ಚಿಂಚೋಳಿ ಕ್ಷೇತ್ರದಲ್ಲಿ ಅತಿಹೆಚ್ಚಿನ ಕೇಂದ್ರಗಳು

7

ಚಿಂಚೋಳಿ ಕ್ಷೇತ್ರದಲ್ಲಿ ಅತಿಹೆಚ್ಚಿನ ಕೇಂದ್ರಗಳು

Published:
Updated:

ಕಾಳಗಿ: ‘ಕಲಬುರ್ಗಿ ಜಿಲ್ಲೆಯಲ್ಲಿ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಇರುವಷ್ಟು ತೊಗರಿ ಖರೀದಿ ಕೇಂದ್ರಗಳು ಬೇರೆಡೆ ಎಲ್ಲಿಯೂ ಇಲ್ಲ’ ಎಂದು ಶಾಸಕ ಡಾ.ಉಮೇಶ ಜಾಧವ್ ಹೇಳಿದರು.

ಬುಧವಾರ ಕಾಳಗಿ ರೈತ ಸೇವಾ ಸಹಕಾರ ಸಂಘದಲ್ಲಿ ತೊಗರಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ‘ನಮ್ಮ ಭಾಗದಲ್ಲಿ ತೊಗರಿ ಬೆಳೆಗಾರರು ಹೆಚ್ಚಿರುವುದರಿಂದ ಈ ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕೊಡದೂರ, ರಟಕಲ್, ಐನಾಪುರ ಸೇರಿದಂತೆ ಕ್ಷೇತ್ರದ ವಿವಿಧೆಡೆ ತೊಗರಿ ಖರೀದಿ ಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರೋತ್ಸಾಹ ಸೇರಿ ಕ್ವಿಂಟಲ್‌ ತೊಗರಿಗೆ ₹6,000 ಬೆಲೆ ನಿಗದಿಪಡಿಸಿ ತೊಗರಿ ಖರೀದಿಸಲಾಗುತ್ತಿದೆ’ ಎಂದು ಹೇಳಿದರು.

‘ಕೇಂದ್ರದ ನಿರ್ದೇಶನದಂತೆ ರಾಜ್ಯ ಸರ್ಕಾರ ಸದ್ಯ 16.50ಲಕ್ಷ ಕ್ವಿಂಟಲ್ ತೊಗರಿ ಖರೀದಿಸುವ ಗುರಿ ಹೊಂದಿದೆ. ಆದರೆ, ಇದು ಶೇ 25ರಷ್ಟು ಮಾತ್ರ ತೊಗರಿ ಖರೀದಿಸಿದಂತಾಗಿ ಇನ್ನೂ ಹಲವಾರು ರೈತರು ಉಳಿದುಕೊಳ್ಳಲಿರುವ ಹಿನ್ನೆಲೆಯಲ್ಲಿ ನಮ್ಮ ಭಾಗದ ಸಂಸದರು, ಶಾಸಕರು ಜತೆಗೂಡಿ ತೊಗರಿ ಖರೀದಿಯ ಪ್ರಮಾಣ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿದ್ದೇವೆ’ ಎಂದು ತಿಳಿಸಿದರು.

‘ರೈತರು ಕಷ್ಟುಪಟ್ಟು ಬೆಳೆದ ತೊಗರಿ ಮಾರಾಟ ಮಾಡಲು ಬರುತ್ತಾರೆ. ಅವರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಖರೀದಿ ಕೇಂದ್ರದ ಸಿಬ್ಬಂದಿ ನೋಡಿಕೊಳ್ಳಬೇಕು’ ಎಂದರು.

ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಪರಮೇಶ್ವರ ಮಡಿವಾಳ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಲೀಲಾ ಸಲಗೂರ, ಮಾಜಿ ಅಧ್ಯಕ್ಷ ಶಿವಶರಣಪ್ಪ ಕಮಲಾಪುರ, ರಾಘವೇಂದ್ರ ಗುತ್ತೇದಾರ, ಎಪಿಎಂಸಿ ನಿರ್ದೇಶಕ ರಾಮಶೆಟ್ಟಿ ಪಾಟೀಲ, ತಾ.ಪಂ ಮಾಜಿ ಸದಸ್ಯ ಚಂದ್ರಕಾಂತ ಜಾಧವ್, ಸಹಕಾರ ಸಂಘದ ಉಪಾಧ್ಯಕ್ಷ ಸಿದ್ದಯ್ಯಸ್ವಾಮಿ ರಾಜಾಪುರ, ನಿರ್ದೇಶಕ ಬಸವರಾಜ ಚಿಟ್ಟಾ, ಸಂತೋಷ ಚವಾಣ್, ತಿಪ್ಪಣ್ಣ ಪೂಜಾರಿ, ಗ್ರಾ.ಪಂ ಸದಸ್ಯ ಜಗನ್ನಾಥ ಚಂದನಕೇರಿ, ಕಲ್ಯಾಣರಾವ ಡೊಣ್ಣೂರ, ಮನೋಹರ ರಾಠೋಡ ವೇದಿಕೆಯಲ್ಲಿದ್ದರು. ರಮೇಶ ನಾಮದಾರ ಸ್ವಾಗತಿಸಿದರು. ಗುಡುಸಾಬ ಕಮಲಾಪುರ ನಿರೂಪಿಸಿ, ವಂದಿಸಿದರು.

ಹೆಬ್ಬಾಳ ಗ್ರಾಮ: ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬುಧವಾರ ತೊಗರಿ ಖರೀದಿ ಕೇಂದ್ರ ಆರಂಭಗೊಂಡಿತು. ಸಂಘದ ಅಧ್ಯಕ್ಷ ಸಿದ್ದಣ್ಣಗೌಡ ಪಾಟೀಲ, ಉಪಾಧ್ಯಕ್ಷ ಮಚೇಂದ್ರ ಚಾಲನೆ ನೀಡಿದರು. ತಾ.ಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ಶಿವಗೋಳ, ಸಹಕಾರ ಸಂಘದ ನಿರ್ದೇಶಕ ಶಿವಶರಣಪ್ಪ ಮುಡಬೂಳ, ಗೌಡಪ್ಪ ಪಾಟೀಲ, ಕಾರ್ಯದರ್ಶಿ ರೇವಣಸಿದ್ದಪ್ಪ ಮರಪಳ್ಳಿ, ವೀರೇಶ ಸಿದ್ದನಾಕ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry