ಅಭಿವೃದ್ಧಿಗಾಗಿ ಕಾಯುತ್ತಿರುವ ಪ್ರವಾಸಿ ತಾಣಗಳು

7

ಅಭಿವೃದ್ಧಿಗಾಗಿ ಕಾಯುತ್ತಿರುವ ಪ್ರವಾಸಿ ತಾಣಗಳು

Published:
Updated:
ಅಭಿವೃದ್ಧಿಗಾಗಿ ಕಾಯುತ್ತಿರುವ ಪ್ರವಾಸಿ ತಾಣಗಳು

ಚಿಂಚೋಳಿ: ಪ್ರವಾಸೋದ್ಯಮದ ಭೂಪಟದಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳಬೇಕಿದ್ದ ತಾಲ್ಲೂಕಿನ ಪ್ರವಾಸಿ ತಾಣಗಳು ಸರ್ಕಾರದ ನೆರವಿಗಾಗಿ ಕಾಯುತ್ತಿವೆ. ಚಿಂಚೋಳಿ ನೆರೆಯ ಬೀದರ್‌ನಿಂದ 60 ಕಿ.ಮೀ, ಕಲಬುರ್ಗಿಯಿಂದ 85 ಕಿ.ಮೀ, ತೆಲಂಗಾಣದ ಜಹೀರಾಬಾದ್‌ನಿಂದ 35 ಕಿ.ಮೀ, ತಾಂಡೂರಿನಿಂದ 30 ಕಿ.ಮೀ ಅಂತರದಲ್ಲಿದೆ. ಗಿರಿ ಕಂದರಗಳು ಮತ್ತು ಕಾನನನಿಂದ ಬೆರಗು ಹುಟ್ಟಿಸುವ ಅರೆಮಲೆನಾಡು ಪರಿಸರ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಯಾತ್ರಾಸ್ಥಳವಾಗಿದೆ.

ಬಿಸಿಲು ನಾಡಿನ ಹಸಿರು ಸೊಬಗಿನಲ್ಲಿ ತಂಪನೆಯ ತಾಣಗಳು ಪ್ರಕೃತಿ ಸೊಬಗಿನಿಂದ ಕಂಗೊಳಿಸುತ್ತಿವೆ. ಆದರೆ, ಇಲ್ಲಿ ಮೂಲ ಸೌಕರ್ಯದ ಕೊರತೆಗಳು ಪ್ರವಾಸಿಗರನ್ನು ಕಾಡಲಿವೆ. ವನ್ಯಜೀವಿ ಧಾಮ ಒಂದಿಷ್ಟು ಪರಿಸರ ಪ್ರವಾಸೋದ್ಯಮ ಉತ್ತೇಜಿಸಲು ಮುಂದಾಗಿದ್ದು ಹೊರತುಪಡಿಸಿದರೆ ಪ್ರವಾಸೋದ್ಯಮ ಇಲಾಖೆ ಈ ಕಡೆ ತನ್ನ ಕೃಪಾದೃಷ್ಟಿ ಬೀರಬೇಕಿದೆ.

ದೂರದ ಕಲಬುರ್ಗಿಯ ಜನರು ವಾರಾಂತ್ಯ ಕಳೆಯಲು ಇದು ಅತ್ಯಂತ ಪ್ರಶಸ್ತ ತಾಣ. ಪರಿಸರ ಮಡಿಲಲ್ಲಿ ‘ವೀಕ್‌ ಎಂಡ್‌ ವಿತ್‌ ನೇಚರ್‌’ ಕಾರ್ಯಕ್ರಮ ರೂಪಿಸಿ, ವಾರಕೊಮ್ಮೆ ಪ್ರವಾಸಿ ಸಾರಿಗೆ ವ್ಯವಸ್ಥೆ ಮಾಡಿದರೆ ಇಲ್ಲಿನ ತಾಣಗಳಿಂದ ಆದಾಯ ಪಡೆಯಬಹುದಾಗಿದೆ.

ಚಿಂಚೋಳಿ ಬುಗ್ಗೆ: ಚಿಂಚೋಳಿಯ ಪಂಚಲಿಂಗೇಶ್ವರ ಪಾಪನಾಶ ಬುಗ್ಗೆ ಪ್ರೇಕ್ಷಣೀಯ ತಾಣವಾಗಿ ಅಭಿವೃದ್ಧಿಗೆ ಸೂಕ್ತವಾಗಿದೆ.

ಬುಗ್ಗೆಯಲ್ಲಿ ಎರಡು ತೊಟ್ಟಿಗಳಿದ್ದು, ಒಂದು ತೊಟ್ಟಿಯಲ್ಲಿ ನಂದಿ ಮೂರ್ತಿ, ಅದರ ಎದುರುಗಡೆ ಐದು ಶಿವಲಿಂಗಗಳನ್ನು ಸ್ಥಾಪಿಸಲಾಗಿದೆ. ಒಂದೊಂದು ಮಟ್ಟದಲ್ಲಿ ಒಂದೊಂದು ಲಿಂಗ ಸ್ಥಾಪಿಸಿರುವುದು ಇದರ ವಿಶೇಷ. ಇನ್ನೊಂದು ತೊಟ್ಟಿ ಬತ್ತಿದ ನಿದರ್ಶನವಿಲ್ಲ.ಇದನ್ನು ತಾಣವಾಗಿ ಅಭಿವೃದ್ಧಿಪಡಿಸಲು ಉತ್ತಮ ಅವಕಾಶಗಳಿವೆ. ಹಾರಕೂಡ ಚನ್ನಬಸವ ಶಿವಯೋಗಿಗಳ ಮಠ, ಬಡಿ ದರ್ಗಾ ಹಾಗೂ ಮಹಾಂತೇಶ್ವರ ಮಠ ಪಟ್ಟಣದ ತ್ರಿನೇತ್ರದಂತಿವೆ.

ಚಂದ್ರಂಪಳ್ಳಿ ಜಲಾಶಯ: ಅಂತರರಾಜ್ಯ ಖ್ಯಾತಿಯ ಪ್ರವಾಸಿ ತಾಣವಾಗಿದೆ. ಹೈಕ ಭಾಗದ ಜತೆಗೆ ನೆರೆಯ ತೆಲಂಗಾಣದ ಪ್ರವಾಸಿಗರ ಸಂಖ್ಯೆ ಇಲ್ಲಿ ಅಧಿಕವಾಗಿದೆ. ದಶಕದ ಹಿಂದೆ ಇಲ್ಲಿ ದೋಣಿ ಸಂಚಾರ ವ್ಯವಸ್ಥೆ ಇತ್ತು. ವನ್ಯಜೀವಿ ಧಾಮದ ಅಧಿಕಾರಿಗಳು ಇಲ್ಲಿ ನಿಸರ್ಗಧಾಮ ಸ್ಥಾಪಿಸಿ ಪೈನ್‌ಉಡ್‌ನಿಂದ ಎರಡು ಕಟ್ಟಿಗೆ ಮನೆ ನಿರ್ಮಿಸಿದ್ದಾರೆ. ಇವುಗಳ ಸಂಖ್ಯೆ ಹೆಚ್ಚಿಸುವುದರ ಜತೆಗೆ, ಡಾರ್ಮೆಂಟ್ರಿ ಬೇಕಿದೆ. ಇಲ್ಲಿ ಜಂಗಲ್‌ ಲಾಡ್ಜ್‌ ಸ್ಥಾಪನೆಗೆ ಒತ್ತಾಯವಿದೆ.

ಹೊಸಪೇಟೆಯ ವೈಕುಂಠ ಅತಿಥಿಗೃಹದ ಮಾದರಿಯಲ್ಲಿ ರೈತ ಭವನಕ್ಕೆ ಈಚೆಗೆ ಅದಕ್ಕೆ ಕಾಯಕಲ್ಪ ನೀಡಲಾಗಿದೆ. ಆದರೆ, ಇದು ಬಳಕೆಯಾಗುತ್ತಿಲ್ಲ. ಇಲ್ಲಿನ ಹಿತಕಾರಿಯಾದ ಅಲಹಾಬಾದ್‌ ಸಫೇದ್‌ ತಳಿಯ ಸೀಬೆಹಣ್ಣುಗಳಿಂದಲೂ ಇದು ಖ್ಯಾತಿ ಪಡೆದಿದೆ. ಹಣ್ಣು ಸೇವಿಸಿ ಬಾಯಿ ಚಪ್ಪರಿಸಲು ಈಗ ಸುಗ್ಗಿಕಾಲ.

ಮಾಣಿಕಪುರ ಜಲಪಾತ: ಜನವಸತಿ ರಹಿತ ಮಾಣಿಕಪುರ ಗ್ರಾಮದ ಎದುರು ರಾಚೇನಹಳ್ಳಿ ನಾಲಾದಲ್ಲಿ ಮಾಣಿಕಪುರ ಜಲಪಾತ ನೋಡಲು ಅತ್ಯಂತ ಸುಂದರವಾಗಿದೆ.

ಗೊಟ್ಟಂಗೊಟ್ಟ: ಪ್ರಾಗೈಹಾಸಿಕ ಕಾಲದ ಕುರುಹು ಹೊಂದಿರುವ ಕರ್ಕನಳ್ಳಿ ಬಕ್ಕಪ್ರಭುಗಳು ತಪೋಭೂಮಿ ಗೊಟ್ಟಂಗೊಟ್ಟ ನೈಸರ್ಗಿಕ ತಾಣವಾಗಿದೆ. ಅಮೃತಗುಂಡ, ಚಂದ್ರಂಪಳ್ಳಿ ಜಲಾಶಯದ ಹಿನ್ನೀರಿಗೆ ಹೊಂದಿಕೊಂಡಿರುವ ಇದು ಸಮುದ್ರಮಟ್ಟದಿಂದ ಸುಮಾರು 600 ಮೀಟರ್‌ ಎತ್ತರದಲ್ಲಿದೆ.

ವನ್ಯಜೀವಿ ಧಾಮದ ಅರಣ್ಯಾಧಿಕಾರಿಗಳು ಇಲ್ಲಿ ದೈವಿವನ ಅಭಿವೃದ್ಧಿಪಡಿಸಿದ್ದು ಹೈ–ಕ ಭಾಗದ ಏಕೈಕ ಯಶಸ್ವಿ ಧಾರ್ಮಿಕ ಉದ್ಯಾನ ನಿರ್ಮಾಣವಾಗಿದೆ. ವೀಕ್ಷಣಾ ಗೋಪುರ ಆಕರ್ಷಕವಾಗಿದ್ದು, ಸೂರ್ಯಾಸ್ತ ನೋಡಲು ಅತ್ಯಂತ ಉಪಯುಕ್ತವಾಗಿದೆ.

ನವಿಲುಗುಡ್ಡ: ಶಾದಿಪುರ ಚಕ್ಕಲಿಂಗದಳ್ಳಿ ಮಧ್ಯೆ ವನ್ಯಜೀವಿ ಧಾಮದಲ್ಲಿ ಬರುವ ನವಿಲು ಗುಡ್ಡ ಪರಿಸರ ಪ್ರಿಯರ ಮೆಚ್ಚಿನ ತಾಣವಾಗಿದೆ. ಇಲ್ಲಿ ಈಗ ವೀಕ್ಷಣಾ ಗೋಪುರ ನಿರ್ಮಾಣವಾಗಿದ್ದು 8ರಿಂದ 20 ಕಿ.ಮೀ ದೂರದವರೆಗೆ ಸುತ್ತಲಿನ ಪರಿಸರ ವೀಕ್ಷಿಸಬಹುದಾಗಿದೆ.

ಭೋಗಲಿಂಗೇಶ್ವರ ಬೆಟ್ಟ: ಭೋಗ ಲಿಂಗೇಶ್ವರ ದೇವಾಲಯದಿಂದ ಪ್ರಸಿದ್ಧಿ ಪಡೆದ ಈ ತಾಣ ಭೋಗಲಿಂಗದಳ್ಳಿಯಿಂದ ಸುಮಾರು 4 ಕಿ.ಮೀ ಅಂತರದಲ್ಲಿದೆ. ಕುಂಚಾವರಂ ಕಾಡಿನಲ್ಲಿರುವ ಈ ತಾಣಕ್ಕೆ ಭೇಟಿ ನೀಡಿದರೆ ಚಾರಣ ಸುಖ ದೊರೆಯಲಿದೆ.

ಹಾಳು ಹಂಪಿ ನೆನಪಿಸುವ ಮಿರಿಯಾಣ: ರಾಷ್ಟ್ರಕೂಟರು ಹಾಕೂ ಚಾಲುಕ್ಯರ ಕಾಲದ ಸ್ಮಾರಕಗಳ ಊರಾಗಿರುವ ಮಿರಿಯಾಣ ಗತವೈಭವದ ಶೈವ ಹಾಗೂ ಜೈನಧರ್ಮ ಕೇಂದ್ರ. ಇಲ್ಲಿ ಐದು ಹನುಮಾನ ಮಂದಿರಗಳಿವೆ. ನಾಗದೇವತೆಗಳ ಶಿಲ್ಪಗಳಿವೆ. ಶಾಸನಗಳಿವೆ. ಪಾಪನಾಶ ಮಂದಿರ, ಈಶ್ವರ ದೇವಾಲಯ, ದ್ವಿಬಾಹು ಗಣಪ, ಮೂರು ದೇವರ ಗುಡಿ. ದೇವಾಲಯಗಳ ಸಂಕಿರಣ ಹಾಳು ಹಂಪಿಯಂತೆ ಪಾಳು ಬಿದ್ದಿವೆ.

ಪಾಪನಾಶ ಮಂದಿರ ಜೀರ್ಣೋದ್ಧಾರ ಗೊಳಿಸಿ ಭಕ್ತರು ಚೆನ್ನಾಗಿ ಕಾಪಾಡಿಕೊಂಡಿದ್ದಾರೆ. ಜೈನ ಬಸದಿಯಲ್ಲಿ ಪದ್ಮಾಸೀನವಾಗಿರುವ 24ನೇ ತೀರ್ಥಂಕರ ಮಹಾವೀರನ ಮೂರ್ತಿ ನಯನ ಮನೋಹರವಾಗಿದೆ. ಎತ್ತರದ ಗದ್ದುಗೆ ಮೇಲೆ ಪೀಠಾಸೀನ ಮಹಾವೀರನ ಮೂರ್ತಿಯ ಸುತ್ತಲೂ ಕೆತ್ತಿದ ಪ್ರಭಾವಳಿಯಲ್ಲಿ 23 ಮಂದಿ ತೀರ್ಥಂಕರು ಏಕಶಿಲೆಯಲ್ಲಿ ಕಂಗೊಳಿಸುತ್ತಿದ್ದಾರೆ.

ದೇವಾಲಯಗಳ ಊರು ಗಡಿಕೇಶ್ವಾರ: ದೇವಾಲಯಗಳ ಊರು ಎಂದೇ ಕರೆಯಲ್ಪಡುವ ಗಡಿಕೇಶ್ವಾರ್‌ ಗ್ರಾಮ ಮೂರು ರೀತಿಯಿಂದ ಪ್ರಸಿದ್ಧಿ ಪಡೆದಿದೆ. ಹೊಳಿ ಹುಣ್ಣಿಮೆಯಲ್ಲಿ ಬಣ್ಣದ ಎರಚಾಟ ಇಲ್ಲದೇ ನಡೆಯುವುದು. ಗ್ರಾಮದಲ್ಲಿ ಕೇಶವ ನಾರಾಯಣ, ಮಲ್ಲಿಕಾರ್ಜುನ, ಕರಿ ದೇವರ ಗುಡಿ, ಶಿವಲಿಂಗ ದೇವಾಲಯ ಮತ್ತು ಜೈನ ಬಸದಿ ಸೇರಿದಂತೆ 8 ದೇವಾಲಯಗಳು ಕಾಣ ಸಿಗುತ್ತದೆ. ಈ ಪುರಾತನ ಸ್ಮಾರಕಗಳು ಅವಸಾನ ಹೊಂದಿದ್ದು ಜೀರ್ಣಾವಸ್ಥೆಗೆ ತಲುಪಿವೆ. ಕುರುಬರ ಕುರಿ ಉಣ್ಣೆಯ ಕಂಬಳಿಗೆ ಈ ಗ್ರಾಮ ಖ್ಯಾತಿ ಪಡೆದಿದೆ. ಈಗಲೂ ಮಗ್ಗಗಳಿವೆ. ಇದೊಂದು ಶೈವ ಹಾಗೂ ಜೈನ ಧರ್ಮಕೇಂದ್ರವಾಗಿತ್ತು ಎಂಬು ದನ್ನು ಸ್ಮಾರಕಗಳಿಂದ ತಿಳಿಯಬಹುದಾಗಿದೆ.

ಪಗಡೆ ಬಜಾರ್‌ ಖ್ಯಾತಿಯ ಸುಲೇಪೇಟ: ಬೌದ್ಧ ಹಾಗೂ ಶೈವಧರ್ಮ ಕೇಂದ್ರ ವಾಗಿದ್ದ ಸುಲೇಪೇಟದಲ್ಲಿ ಪಗಡೆ ಬಜಾರ್‌ನಿಂದ ಪ್ರಸಿದ್ಧವಾಗಿದ್ದು, ಈಗಲೂ ಪಗಡೆಯಾಟ ಜೀವಂತವಿದೆ. ವೀರಭದ್ರೇಶ್ವರ ದೇವಾಲಯ ಅದರ ಬಳಿಯಲ್ಲಿ ಪಾಳುಬಿದ್ದ ಸ್ಮಾರಕದಲ್ಲಿ ಬುದ್ಧನ ಮೂರ್ತಿ ಜತೆಗೆ ಚಾಲುಕ್ಯರ ಕಾಲದ ಸ್ಮಾರಕಗಳು ಕಾಣಸಿಗುತ್ತವೆ.

ಕೊರವಂಜೇಶ್ವರಿ ದೇವಿ ಬಾವಿ: ಕೊಡ ಗಳು ತೇಲುವ ಮೂಲಕ ಪವಾಡಗಳನ್ನು ಮೆರೆಯುವ ಬಾವಿ ತಾಲ್ಲೂಕಿನ ಕೊರವಿಯ ಕೊರವಂಜೇಶ್ವರಿ ದೇವಿ ಬಾವಿ. ಶತಮಾನಗಳಿಂದಲೂ ಈ ಬಾವಿಯ ಮಹಿಮೆ ಅಪಾರ. ಐದು ದಿನ ನಡೆಯುವ ಜಾತ್ರೆ ತಾಲ್ಲೂಕಿನ ವಿಶೇಷತೆಗಳಲ್ಲೊಂದಾಗಿದೆ.

ನಾಗರಾಳ ಜಲಾಶಯ: ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ್‌ ಜಲಾಶಯ ತಾಲ್ಲೂಕಿನ ಬೃಹತ್‌ ಜಲಾಶಯ. ಸುಮಾರು 8 ಕಿ.ಮೀ ಉದ್ದ ಹೊಂದಿರುವ ಜಲಾಶಯದ ಗೇಟು ಎತ್ತಿ ನೀರು ನದಿಗೆ ಬಿಟ್ಟರೆ ಅದನ್ನು ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ. ಒಂದು ಕಿ.ಮೀ ಉದ್ದದ ಬಂಡ್‌ ಹೊಂದಿದೆ. ಗೇಟುಗಳಿಂದ ಅರ್ಧ ಕಿ.ಮೀ ಮುಂದೆ ಸಾಗಿದರೆ, ಜಲಪಾತದಂತೆ ಹರಿದು ಪುಟಾಣಿಗಳನ್ನು ಆಕರ್ಷಿಸುತ್ತದೆ. ದೊಡ್ಡವರು ದೊಡ್ಡ ಜಲಪಾತ ನೋಡಿದರೆ ಪುಟಾಣಿಗಳು ಸರಳವಾಗಿ ನೋಡಬಹುದಾದ ಜಲಪಾತ ಇಲ್ಲಿದೆ.

ನೆಲಗಂಗಿ ಜಲಧಾರೆ: ಹೆಸರೇ ಹೇಳುವಂತೆ ಚಿಮ್ಮನಚೋಡ್‌ ಬಳಿಯ ನೆಲಗಂಗಿ ತಾಂಡಾದ ಜೀವನಾಡಿ ನೆಲಗಂಗಿ. ನೆಲದಿಂದ ನೀರು ಹರಿದು ಬರುವುದರಿಂದ ಈ ಹೆಸರು ಬಂದಿದೆ. ಇಲ್ಲಿ ಮಳೆಗಾಲದಲ್ಲಿ ಸುಮಾರು 20 ಅಡ ಎತ್ತರದಿಂದ ನೀರು ಬೀಳುವುದು ರಮಣೀಯವಾಗಿದೆ. ತಾಲ್ಲೂಕಿನ ಪ್ರವಾಸಿ ತಾಣಗಳು ಸಂಪೂರ್ಣವಾಗಿ ನಿರ್ಲಕ್ಷಕ್ಕೆ ಗುರಿಯಾಗಿದ್ದು, ಸೌಜನ್ಯಕ್ಕಾಗಿ ನಾಮ ಫಲಕಗಳನ್ನು ಹಾಕುವ ಕೆಲಸವನ್ನು ಸಂಬಂಧಪಟ್ಟವರು ಮಾಡಿಲ್ಲ.

ಎತ್ತಿಪೋತೆ ಜಲಪಾತ

ತಾಲ್ಲೂಕಿನ ಮತ್ತೊಂದು ಪ್ರಸಿದ್ಧ ಪ್ರೇಕ್ಷಣೀಯ ತಾಣ ಎತ್ತಿಪೋತೆ ಜಲಪಾತ. ಇಲ್ಲಿ ಎರಡು ಸ್ಥಳಗಳಲ್ಲಿ ನೀರು ಎತ್ತರದಿಂದ ಧುಮ್ಮಿಕ್ಕಿ ಹರಿಯುತ್ತದೆ. ಆದರೆ, ಪ್ರವಾಸಿಗರಿಗೆ ಯಾವುದೇ ಸೌಲಭ್ಯಗಳಿಲ್ಲ. ವರ್ಷದಲ್ಲಿ 6 ತಿಂಗಳು ಮೈದುಂಬಿ ಹರಿಯುವ ಜಲಧಾರೆ ಮೈನವಿರೇಳಿಸುತ್ತದೆ.

ಇಲ್ಲಿಂದ ಧರ್ಮಾಸಾಗರ ಮಾರ್ಗವಾಗಿ ಶೇರಿಭಿಕನಳ್ಳಿ ತಲುಪಿ ಅಲ್ಲಿಂದ ದಕ್ಷಿಣ ದಿಕ್ಕಿಗೆ ಒಂದು ಕಿ.ಮೀ ಸಾಗಿದರೆ ಲಾಲ್‌ ತಾಲಾಬ್‌ ಕೆರೆ ಕಾಣಿಸುತ್ತದೆ. ಸುತ್ತಲೂ ಹಚ್ಚಹಸಿರ ರಾಶಿಯ ಮಧ್ಯದಲ್ಲಿ ಕೆಂಪು ನೀರು ಅತ್ಯಾಕರ್ಷಕವಾಗಿದೆ. ಸುತ್ತಲಿನ ಕೆಂಪು ಮಣ್ಣಿನಿಂದ ಹರಿದು ಬಂದು ನೀರು ಕೆಂಪು ಬಣ್ಣದೊಂದಿಗೆ ಬೆರೆತು ಗೋಚರಿಸುವುದರಿಂದ ಲಾಲ್‌ ತಾಲಾಬ್‌ ಎಂದು ಕರೆಯಲಾಗುತ್ತಿದೆ.

ಪೂರ್ವಕ್ಕೆ 800 ಮೀಟರ್‌ ಕ್ರಮಿಸಿದರೆ ‘ಹಾಥಿ ಪಗಡಿ’ ಕಾಣಿಸುತ್ತದೆ. ಮಹಾದ್ವಾರದ ಗೋಡೆ ಬಾಗಿಲು ಸುತ್ತಲೂ ಮೂರು ಮೀಟರ್‌ ಆಳ ಹಾಗೂ ಅಷ್ಟೇ ಅಗಲದ (ಕಂದಕ)ಖೆಡ್ಡಾ ಅಗೆದು ಅದರೊಳಗೆ ಪ್ರವೇಶಕ್ಕೆ ಮೂರು ಪ್ರತ್ಯೇಕ ಕಡೆಗಳಲ್ಲಿ ಮೆಟ್ಟಿಲುಗಳ ನಿರ್ಮಿಸಲಾಗಿದೆ. ಇದೊಂದು ಆನೆ ಪಳಗಿಸುವ ಶಾಲೆಯಾಗಿತ್ತು ಎಂಬ ಮಾತಿದೆ.

* * 

ಚಿಂಚೋಳಿ ತಾಲ್ಲೂಕು ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಉಪಯುಕ್ತವಾಗಿದ್ದು, ಇಲ್ಲಿನ ಅರಣ್ಯದ ಸೆರಗಿನಲ್ಲಿ ಜಂಗಲ್‌ ಲಾಡ್ಜ್‌ ಮಂಜೂರು ಮಾಡಬೇಕು.

ಅಜೀತ ಪಾಟೀಲ, ಸ್ಥಳೀಯ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry