ಆತ್ಮಹತ್ಯೆ ನಿರ್ಣಯ ಹಿಂಪಡೆದ ಪೌರನೌಕರರು

7

ಆತ್ಮಹತ್ಯೆ ನಿರ್ಣಯ ಹಿಂಪಡೆದ ಪೌರನೌಕರರು

Published:
Updated:

ಗಂಗಾವತಿ: ಇಲ್ಲಿನ ನಗರಸಭೆ ದಿನಗೂಲಿ ನೌಕರರಂತೆ ಕೆಲಸ ನಿರ್ವಹಿಸುತ್ತಿದ್ದ 162 ಜನ ಪೌರನೌಕರರನ್ನು ಕೆಲಸದಿಂದ ವಜಾಗೊಳಿಸಿದ ನಗರಸಭೆ ಕ್ರಮ ಖಂಡಿಸಿ ಪೌರನೌಕರರು ಕೈಗೊಂಡಿದ್ದ ಸಾಮೂಹಿಕ ಆತ್ಮಹತ್ಯೆ ನಿರ್ಣಯದಿಂದ ಹಿಂದಕ್ಕೆ ಸರಿದಿದ್ದಾರೆ.

ಡಿ.21ರಿಂದ ದಿನಗೂಲಿ ನೌಕರನ್ನು ಕೆಸಲದಿಂದ ವಜಾಗೊಳಿಸಿ ಇಲ್ಲಿನ ನಗರಸಭೆ ನಿರ್ಧಾರಿಸಿದ ಹಿನ್ನೆಲೆಯಲ್ಲಿ ಒಂದು ತಿಂಗಳಿಂದ ಪ್ರತಿಭಟನೆ ನಡೆಸಿದ್ದ ನೌಕರರಿಗೆ ಸರಿಯಾದ ಸ್ಪಂದನೆ ಲಭಿಸಿರಲಿಲ್ಲ. ಇದರಿಂದ ಜ.25ರ ಬಳಿಕ ನಗರಸಭೆಯ ಮುಂದೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಣಯವನ್ನು ನೌಕರರು ಕೈಗೊಂಡಿದ್ದರು.

ನಗರಠಾಣೆಯ ಪಿಐ ರಾಜಕುಮಾರ ವಾಜಂತ್ರಿ ನಗರಸಭೆ ಅಧಿಕಾರಿ ಹಾಗೂ ಕಾರ್ಮಿಕ ನಾಯಕರನ್ನು ಕರೆದು ಎರಡು ಸುತ್ತಿನ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿದ್ದರು.

ಗುರುವಾರ ಸಂಜೆ ನೌಕರರು ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಬಂದ ನಗರಸಭೆಯ ಪೌರಾಯುಕ್ತ ಖಾಜಾಮೋಹಿನುದ್ದೀನ್, ನೌಕರರು ಸಲ್ಲಿಸಿದ ಸೇವಾ ಅವಧಿ, ಬಾಕಿ ವೇತನ, ಸರ್ಕಾರದ ನಿರ್ದೇಶನ ಮೊದಲಾದ ಎಲ್ಲ ಅಂಶಗಳನ್ನು ಲಿಖಿತ ಪೂರ್ವವಾಗಿ ಜಿಲ್ಲಾಧಿಕಾರಿಗೆ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.

ಹಿರಿಯ ಕಾರ್ಮಿಕ ನಾಯಕ ಜೆ. ಭಾರದ್ವಾಜ್, ನಗರಸಭೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರನ್ನು ಕೆಲಸದಿಂದ ತೆಗೆಯದಂತೆ ಸರ್ಕಾರದ ನಿರ್ದೇಶನವಿದೆ. ಆದರೆ ಸ್ಥಳೀಯ ಆಡಳಿತ ಮಂಡಳಿ ರಾಜಕೀಯ ಪ್ರೇರಿತವಾಗಿ ವರ್ತಿಸಿ ನೌಕರರನ್ನು ಸೇವೆಯಿಂದ ವಜಾ ಮಾಡಿತ್ತು ಎಂದು ಆರೋಪಿಸಿದರು.

ಬಳಿಕ ಕಾರ್ಮಿಕ ನಾಯಕರೊಂದಿಗೆ ಮಾತನಾಡಿದ ಧರಣಿ ನಿರತ ಕಾರ್ಮಿಕರು, ಸಾಮೂಹಿಕ ಆತ್ಮಹತ್ಯೆಯಿಂದ ಹಿಂದಕ್ಕೆ ಸರಿದಿದ್ದು, ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಮೊಟಕುಗೊಳಿಸುತ್ತಿದ್ದೇವೆ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟ ಮಾಡಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry