ಹನುಮನಹಳ್ಳಿಯಲ್ಲಿ ಕುಡುಕರಿಗೆ ದೊಣ್ಣೆಯೇಟು ಖಾತ್ರಿ

7

ಹನುಮನಹಳ್ಳಿಯಲ್ಲಿ ಕುಡುಕರಿಗೆ ದೊಣ್ಣೆಯೇಟು ಖಾತ್ರಿ

Published:
Updated:
ಹನುಮನಹಳ್ಳಿಯಲ್ಲಿ ಕುಡುಕರಿಗೆ ದೊಣ್ಣೆಯೇಟು ಖಾತ್ರಿ

ಕೊಪ್ಪಳ: ಕುಡಿದು ಬಂದರೆ ಈ ಊರಿನಲ್ಲಿ ದೊಣ್ಣೆಯೇಟು ಖಾತ್ರಿ. ತಂಬಾಕು, ಗುಟ್ಕಾ ಚಟ ಹೊಂದಿದವರಿಗೂ ಇದೇ ಶಿಕ್ಷೆ. ಅಂಥ ವಸ್ತುಗಳ ಮಾರಾಟಕ್ಕೂ ಇಲ್ಲಿ ಅವಕಾಶ ಇಲ್ಲ. ಜಾತಿ, ಧರ್ಮ ಅವರವರ ಮನೆಯ ಹೊಸ್ತಿಲು ದಾಟಿ ಹೊರಬರುವುದಿಲ್ಲ. ಜಗಳ ಪೊಲೀಸ್‌ ಠಾಣೆಯ ಮೆಟ್ಟಿಲು ಏರುವುದಿಲ್ಲ. ಪೊಲೀಸರಿಗೂ ಈ ಗ್ರಾಮದವರ ತಲೆನೋವು ಇಲ್ಲ. ಹಾಗಾಗಿಯೇ ಇದು ಪೊಲೀಸ್‌ ಇಲಾಖೆಯ ದತ್ತು ಗ್ರಾಮ.

ಇದು ಕೊಪ್ಪಳ ತಾಲ್ಲೂಕು ಹನುಮನಹಳ್ಳಿ ಗ್ರಾಮದ ಕಥೆ. ಹಲವು ತಲೆಮಾರುಗಳಿಂದಲೂ ಇಲ್ಲಿ ದುಶ್ಚಟಕ್ಕೆ ಆಸ್ಪದ ಇಲ್ಲ. ಅಗ್ಗದ ಸಾರಾಯಿ ಕಾಲದಿಂದ ಇಂದಿನವರೆಗೂ ಇಲ್ಲಿ ಮದ್ಯದ ಅಂಗಡಿಗಳು ಪ್ರವೇಶಿಸಿಲ್ಲ. ಪ್ರವೇಶಿಸಿದರೂ ಗ್ರಾಮದಲ್ಲಿ ಅದಕ್ಕೆ ಬೇಡಿಕೆ ಇಲ್ಲ. ಹೀಗಾಗಿ ಗ್ರಾಮದಲ್ಲಿ ಶಾಂತಿ ಆವರಿಸಿದೆ ಎನ್ನುತ್ತಾರೆ ಗ್ರಾಮದ ಹಿರಿಯ ಮುಖಂಡ, ಗ್ರಾಮ ಪಂಚಾಯಿತಿ ಸದಸ್ಯ ಕುಬೇರಪ್ಪ ಬಡಿಗೇರ.

ಮದ್ಯದಂಗಡಿ ಬಿಡಿ, ಒಂದು ಚಹದಂಗಡಿಯೂ ಇಲ್ಲ. ಅದಕ್ಕೂ ಗ್ರಾಮಸ್ಥರು ಅವಕಾಶ ಕೊಟ್ಟಿಲ್ಲ. ಚಹದಂಗಡಿ ಕಟ್ಟೆಯ ಮೇಲೆ ಹಿರಿಯರ ಸಮಾನರಾಗಿ ಕುಳಿತುಕೊಳ್ಳುವ ಕಿರಿಯರು, ಹರಟೆ ತಾಣವಾಗುವ ಆ ಸ್ಥಳ, ಊರ ಹುಡುಗರು ಹಾಳಾಗಬಾರದು ಎಂಬ ಉದ್ದೇಶದಿಂದ ಇಲ್ಲಿ ಹೋಟೆಲ್‌ ತೆರೆಯಲು ಅವಕಾಶ ಕೊಟ್ಟಿಲ್ಲ ಎಂದರು ಅವರು. ಊರಿಗೆ ಯಾರಾದರೂ ಅತಿಥಿಗಳು ಬಂದರೆ ಯಾರದ್ದಾದರೂ ಮನೆಯಲ್ಲಿ ಚಹಾ ತಯಾರಿಸಿ ಕೊಡುತ್ತಾರೆ.

ಸುಮಾರು 1,500ರಷ್ಟು ಜನಸಂಖ್ಯೆ ಇರುವ ಈ ಗ್ರಾಮದಲ್ಲಿ 845 ಮತದಾರರು ಇದ್ದಾರೆ. ಶೇ 80ರಷ್ಟು ಸಾಕ್ಷರತೆ ಇದೆ. ಪ್ರತಿ ಬಾರಿ ಚುನಾವಣೆಗಳ ಸಂದರ್ಭ ಶೇ 99ರಷ್ಟು ಮತದಾನವಾದ ದಾಖಲೆಗಳಿವೆ. ಎಲ್ಲರಲ್ಲಿಯೂ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಜಾಗೃತಿ ಇದೆ. ಗ್ರಾಮಸ್ಥರ ಮೆಲುದನಿಯ ಮಾತು ಬಿಟ್ಟರೆ ಇನ್ನೊಂದು ಸದ್ದಿಗೆ ಅವಕಾಶವಿಲ್ಲ. ಆ ಮಾತೂ ಕಡಿಮೆ. ಏಕೆಂದರೆ ಇಲ್ಲಿನ ಜನ ಕಾಯಕ ಜೀವಿಗಳು. ಕಾಯಕದ ಕುತೂಹಲಕರ ಮುಖವನ್ನು ಕುಬೇರಪ್ಪ ಮತ್ತು ಶಿಕ್ಷಕ ಪ್ರಾಣೇಶ್‌ ಪೂಜಾರ್‌ ಈ ಮುಂದಿನಂತೆ ತೆರೆದಿಟ್ಟರು.

ಗುಳೇ ಹೋಗದ ಜನ: ಎಂಥ ಕೆಟ್ಟ ಬರಗಾಲ ಬಂದರೂ ಗ್ರಾಮದ ಜನರು ಕೆಲಸ ಹುಡುಕಿಕೊಂಡು ಗುಳೆ ಹೋಗಿಲ್ಲ. ಪುಟ್ಟ ಜಮೀನಿನಲ್ಲಿ ಕೃಷಿ ಹೊಂಡದಷ್ಟು ಪ್ರಮಾಣದ ನೀರಿದ್ದರೂ ಸಾಕು. ಸೊಪ್ಪು, ತರಕಾರಿ ಬೆಳೆದು ಜೀವನ ಸಾಗಿಸುತ್ತಾರೆ. ಕೆಲವು ಯುವಕರು ಆಸುಪಾಸಿನ ಕಾರ್ಖಾನೆಗಳಿಗೆ ಉದ್ಯೋಗಕ್ಕಾಗಿ ಹೋಗುತ್ತಾರೆ. ಒಟ್ಟಿನಲ್ಲಿ ಇಡೀ ಗ್ರಾಮ ಸ್ವಾಭಿಮಾನದ ಪ್ರತಿರೂಪದಂತೆ ಇದೆ ಎಂದು ಬಣ್ಣಿಸುತ್ತಾರೆ ಅವರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಸಿರು ಶಾಲೆಯಾಗಿ ಗುರುತಿಸಿಕೊಂಡಿದೆ. 171 ಮಕ್ಕಳು ಈ ಶಾಲೆಯಲ್ಲಿದ್ದಾರೆ. ಅರ್ಧದಲ್ಲಿ ಶಾಲೆಬಿಟ್ಟವರು ಇಲ್ಲ. ಮಕ್ಕಳನ್ನು 7ನೇ ತರಗತಿವರೆಗೆ ಓದಿಸಲೇಬೇಕು ಎಂಬುದು ಈ ಗ್ರಾಮದ ಹಿರಿಯರ ಫರ್ಮಾನು.

ಗ್ರಾಮದಲ್ಲಿ ಕುರುಬ ಮತ್ತು ನಾಯಕ ಸಮುದಾಯದ ಜನರು ಬಹುಪಾಲು ಇದ್ದಾರೆ. ಗ್ರಾಮದಲ್ಲಿ ಮುಸ್ಲಿಮರಿಲ್ಲ. ಆದರೆ ದರ್ಗಾ ಇದೆ. ಎಲ್ಲ ಮುಸ್ಲಿಂ ಹಬ್ಬಗಳನ್ನು ಹಿಂದೂ ಸಮಾಜದ ಮಂದಿಯೇ ಸೇರಿ ಆಚರಿಸುತ್ತಾರೆ. ಧರ್ಮಸಾಮರಸ್ಯವನ್ನು ಗ್ರಾಮ ಕಾಪಾಡಿಕೊಂಡು ಬಂದಿದೆ.

ನೊಣಗಳ ಹಾವಳಿ: ಪುಟ್ಟ ಗ್ರಾಮಗಳಲ್ಲಿ ಸಮಸ್ಯೆಗಳೇ ಇಲ್ಲವೆಂದಲ್ಲ. ಕೋಳಿ ಫಾರಂಗಳ ನೊಣಗಳ ಹಾವಳಿ ಇದೆ. ಮನೆಯೊಳಗೂ ನೊಣಗಳ ದಾಳಿ ಸಾಮಾನ್ಯ. ಕೆಲವರಿಗೆ ಅಪರೂಪವೆನಿಸುವ ಚರ್ಮರೋಗ ಇದೆ. ಮಳೆ ಕೈಕೊಟ್ಟರೆ ಕೆಲಕಾಲ ಅಸಹಾಯಕರಾಗುವ ಪರಿಸ್ಥಿತಿ ಇದೆ. ಸಾರಿಗೆ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಬೇಕು ಎಂಬ ಬೇಡಿಕೆಯೂ ಇದೆ.

ಊರಹಬ್ಬದ ವಿಶೇಷ: ಹನುಮಪ್ಪ, ತಾಯಮ್ಮದೇವಿ, ಬಸವೇಶ್ವರ, ದರ್ಗಾದಲ್ಲಿ ಇರುವ ಕಾಸಿಂ ಅಲಿ ಇವರೆಲ್ಲಾ ಊರು ಕಾಯುವ ದೇವರುಗಳು. ಈ ದೇವರುಗಳ ಹಬ್ಬದಲ್ಲಿ ಎಲ್ಲರೂ ಸಮಾನವಾದ ವಂತಿಗೆ ಕೊಡಬೇಕು. ಉಳ್ಳವನು ಹೆಚ್ಚು ಕೊಡುವುದು, ಬಡವ ಕಡಿಮೆ ಕೊಡುವುದು ಎಂಬುದಿಲ್ಲ. ಏಕೆಂದರೆ ಹೀಗೆ ಮಾಡಿದರೆ ದೇವರ ಜಾತ್ರೆಯಲ್ಲಿ ಉಳ್ಳವರದೇ ಮೇಲುಗೈ ಆಗಿ ಅಸಮಾನತೆ ಇಣುಕುತ್ತದೆ. ಅದಕ್ಕಾಗಿ ಒಂದೇ ರೀತಿ ವಂತಿಗೆ ಪಟ್ಟಿ ಹಾಕುತ್ತೇವೆ ಎಂದರು ಕುಬೇರಪ್ಪ.

ರಂಗ ಪ್ರೇಮಿಗಳ ಊರು

ಊರಿನ ಜನರಲ್ಲಿ ಸಾಂಸ್ಕೃತಿಕ ಅಭಿರುಚಿ ಹೆಚ್ಚೇ ಇದೆ. ಪ್ರತಿ ವರ್ಷ ಗ್ರಾಮಸ್ಥರೇ ಸೇರಿಕೊಂಡು ಒಂದೆರಡು ರಂಗ ಪ್ರಯೋಗ ಮಾಡುತ್ತಾರೆ. ಗ್ರಾಮ ಪಂಚಾಯಿತಿ ಸದಸ್ಯ ಕುಬೇರಪ್ಪ ಸೇರಿ ಅವರ ಗೆಳೆಯರ ಬಳಗ ಸದೃಢ ರಂಗ ತಂಡವನ್ನು ಕಟ್ಟಿದೆ. ಕಲಾವಿದರು, ರಚನೆಕಾರರು ಇದೇ ಊರಿನಲ್ಲಿ ಇದ್ದಾರೆ. ಮಾತುಗಳಲ್ಲಿ ರಂಗ ಸಂಭಾಷಣೆಯ ಸೊಗಡು ಇಣುಕುತ್ತದೆ.

ನೊಣಗಳ ಹಾವಳಿ

ಪುಟ್ಟ ಗ್ರಾಮಗಳಲ್ಲಿ ಸಮಸ್ಯೆಗಳೇ ಇಲ್ಲವೆಂದಲ್ಲ. ಕೋಳಿ ಫಾರಂಗಳ ನೊಣಗಳ ಹಾವಳಿ ಇದೆ. ಮನೆಯೊಳಗೂ ನೊಣಗಳ ದಾಳಿ ಸಾಮಾನ್ಯ. ಕೆಲವರಿಗೆ ಅಪರೂಪವೆನಿಸುವ ಚರ್ಮರೋಗ ಇದೆ. ಮಳೆ ಕೈಕೊಟ್ಟರೆ ಕೆಲಕಾಲ ಅಸಹಾಯಕರಾಗುವ ಪರಿಸ್ಥಿತಿ ಇದೆ. ಸಾರಿಗೆ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಬೇಕು ಎಂಬ ಬೇಡಿಕೆಯೂ ಇದೆ.

ಅವಿಭಕ್ತ ಕುಟುಂಬಗಳು

ಕುಬೇರಪ್ಪ ಬಡಿಗೇರ ಹಾಗೂ ಉಮೇಶ ಬಡಿಗೇರ ಅವರ ಮನೆಗಳಲ್ಲಿ ತಲಾ 35 ಸದಸ್ಯರು ಇದ್ದಾರೆ. ಹೊರನೋಟಕ್ಕೆ ಸಾಮಾನ್ಯ ಹಳ್ಳಿ ಮನೆಯಂತೆ ಕಾಣುವ ಇವರ ಮನೆಗಳು ಒಳ ಹೋದಂತೆ ಅವಿಭಕ್ತ ಕುಟುಂಬದ ಅನ್ಯೋನ್ಯತೆಯನ್ನು ತೆರೆದಿಡುತ್ತವೆ. ಎಲ್ಲ ಆಧುನಿಕ ವ್ಯವಸ್ಥೆಗಳನ್ನೂ ಅಳವಡಿಸಿಕೊಂಡಿದ್ದಾರೆ. ಸಂಜೆಯಾದಂತೆ ಮನೆಯ ಮುಂದಿನ ಜಗುಲಿಯ ಮೇಲೆ ಎಲ್ಲ ಸದಸ್ಯರು ಸೇರಿ ಹರಟುತ್ತಾರೆ. ಪುಟ್ಟ ಮಕ್ಕಳ ಗದ್ದಲದ ಧ್ವನಿಯೂ ಸೇರುತ್ತದೆ. ಒಟ್ಟಿಗೇ ಉಣ್ಣುತ್ತಾರೆ. ಈ ದೃಶ್ಯ ಒಂದು ಸಭೆ ಸೇರಿದಂತೆಯೇ ಕಾಣುತ್ತದೆ. ಇದೇ ಒಗ್ಗಟ್ಟು ಗ್ರಾಮದ ಹಲವು ಮನೆಗಳಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry