ಬೆಳಗೊಳದ ಬಾಹುಬಲಿ ಹೇಳುವುದು ಏನೆಂದರೆ...

7

ಬೆಳಗೊಳದ ಬಾಹುಬಲಿ ಹೇಳುವುದು ಏನೆಂದರೆ...

Published:
Updated:
ಬೆಳಗೊಳದ ಬಾಹುಬಲಿ ಹೇಳುವುದು ಏನೆಂದರೆ...

ಇದು 12 ವರ್ಷಗಳ ಹಿಂದಿನ ಮಾತು. ನಾನು ಆಗ ‘ಪ್ರಜಾವಾಣಿ’ಯಲ್ಲಿ ಮುಖ್ಯ ವರದಿಗಾರನಾಗಿದ್ದೆ. 2006ರ ಫೆಬ್ರುವರಿಯಲ್ಲಿ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿತ್ತು. ಅದನ್ನು ವರದಿ ಮಾಡಲು ನನಗೆ ಒಂದು ಅವಕಾಶ ಕೊಡಿ ಎಂದು ಆಗಿನ ಸಹ ಸಂಪಾದಕರಿಗೆ ಕೋರಿಕೊಂಡಿದ್ದೆ. ಹಾಗೆ ಕೇಳುವಾಗ ಮುಂದಿನ ಮಹಾಮಸ್ತಕಾಭಿಷೇಕದ ವೇಳೆಗೆ ನಾನು ಸೇವೆಯಲ್ಲಿ ಇರುವುದಿಲ್ಲ ಎಂದು ನನಗೆ ತಿಳಿದಿತ್ತು. ಅವರು ಉದಾರವಾಗಿ ಒಪ್ಪಿಗೆ ನೀಡಿದರು.

ಬಾಹುಬಲಿ ಮೂರ್ತಿಯ ಸುತ್ತಲೂ ಕಟ್ಟಿದ ಅಟ್ಟಣಿಗೆ ಮೇಲೆ ಕುಳಿತು ಮಹಾಮಸ್ತಕಾಭಿಷೇಕವನ್ನು ಮೊದಲ ದಿನವೇ ನಾನು ನೋಡಿದ್ದು ಅದೇ ಮೊದಲು. ವರದಿಗಾರನಾಗಿ ಅದು ನಾನು ಮರೆಯಲಾಗದ ಒಂದು ಅನುಭವ. 1993ರಲ್ಲಿ ನಡೆದ ಮಹಾಮಸ್ತಕಾಭಿಷೇಕವನ್ನು ನಾನು ನೋಡಿದ್ದೆನಾದರೂ ಅದು ನಂತರದ ದಿನಗಳಲ್ಲಿ ಮಹಾಮಸ್ತಕಾಭಿಷೇಕ ನಡೆದಾಗ.

ಪ್ರತಿ 12 ವರ್ಷಕ್ಕೆ ಒಮ್ಮೆ ನಡೆಯುವ ಬಾಹುಬಲಿಯ ಮಹಾಮಸ್ತಕಾಭಿಷೇಕ, ದೇಶದ ಬಹುದೊಡ್ಡ ಧಾರ್ಮಿಕ ಉತ್ಸವಗಳಲ್ಲಿ ಒಂದು. ಕ್ರಿ.ಶ. 981ರಲ್ಲಿ ಗಂಗರಸ ರಾಚಮಲ್ಲನ ಮಹಾಮಂತ್ರಿ ಮತ್ತು ಸೇನಾಪತಿಯಾಗಿದ್ದ ಚಾವುಂಡರಾಯ ತಾಯಿಯ ಆಸೆ ತೀರಿಸಲು ಮಾಡಿಸಿದ ಈ ಮೂರ್ತಿಗೆ ಬರುವ ಫೆಬ್ರುವರಿಯಲ್ಲಿ ನಡೆಯುತ್ತಿರುವುದು 88ನೇ ಅಭಿಷೇಕ. ಏಕ ಶಿಲೆಯಲ್ಲಿ ನಿರ್ಮಿಸಿದ ಇಷ್ಟು ಎತ್ತರದ ಮೂರ್ತಿ ಜಗತ್ತಿನಲ್ಲಿ ಬೇರೆ ಎಲ್ಲಿಯೂ ಇಲ್ಲ.

ಶ್ರವಣಬೆಳಗೊಳದ ವಿಂಧ್ಯಗಿರಿ ಅಥವಾ ದೊಡ್ಡಬೆಟ್ಟದ ಮೇಲಿನ ಬಾಹುಬಲಿ ಮೂರ್ತಿಯ ಎತ್ತರ 58.8 ಅಡಿ. ಇಷ್ಟು ಎತ್ತರದ ಮೂರ್ತಿಗೆ ಮಹಾಮಸ್ತಕಾಭಿಷೇಕ ಮಾಡಬೇಕು, ಅಂದರೆ ತಲೆಯ ಭಾಗದಿಂದ ಕಾಲಿನ ಭಾಗದವರೆಗೆ ಅಭಿಷೇಕ ಮಾಡುವುದು, ಎಂದರೆ ಪ್ರಭುತ್ವದ ನೆರವು ಬೇಕೇ ಬೇಕು. ಅದಕ್ಕೆ ಬೇಕಾಗುವ ಸಿದ್ಧತೆಗಳೂ ಬಹಳ. ಪ್ರತಿ ಮಹಾಮಸ್ತಕಾಭಿಷೇಕದ ಸಮಯದಲ್ಲಿಯೂ 20ರಿಂದ 30 ಲಕ್ಷ ಭಕ್ತ ಜನರು ಶ್ರವಣಬೆಳಗೊಳಕ್ಕೆ ಬರುವುದರಿಂದ ಅವರಿಗೆ ಮೂಲಸೌಕರ್ಯ ಒದಗಿಸಲು ಸರ್ಕಾರದ ನೆರವು ಬೇಕೇ ಬೇಕು.

ಮಹಾಮಸ್ತಕಾಭಿಷೇಕಕ್ಕೆ ಬಹಳ ಮುಖ್ಯವಾಗಿ ಬೇಕಾಗುವುದು ಮೂರ್ತಿಯ ಸುತ್ತಲಿನ ಅಟ್ಟಣಿಗೆ. ಅಟ್ಟಣಿಗೆ ಇಲ್ಲದೇ ಇದ್ದರೆ ಇಷ್ಟು ಎತ್ತರದ ಮೂರ್ತಿಗೆ ತಲೆಯ ಮೇಲೆ ಅಭಿಷೇಕ ಮಾಡಲು ಆಗುವುದಿಲ್ಲ. ಐದಾರು ಸಾವಿರ ಜನರು ತಮ್ಮ ಶಕ್ತ್ಯನುಸಾರ ಹಣ ಕೊಟ್ಟು ಕೊಂಡ ಕಳಸಗಳನ್ನು ತೆಗೆದುಕೊಂಡು, ಮೆಟ್ಟಿಲು ಏರಿ ಮೂರ್ತಿಯ ತಲೆಯ ಭಾಗದವರೆಗೆ ಹೋಗಿ ಅಭಿಷೇಕ ಮಾಡಿ ಬಂದು ಅಟ್ಟಣಿಗೆಯ ಮೇಲೆ ಕುಳಿತು ಉಳಿದ ಅಭಿಷೇಕ ನೋಡುತ್ತಾರೆ. ಬಹುಪಾಲು ಜನರು ಜಲಾಭಿಷೇಕದ ಕಳಸಗಳನ್ನೇ ತೆಗೆದುಕೊಂಡಿರುತ್ತಾರೆ. ಎಳನೀರು, ಕಬ್ಬಿನ ಹಾಲು, ಕ್ಷೀರ, ಗಂಧ, ಅರಿಶಿನ, ಚಂದನ, ಕಷಾಯ, ಅಕ್ಕಿ ಹಿಟ್ಟು (ಶ್ವೇತ ಕಲ್ಕ ಚೂರ್ಣ) ಇತ್ಯಾದಿ ಪದಾರ್ಥಗಳ ಅಭಿಷೇಕಗಳ ಕಳಸಗಳನ್ನು ಬಹುಪಾಲು ಶ್ರೀಮಂತರೇ ತೆಗೆದುಕೊಳ್ಳುತ್ತಾರೆ.

ಚಾವುಂಡರಾಯ ಈ ಮೂರ್ತಿಯನ್ನು ಮಾಡಿಸಿದ ಕಾಲದಿಂದಲೂ 12 ವರ್ಷಕ್ಕೆ ಒಮ್ಮೆಯಂತೆಯೇ ಮಹಾಮಸ್ತಕಾಭಿಷೇಕ ನಡೆಯಬೇಕು ಎಂದು ನಿಗದಿಯಾಗಿದೆ. ಬಹುಶಃ ಎರಡು ಕಾರಣಕ್ಕೆ ಚಾವುಂಡರಾಯ ಹೀಗೆ ನಿಗದಿ ಮಾಡಿರಬೇಕು: ಒಂದು, ಮಹಾಮಸ್ತಕಾಭಿಷೇಕಕ್ಕೆ ಮಾಡಬೇಕಾದ ಸಿದ್ಧತೆ ಹಾಗೂ ಅದಕ್ಕೆ ತಗಲುವ ಖರ್ಚು ಅಪಾರವಾದುದು, ಪ್ರತಿವರ್ಷ ಅಭಿಷೇಕ ಮಾಡುತ್ತ ಇದ್ದರೆ ಅದು ಬೊಕ್ಕಸದ ಮೇಲೆ ಅಡ್ಡ ಪರಿಣಾಮ ಬೀರಬಹುದು. ಎರಡು, ‘ಮೂರ್ತಿಯ ಮೇಲೆ ಹಾಕುವ ಹಾಲು ಅಪವ್ಯಯ, ಅದೆಲ್ಲ ಬಾಹುಬಲಿಯಂಥ ವಿರಾಗಿಗೆ ಬೇಕೇ’ ಎಂಬ ಪ್ರಶ್ನೆಗೆ ಉತ್ತರ ಕೊಡಲೂ ಈ ಕಾಲದ ಅಂತರವನ್ನು ನಿಗದಿ ಮಾಡಿರಬಹುದು.

ಇಲ್ಲಿ ಉಲ್ಲೇಖಿಸಬೇಕಾದ ಒಂದು ಸಂಗತಿಯೇನು ಎಂದರೆ ಮಹಾಮಸ್ತಕಾಭಿಷೇಕದ ಸಮಯದಲ್ಲಿ ನಡೆಯುವ ಯಾವುದೇ ಧಾರ್ಮಿಕ ವಿಧಿ ವಿಧಾನಗಳಿಗೆ ಸರ್ಕಾರದ ಹಣವನ್ನು ಬಳಸುವುದಿಲ್ಲ. ಅದೆಲ್ಲ ವೆಚ್ಚವನ್ನು ಭಕ್ತರೇ ಭರಿಸುತ್ತಾರೆ. ಇಂಥ ಮಹಾಮಸ್ತಕಾಭಿಷೇಕಗಳು ಸಮಾಜದಲ್ಲಿ ಹುಟ್ಟು ಹಾಕುವ ವಿವಾದಗಳನ್ನು ತಣಿಸಬೇಕು ಎಂದೇ ಶ್ರವಣಬೆಳಗೊಳದ ಜೈನ ಮಠದ ಈಗಿನ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಮಹಾಮಸ್ತಕಾಭಿಷೇಕಕ್ಕೂ ಜನಕಲ್ಯಾಣಕ್ಕೂ ಸಂಬಂಧ ಕಲ್ಪಿಸುತ್ತಿದ್ದಾರೆ.-ಶ್ರವಣಬೆಳಗೊಳದ ವಿಂಧ್ಯಗಿರಿಯ ನೋಟ

2006ರ ಮಹಾಮಸ್ತಕಾಭಿಷೇಕದ ಸಮಯದಲ್ಲಿ ಕಳಸಗಳ ಮಾರಾಟದಿಂದ ಬಂದ ಹಣದಿಂದ ಅವರು ಶ್ರವಣಬೆಳಗೊಳದಿಂದ ಐದು ಕಿಲೋಮೀಟರ್‌ ಹತ್ತಿರದಲ್ಲಿ ದೊಡ್ಡ ಮಕ್ಕಳ ಆಸ್ಪತ್ರೆ ನಿರ್ಮಿಸಿದರು. ಈ ಸಾರಿಯ ಮಹಾಮಸ್ತಕಾಭಿಷೇಕ ಸಮಯದಲ್ಲಿ ಸಂಗ್ರಹವಾಗುವ ಹಣದಿಂದ 200 ಹಾಸಿಗೆಗಳ ವಿಶೇಷ ಸೌಲಭ್ಯಗಳುಳ್ಳ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದು ಅವರಿಗೆ ಸತತ ನಾಲ್ಕನೇ ಮಹಾಮಸ್ತಕಾಭಿಷೇಕ ಎನ್ನುವುದು ವಿಶೇಷ. 1981ರಲ್ಲಿ ಬಾಹುಬಲಿಗೆ ಸಹಸ್ರ ವರ್ಷ ತುಂಬಿದ ಸಂದರ್ಭದಲ್ಲಿ ನಡೆದ ಮಹಾಮಸ್ತಕಾಭಿಷೇಕ ಅವರ ನೇತೃತ್ವದಲ್ಲಿ ನಡೆದ ಮೊದಲ ಅಭಿಷೇಕ.

ಬರುವ ಫೆಬ್ರುವರಿ 7 ರಿಂದ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಶ್ರವಣ ಬೆಳಗೊಳ ಹೆಚ್ಚೂ ಕಡಿಮೆ ಸಜ್ಜಾಗಿದೆ. ಈ ಸಾರಿ, ಜರ್ಮನ್‌ ತಂತ್ರಜ್ಞಾನ ಬಳಸಿ ಬೆಟ್ಟದ ಮೇಲೆ ಬಾಹುಬಲಿಯ ಸುತ್ತಲೂ ಅಟ್ಟಣಿಗೆ ನಿರ್ಮಿಸಿದ್ದಾರೆ. ತಂತ್ರಜ್ಞಾನ ಒದಗಿಸಿದ ಅನುಕೂಲ ಅದು. ತಡವಾಗಿ ಆರಂಭವಾದರೂ ಅಟ್ಟಣಿಗೆ ನಿರ್ಮಾಣ ಬೇಗ ಪೂರ್ಣಗೊಂಡಿದೆ. ಇದುವರೆಗೆ ಅಟ್ಟಣಿಗೆ ನಿರ್ಮಿಸುವುದೇ ಒಂದು ದೊಡ್ಡ ಸಾಹಸ ಎನ್ನುವಂತೆ ಆಗುತ್ತಿತ್ತು.

ಕಬ್ಬಿಣದ ಕೊಳವೆಗಳನ್ನು ಕೆಳಗಿನಿಂದ ಮೇಲೆ ತೆಗೆದುಕೊಂಡು ಹೋಗಿ ಅವುಗಳಿಗೆ ಒಂದಕ್ಕೆ ಒಂದು ನಟ್ಟು ಬೋಲ್ಟು ಹಾಕಿ, ಜೋಡಿಸಿ ಅಟ್ಟಣಿಗೆ ನಿರ್ಮಿಸಲು ಆರೇಳು ತಿಂಗಳೇ ಬೇಕಾಗುತ್ತಿತ್ತು. ಈ ಸಾರಿ ಹಗುರವಾದ, ಸುಲಭವಾಗಿ ಬೆಟ್ಟದ ಮೇಲೆ ತೆಗೆದುಕೊಂಡು ಹೋಗಬಹುದಾದ ಸಲಕರಣೆಗಳನ್ನು ಬಳಸಿ ಅಟ್ಟಣಿಗೆ ನಿರ್ಮಿಸಲಾಗಿದೆ. 50, 60ರ ದಶಕಗಳಲ್ಲಿ ಮರದ ಗಳಗಳನ್ನು ಬಳಸಿ ಅಟ್ಟಣಿಗೆ ನಿರ್ಮಿಸುತ್ತಿದ್ದರು. ತಂತ್ರಜ್ಞಾನದ ದೃಷ್ಟಿಯಿಂದ ಕಾಲ ಬದಲಾಗಿದ್ದರೂ, ಭಕ್ತಿಭಾವದ ದೃಷ್ಟಿಯಿಂದ ಯಾವ ಬದಲಾವಣೆಯೂ ಆಗಿಲ್ಲ. ಆಗಿನಿಂದ ಈಗಿನವರೆಗೆ ಮಹಾಮಸ್ತಕಾಭಿಷೇಕವು ಲಕ್ಷಾಂತರ ಜನರನ್ನು ತನ್ನ ಕಡೆಗೆ ಕೈ ಬೀಸಿ ಕರೆಯುತ್ತಲೇ ಇದೆ.

ಬೆಳಗೊಳದ ಬಾಹುಬಲಿ ಮೂರ್ತಿ ಒಂದು ಅಪೂರ್ವ ಶಿಲ್ಪ. ಅದು ಒಬ್ಬ ಮಹಾನ್‌ ಶಿಲ್ಪಿಯ ನೇತೃತ್ವದಲ್ಲಿ ನೂರಾರು, ಸಾವಿರಾರು ಶಿಲ್ಪಿಗಳು ಕೂಡಿ ಕಟೆದು ನಿಲ್ಲಿಸಿದ ಒಂದು ಅದ್ಭುತ ಮೂರ್ತಿ. ಪರಿಪೂರ್ಣತೆಗೆ ಅದು ಒಂದು ನಿದರ್ಶನ. ಎಲ್ಲವನ್ನೂ ಮೀರಿ ಬೆತ್ತಲೆ ನಿಂತ ಮೂರ್ತಿ ಸಾರುವ ಸಂದೇಶ ಅನುಪಮವಾದುದು.

ಮೂರ್ತಿಯ ಮುಖದಲ್ಲಿ ಸೂಸುವ ಮಂದಹಾಸ, ವಿಷಾದಗಳೆರಡೂ ಅರ್ಥಪೂರ್ಣ. ಮೂರ್ತಿ ನಿರ್ಮಿಸಲು ತಗುಲಿದ ಖರ್ಚನ್ನೆಲ್ಲ ಮಹಾಮಂತ್ರಿ ಚಾವುಂಡರಾಯನೇ ಭರಿಸಿದ. ಅವನ ಹೆಸರೇ ಮೂರ್ತಿಯ ಕೆಳಭಾಗದಲ್ಲಿ ಇದೆ. ಆದರೆ, ಅದನ್ನು ಕಟೆದು ನಿಲ್ಲಿಸಿದ ಮಹಾಶಿಲ್ಪಿ ಯಾರು? ಯಾರಿಗೂ ತಿಳಿದಿಲ್ಲ. ತನ್ನ ಹೆಸರನ್ನು ಶಿಲ್ಪಿ ತಾನೇ ಹಾಕಲಿಲ್ಲವೇ? ಅಥವಾ ಮಹಾಮಂತ್ರಿ ಅದಕ್ಕೆ ಅವಕಾಶ ಕೊಡಲಿಲ್ಲವೇ? ಚಂದ್ರಶೇಖರ ಕಂಬಾರರು ಇದೀಗ ಬರೆದಿರುವ ‘ಗುಳ್ಳಕಾಯಜ್ಜಿ’ ನಾಟಕದಲ್ಲಿ ಮಹಾಶಿಲ್ಪಿ ತಾನೇ ತನ್ನ ಹೆಸರು ಹಾಕಲು ನಿರಾಕರಿಸಿದ ಎಂದು ಕಲ್ಪಿಸಿದ್ದಾರೆ. ‘ಮೂರ್ತಿಯ ಮುಖದಲ್ಲಿ ಮೂಡಿಸಲು ಸಾಧ್ಯವಾದ ಮುಗುಳು ನಗೆ ಮಾತ್ರ ನನಗೆ ಸಾಕು, ಹೆಸರು ಹಾಕುವುದು ಅಹಂಕಾರ’ ಎಂದು ಶಿಲ್ಪಿ ಹೇಳುತ್ತಾನೆ.

ಇಂಥದು ಅಹಂಕಾರ ಎನಿಸುವುದಕ್ಕೆ ಒಂದು ಹಿನ್ನೆಲೆಯಿದೆ: ಜಗತ್ತನ್ನೇ ಗೆದ್ದಿದ್ದ ಭರತ, ವೃಷಭಾಚಲದ ಮೇಲೆ ತನ್ನ ಹೆಸರು ಬರೆಸಲು ಹೋದಾಗ ಹಿಂದೆ ಆಗಿ ಹೋದ ಇವನಂಥ ನೂರಾರು ಚಕ್ರವರ್ತಿಗಳ ದೊಡ್ಡ ಪಟ್ಟಿಯೇ ಅಲ್ಲಿ ಇತ್ತು. ತನ್ನ ಹೆಸರು ಬರೆಯಲು ಜಾಗವಿಲ್ಲದಿರುವುದನ್ನು ಕಂಡು ಅವನ ‘ಗರ್ವರಸ ಸೋರಿ ಹೋಯಿತು’. ಕೊನೆಗೆ ಒಂದು ಹೆಸರು ಅಳಿಸಿ ತನ್ನ ಹೆಸರು ಬರೆಸಿದ್ದ ಭರತ. ಇಷ್ಟು ದೊಡ್ಡ ಮೂರ್ತಿ ನಿರ್ಮಿಸಿದ ಚಾವುಂಡರಾಯನಿಗೂ ಗರ್ವ ಬಂದಿತ್ತು.

ಕ್ರಿ.ಶ. 981ರಲ್ಲಿ ಮೊದಲ ಮಹಾಮಸ್ತಕಾಭಿಷೇಕ ನಡೆದಾಗ ಎಷ್ಟು ಹಾಲು, ಗಂಧ, ಅರಿಶಿನ ಸುರಿದರೂ ಮೂರ್ತಿ ಪೂರ್ತಿ ತೊಯ್ಯಲೇ ಇಲ್ಲ. ಒಬ್ಬ ಅಜ್ಜಿ ಒಂದು ಪುಟ್ಟ ಗಿಂಡಿಯಲ್ಲಿ ಹಾಲು ಹಿಡಿದುಕೊಂಡು ಬಂದು, ಚಾವುಂಡರಾಯನಿಗೆ ಗೋಗರೆದು, ಅನುಮತಿ ಪಡೆದು ಮೇಲೆ ಹೋಗಿ, ಆ ಪುಟ್ಟ ಗಿಂಡಿಯಲ್ಲಿ ಇದ್ದ ಹಾಲಿನ ಅಭಿಷೇಕ ಮಾಡಿದಾಗ ಇಡೀ ಮೂರ್ತಿಯನ್ನು ತೊಯ್ಯಿಸಿದ ಹಾಲು ಹೊಳೆಯಾಗಿ ಹರಿದು ಬೆಟ್ಟದ ಕೆಳಗಿನ ಬೆಳಗೊಳವಾಯಿತು ಎಂಬುದು ಪ್ರತೀತಿ.

ಬಾಹುಬಲಿ ಮೂರ್ತಿಯಿರುವ ಪ್ರಾಂಗಣದಿಂದ ಹೊರಗೆ ಬಂದರೆ ಸಮ್ಮುಖದಲ್ಲಿ ನಿಮಗೆ ಕಾಣುವುದು ಗುಳ್ಳಕಾಯಜ್ಜಿಯ ಪುಟ್ಟ ಮೂರ್ತಿ. ತಾತ್ಪರ್ಯವೇನು ಎಂದರೆ ಶ್ರೀಮಂತರ ಹಾಗೂ ಬಡವರ ಭಕ್ತಿಯ ನಡುವಿನ ತಾಕಲಾಟ ಆಗಲೂ ಇತ್ತು ಮತ್ತು ಈಗಲೂ ಇದೆ ಎನ್ನುವುದು. ಬಡವರಲ್ಲಿ ಭಕ್ತಿ ಇರುತ್ತದೆ. ಶ್ರೀಮಂತರಲ್ಲಿ ತೋರಿಕೆ ಇರುತ್ತದೆ ಎಂಬುದನ್ನೂ ಈ ಘಟನೆ ಹೇಳುತ್ತಿರಬಹುದು. ಈ ಘಟನೆಯನ್ನು ಇನ್ನೂ ಅನೇಕ ರೀತಿಯಿಂದ ವಿವರಿಸಲು ಅವಕಾಶ ಇದೆ. ಅದು ಒಂದು ಬಹುದೊಡ್ಡ ರೂಪಕ. ಈ ಸಾರಿಯ ಮಹಾಮಸ್ತಕಾಭಿಷೇಕದ ಲಾಂಛನದಲ್ಲಿ ಗುಳ್ಳಕಾಯಜ್ಜಿಯೇ ಪ್ರಮುಖವಾಗಿ ಇರುವುದು ಒಂದು ವಿಶೇಷ.

ನಿಜ, ಈಗಲೂ ಅಷ್ಟೇ. ಎಷ್ಟು ನೀರು ಸುರಿದರೂ, ಎಷ್ಟು ಹಾಲು ಸುರಿದರೂ, ಎಷ್ಟು ಗಂಧ, ಚಂದನ, ಎಳನೀರು, ಕಷಾಯ ಹೀಗೆ ಏನೆಲ್ಲ ಸುರಿದರೂ ಮೂರ್ತಿಯ ಯಾವುದಾದರೂ ಒಂದು ಭಾಗ ತೊಯ್ಯದೇ ಉಳಿದು ಬಿಡುತ್ತದೆ. ಅದು ಒಂದು ಅನನ್ಯ ರೂಪಕ. ‘ನೀವು ಏನು ಮಾಡಿದರೂ ನನ್ನ ಇಡೀ ಮೈಯ್ಯ ತೊಯ್ಯಿಸಲಾರಿರಿ’ ಎಂದು ಮೂರ್ತಿ ಹೇಳುತ್ತಿರಬಹುದು ಅಥವಾ ಮನುಷ್ಯನ ಅಪರಿಪೂರ್ಣತೆಯನ್ನು ಅದು ಸಾರುತ್ತಿರಬಹುದು. ಪರಿಪೂರ್ಣತೆಯತ್ತ ಸಾಗಬೇಕಾದ ದಾರಿಯ ಕಷ್ಟಗಳನ್ನೂ ಅದು ಹೇಳುತ್ತಿರಬಹುದು. ವಿಪರ್ಯಾಸ ಎಂದರೆ ಒಬ್ಬ ಮನುಷ್ಯನೇ ಈ ಪರಿಪೂರ್ಣ ಮೂರ್ತಿಯನ್ನು ಕಟೆದು ನಿಲ್ಲಿಸಿದ ಎನ್ನುವುದು. ಅದು ದೈವಸೃಷ್ಟಿ ಎನ್ನಿಸುವಂಥ ಸೃಷ್ಟಿ. ಮೂರ್ತಿಯ ಶಿರದ ಮೇಲೆ, ಭುಜದ ಮೇಲೆ ಹಾಕಿದ ಹಾಲು, ಗಂಧ, ಎಳನೀರು, ಕಷಾಯ, ಚಂದನ ಒಂದೇ ಕ್ಷಣದಲ್ಲಿ ಧಾವಿಸಿ ಪಾದದ ಕಡೆಗೆ ಹರಿದು ಬಂದು ಬಿಡುತ್ತದೆ.

ಅದು ಹರಿದು ಬರುವ ನೋಟ ಒಂದು ದಿವ್ಯ ಅನುಭೂತಿ. ಶಿರದ ಮೇಲೆ ಬಿದ್ದ ಹಾಲಿನ ಹನಿಗೆ, ಹನಿ ಹನಿಯಾಗಿ ಹರಿಯುವ ಧಾರೆಗೆ ಬಾಹುಬಲಿಯ ಪಾದ ಮುಟ್ಟುವ ತವಕ. ಪಾದ ಮುಟ್ಟಿ ಛಿಲ್ಲನೇ ಸಿಡಿದು ಮುಂದೆ ನಿಂತ ಭಕ್ತಗಣವನ್ನು ಪಾವನ ಮಾಡುವ ತವಕ. ಒಂದೊಂದು ಅಭಿಷೇಕ ನಡೆದಾಗಲೂ ಮೂರ್ತಿ ಒಂದೊಂದು ರೀತಿ ಕಾಣುತ್ತದೆ. ಪುಷ್ಪವೃಷ್ಟಿ ಹಾಗೂ ಮಹಾಮಂಗಳಾರತಿಯೊಂದಿಗೆ ಅಭಿಷೇಕ ಪೂರ್ಣಗೊಳ್ಳುತ್ತದೆ. ಅಷ್ಟು ದೊಡ್ಡ ಮೂರ್ತಿಗೆ ಮಂಗಳಾರತಿ ಮಾಡುವುದೂ ಒಂದು ವಿಶೇಷ ನೋಟ.

ಮೇಲಿನಿಂದ ತೂಗುಬಿಟ್ಟ ಹಗ್ಗಕ್ಕೆ ಕಟ್ಟಿದ ಆರತಿ ತಟ್ಟೆ ಉಯ್ಯಲಾಡುತ್ತ ಮೇಲೆ ಮೇಲೆ ಹೋಗಿ ಮೂರ್ತಿಯ ಮುಖದ ಮುಂದೆ ನಿಲ್ಲುತ್ತದೆ. ಪ್ರತಿ ಸಾರಿ ಮಹಾಮಸ್ತಕಾಭಿಷೇಕ ನಡೆದ ನಂತರ ಇಡೀ ಮೂರ್ತಿಗೆ ಒಂದು ಮಾಲೆ ಹಾಕುತ್ತಾರೆ. ಮಹಾಮಸ್ತಕಾಭಿಷೇಕದ ಉದ್ದಕ್ಕೂ ಹಿನ್ನೆಲೆಯಲ್ಲಿ ಖ್ಯಾತ ಸಂಗೀತಗಾರ ದಿ. ರವೀಂದ್ರ ಜೈನ್‌ ಅವರ ಹಾಡುಗಳು ಕೇಳಿ ಬರುತ್ತ ಇರುತ್ತವೆ. ಅಂಧರಾಗಿದ್ದ ಅವರು ಈ ಮಹಾಮಸ್ತಕಾಭಿಷೇಕವನ್ನು ತಮ್ಮ ಹಾಡುಗಳಲ್ಲಿ ಕಟ್ಟಿಕೊಟ್ಟ ಬಗೆಯನ್ನು ಇದುವರೆಗೆ ಯಾರಿಗೂ ಮೀರಿಸಲು ಆಗಲಿಲ್ಲ ಎನ್ನುವುದು ಒಂದು ಬಹುದೊಡ್ಡ ಅಚ್ಚರಿ.

ಮೂಲತಃ ಬಾಹುಬಲಿಯೇ ಅಂಥವನು. ಸಾಮ್ರಾಜ್ಯ ದಾಹದಿಂದ ಕಾದಲು ಬಂದ ಅಣ್ಣನನ್ನು ದೃಷ್ಟಿಯುದ್ಧ, ಜಲ ಯುದ್ಧ ಮತ್ತು ಮಲ್ಲಯುದ್ಧದಲ್ಲಿ ಸೋಲಿಸಿದವನು. ಇಬ್ಬರು ರಾಜರ ನಡುವೆ ನಡೆದ ಮೊದಲ ಹಾಗೂ ಕೊನೆಯ ಶಸ್ತ್ರರಹಿತ ಹಾಗೂ ರಕ್ತರಹಿತ ಯುದ್ಧವದು. ಕೊನೆಯ ಮಲ್ಲಯುದ್ಧದಲ್ಲಿಯೂ ಸೋತ ಅಣ್ಣನನ್ನು ಮೇಲೆ ಎತ್ತಿ ಕೆಳಗೆ ಹಾಕಬೇಕು ಎನ್ನುವಾಗ ‘ಸೋದರರೊಳೆ ಸೋದರರಂ ಕಾದಿಸುವ’ ಸಾಮ್ರಾಜ್ಯ ದಾಹದ ಬಗೆಗೆ ‘ಛೇ’ ಎಂದು ತಾತ್ಸಾರಗೊಂಡವನು ಬಾಹುಬಲಿ. ಮೇಲಕ್ಕೆ ಎತ್ತಿ ನೆಲಕ್ಕೆ ಬೀಳಿಸಬೇಕಿದ್ದ ಅಣ್ಣನನ್ನು ‘ಒಯ್ಯನೇ (ಮೃದುವಾಗಿ) ಇಳಿಸಿ’, ಸೋತ ಅಣ್ಣನಿಗೇ ಸಾಮ್ರಾಜ್ಯವನ್ನು ಬಿಟ್ಟು ಕೊಟ್ಟು ‘ಅಯ್ಯನಿತ್ತುದುಮನ್ ಆಂ ನಿನಗೆ ಇತ್ತೆನ್’ ಎನ್ನುತ್ತ ತಪಸ್ಸಿಗೆ ಹೊರಟು ಬಿಡುತ್ತಾನೆ.

‘ಅಯ್ಯನಿತ್ತುದುಂ’ ಎಂದರೆ, ‘ಅಪ್ಪ ಕೊಟ್ಟ ಆಸ್ತಿ ಇದು, ಅದನ್ನು ನಿನಗೆ ಬಿಟ್ಟುಕೊಡುವುದರಲ್ಲಿ ನನ್ನ ವಿಶೇಷವೇನೂ ಇಲ್ಲ’ ಎಂಬುದು ಭಾವಾರ್ಥವಾದರೆ ‘ನಾವು ಹೊಡೆದಾಡುವುದು ನಮ್ಮ ಆಸ್ತಿಗಾಗಿ ಅಲ್ಲ, ಅಪ್ಪನ ಆಸ್ತಿಗಾಗಿ’ ಎಂಬುದು ವ್ಯಂಗ್ಯಾರ್ಥ. ಮೂರನೆಯದು, ‘ಇಲ್ಲಿ ನಮ್ಮದೆನ್ನುವುದು ಯಾವುದೂ ಇಲ್ಲ’ ಎಂಬುದು ಆಧ್ಯಾತ್ಮಿಕ ಅರ್ಥ. ಇಲ್ಲಿನ ‘ಅಯ್ಯ’ ಪದ ಹೊರಡಿಸುವ ಶ್ಲೇಷೆ ಬಹಳ ದೊಡ್ಡದು, ವಿಸ್ತಾರವಾದುದು. ಪಂಪನ ಆದಿಪುರಾಣದಲ್ಲಿ ಕೊನೆಯ ಈ ಸನ್ನಿವೇಶವನ್ನು ‘ನೆಲಸುಗೆ ನಿನ್ನ ವಕ್ಷದೊಳೆ...’ ಎಂದು ಆರಂಭವಾಗುವ ಪದ್ಯದಲ್ಲಿ ಬಣ್ಣಿಸಿದ ಬಗೆ ಅನನ್ಯವಾದುದು.

ಬಾಹುಬಲಿ ತನ್ನ ತಂದೆ ವೃಷಭನಾಥನಿಗಿಂತ ಮುಂಚೆ ಮೋಕ್ಷಕ್ಕೆ ಹೋಗುತ್ತಾನೆ. ವೃಷಭನಾಥ ಜೈನರ ಮೊದಲ ತೀರ್ಥಂಕರ. ಬಾಹುಬಲಿ ತೀರ್ಥಂಕರನಲ್ಲ. ತೀರ್ಥಂಕರರು ಕೈವಲ್ಯಜ್ಞಾನವಾದ ನಂತರ ಸಮವಸರಣ ಎಂಬ ಧರ್ಮಸಭೆಯಲ್ಲಿ ಕುಳಿತು ಧರ್ಮ ಬೋಧನೆ, ಪ್ರಭಾವನೆ ಮಾಡುತ್ತಾರೆ. ಬಾಹುಬಲಿ ಆ ಅರ್ಥದಲ್ಲಿ ಧರ್ಮ ಪ್ರಭಾವನೆ ಮಾಡಲಿಲ್ಲ. ಆದರೆ, ಅವನು ಬದುಕಿದ ರೀತಿ, ಸಾಮ್ರಾಜ್ಯವನ್ನು ಗೆದ್ದೂ ಬಿಟ್ಟುಕೊಟ್ಟ ರೀತಿ, ಎಲ್ಲವನ್ನು ಬಿಟ್ಟು ಬೆತ್ತಲಾಗಿ ನಿಂತ ರೀತಿ ಯಾವ ಧರ್ಮ ಪ್ರಭಾವನೆಗಿಂತಲೂ ಕಡಿಮೆಯದಲ್ಲ. ಬಾಹುಬಲಿ ಅಷ್ಟು ವರ್ಷದಿಂದ ಹೇಳುತ್ತಿರುವುದು: ‘ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ’ ಎಂದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry