ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವು ಮೂಡಿಸಿದ ‘ಸೌರಶಕ್ತಿ’ ಕಾರ್ಯಾಗಾರ

Last Updated 20 ಜನವರಿ 2018, 10:12 IST
ಅಕ್ಷರ ಗಾತ್ರ

ಕುಶಾಲನಗರ: ನವೀಕರಿಸಬಹುದಾದ ಇಂಧನ ಮೂಲ, ಇಂಧನ ಉಳಿತಾಯ ಹಾಗೂ ಇಂಧನ ದಕ್ಷತೆ ಬಗ್ಗೆ ಶಾಲಾ– ಕಾಲೇಜುಗಳಲ್ಲಿ ಪ್ರಾತ್ಯಕ್ಷಿಕೆ, ಜಾಗೃತಿ ಆಂದೋಲನದ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಆಂದೋಲನವೊಂದು ಸದ್ದಿಲ್ಲದೇ ನಡೆಯುತ್ತಿದೆ.

ಸಂಚಾರಿ ವಾಹನದಲ್ಲಿ ಸೋಲಾರ್, ಸೌರಶಕ್ತಿ ಪೆಟ್ಟಿಗೆ, ಗಾಳಿಯಂತ್ರ, ಸೌರಶಕ್ತಿ ಟಿ.ವಿ, ಡಿ.ವಿ.ಡಿ, ಬೀದಿದೀಪ ಸೇರಿದಂತೆ ಸೌರಶಕ್ತಿ ಮಾದರಿಗಳನ್ನು ಸಿದ್ಧಪಡಿಸಿ ಪ್ರಚಾರ ಮಾಡುತ್ತ ಸೌರಶಕ್ತಿ ಬಳಸಿ ಮುಗಿದು ಹೋಗುವ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡಿ ಎಂದು ಜನ ಜಾಗೃತಿ ಮೂಡಿಸಲಾಗುತ್ತಿದೆ.

ಕರ್ನಾಟಕ ಸರ್ಕಾರ, ಶಕ್ತಿ ಪುನರ್ ಬಳಕೆ ಕೇಂದ್ರ, ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಪ್ರಯೋಜಕತ್ವದಲ್ಲಿ ಬೆಂಗಳೂರು ಪ್ರೋ ಅರ್ಥ್ ಫೌಂಡೇಷನ್ ಸಂಸ್ಥೆಯು ವಿವಿಧ ಶಾಲೆಗಳಲ್ಲಿ ಸೌರಶಕ್ತಿ ಮತ್ತು ಉಪಯೋಗಗಳ ಕುರಿತು ಮಾಹಿತಿ ಕಾರ್ಯಾಗಾರ ಹಮ್ಮಿಕೊಂಡಿತ್ತು.

ಜಾಗತಿಕ ಹವಾಮಾನ ಬದಲಾವಣೆ, ಜಾಗತಿಕ ತಾಪಮಾನಕ್ಕೆ ಕಾರಣ, ತಾಪಮಾನದಿಂದ ಉಂಟಾಗುವ ಪರಿಣಾಮ, ಹವಾಮಾನ ಬದಲಾವಣೆ ನಿಯಂತ್ರಿಸುವ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗಿದೆ.

ಇಂತಹ ಕಾರ್ಯಾಗಾರವು ಕೊಡಗು ಜಿಲ್ಲೆಯ ಕೂಡಿಗೆ ಸೈನಿಕ ಶಾಲೆಯಲ್ಲೂ ಈಚೆಗೆ ನಡೆಯಿತು. ಸೌರ ಶಕ್ತಿಯನ್ನು ವಿದ್ಯುತ್‌ ಉತ್ಪಾದನೆ, ನೀರು ಬಿಸಿ ಮಾಡುವಿಕೆ, ಮನೆ ದೀಪ, ಬೀದಿ ದೀಪ, ಅಡುಗೆ ತಯಾರಿಸಲು, ನೀರೆತ್ತುವ ಪಂಪ್, ರೈಲ್ವೆ, ರಸ್ತೆ ಸಿಗ್ನಲ್ ದೀಪಗಳಲ್ಲೂ ಸಹ ಬಳಸಬಹುದು ಎಂದು ಫೌಂಡೇಷನ್ ಸಂಸ್ಥೆ ಸಂಸ್ಥಾಪಕ ನವೀನ್ ಶಂಕರಪ್ಪ ಕೂಡಿಗೆ ಸೈನಿಕ ಶಾಲೆಯಲ್ಲಿ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.

ಪ್ರಾತ್ಯಕ್ಷಿಕೆಯಲ್ಲಿ ಸೌರಶಕ್ತಿಯ ಉಪಕರಣಗಳ ಬಿಡಿ ಭಾಗಗಳ ಪರಿಚಯ, ಅವುಗಳ ತಯಾರಿಕೆ, ಅಳವಡಿಕೆ, ಕಾರ್ಯಕ್ಷಮತೆ ಮತ್ತು ಅವುಗಳ ಅನ್ವಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟಿದ್ದಾರೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬದುಕಿನಲ್ಲಿ ಸೌರಶಕ್ತಿಯ ಯೋಜಿತ ಬಳಕೆ, ಮಾದರಿಗಳ ತಯಾರಿಕೆ ಮತ್ತು ಉನ್ನತ ವ್ಯಾಸಂಗದಲ್ಲಿ ಸೌರಶಕ್ತಿಯ ಕುರಿತು ಆಳವಾದ ಜ್ಞಾನವನ್ನು ಪಡೆಯಲು ಈ ಕಾರ್ಯಾಗಾರ ಸಹಕಾರಿಯಾಗಿದೆ ಎನ್ನತ್ತಾರೆ ವಿಜ್ಞಾನ ಶಿಕ್ಷಕ ಪ್ರಸಾದ್ ರಾಜು.

ಸೋಲಾರ್ ಫೋಟೋ ವೋಲ್ಟಾಯಿಕ್ ಕೋಶಗಳು ಸೂರ್ಯನ ಕಿರಣಗಳನ್ನು ಹೀರಿಕೊಂಡು ವಿದ್ಯುತ್ ಉತ್ಪಾದಿಸುತ್ತವೆ. ಸೌರ ಉಷ್ಣ ಫಲಕಗಳು ಅಥವಾ ಸಂಗ್ರಾಹಕಗಳು ಸೂರ್ಯನ ಶಾಖವನ್ನು ಉಷ್ಣವನ್ನಾಗಿ ಪರಿವರ್ತಿಸಿ ನೀರನ್ನು ಬಿಸಿಯಾಗುವಂತೆ ಮಾಡುತ್ತವೆ. ಇಂಧನ ಉಪಯೋಗಿಸದೆ ಸೌರ ಕುಕ್ಕರ್ ಬಳಸಿ ಆಹಾರ ತಯಾರಿಸಬಹುದು. ರೈತರು ಸೌರ ಪಂಪುಗಳನ್ನು ಬಳಸಿ ಕೊಳವೆ ಬಾವಿ, ತೆರೆದ ಬಾವಿಗಳಿಂದ ನೀರನ್ನು ಮೇಲೆತ್ತಬಹುದಾಗಿರುವುದರಿಂದ ವಿದ್ಯುತ್ ಉಳಿತಾಯ ಸಾಧ್ಯ. ಗದ್ದೆಗಳಲ್ಲಿಯೇ ಸೋಲಾರ್ ಪ್ಯಾನಲ್ ಅಳವಡಿಸಿ ವಿದ್ಯುತನ್ನು ಪಡೆಯಬಹುದು ಎಂದು ಫೌಂಡೇಷನ್ ಸಂಸ್ಥೆಯ ಮುಫಾಸಿರಿನ್ ಅಹಮದ್‌ ಮಾಹಿತಿ ನೀಡಿದ್ದಾರೆ.

ಪ್ರತಿ ಲೀಟರ್ ಪೆಟ್ರೋಲ್ ಉರಿದಾಗ ಎರಡೂವರೆ ಪಟ್ಟಿನಷ್ಟು ತೂಕದ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಗೊಂಡು ವಾಯುಮಾಲಿನ್ಯ ಉಂಟಾಗುತ್ತದೆ. ದಿನನಿತ್ಯ ಲಕ್ಷಾಂತರ ವಾಹನಗಳಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪಾರಿಣಾಮದ ಬಗ್ಗೆ ಬೆಳಕು ಚೆಲ್ಲಿ, ಎಲ್ಲರೂ ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಳ್ಳುವ ಮೂಲಕ ಭೂಮಂಡಲದ ಸಂರಕ್ಷಣೆಗೆ ಒತ್ತು ನೀಡಿದರೆ ಮುಂದಿನ ಪೀಳಿಗೆಯ ಸಂರಕ್ಷಣೆ ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನುತ್ತಾರೆ ವಿದ್ಯಾರ್ಥಿಗಳು.

* * 

ಕೃಷಿಯೇತರ ಚಟುವಟಿಕೆಗಳಿಗೂ ಸೋಲಾರ್ ಪಂಪ್‌ ಅನ್ನು ಬಳಸಿ ವಿದ್ಯುತ್ ಸ್ವಾವಲಂಬಿಗಳಾಗಬಹುದು
ನವೀನ್ ಶಂಕರಪ್ಪ, ಸಂಸ್ಥಾಪಕ, ಪ್ರೋ ಅರ್ಥ್ ಫೌಂಡೇಷನ್ ಸಂಸ್ಥೆ, ಬೆಂಗಳೂರು

ರಘು ಹೆಬ್ಬಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT