ಬದುಕು ನೀಡಿದ ಬೇರಿಗೆ ನೀರೆರೆಯಲು ಬಂದ ‘ಹಕ್ಕಿ’

7

ಬದುಕು ನೀಡಿದ ಬೇರಿಗೆ ನೀರೆರೆಯಲು ಬಂದ ‘ಹಕ್ಕಿ’

Published:
Updated:
ಬದುಕು ನೀಡಿದ ಬೇರಿಗೆ ನೀರೆರೆಯಲು ಬಂದ ‘ಹಕ್ಕಿ’

ಹಾವೇರಿ: ವಿದೇಶಾಂಗ ಸಚಿವಾಲಯದ ಉಪ ಕಾರ್ಯದರ್ಶಿ ಶಂಭು ಹಕ್ಕಿ, ತಾವು ಕಲಿತ ಹಿರೇಕೆರೂರ ತಾಲ್ಲೂಕಿನ ಸಾತೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯನ್ನು ಶನಿವಾರ (ಜ.20) ದತ್ತು ಸ್ವೀಕರಿಸಲಿದ್ದಾರೆ.

ಸಾತೇನಹಳ್ಳಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ (1984–1991) ಏಳನೇ ತರಗತಿವರೆಗೆ ಓದಿದ ಅವರು, ಬಳಿಕ ಎಸ್‌.ವಿ.ವಿ.ಎಸ್ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಸಮೀಪದ ಹಂಸಭಾವಿಯ ಎಂ.ಎ.ಎಸ್.ಸಿ. ಕಾಲೇಜಿನಲ್ಲಿ ಪದವಿ ಪಡೆದರು. ಧಾರವಾಡ ವಿಶ್ವವಿದ್ಯಾಲಯದಲ್ಲಿ ಬಿ.ಇಡಿ ಪೂರೈಸಿದರು.

ಅ ನಂತರ ‘ಪ್ರಜಾವಾಣಿ’ಯ ಉಪ ಸಂಪಾದಕರಾಗಿ ವೃತ್ತಿಗೆ ಸೇರಿದ್ದರು. ಬಳಿಕ ಪ್ರೌಢಶಾಲಾ ಶಿಕ್ಷಕರಾಗಿ, ತಹಶೀಲ್ದಾರ್ ಆಗಿಯೂ ನೇಮಕಗೊಂಡಿದ್ದರು. 2007ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 92ನೇ ರ‍್ಯಾಂಕ್ ಪಡೆದು ಐಎಫ್ಎಸ್ (ಭಾರತೀಯ ವಿದೇಶಾಂಗ ಸೇವೆ) ಅಧಿಕಾರಿಯಾದರು. ಸದ್ಯ ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಸರ್ಕಾರಿ ಶಾಲೆಗಳಲ್ಲಿ ಅರ್ಹತೆ ಹೊಂದಿದ ಗುಣಮಟ್ಟದ ಶಿಕ್ಷಕರಿದ್ದರೂ, ಬಹುತೇಕ ಕಡೆ ಮೂಲಸೌಕರ್ಯದ ಕೊರತೆ ಕಾಡುತ್ತಿದೆ. ಹೀಗಾಗಿ ಪೋಷಕರಲ್ಲಿ ಖಾಸಗಿ ಶಾಲೆಗಳ ಬಗ್ಗೆ ವ್ಯಾಮೋಹ ಹೆಚ್ಚುತ್ತಿದೆ. ಇದನ್ನು ಹೋಗಲಾಡಿಸಲು ಸರ್ಕಾರಿ ಶಾಲೆಗಳನ್ನು ಬಲಗೊಳಿಸಬೇಕಾಗಿದೆ’ ಎನ್ನುತ್ತಾರೆ ಶಂಭು ಹಕ್ಕಿ.

ತಾವು ಕಲಿತ ಶಾಲೆಯನ್ನು ‘ಸ್ಮಾರ್ಟ್ ಸ್ಕೂಲ್‌’ ಮಾಡುವುದಾಗಿ ಹೇಳುವ ಅವರು ಅದಕ್ಕೆ ಬೇಕಾಗುವ ಪ್ರೊಜೆಕ್ಟರ್, ಕಂಪ್ಯೂಟರ್‌ಗಳನ್ನು ಶನಿವಾರ ನೀಡಲಿದ್ದಾರೆ. ‘ಮುಂದಿನ ದಿನಗಳಲ್ಲಿ ಪ್ರಯೋಗಾಲಯ, ಗ್ರಂಥಾಲಯ, ಶುದ್ಧ ಕುಡಿಯುವ ನೀರು ಮತ್ತಿತರ ಸೌಲಭ್ಯ ಕಲ್ಪಿಸಲಾಗುವುದು. ಶಾಲೆಯಲ್ಲಿ ಯಾವುದೇ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗುವುದು’ ಎಂದರು.

‘ಶಿಕ್ಷಣದಲ್ಲಿ ಸಂವಹನ, ಭಾಷಾ ಜ್ಞಾನ, ವಿಜ್ಞಾನ ಮತ್ತು ಗಣಿತದ ಗುಣಮಟ್ಟ ಚೆನ್ನಾಗಿರಬೇಕು. ಅದು, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರಬೇಕು. ವಿದ್ಯಾರ್ಥಿಗಳಲ್ಲಿ ಪ್ರಮೇಯ ಹಾಗೂ ಪರಿಕಲ್ಪನೆಗಳ ಸ್ಪಷ್ಟತೆ ಮೂಡಿಸಬೇಕು. ಅದಕ್ಕೆ ತಂತ್ರಜ್ಞಾನದ ನೆರವು ಅಗತ್ಯವಿದ್ದು, ಇದು, ದೃಶ್ಯ–ಶ್ರವ್ಯ ಮಾಧ್ಯಮಗಳಿಂದ ಸಾಧ್ಯ. ಅದಕ್ಕೆ ಸ್ಮಾರ್ಟ್ ಕ್ಲಾಸ್ ಪೂರಕ’ ಎಂದರು.

‘ವಿದೇಶದಲ್ಲಿ ಶಿಕ್ಷಕರು ತಂತ್ರಜ್ಞಾನ ಬಳಸಿಕೊಂಡು ಮಕ್ಕಳಿಗೆ ಸ್ಪಷ್ಟ ಪರಿಕಲ್ಪನೆಗಳನ್ನು ನೀಡುತ್ತಾರೆ. ಮಕ್ಕಳು ಭವಿಷ್ಯದಲ್ಲಿ ಆವಿಷ್ಕಾರಗಳಲ್ಲಿ ತೊಡಗುವಂತೆ ಪ್ರೋತ್ಸಾಹಿಸುತ್ತಾರೆ’ ಎಂದು ವಿವರಿಸಿದರು.

‘ನಾವು, ಓದು– ಬರಹಕ್ಕೆ ಒತ್ತು ನೀಡುತ್ತೇವೆ. ಆದರೆ, ಆಲಿಸುವುದು (ಕೇಳುವುದು) ಬಹುಮುಖ್ಯ. ದೃಶ್ಯ– ಶ್ರವ್ಯ ಮಾಧ್ಯಮಗಳ ಮೂಲಕ ಇದು ಸಾಧ್ಯ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

* * 

ಬಂದ ಹಾದಿಯನ್ನು ಮತ್ತೆ ಮತ್ತೆ ತಿರುಗಿ ನೋಡುವ ಸಾಧಕ ಹಳೇ ವಿದ್ಯಾರ್ಥಿಗಳೇ ಸರ್ಕಾರಿ ಶಾಲೆಗಳ ಆಸ್ತಿ

–ಎ.ಡಿ. ಬಡೇಗರ್

ಮುಖ್ಯೋಪಾಧ್ಯಾಯರು, ಸಾತೇನಹಳ್ಳಿ ಶಾಲೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry