಇದೇ ಕಟ್ಟಡದಲ್ಲಿ ಕಚೇರಿ ತೆರೆದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪಟ್ಟಣದ ಕೊನೆಯ ಮೂಲೆಯಲ್ಲಿರುವ, ಯಾರೂ ಬಾಡಿಗೆ ಪಡೆಯದ ಕಟ್ಟಡದಲ್ಲಿ, ಸಾರ್ವಜನಿಕರ, ಯಾವುದೇ ಸದಸ್ಯರ ಮತ್ತು ಸಂಘಟನೆಗಳ ಸಲಹೆಯನ್ನು ಪಡೆಯದೇ ಏಕಪಕ್ಷೀಯವಾಗಿ ಅಧಿಕಾರಿಗಳು ಮತ್ತು ಶಾಸಕರು ಅಲ್ಲಿ ನೂತನ ಕಚೇರಿಯನ್ನು ಸ್ಥಾಪಿಸಲು ಹೊರಟಿರುವುದು ಸರಿಯಲ್ಲ. ಕಚೇರಿಯನ್ನು ಆರಂಭಿಸುವುದು ಜನರ ಅನುಕೂಲಕ್ಕೇ ವಿನಾ ಯಾರದೋ ಮನೆಯನ್ನು ಬಾಡಿಗೆ ಕೊಡಿಸಲು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕಚೇರಿಗೆ ಹೋಗಲು ಹಳ್ಳಿಗರು ಬಸ್‌ ನಿಲ್ದಾಣದಿಂದ ಆಟೊಗಳಿಗೆ ನೂರು ರೂಪಾಯಿ ತೆರಬೇಕಾಗುತ್ತದೆ. ಹೀಗಾಗಿ ಈ ಕಟ್ಟಡವನ್ನು ಕೈಬಿಟ್ಟು ಜನರಿಗೆ ಹತ್ತಿರ ಇರುವ ಕಟ್ಟಡದಲ್ಲಿ ಕಚೇರಿಯನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

‘ಈ ಕಚೇರಿ ಜಿಲ್ಲಾಧಿಕಾರಿ ಅಥವಾ ಉಪ ವಿಭಾಗಾಧಿಕಾರಿಗಳಿಗಾಗಿ ಅಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ. ಯಾರಿಗೂ ತಿಳಿಸದೇ ತಾಲ್ಲೂಕಿನ ಜನಪ್ರತಿನಿಧಿಗಳು ತಮ್ಮ ಸ್ವಹಿತಕ್ಕಾಗಿ ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಬೇರೆ ಕಡೆ ಅದನ್ನು ಸ್ಥಾಪಿಸದಿದ್ದರೆ ನಾಳೆಯಿಂದ ಹೋರಾಟ ಮಾಡುವ ಜತೆಗೆ ಗಜೇಂದ್ರಗಡ ಬಂದ್ ಮಾಡ ಲಾಗುವುದು ಎಂದು ಎಚ್ಚರಿಸಿದರು. ಪುರಸಭೆ ಉಪಾಧ್ಯಕ್ಷ ಬುಡ್ಡಪ್ಪ ಮೂಲಿಮನಿ ಸಹ ಈ ಕಟ್ಟಡಕ್ಕೆ ತಮ್ಮ ಆಕ್ಷೇಪಣೆ ಇದೆ ಎಂದು ಹೇಳಿದರು.

ಸದಸ್ಯರಾದ ಶರಣಪ್ಪ ರೇವಡಿ, ಮಂಜುನಾಥ ಬಡಿಗೇರ, ಚಂದ್ರು ಚಳಗೇರಿ, ಪ್ರಭು ಚವಡಿ, ವಿಜಯಕುಮಾರ ರಾಯಬಾಗಿ, ಕಳಕಪ್ಪ ಗುಳೇದ, ಕವಿತಾ ಜಾಲಿಹಾಳ, ಮಂಜುನಾಥ ಕಲಾಲ ಅವರು ಭೂಮರಡ್ಡಿಯವರ ಮನೆಯ ಬದಲು ಹಳೆ ಪ್ರವಾಸಿ ಮಂದಿರ ಇಲ್ಲವೆ ಪಟ್ಟಣದ ಮಧ್ಯದಲ್ಲಿ ಜನರಿಗೆ ಅನೂಕೂಲವಾಗುವ ಕಟ್ಟಡವನ್ನು ನಿಗದಿಗೊಳಿಸಬೇಕು. ಈಗ ನಿಗದಿ ಮಾಡಿದ ಸ್ಥಳದಲ್ಲಿಯೇ ಮುಂದುವರಿಸುವುದಾದರೆ ನಾಳೆ ಯಿಂದ ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಸಿದರು.

ಪಟ್ಟಣದ ಎಲ್ಲಾ ಸಂಘ, ಸಂಸ್ಥೆಗಳನ್ನು ಪಕ್ಷಾತೀತವಾಗಿ ಕರೆದು ಅದನ್ನು ನಿರ್ಧರಿಸಬೇಕೆಂದು ಗದಗ ಜಿಲ್ಲಾಧಿಕಾರಿಗಳಿಗೆ ಮತ್ತು ಶಾಸಕರಿಗೆ ಪತ್ರ ಬರೆಯುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸಲಹೆ ನೀಡಿದರು. ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಅದಕ್ಕೆ ಸಮ್ಮತಿಸಿದರು.

ಸದಸ್ಯ ಶಿವರಾಜ ಘೋರ್ಪಡೆ ಅವರೂ ಇತರ ಸದಸ್ಯರ ಸಲಹೆಗೆ ತಲೆದೂಗಿದರು. ಸಭೆಯಲ್ಲಿ ಇನ್ನಿತರ ಹಲವಾರು ವಿಷಯಗಳು ಚರ್ಚೆಗೆ ಬಂದವು. ಪುರಸಭೆ ಅಧ್ಯಕ್ಷೆ ಸುಜಾತಾ ಚುಂಚಾ, ಸದಸ್ಯರಾದ ಶಾರದಾ ರಾಠೋಡ, ಶಿವಪ್ಪ ಸಂಕನೂರ, ಷಣ್ಮುಖಪ್ಪ ಚಿಲಝರಿ, ವಿಜಯಲಕ್ಷ್ಮಿ ಚಟ್ಟೇರ, ಶೇಕಪ್ಪ ಇಟಗಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry