ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಖಿಕ ಪರಂಪರೆಯನ್ನು ಲಿಖಿತವಾಗಿ ಕಟ್ಟಿಕೊಡುವ ಕೃತಿ

Last Updated 21 ಜನವರಿ 2018, 14:56 IST
ಅಕ್ಷರ ಗಾತ್ರ

ಚರ್ನೋಬಿಲ್ ಅಣು ಸ್ಥಾವರ ಸ್ಫೋಟಗೊಂಡು 31 ವರ್ಷಗಳಾದವು. ಕಾಲ ಎಲ್ಲ ಗಾಯಗಳನ್ನು ಮಾಯಿಸದಿದ್ದರೂ ನಿಧಾನವಾಗಿ ಮರೆಸುತ್ತದೆ. ಇತಿಹಾಸದಲ್ಲಿಯೇ ಅತ್ಯಂತ ಭೀಕರ ಅಣು ಸ್ಥಾವರ ದುರಂತವಾದ ಚರ್ನೋಬಿಲ್ ನಿಧಾನವಾಗಿ ವಿಸ್ಮರಣೆಗೆ ಸರಿದಾಗ 2015ರ ನೊಬೆಲ್ ಸಾಹಿತ್ಯ ಪ್ರಶಸ್ತಿ ಮತ್ತೆ ಅದನ್ನು ನೆನಪಿಸಿತ್ತು. ನಿಜ, ಆ ವರ್ಷದ ನೊಬೆಲ್ ಪ್ರಶಸ್ತಿ ಗಳಿಸಿದ್ದು ಸ್ವೆಟ್ಲಾನಾ ಅಲೆಕ್ಸಿವಿಚ್‌ ಅವರ ‘ವಾಯ್ಸ್‌ಸ್ ಫ್ರಮ್‌ ಚರ್ನೋಬಿಲ್: ದ ಓರಲ್ ಹಿಸ್ಟರಿ ಆಫ್ ಎ ನ್ಯೂಕ್ಲಿಯರ್‌ ಡಿಸಾಸ್ಟರ್’ ಎಂಬ ಕೃತಿ.

ಚರ್ನೋಬಿಲ್ ಸ್ಥಾವರದ ಸುತ್ತಮುತ್ತ ಇದ್ದ ಹಳ್ಳಿಗರು, ಸ್ಥಾವರದ ಅಣುಬೆಂಕಿಯನ್ನು ಆರಿಸಲು ಹೋದವರು, ವಿಕಿರಣ ಸುರಿತವನ್ನು ನಿಷ್ಕ್ರಿಯಗೊಳಿಸಲು ಹೋದವರು, ವಿಕಿರಣದ ಕ್ಯಾನ್ಸರ್‌ಗೆ ತುತ್ತಾಗಿ ಒಂದೆರಡು ವರ್ಷಗಳ ನಂತರ ಆಪ್ತರನ್ನು ಕಳೆದುಕೊಂಡವರು ಇನ್ನಿತರರು ನೇರವಾಗಿ ಚರ್ನೋಬಿಲ್ ದುರಂತವನ್ನು ಕಟ್ಟಿಕೊಟ್ಟಿದ್ದಾರೆ. ಇದು ಮೌಖಿಕ ಪರಂಪರೆಯನ್ನು ಲಿಖಿತವಾಗಿ ಕಟ್ಟಿಕೊಡುವ ಕೃತಿ. ತನ್ನ ವಸ್ತು ಮತ್ತು ತಂತ್ರದ ದೃಷ್ಟಿಯಿಂದ ಅನನ್ಯವಾಗಿದೆ ಈ ಕೃತಿ. ಓಲೆಬೆಲ್ಲ ಪ್ರಕಾಶನದ ಮೊದಲ ಕೃತಿಯಾಗಿ ಇದು ಪ್ರಕಟವಾಗಿದೆ.

***
ಸ್ಫೋಟಗೊಂಡಿದ್ದನ್ನು ನಾನು ಸ್ವತಃ ನೋಡಲಿಲ್ಲ. ಬರೀ ಜ್ವಾಲೆಗಳು. ಎಲ್ಲವೂ ತುಂಬಾ ಪ್ರಕಾಶಮಾನವಾಗಿತ್ತು. ಇಡೀ ಆಕಾಶ. ಎತ್ತರದ ಜ್ವಾಲೆ. ಮತ್ತು ಹೊಗೆ. ತುಂಬಾ ಬಿಸಿ ಎನ್ನಿಸುತಿತ್ತು. ಅವನು ಇನ್ನೂ ಬಂದಿರಲಿಲ್ಲ. ಮೇಲ್ಛಾವಣಿಯನ್ನು ಸುತ್ತುವರೆದಿದ್ದ ಬಿಟುಮಿನ್ ಹೊತ್ತಿಕೊಂಡು ಉರೀತಿದ್ದರಿಂದ ಹೊಗೆ ಬರ‍್ತಾ ಇತ್ತು. ಅದು ಡಾಂಬರಿನ ಮೇಲೆ ನಡೀತಾ ಇದ್ದ ಹಂಗಿತ್ತು ಅಂತ ಅವನು ಆಮೇಲೆ ಹೇಳಿದ. ಅವರು ಜ್ವಾಲೆಯನ್ನು ನಂದಿಸಲು ಪ್ರಯತ್ನಿಸಿದರು. ಹೊತ್ತಿಕೊಂಡು ಉರೀತಿದ್ದ ಗ್ರಾಫೈಟ್‌ಅನ್ನು ಕಾಲಿನಿಂದ ತುಳಿದರು... ಅವರು ಕ್ಯಾನ್ವಾಸ್ ಬೂಟುಗಳನ್ನೂ ಹಾಕಿಕೊಂಡಿರಲಿಲ್ಲ. ಹೆಂಗಿದ್ದರೋ ಹಂಗೇ ಹೊರಹೋದರು, ಬರೀ ಅಂಗಿ ತೊಟ್ಟುಕೊಂಡು ಹೋಗಿದ್ರು. ಯಾರೂ ಅವರಿಗೆ ಹೇಳಲೇ ಇಲ್ಲ. ಒಂದು ಬೆಂಕಿ ಬಿದ್ದಿದೆ ಅಂತ ಅವರನ್ನ ಕರೆದರು, ಅಷ್ಟೇ.

ಕೆಲವು ಸಲ ಅವನ ಧ್ವನಿಯನ್ನು ಕೇಳಿದಂತೆ. ಜೀವಂತ. ಅವನ ಫೋಟೋ ಕೂಡ ನನ್ನ ಮೇಲೆ ಅವನ ಧ್ವನಿಯ ಹಾಗೆ ಪ್ರಭಾವ ಬೀರಲ್ಲ. ಆದರೆ ಅವನು ನನ್ನನ್ನುಎಂದೂ ಕರೆಯೋದೆ ಇಲ್ಲ... ಕನಸಿನಲ್ಲಿಯೂ ಕೂಡ. ನಾನೇ ಅವನನ್ನು ಕರೆಯೋದು.

ಬೆಳಗ್ಗೆ ಏಳು ಗಂಟೆ. ಅವನು ಆಸ್ಪತ್ರೆಯಲ್ಲಿದ್ದಾನೆ ಅಂತ ಏಳಕ್ಕೆ ನಂಗೆ ಹೇಳಿದರು. ನಾನು ಅಲ್ಲಿಗೆ ಓಡಿ ಹೋದೆ, ಆದರೆ ಪೊಲೀಸರಾಗಲೇ ಅದನ್ನು ಸುತ್ತುವರಿದ್ದರು. ಅವರು ಯಾರಿಗೂ ಒಳಗೆ ಹೋಗೋದಕ್ಕೆ ಬಿಡ್ತಾ ಇರಲಿಲ್ಲ. ಬರೀ ಅಂಬುಲೆನ್ಸ್‌ಗಳು. ಪೋಲೀಸರು ಕಿರುಚುತ್ತಿದ್ದರು: ಅಂಬುಲೆನ್ಸ್‌ಗಳಲ್ಲಿ ವಿಕಿರಣವಿದೆ, ದೂರ ಸರೀರಿ!

ಅವನು ಬದಲಾಗೋದಕ್ಕೆ ಶುರು ಮಾಡಿದ- ಪ್ರತೀದಿನ ನಾನು ಹೊಸದೇ ಚಹರೆಯ ವ್ಯಕ್ತಿಯನ್ನು ಕಾಣ್ತಿದ್ದೆ. ಸುಟ್ಟ ಗುಳ್ಳೆಗಳು ಮೈಮೇಲೆ ಎದ್ದು ಬರಲಿಕ್ಕೆ ಶುರುವಾಗಿದ್ದವು. ಅವನ ಬಾಯಿಯಲ್ಲಿ, ಅವನ ನಾಲಿಗೆಯಲ್ಲಿ, ಅವನ ಕೆನ್ನೆಗಳ ಮೇಲೆ - ಮೊದಲಿಗೆ ಚಿಕ್ಕ ಹುಣ್ಣುಗಳಿದ್ದವು, ಆಮೇಲೆ ಅವು ದೊಡ್ಡವಾದವು. ಅವು ಪದರಗಳಾಗಿ ಹೊರಬಂದವು - ಬಿಳೀ ಪೊರೆಯ ಹಾಗೆ... ಅವನ ಮುಖದ ಬಣ್ಣ... ಅವನ ದೇಹ... ನೀಲಿ... ಕೆಂಪು... ಬೂದಿ-ಕಂದು. ಮತ್ತು ಅವೆಲ್ಲವೂ ನನ್ನದು ಮಾತ್ರ! ಅದನ್ನು ವರ್ಣಿಸುವುದು ಅಸಾಧ್ಯ! ಅದನ್ನು ಬರೆಯುವುದು ಅಸಾಧ್ಯ! ಅದರಿಂದಾಚೆ ಬರುವುದು ಕೂಡ ಅಸಾಧ್ಯ. ನನ್ನನ್ನು ಉಳಿಸಿದ ಒಂದೇ ಸಂಗತಿ ಎಂದರೆ ಅದೆಲ್ಲವೂ ಎಷ್ಟು ತ್ವರಿತವಾಗಿ ನಡೀತು: ಅಲ್ಲಿ ಯೋಚನೆ ಮಾಡಕ್ಕೂ ಸಮಯವಿರಲಿಲ್ಲ, ಅಲ್ಲಿ ಅಳೋದಕ್ಕೂ ಸಮಯವಿರಲಿಲ್ಲ.

ನಾನು ಅವನನ್ನು ಪ್ರೀತಿಸಿದ್ದೆ! ಎಷ್ಟು ಅಂತ ನಂಗೇ ಗೊತ್ತಿರಲಿಲ್ಲ! ನಾವು ಅದೇ ತಾನೆ ಮದುವೆಯಾಗಿದ್ದೆವು. ನಾವು ಬೀದೀಲಿ ನಡೀತಾ ಇರತಿದ್ವಿ- ಅಂವ ನನ್ನ ಕೈಯನ್ನ ಹಿಡಿದೆಳೆಯುತ್ತಿದ್ದ ಮತ್ತು ನನ್ನನ್ನು ಹೀಗೆ ತಿರುಗಿಸುತ್ತಿದ್ದ. ಮತ್ತೆ ಮತ್ತೆ ನನಗೆ ಮುತ್ತಿಡುತ್ತಿದ್ದ. ಹೋಗಿಬರೋ ಜನರು ನಗುತ್ತಿದ್ದರು.

ಅದು ತುಂಬ ಗಂಭೀರವಾಗಿ ವಿಕಿರಣದಿಂದ ಅನಾರೋಗ್ಯಗೊಂಡವರಿಗಾಗಿ ಇದ್ದ ಆಸ್ಪತ್ರೆ. ಹದಿನಾಲ್ಕು ದಿನಗಳು. ಹದಿನಾಲ್ಕು ದಿನಗಳಲ್ಲಿ ಒಬ್ಬ ವ್ಯಕ್ತಿ ಸಾಯತಾನೆ.
- ಲ್ಯುಡ್‌ಮೀಲ ಇಗ್ನತೆಂಕೊ
ಅಗ್ನಿಶಾಮಕದಳದ ದಿವಂಗತ ವಸಿಲಿ ಇಗ್ನತೆಂಕೊ ಹೆಂಡತಿ

***

ಒಳ್ಳೆಯ ಜನಗಳೇ, ನಿಲ್ಲಿಸಿ! ನಾವಿಲ್ಲಿ ಬದುಕಬೇಕಿದೆ! ನೀವು ಮಾತನಾಡುವಿರಿ ಮತ್ತು ಹೊರಟು ಹೋಗುವಿರಿ, ಆದರೆ ನಾವು ಇಲ್ಲಿ ಬದುಕಬೇಕಿದೆ!
ಇಲ್ಲಿ, ನಾನು ಎದುರಿಗೇ ವೈದ್ಯಕೀಯ ಕಾರ್ಡುಗಳನ್ನು ಇಟ್ಟುಕೊಂಡಿದ್ದೀನಿ.
ಪ್ರತೀ ದಿನ ನಾನು ಅವುಗಳನ್ನು ಎತ್ತಿಕೊಳ್ತೀನಿ. ಅವನ್ನು ಪ್ರತೀ ದಿನ ನನ್ನ ಕೈಯಲ್ಲಿ ತೆಗೆದುಕೊಳ್ತೀನಿ!
ಅನ್ಯಾ ಬುಡೈ - ಹುಟ್ಟಿದ್ದು 1985 - 380 ಬೆಕ್ವೆರಲ್‌ಗಳು.
ವಿತ್ಯಾಗ್ರಿಂಕೆವಿಚ್ - ಹುಟ್ಟಿದ್ದು 1986 - 785 ಬೆಕ್ವೆರಲ್‌ಗಳು.
ನಸ್ತ್ಯಾ ಶಬ್ಲೊವ್‌ಸ್ಕಯ - ಹುಟ್ಟಿದ್ದು 1986 - 570 ಬೆಕ್ವೆರಲ್‌ಗಳು.
ಅಲ್ಯೊಶ ಪ್ಲೆನಿನ್ - ಹುಟ್ಟಿದ್ದು 1985 - 570 ಬೆಕ್ವೆರಲ್‌ಗಳು.
ಆಂಡ್ರೆ ಕೊಶೆಂಕೊ - ಹುಟ್ಟಿದ್ದು 1987 - 450 ಬೆಕ್ವೆರಲ್‌ಗಳು.

ಇದು ಅಸಾಧ್ಯ ಎಂದು ಅವರು ಹೇಳ್ತಾರಾ? ಥೈರಾಯ್ಡ್‌ನಲ್ಲಿ ಇದನ್ನಿಟ್ಟುಕೊಂಡು ಮಕ್ಕಳು ಹೇಗೆ ಬದುಕುತ್ತಾರೆ? ಯಾರಾದ್ರೂ ಈ ಮೊದಲು ಈ ರೀತಿಯ ಪ್ರಯೋಗವನ್ನು ಮಾಡಿದ್ದರೇ? ನಾನು ಪ್ರತೀದಿನ ಓದ್ತೀನಿ ಮತ್ತು ನೋಡ್ತೀನಿ. ನೀನು ಸಹಾಯ ಮಾಡ್ತೀಯ? ಹಾಗಿದ್ದರೆ ನೀನ್ಯಾಕೆ ಇಲ್ಲಿಗೆ ಬಂದೆ? ಪ್ರಶ್ನೆಗಳನ್ನು ಕೇಳೋದಕ್ಕಾ? ನಮ್ಮನ್ನು ಮುಟ್ಟಲಿಕ್ಕಾ? ನಾನು ಅವರ ದುರಂತದ ಮೇಲೆ ವ್ಯಾಪಾರ ಮಾಡಲು ನಿರಾಕರಿಸ್ತೀನಿ. ತಾತ್ವಿಕವಾಗಿ ಮಾತನಾಡಲು. ದಯವಿಟ್ಟು ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ. ನಾವು ಇಲ್ಲಿ ಬದುಕಬೇಕಿದೆ.
- ಅರ್ಕಡಿ ಬಗ್ದಂಕಿವಿಚ್, ಹಳ್ಳಿಯ ವೈದ್ಯಕೀಯ ಸಿಬ್ಬಂದಿ

***
ಆರಂಭದ ದಿನಗಳಲ್ಲಿ, ನಮ್ಮೊಳಗೆ ಮಿಶ್ರ ಭಾವನೆಗಳಿದ್ದವು. ನನಗೆ ಎರಡು ನೆನಪಿದೆ: ಭಯ ಮತ್ತು ಅವಮಾನ. ಏನೆಲ್ಲ ನಡೆದುಹೋಯಿತು ಮತ್ತು ಯಾವುದೇ ಮಾಹಿತಿಯಿರಲಿಲ್ಲ: ಸರ್ಕಾರ ಮೌನವಾಗಿತ್ತು, ವೈದ್ಯರು ಕೂಡ ಮೌನವಾಗಿದ್ದರು. ಪ್ರದೇಶಗಳು ಪ್ರಾಂತ್ಯದಿಂದ ಬರುವ ನಿರ್ದೇಶನಗಳಿಗೆ ಕಾಯುತ್ತಿದ್ದರು, ಪ್ರಾಂತ್ಯಗಳು ಮಿನ್ಸ್ಕ್‌ನಿಂದ, ಮಿನ್ಸ್ಕ್ ಮಾಸ್ಕೋದಿಂದ ಬರುವ ನಿರ್ದೇಶನಗಳಿಗೆ ಕಾಯುತ್ತಿದ್ದರು. ಅದೊಂದು ಉದ್ದನೆಯ, ದೀರ್ಘ ಸರಣಿ ಮತ್ತು ಕೊನೆಯಲ್ಲಿ ಕೆಲವೇ ಜನರು ನಿರ್ಧಾರಗಳನ್ನು ಮಾಡುತ್ತಿದ್ದರು. ನಾವು ರಕ್ಷಣೆಯಿಲ್ಲದ ಜನರಾಗಿದ್ದೆವು. ಆ ದಿನಗಳಲ್ಲಿ ಪ್ರಧಾನವಾಗಿದ್ದ ಭಾವನೆ ಅದು. ಬೆರಳೆಣಿಕೆಯ ಜನ ನಮ್ಮೆಲ್ಲರ ವಿಧಿಯನ್ನು, ಲಕ್ಷಾಂತರ ಜನರ ವಿಧಿಯನ್ನು ನಿರ್ಧರಿಸುತ್ತಿದ್ದರು.

ಅದೇ ವೇಳೆ, ಕೆಲವೇ ಜನ ನಮ್ಮೆಲ್ಲರನ್ನೂ ಕೊಲ್ಲಬಲ್ಲವರಾಗಿದ್ದರು. ಅವರೇನೂ ಉನ್ಮಾದಗ್ರಸ್ತರಲ್ಲ, ಅವರು ಅಪರಾಧಿಗಳೂ ಅಲ್ಲ. ಅವರು ಅಣು ಸ್ಥಾವರದಲ್ಲಿ ಕೆಲಸ ಮಾಡುವ ಸಾಧಾರಣ ಕೆಲಸಗಾರರು. ನನಗೆ ಇದು ಅರ್ಥವಾದಾಗ, ನಾನೊಂದು ಬಗೆಯ ಆಘಾತಕ್ಕೆ ಒಳಗಾದೆ. ಚರ್ನೋಬಿಲ್ ನಮಗೆ ಪಾತಾಳವನ್ನು ತೆರೆಯಿತು, ಸೈಬೀರಿಯಾದ ಹತ್ತಿರದಲ್ಲಿದ್ದ ಸ್ಟಾಲಿನ್ ಕಾಲದ ಕೊಲಿಮಾಕಾರ್ಮಿಕ ಶಿಬಿರ, ಜರ್ಮನಿಯಆಶ್‌ವಿಟ್ಜ್ ಯುದ್ಧ ಕೈದಿಗಳ ಶಿಬಿರ, ಹಾಲೊಕಾಸ್ಟ್ ಈ ಎಲ್ಲದರಿಂದ ಆಚೆಗಿನ ಸಂಗತಿ. ಒಂದು ಬಿಲ್ಲು, ಒಂದು ಕೊಡಲಿ ಹಿಡಿದ ವ್ಯಕ್ತಿ ಅಥವಾ ಗ್ರನೇಡ್ ಹಾರಿಸುವ ವ್ಯಕ್ತಿ ಮತ್ತು ಗ್ಯಾಸ್ ಛೇಂಬರ್‌ಗಳು, ಈ ಎಲ್ಲವೂ ಪ್ರತಿಯೊಬ್ಬರನ್ನೂ ಕೊಲ್ಲಲಾರವು. ಆದರೆ ಒಂದು ಪರಮಾಣು ಎಲ್ಲರನ್ನೂ ಕೊಲ್ಲಬಲ್ಲದು.
- ಲ್ಯುಡ್‌ಮಿಲ ಪೊಲೆಂಕಯ, ಶಿಕ್ಷಕ

***
ಏಪ್ರಿಲ್ 26ರಂದು, ಏನೋ ಕಾರ್ಯನಿಮಿತ್ತ ನಾನು ಮಾಸ್ಕೋದಲ್ಲಿದ್ದೆ. ಅಲ್ಲಿ ನನಗೆ ಈ ದುರ್ಘಟನೆ ಬಗ್ಗೆ ಗೊತ್ತಾಯ್ತು.

ಮರುದಿನ ನಾನು ಮಿನ್ಸ್ಕ್‌ಗೆ ಮೊದಲ ರೈಲಿನಲ್ಲಿಯೇ ಹೊರಡ್ತೇನೆ. ಇಡೀರಾತ್ರಿ ನಂಗೆ ಅಲ್ಲಿ ನಿದ್ರೆ ಮಾಡಲು ಆಗಿರಲಿಲ್ಲ. ಬೆಳಗ್ಗೆ ನಾನು ಮನೆಯಲ್ಲಿದ್ದೆ. ನಾನು ಮಗನ ಥೈರಾಯ್ಡ್ ಪರೀಕ್ಷೆ ಮಾಡ್ತೀನಿ - ಅದು ಆಗ ಇದ್ದ ಅತ್ಯುತ್ತಮ ವಿಕಿರಣಮಾಪಕ - ಪ್ರತೀಗಂಟೆಗೆ 180 ಮೈಕ್ರೋರಾಂಟೆಜೆನ್‌ ತೋರಿಸ್ತಾ ಇತ್ತು. ಅವನಿಗೆ ಪೊಟಾಶಿಯಂ ಅಯೋಡೈಡ್‌ ಕೊಡಬೇಕಿತ್ತು.

ಅದು ಸಾಧಾರಣ ಅಯೋಡಿನ್. ಒಂದು ಮಗುವಿಗೆ ಎರಡು ಅಥವಾ ಮೂರು ಹನಿಯನ್ನು ಅರ್ಧ ಲೋಟ ನೀರಿನಲ್ಲಿ, ವಯಸ್ಕರಿಗಾದರೆ ಮೂರರಿಂದ ನಾಲ್ಕು ಹನಿ. ಸ್ಥಾವರವು ಹತ್ತು ದಿನಗಳ ಕಾಲ ಹೊತ್ತಿಕೊಂಡು ಉರೀತು, ಇದನ್ನು ಹತ್ತು ದಿನಗಳ ಕಾಲವೂ ಮಾಡಬೇಕಿತ್ತು. ಆದರೆ ಯಾರೂ ನಮ್ಮ ಮಾತು ಕೇಳಲೇ ಇಲ್ಲ! ಯಾರೂ ವಿಜ್ಞಾನಿಗಳು ಹಾಗೂ ವೈದ್ಯರ ಮಾತು ಕೇಳಲೇ ಇಲ್ಲ. ಅವರು ವಿಜ್ಞಾನ ಮತ್ತು ವೈದ್ಯಕೀಯವನ್ನು ರಾಜಕೀಯದೊಳಕ್ಕೆ ಎಳೆದರು. ಅವರು ಹಾಗೆಯೇ ಮಾಡಿದರು ಕೂಡ!

ನಾವು ಇದರ ಹಿನ್ನೆಲೆಯನ್ನು ಮರೆಯಬಾರದು, ಆಗ ನಾವೇನಾಗಿದ್ದೆವು, ಹತ್ತು ವರ್ಷಗಳ ಹಿಂದೆ ನಾವು ಯಾವ ಥರ ಇದ್ದೆವು ಎಂಬುದನ್ನು. ಕೆಜಿಬಿ ಅಂದರೆಕಮ್ಯುನಿಸ್ಟ್ ಭದ್ರತಾ ಸಮಿತಿ ಕೆಲಸ ಮಾಡುತ್ತಿತ್ತು, ರಹಸ್ಯ ಶೋಧ ನಡೆಸುತ್ತಿತ್ತು. ಪಾಶ್ಚಾತ್ಯ ಧ್ವನಿಗಳನ್ನು ಉಡುಗಿಸಲಾಯಿತು. ಸಾವಿರಾರು ನಿಷೇಧಗಳು, ಪಕ್ಷದ ಮತ್ತು ಮಿಲಿಟರಿ ರಹಸ್ಯಗಳು ಇದ್ದವು.

ಇದರ ಜೊತೆಗೆ ಪ್ರತಿಯೊಬ್ಬರೂ ಶಾಂತಿಯುತ ಸೋವಿಯೆತ್ ಪರಮಾಣುವು ಕಲ್ಲಿದ್ದಲು ಅಥವಾ ಇದ್ದಲಿನಷ್ಟೇ ಸುರಕ್ಷಿತ ಅಂತ ಆಲೋಚಿಸುವ ರೀತಿಯಲ್ಲಿಯೇ ಬೆಳೆದಿದ್ದರು. ಭಯ ಮತ್ತು ಪೂರ್ವಗ್ರಹದ ಸಂಕೋಲೆ ತೊಟ್ ಟಜನರು ನಾವು. ನಮ್ಮ ನಂಬಿಕೆಗಳ ಬಗ್ಗೆಯೇ ಮೂಢನಂಬಿಕೆಯಿತ್ತು ನಮಗೆ.

ಇದೆಲ್ಲ ಸರಿ, ಆದರೆ ವಾಸ್ತವಾಂಶಗಳು. ಮರುದಿನ ಏಪ್ರಿಲ್ 27ರಂದು, ನಾನು ಉಕ್ರೇನ್‌ ಗಡಿಯಲ್ಲಿರುವ ಗೊಮೆಲ್ ಪ್ರಾಂತ್ಯಕ್ಕೆ ಹೋಗಲು ನಿರ್ಧರಿಸಿದೆ. ನಾನು ಪ್ರಮುಖ ಪಟ್ಟಣಗಳಿಗೆ ಹೋದೆ - ಬ್ರಗಿನ್, ಕೊಯ್ನಿಕಿ, ನರೊವ್ಲ್ಯ, ಅವೆಲ್ಲ ಸ್ಥಾವರದಿಂದ ಇಪ್ಪತ್ತು ಮೂವತ್ತು ಕಿಲೋಮೀಟರ್‌ಗಳ ವ್ಯಾಪ್ತಿಯಲ್ಲಿದ್ದವು. ನನಗೆ ಹೆಚ್ಚು ಮಾಹಿತಿ ಬೇಕಿತ್ತು. ನಾನು ಹಿನ್ನೆಲೆ ವಿಕಿರಣವನ್ನು ಅಳೆಯಲು ಎಲ್ಲ ಉಪಕರಣಗಳನ್ನೂ ತೆಗೆದುಕೊಂಡೆ. ಹಿನ್ನೆಲೆ ವಿಕಿರಣ ಹೀಗಿತ್ತು: ಬ್ರಗಿನ್‌ನಲ್ಲಿ, ಪ್ರತೀ ಗಂಟೆಗೆ 30,000 ಮೈಕ್ರೋರಾಂಟೆಜೆನ್; ನರೊವ್ಲ್ಯ: 28000. ಆದರೆ ಜನರು ಗದ್ದೆಗಳಲ್ಲಿ ಬಿತ್ತುತ್ತಿದ್ದರು, ಉಳುತ್ತಿದ್ದರು, ಈಸ್ಟರ್ ಹಬ್ಬಕ್ಕೆ ಸಿದ್ಧವಾಗುತ್ತಿದ್ದರು.

ಮೊಟ್ಟೆಗಳಿಗೆ ಬಣ್ಣ ಹಚ್ಚುತ್ತಿದ್ದರು, ಈಸ್ಟರ್ ಕೇಕುಗಳನ್ನು ಮಾಡುತ್ತಿದ್ದರು. ಅವರು ಹೇಳುತ್ತಿದ್ದರು, ಏನು ವಿಕಿರಣ? ಏನದು? ನಮಗೆ ಇನ್ನೂ ಏನೂ ಆದೇಶಗಳು ಬಂದಿಲ್ಲ. ನಮಗೆ ಮೇಲಿನಿಂದ ಕೇಳ್ತಾ ಇರೋದು ಒಂದೇ ವಿಚಾರ: ಬೆಳೆ ಹೆಂಗಿದೆ, ಯಾವ ಹಂತದಲ್ಲಿದೆ? ಇವನಿಗೇನು ತಲೆ ಕೆಟ್ಟಿದೆಯಾ ಎಂಬಂತೆ ಅವರು ನನ್ನನ್ನು ನೋಡುತ್ತಿದ್ದರು. ಅಂದರೆ ಇದರರ್ಥ ಏನು ಪ್ರೊಫೆಸರ್? ರಾಂಟೆಜೆನ್, ಮೈಕ್ರೋ-ರಾಂಟೆಜೆನ್‌ ಇದೆಲ್ಲ ಬೇರಾವುದೋ ಗ್ರಹದ ಇನ್ನಾರದೋ ಭಾಷೆಯಂತೆ.

ಅಲ್ಲಿ ಅದಾಗಲೇ ಸಾವಿರಾರು ಟನ್‌ಗಟ್ಟಲೆ ಸೀಸಿಯಂ, ಅಯೋಡಿನ್, ಸೀಸ, ಜಿರ್ಕೋನಿಯಂ, ಕ್ಯಾಡ್ಮಿಯಂ, ಬೆರಿಲಿಯಂ, ಬೋರಿಯಂ, ಅಗಾಧ ಪ್ರಮಾಣದ ಪ್ಲುಟೋನಿಯಂ (ಚರ್ನೋಬಿಲ್ ರೀತಿಯ ಯುರೇನಿಯಂ - ಗ್ರಾಫೈಟ್ ಸ್ಥಾವರಗಳು ಅಣುಬಾಂಬಿಗೆ ಅಗತ್ಯವಾಗಿರುವ ಶಸ್ತ್ರಾಸ್ತ್ರಗಳ ದರ್ಜೆಯ ಪ್ಲುಟೋನಿಯಂ ಅನ್ನೂ ಉತ್ಪಾದಿಸುತ್ತವೆ), ಒಟ್ಟು 450 ವಿಕಿರಣಶೀಲ ಮೂಲವಸ್ತುಗಳು ಹರಡಿದ್ದವು. ಅದು ಹಿರೋಶಿಮಾ ಮೇಲೆ ಹಾಕಿದ ಅಣು ಬಾಂಬಿನ 350 ಪಟ್ಟು. ಅವರು ಭೌತಶಾಸ್ತ್ರದ ಬಗ್ಗೆ, ಭೌತಶಾಸ್ತ್ರದ ನಿಯಮಗಳ ಬಗ್ಗೆ ಮಾತನಾಡಬೇಕಿತ್ತು. ಆದರೆ ಬದಲಿಗೆ ಅವರು ಶತ್ರುಗಳ ಬಗ್ಗೆ, ಶತ್ರುಗಳನ್ನು ಹುಡುಕುವ ಬಗ್ಗೆ ಮಾತನಾಡಿದರು.ಆಗ ನಾವು ಕಲಿತಿದ್ದ ನಾಗರಿಕ ರಕ್ಷಣಾ ಸೂಚನೆಗಳ ಪ್ರಕಾರ, ಅಣು

ಸ್ಫೋಟ ಅಥವಾ ಅಣ್ವಸ್ತ್ರ ಆಕ್ರಮಣದ ಬೆದರಿಕೆಯ ಸಂದರ್ಭದಲ್ಲಿ ಇಡೀ ಜನತೆಗೆ ಅಯೋಡಿನ್‌ ರೋಗನಿರೋಧಕ ಚಿಕಿತ್ಸೆಕೊಡಿಸಬೇಕು. ಅದು ಅಣ್ವಸ್ತ್ರ ಬೆದರಿಕೆಯ ಘಟನೆಯಾಗಿದ್ದಲ್ಲಿ. ಇಲ್ಲಿ ನೋಡಿದರೆ ಪ್ರತೀ ಗಂಟೆಗೆ ಮೂರು ಸಾವಿರ ಮೈಕ್ರೋರಾಂಟೆಜೆನ್ ವಿಕಿರಣವಿತ್ತು. ಆದರೆ ಅವರು ತಮ್ಮ ಅಧಿಕಾರದ ಬಗ್ಗೆ ಚಿಂತಿತರಾಗಿದ್ದರು, ಜನರ ಬಗ್ಗೆ ಅಲ್ಲ. ಇದೊಂದು ಅಧಿಕಾರದ ದೇಶ, ಜನರದಲ್ಲ.

ಪ್ರಭುತ್ವ ಯಾವಾಗಲೂ ಮೊದಲು, ಮನುಷ್ಯ ಜೀವದ ಬೆಲೆ ಸೊನ್ನೆ. ಏಕೆಂದರೆ ಅವರು ಯಾವುದೇ ಪ್ರಕಟಣೆಗಳಿಲ್ಲದೇ, ಯಾವುದೇ ಭೀತಿಯಿಲ್ಲದೇ, ಇಂಥದನ್ನು ನಿಭಾಯಿಸುವ ಮಾರ್ಗಗಳನ್ನು ಕಂಡುಕೊಂಡಿರಬಹುದು. ಅವರು ಸ್ವಲ್ಪ ಅಯೋಡಿನ್‌ ಅನ್ನು ಸಿಹಿನೀರಿನ ಮೂಲಗಳಿಗೆ ಸೇರಿಸಬಹುದಿತ್ತು ಅಥವಾ ಹಾಲಿಗೆ ಸೇರಿಸಬಹುದಿತ್ತು.

ನಗರದಲ್ಲಿ 700 ಕೆ.ಜಿ ಸಾಂದ್ರಗೊಳಿಸಿದ ಅಯೋಡಿನ್‌ನ್ನು ಇದೇ ಉದ್ದೇಶಕ್ಕಾಗಿಯೇ ಇಡಲಾಗಿತ್ತು-ಆದರೆ ಅದು ಹಾಗೆಯೇ ಇದ್ದಲ್ಲಿಯೇ ಇತ್ತು. ಜನರು ಪರಮಾಣುವಿಗಿಂತ ಹೆಚ್ಚು ಅವರ ಮೇಲಾಧಿಕಾರಿಗಳಿಗೆ ಹೆದರಿದರು. ಪ್ರತಿಯೊಬ್ಬರೂ ಆದೇಶಗಳಿಗೆ, ದೂರವಾಣಿ ಕರೆಗೆ ಕಾಯುತ್ತಿದ್ದರು, ಆದರೆ ಯಾರೂ ತಾವಾಗಿಯೇ ಏನೂ ಮಾಡಲೇ ಇಲ್ಲ.
– ವಸಿಲಿ ನೆಸ್ಟೆರೆಂಕೊ, ಬೆಲರಷಿಯನ್ ವಿಜ್ಞಾನ ಅಕಾಡೆಮಿಯಅಣು ಶಕ್ತಿ ಸಂಸ್ಥೆಯ ಹಿಂದಿನ ನಿರ್ದೇಶಕ.

ಸಾಮಾನ್ಯ ಜನ
ಮೂರು ವರ್ಷಗಳವರೆಗೆ ನಾನು ಹತ್ತಾರು ಕಡೆ ಪ್ರಯಾಣಿಸಿದೆ ಮತ್ತು ಜನರಿಗೆ ಕೇಳಿದೆ: ಅಣು ಸ್ಥಾವರದ ಕೆಲಸಗಾರರು, ವಿಜ್ಞಾನಿಗಳು, ಪಕ್ಷದ ಹಿಂದಿನ ಆಡಳಿತಾಧಿಕಾರಿಗಳು, ವೈದ್ಯರು, ಸೈನಿಕರು, ಹೆಲಿಕಾಪ್ಟರ್ ಪೈಲಟ್‌ಗಳು, ಗಣಿಗಾರರು, ನಿರಾಶ್ರಿತರು, ಪುನರ್ವಸತಿಗೊಂಡವರು. ಎಲ್ಲರೂ ಬೇರೆ ಬೇರೆ ವಿಧಿಯನ್ನು, ವೃತ್ತಿಯನ್ನು ಮತ್ತು ಮನೋಧರ್ಮವನ್ನು ಹೊಂದಿದ್ದವರು. ಆದರೆ ಚರ್ನೋಬಿಲ್ ಅವರ ಜಗತ್ತಿನ ಒಂದು ಬಹುಮುಖ್ಯ ಭಾಗವಾಗಿತ್ತು. ಅವರು ಬಹುಮುಖ್ಯವಾದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸಾಮಾನ್ಯ ಜನರಾಗಿದ್ದರು.
–ಸ್ವೆಟ್ಲಾನಾ ಅಲೆಕ್ಸಿವಿಚ್

*


–ಚರ್ನೋಬಿಲ್ ಪ್ರಾರ್ಥನೆ ಪುಸ್ತಕದ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT