ಮತಯಂತ್ರ ಪರಿಶೀಲನೆಗೆ ನಿರ್ಧಾರ

7

ಮತಯಂತ್ರ ಪರಿಶೀಲನೆಗೆ ನಿರ್ಧಾರ

Published:
Updated:

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಪೈಕಿ ನಿರ್ದಿಷ್ಟವಲ್ಲದ, ಯಾವುದಾದರೂ ಯಂತ್ರಗಳನ್ನು ಪರಿಶೀಲನೆಗೆ ಒಳಪಡಿಸಲು ಚುನಾವಣಾ ಆಯೋಗ ನಿರ್ಧರಿಸಿದೆ.

‘ಈ ದಿಸೆಯಲ್ಲಿ ಮತದಾರರು ತಾವು ಚಲಾಯಿಸಿದ ಮತದ ಖಚಿತತೆಯನ್ನು ದೃಢಪಡಿಸಿಕೊಳ್ಳಲು ಅವಕಾಶ ನೀಡುವ ‘ವೋಟರ್‌ ವೆರಿಫೈಯಬಲ್‌ ಪೇಪರ್‌ ಆಡಿಟ್‌ ಟ್ರಯಲ್‌’ (ವಿವಿಪಿಎಟಿ) ವಿಧಾನವನ್ನು 2018ರ ವಿಧಾನಸಭಾ ಚುನಾವಣೆಯಲ್ಲಿ ಅಳವಡಿಸಲಾಗುತ್ತಿದೆ’ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

‘ಕ್ಷೇತ್ರದ ಯಾವುದಾದರೂ ಒಂದು ಬೂತ್‌ನಲ್ಲಿ ವಿವಿಪಿಎಟಿ ವಿಧಾನವನ್ನು ಬಳಸುವುದರಿಂದ ಇವಿಎಂಗಳಲ್ಲಿ ಯಾವುದೇ ದೋಷವಿಲ್ಲ ಎಂಬ ವಿಶ್ವಾಸ ಮತದಾರರಲ್ಲಿ ಮೂಡುತ್ತದೆ’ ಎಂದು ಸಂಜೀವ್‌ ಕುಮಾರ್ ಸ್ಪಷ್ಟಪಡಿಸಿದರು.

‘ಕಳೆದ ತಿಂಗಳು ಗುಜರಾತ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲೂ ಮತಯಂತ್ರಗಳ ದೋಷ ಪತ್ತೆ ಹಚ್ಚುವ ವಿವಿಪಿಎಟಿ ವಿಧಾನ ಬಳಕೆ ಮಾಡಲಾಗಿತ್ತು. ಅಲ್ಲಿನ 182 ವಿಧಾನಸಭಾ ಕ್ಷೇತ್ರಗಳಲ್ಲಿನ 182 ಮತಗಟ್ಟೆಗಳಲ್ಲಿ ಇದಕ್ಕೆ ಅವಕಾಶ ನೀಡಲಾಗಿತ್ತು. ಇದರಿಂದ ಮತದಾರರು ತಾವು ಚಲಾಯಿಸಿದ ಮತಗಳ ನಿಖರತೆ ಬಗ್ಗೆ ಶೇ 100ರಷ್ಟು ವಿಶ್ವಾಸ ವ್ಯಕ್ತಪಡಿಸಿದ್ದರು‘ ಎಂದು ಹೇಳಿದ್ದಾರೆ.

‘ಈ ಕುರಿತಂತೆ ರಾಷ್ಟ್ರೀಯ ರಾಜಕೀಯ ಪಕ್ಷವೊಂದು ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಮತ ಚಲಾವಣೆಯ ನಿಖರತೆಯನ್ನು ಗುರುತಿಸಲು ಕನಿಷ್ಠ ಮೂರನೇ ಒಂದು ಭಾಗದಷ್ಟು ಮತದಾರರ ಮತಗಳನ್ನು ಪರೀಕ್ಷೆಗೆ ಒಳಪಡಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಆದರೆ, ಈ ಅರ್ಜಿಯನ್ನು ನ್ಯಾಯಪೀಠ ತಿರಸ್ಕರಿಸಿತ್ತು ಎಂದು ನೆನಪಿಸಿದ ಸಂಜೀವ್‌ ಕುಮಾರ್, ‘ಈ ದಿಸೆಯಲ್ಲಿ ಈಗ ಸ್ವಯಂ ಚುನಾವಣಾ ಆಯೋಗವೇ ಇಂತಹದೊಂದು ನಿರ್ಧಾರಕ್ಕೆ ಮುಂದಾಗಿದೆ’ ಎಂದು ತಿಳಿಸಿದರು.

ಇವಿಎಂ ಮೂರು ಭಾಗಗಳನ್ನು ಒಳಗೊಂಡಿರುತ್ತದೆ. *ಪ್ರೊಸೆಸಿಂಗ್ ಘಟಕ *ಬ್ಯಾಲೆಟ್ ಘಟಕ ಹಾಗೂ * ವಿವಿಪಿಎಟಿ.

‘ವಿವಿಪಿಎಟಿ ಮೇಲುಭಾಗದಲ್ಲಿ ಗಾಜಿನ ಗವಾಕ್ಷಿ ಇರುತ್ತದೆ. ಮತ ಚಲಾಯಿಸಿದ ನಂತರ ಯಂತ್ರವು ಆರು ಸೆಕೆಂಡಿನಲ್ಲಿ ಒಂದು ಹಾಳೆಯಲ್ಲಿ ಮುದ್ರಿತ ಪ್ರತಿಯನ್ನು ಮೇಲುಭಾಗದಲ್ಲಿ ತೋರಿಸುತ್ತದೆ. ಈ ಅವಧಿಯಲ್ಲಿ ಮತದಾರ ತಾನು ಚಲಾಯಿಸಿದ ಮತದ ನಿರ್ದಿಷ್ಟತೆಯನ್ನು ಕಾಣಬಹುದು. ಈ ಮುದ್ರಿತ ಪ್ರತಿಯ ಶಾಯಿ ಅಳಿಸಲು ಸಾಧ್ಯವಿಲ್ಲ. ಇದನ್ನು ಐದು ವರ್ಷಗಳ ಕಾಲ ಜತನದಿಂದ ಕಾಯ್ದಿಟ್ಟುಕೊಳ್ಳಬಹುದು. ಒಂದು ವೇಳೆ ಏನಾದರೂ ತಕರಾರು ಉಂಟಾದಲ್ಲಿ ಇದನ್ನು ಕೋರ್ಟ್‌ಗೆ ಹಾಜರುಪಡಿಸಲೂಬಹುದು’ ಎಂದೂ ಕುಮಾರ್ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry