ಮಂಜು ಮುಸುಕಿದ ಭೂ-ಮನ

7

ಮಂಜು ಮುಸುಕಿದ ಭೂ-ಮನ

Published:
Updated:
ಮಂಜು ಮುಸುಕಿದ ಭೂ-ಮನ

ಇದು ಮಂಜಿನ ಹನಿ ಧರೆಗಿಳಿಯುವ ಸಕಾಲ. ಮುಸುಕು ತುಂಬಿದ ಹಿಮದ ಕಡಲಿನಂತೆ ತಣ್ಣನೆಯ ತಂಗಾಳಿಯೊಡನೆ ಚಳಿರಾಯ ಆಗಮಿಸುವ ಘಳಿಗೆಯಿದು. ವರ್ಷದಿಂದ ವರ್ಷಕ್ಕೆ ಈ ‘ಮಂಜು’ ಮಂಜಾಗುವ ಸಮಯದಿ ಹಳೇ ನೆನಪುಗಳು ಮೊಗೆದಷ್ಟೂ ಕಾಡತೊಡಗುತ್ತವೆ.

ನಾನಾಗ ಸುಮಾರು 10-11 ವರ್ಷದ ಆಸುಪಾಸಿನಲ್ಲಿದ್ದೆ ಎಂದೆನಿಸುತ್ತದೆ. 

ಸಂದರ್ಭದಲ್ಲಿ ಚಳಿಗಾಲದ ಸಮಯ ತುಂಬಾ ಕೋಪ ತರಿಸುತ್ತಿತ್ತು. ಕಾರಣ, ಮುಂಜಾನೆ ಬೇಗನೆ ಎದ್ದು ‘ಸ್ಕೂಲ್’ಗೆ ಹೊರಡಬೇಕಿತ್ತಲ್ಲಾ. ಆದರೆ ಏನು ಮಾಡುವುದು? ಮಂಜಿನೊಡನೆ ನಾವೂ ಒಂದು ರೀತಿಯಲ್ಲಿ ನಡುಗಿ ಮಂಜಾಗಿ ಹೋಗುತ್ತಿದ್ದೆವು. ಚಾಪೆ ಬಿಟ್ಟು ಏಳಲು ಮನಸೇ ಇಲ್ಲ. ಏಳದಿದ್ದರೆ ಮನೆಯಲ್ಲಿ ಬೈಗುಳ ಖಾತ್ರಿ ಆಗಿರುತ್ತಿತ್ತು.

ಹೇಗೋ ಹರಸಾಹಸಪಟ್ಟು ಏಳುತ್ತಿದ್ದೆ. ನನ್ನ ಅಜ್ಜ ಯಾವಾಗಲೂ ನನ್ನಿಷ್ಟದಂತೇ ಇದ್ದವರು. ನನ್ನಜ್ಜನಿಗೆ ನಾನೆಂದರೆ ಬಲು ಪ್ರೀತಿ. ನನ್ನನ್ನು ತುಂಬಾ ಮುದ್ದು ಮಾಡುತ್ತಿದ್ದುದು ಅವರೇನೆ. ಅವರಿಗೊಂದು ಹವ್ಯಾಸವಿತ್ತು. ಚಳಿಗಾಲದ ಆ ನಡುಕ ನಿಲ್ಲಿಸಲೆಂದು ಅಜ್ಜ  ಒಂದಷ್ಟು ತರಗೆಲೆಗಳನ್ನು ಸಾರಿಸಿ-ಸೇರಿಸಿ ಅಗ್ನಿಶಿಖೆಯಂತೆ ಮಾಡಿ, ಅದರ ಮುಂದೆ ಕೈಯಾಡಿಸುತ್ತಾ ಕುಳಿತುಬಿಡುತ್ತಿದ್ದರು.

ಸೂರ್ಯನ ಬಿಸಿ ಶಾಖ ಇಳೆ ಸೇರುವವರೆಗೂ ಅಜ್ಜ ಅಲ್ಲಿಂದ ಏಳುತ್ತಲೇ ಇರಲಿಲ್ಲ. ಅಜ್ಜನಂತೆ ಮೊಮ್ಮಗಳು ಅನ್ನೋ ಹಾಗೆ ನಾನು ಅಜ್ಜನ ಜೊತೆಗೂಡಿ ಬೆಂಕಿಯ ಮುಂದೆ ಇರುತ್ತಿದ್ದೆ. ಬಿಸಿ- ಬಿಸಿ ಕಾಫಿಯನ್ನು ಸವಿಯುತ್ತಾ, ರೊಟ್ಟಿಯನ್ನು ಮೆಲ್ಲುತ್ತಿದ್ದೆವು. ನಾನು ಮತ್ತು ಅಜ್ಜ ‘ಆ ಸೂರ್ಯನ ಬಿಸಿ ಶಾಖ ಒಮ್ಮೆ ಮೈ ತಾಕಲಿ’ ಎಂದು ಹಂಬಲಿಸುತ್ತಿದ್ದೆವು.

ಒಂದು ವೇಳೆ ಒಂದು ದಿನ ಅಜ್ಜ ಚಳಿಗಾಲದಿ ಬೆಂಕಿ ಉರಿಸದಿದ್ದರೆ ನಾನೇ ‘ಅಜ್ಜ’ನನ್ನು ಎಬ್ಬಿಸಿ ಕರೆದೊಯ್ಯುತ್ತಿದ್ದ ಕ್ಷಣವೂ ಇದೆ. ಹೀಗೆ ನಾನು ಅಜ್ಜನೊಡನೆ ಜೊತೆಯಾಗಿ ಮಾಡುತ್ತಿದ್ದ ತರ್ಲೆ, ಹಠ ಅಷ್ಟಿಷ್ಟಲ್ಲ.

ಮಂಜಿನ ಹನಿಯ ಮಾಲೆಯೊಡನೆ ಬಿಸಿ ಕಾಯಿಸುತ್ತಿದ್ದ ಕ್ಷಣ ಅವತ್ತೊಂದಿನದಿಂದ ನನ್ನ ಪಾಲಿಗೆ ಬರಲೇ ಇಲ್ಲ. ಕಾರಣ, ಅದೇ ವರ್ಷದಲ್ಲಿ ನನ್ನ ಅಜ್ಜ ನನ್ನನ್ನು ಬಿಟ್ಟು ಯಾರೂ ಕಾಣದ ದೂರದೂರಿಗೆ ಹೋದರು. ಅಂದರೆ ಅಜ್ಜ ಇಹಲೋಕ ಸೇರಿದರು. ಸಾಯುವ ಕ್ಷಣದಲ್ಲೂ ಅಜ್ಜ ನನ್ನ ಹೆಸರನ್ನೇ ಕೂಗಿದರು ಎಂದು ಅಮ್ಮ ಹೇಳಿದ ಆ ಒಂದು ಮಾತು ಇಂದಿಗೂ ನನ್ನನ್ನು ಕಾಡುತ್ತಲೇ ಇದೆ. ಅಜ್ಜ ನನ್ನ ಹೆಸರನ್ನು ಕೂಗುವಾಗ ನಾನು ಗಾಢ ನಿದ್ದೆಯ ಮಂಪರಿನಲ್ಲಿದ್ದೆಯಂತೆ. ಅಜ್ಜ ಕೂಗಿದ್ದು ನನಗೆ ಕೊನೆಗೂ ಕೇಳಿಸಲೇ ಇಲ್ಲ...

ಪ್ರತಿ ವರುಷ ಮಂಜು ಭೂಮಿಗಿಳಿಯುವ ವೇಳೆಗೆ ನನ್ನ ಮನಸಿಗೆ ಈ ಕಹಿ ಅನುಭವ ನೆನಪಾಗಿ ಮರುಕಳಿಸುತ್ತಲೇ ಇದೆ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry